Monday, May 29, 2023

  "ಗುಡಿಯಲ್ಲಿ ಎಲ್ಲರಿಗೂ ಪ್ರವೇಶವಿದೆ' ಎಂದು ಬೋರ್ಡ್‌ ಹಾಕುವಿರಾ?'' 

ಉದ್ಯಮಿ ಅಶೋಕ್‌ ಖಾಡೆ, ಮಂದಿರದ ಜೀರ್ಣೋದ್ಧಾರಕ್ಕಾಗಿ 1 ಕೋಟಿ ರೂಪಾಯಿ ಚೆಕ್‌ ಕೊಟ್ಟು, ಕಣ್ಣಂಚಿನಲ್ಲಿ ನೀರು ತಂದುಕೊಂಡು ಹೇಳಿದರು: ""ನಮ್ಮದು ದಲಿತ ಕುಟುಂಬ. ನಾನು ಚಮ್ಮಾರನ ಮಗ ಎಂಬ ಕಾರಣಕ್ಕೆ ಸಿದ್ದೇಶ್ವರ ಗುಡಿಯ ಪ್ರವೇಶಕ್ಕೆ ಬಿಟ್ಟಿಲ್ಲ. ನನಗೆ ಸಿದ್ದೇಶ್ವರ ದರ್ಶನವೇ ಆಗಿಲ್ಲ. ನನ್ನ ತಂದೆಗೆ ಈ ಗುಡಿಯ ರಸ್ತೆಯಲ್ಲಿ ಬರಲೂ ಅವಕಾಶ ಸಿಕ್ಕಿಲ್ಲ. "ಗುಡಿಯಲ್ಲಿ ಎಲ್ಲರಿಗೂ ಪ್ರವೇಶವಿದೆ' ಎಂದು ಬೋರ್ಡ್‌ ಹಾಕುವಿರಾ?'' ಮನವಿಯ ಸಲಹೆ ಮಾಡಿದ್ದು Dalit Millionaires ಎಂಬ ಇಂಗ್ಲಿಷ್‌ ಪುಸ್ತಕದಲ್ಲಿತ್ತು.

  ಬಡತನ, ಜಾತಿ ಕೀಳರಿಮೆ, ಉಳ್ಳವರ ದರ್ಪ, ಅಧಿಕಾರಿಗಳ ಕಿರುಕುಳ ಎಲ್ಲವನ್ನೂ ಧೈರ್ಯವಾಗಿ ಗೆದ್ದು ಮುಂದೆ ಬಂದ 15 ಯುವ ಉದ್ಯಮಿಗಳ ಸಾಹಸದ ಕಥೆಗಳು ಈ ಪುಸ್ತಕದಲ್ಲಿವೆ. 

ಈ ಕೃತಿಯ ಪ್ರತಿಯೊಂದು ಲೇಖನ ಹೊಸ ಜಗತ್ತನ್ನು ತೆರೆದಿಡುತ್ತದೆ. ಇನ್ಫೋಸಿಸ್‌ನ ನಂದನ್‌ ನಿಲೇಕಣಿ ಈ ಪುಸ್ತಕ ಮೆಚ್ಚಿ ಒಂದು ಟಿಪ್ಪಣಿ ಕೂಡ ಬರೆದಿದ್ದಾರೆ. 

ಮಹಾರಾಷ್ಟ್ರದ ಪತ್ರಿಕಾ ರಂಗ-ಟಿವಿ ಮಾಧ್ಯಮದ ಪ್ರಮುಖ ಮಿಲಿಂದ್‌ ಖಾಂಡೇಕರ್‌ ಈ ಕೃತಿಯ ಲೇಖಕರು.  

ನಿಜಕ್ಕೂ ಯುವಕರಿಗೆ ಸ್ಪೂರ್ತಿ ನೀಡುವ ಪುಸ್ತಕ. ಸಾಮಾನ್ಯ ದವರು ಅಸಾಮಾನ್ಯರಾದ ಕಥೆಗಳ ಸಂಕಲನ.. ದಲಿತ ವರ್ಗಕ್ಕೆ ಸೇರಿದ 13 ಪುರುಷರು ಮತ್ತು ಇಬ್ಬರು ಹೆಣ್ಣು ಮಕ್ಕಳು ದೊಡ್ಡ ಉದ್ಯೋಗಪತಿಗಳಾಗಿ ಬೆಳೆದ ಸಾಹಸದ ಕಥೆಗಳು ಈ ಕೃತಿಯಲ್ಲಿವೆ. ಎರಡು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಈ 15 ಉದ್ಯಮಿಗಳು ಈಗ 55 ರಿಂದ 70 ವರ್ಷ ವಯಸ್ಸಿನ ಗಡಿಯಲ್ಲಿದ್ದಾರೆ. ಇವರೆಲ್ಲ 70-80ರ ದಶಕದಲ್ಲಿ ಉದ್ದಿಮೆಗಳನ್ನು ಕಟ್ಟುವ ಕನಸು ಕಾಣತೊಡಗಿದವರು. ಆ ಅವಧಿಯಲ್ಲಿ ಸಾಮಾಜಿಕ ಕಟ್ಟಳೆಗಳು ಇನ್ನೂ ಬಿಗಿಯಾಗಿದ್ದವು. ಅಂಥ ಸೂಕ್ಷ್ಮ ಪರಿಸ್ಥಿತಿ ಎದುರಿಸಿ ಇವರೆಲ್ಲ ಬೆಳೆದಿದ್ದಾರೆ. ಮುಂಬೈಯಲ್ಲಿ ಬಹು ದೊಡ್ಡ ಉದ್ಯಮಿಯಾಗಿ ಬೆಳೆದ ಡಾ|ಅಶೋಕ್‌ ಖಾಡೆ ಕುರಿತ ಮೊದಲ ಲೇಖನವನ್ನು ಎಲ್ಲ ಯುವಕರು ಓದಲೇಬೇಕು. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಾಸಗಾಂವ್‌ನಲ್ಲಿ ಪೆಡ್ಡ ಎಂಬ ಒಂದು ಹಳ್ಳಿಯಿದೆ. ಇದು ಅಶೋಕ್‌ ಖಾಡೆಯವರ ಹುಟ್ಟೂರು. ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಈ ಊರಿನಲ್ಲಿ ಅರ್ಧಕ್ಕೂ ಹೆಚ್ಚು ಕನ್ನಡ ಭಾಷಿ ಕ‌ರಿದ್ದಾರೆ. ಈ ಗ್ರಾಮದ ಮಧ್ಯದಲ್ಲಿ ಸಾವಿರಾರು ವರ್ಷಗಳ ಹಿಂದೆ ಕಟ್ಟಿದ ಸಿದ್ದೇಶ್ವರ ದೇವಾಲಯವಿದೆ. ಬಾಗಲಕೋಟೆ ಜಿಲ್ಲೆಯ ನಮ್ಮ ಬೀಳಗಿ ಪಟ್ಟಣದ ಸಿದ್ದೇಶ್ವರ ಗುಡಿಯ ಮಾದರಿಯಲ್ಲಿಯೇ ಪೆಡ್ಡ ಗ್ರಾಮದ ಗುಡಿ ನಿರ್ಮಿಸಿರುವುದು ಒಂದು ವಿಶೇಷ. ಈ ಗುಡಿಯ ಕಟ್ಟಡ ತುಂಬ ಶಿಥಿಲಗೊಂಡಿದ್ದರಿಂದ ಜೀರ್ಣೋದ್ಧಾರ ಕೈಗೊಳ್ಳಲು ಗ್ರಾಮಸ್ಥರು ನಿರ್ಧರಿಸಿದರು. ಈ ಗ್ರಾಮದಲ್ಲಿಯೇ ಹುಟ್ಟಿ ಬೆಳೆದ ಅಶೋಕ್‌ ಖಾಡೆ ದೊಡ್ಡ ಉದ್ಯಮಿಯಾಗಿ ಬೆಳೆದವರು. ಮುಂಬೈ ನಗರದಲ್ಲಿ ವಾರ್ಷಿಕ 1600 ಕೋಟಿ ರೂ. ವ್ಯವಹಾರ ನಡೆಸುವ ಬೃಹತ್‌ ಸಂಸ್ಥೆಯನ್ನು ಅವರು ಕಟ್ಟಿದ್ದಾರೆ. ಅವರು ಸ್ಥಾಪಿಸಿದ Das Offshore Engineering Company ಸಂಸ್ಥೆಯಲ್ಲಿ 4,500 ಜನ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆ ದೇಶ ವಿದೇಶಗಳಲ್ಲಿ ತೈಲ ಬಾವಿ ತೋಡುವುದು, ಮೇಲು ಸೇತುವೆ ನಿರ್ಮಾಣ, ಕಟ್ಟಡ ನಿರ್ಮಾಣ ಮುಂತಾದ ಕೆಲಸಗಳನ್ನು ಮಾಡುತ್ತಿದೆ. ಅವರಿಂದ ಗುಡಿಯ ಜೀರ್ಣೋದ್ಧಾರಕ್ಕೆ 10 ಲಕ್ಷ ರೂ. ದೇಣಿಗೆ ಕೇಳಲು ಜೀರ್ಣೋದ್ಧಾರ ಸಮಿತಿಯ ಕೆಲವು ಹಿರಿಯರು ಮುಂಬೈಗೆ ತೆರಳಿದ್ದರು. ತಮ್ಮ ಹುಟ್ಟೂರಿನಿಂದ ಆಗಮಿಸಿದ ಹಿರಿಯರನ್ನು ಉದ್ಯಮಿ ಅಶೋಕ್‌ ಖಾಡೆ ತುಂಬ ಪ್ರೀತಿ , ಗೌರವದಿಂದ ಸ್ವಾಗತಿಸಿದರು. ಸ್ವತಃ ಉಪಹಾರ, ಟೀ ಕೊಟ್ಟು ಅತಿಥಿ ಸತ್ಕಾರ ಮಾಡಿದರು. ಎಲ್ಲ ಶಿಷ್ಟಾಚಾರ ಮುಗಿದ ಮೇಲೆ ಹಿರಿಯರು ತಾವು ಬಂದ ಉದ್ದೇಶ ವಿವರಿಸಿ "ದೇವಸ್ಥಾನ ಜೀರ್ಣೋದ್ಧಾರಕ್ಕೆ 10 ಲಕ್ಷ ರೂ. ದೇಣಿಗೆ ನೀಡಬೇಕು' ಎಂದು ಮನವಿ ಸಲ್ಲಿಸಿದರು. ಅಶೋಕ್‌ ತಮ್ಮ ಚೆಕ್‌ಬುಕ್‌ ತಂದು 1 ಕೋಟಿ ರೂ. ಚೆಕ್‌ ಬರೆದು ಹಿರಿಯರ ಕೈಗೆ ನೀಡಿದರು! ಹತ್ತು ಲಕ್ಷ ರೂ. ಕೇಳಿದರೆ ಐದು ಲಕ್ಷವಾದರೂ ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಹಿರಿಯರಿಗೆ ತುಂಬ ಅಚ್ಚರಿಯಾಯಿತು. ""ಸಿದ್ದೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮಾಡಿ ಚೆನ್ನಾಗಿ ಕಟ್ಟಬೇಕು. ಇನ್ನೂ ಹೆಚ್ಚಿಗೆ ಹಣ ಬೇಕಾದರೆ ನಾನು ಕೊಡಲು ಸಿದ್ಧ'' ಎಂದು ಅಶೋಕ್‌ ಹೇಳಿದರು. ಸ್ವಲ್ಪ ತಡೆದು ""ನನ್ನದೊಂದು ಸಲಹೆ ಇದೆ. ನೀವು ಹಿರಿಯರು ಪಾಲಿಸಬೇಕು'' ಎಂದು ಅಶೋಕ್‌ ಕೇಳಿಕೊಂಡರು. ""ಖಂಡಿತವಾಗಿ ಪಾಲಿಸುತ್ತೇವೆ. ಹೇಳಿ, ಏನು ನಿಮ್ಮ ಸಲಹೆ?'' ಎಂದು ಎಲ್ಲ ಹಿರಿಯರು ಒಂದೇ ಧ್ವನಿಯಲ್ಲಿ ಕೇಳಿದರು. ಅಶೋಕ್‌ ಒಂದು ಕ್ಷಣ ಮೌನವಾಗಿ ಕಣ್ಣಂಚಿನಲ್ಲಿ ನೀರು ತಂದುಕೊಂಡು ನಿಧಾನವಾಗಿ ಹೇಳಿದರು-""ನಮ್ಮದು ದಲಿತ ಕುಟುಂಬ. ನಾನು ಚಮ್ಮಾರನ ಮಗ ಎಂಬ ಕಾರಣಕ್ಕೆ ಸಿದ್ದೇಶ್ವರ ಗುಡಿಯ ಪ್ರವೇಶಕ್ಕೆ ಬಿಟ್ಟಿಲ್ಲ. ನನಗೆ ಸಿದ್ದೇಶ್ವರ ದರ್ಶನವೇ ಆಗಿಲ್ಲ. ನನ್ನ ತಂದೆಗೆ ಈ ಗುಡಿಯ ರಸ್ತೆಯಲ್ಲಿ ಬರಲೂ ಅವಕಾಶ ಸಿಕ್ಕಿಲ್ಲ. "ಗುಡಿಯಲ್ಲಿ ಎಲ್ಲರಿಗೂ ಪ್ರವೇಶವಿದೆ' ಎಂದು ಬೋರ್ಡ್‌ ಹಾಕಿರಿ. ಹಾಗೆಯೇ ಎಲ್ಲರ ಪ್ರವೇಶಕ್ಕೆ ಮುಕ್ತ ಅವಕಾಶ ಮಾಡಿರಿ'' ಎಂದರು ಅಶೋಕ್‌. ದೇವಸ್ಥಾನ ಜೀರ್ಣೋದ್ಧಾರ ಕೆಲಸ ಸಕಾಲಕ್ಕೆ ಮುಗಿಯಿತು. ಈಗ ಗುಡಿಯಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ ಲಭ್ಯವಾಗಿದೆ. ಊರ ಹಿರಿಯರೆಲ್ಲ ಸೇರಿ ಅಶೋಕ್‌ ಅವರನ್ನು ಗ್ರಾಮಕ್ಕೆ ಆಮಂತ್ರಿಸಿ ಗುಡಿಯಲ್ಲಿಯೇ ಸನ್ಮಾನಿಸಿದರು. ವಿದ್ಯಾರ್ಥಿಯಾಗಿದ್ದಾಗ ಗುಡಿ ಪ್ರವೇಶ ನಿರಾಕರಿಸಿದವರೇ ಈಗ ಗುಡಿಯ ಒಳಗಡೆ ಕರೆದು ಸನ್ಮಾನಿಸಿದ್ದಕ್ಕೆ ಅಶೋಕ್‌ ಅವರಿಗೆ ಬಹಳ ಸಂತೋಷವಾಯಿತು. ಅಶೋಕ್‌ ಅವರು ಗ್ರಾಮದ ನೂರಾರು ಬಡ ಮಕ್ಕಳ ಓದಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ. ಈ ಗ್ರಾಮದಲ್ಲಿ ಅಸ್ಪೃಶ್ಯತೆಯ ಆಚರಣೆ ಪೂರ್ಣ ತೊಡೆದು ಹಾಕಲಾಗಿದೆ. ತಮ್ಮ ಗಳಿಕೆಯ ಸಂಪತ್ತನ್ನು ಸಾಮಾಜಿಕ ಕ್ರಾಂತಿ ಹಾಗೂ ಬದಲಾವಣೆಗೆ ಅಶೋಕ್‌ ಅವರು ಬಳಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಅಶೋಕ್‌ ಅವರ ತಂದೆ ಮೋಚಿಯಾಗಿ ಕೆಲಸ ಮಾಡಿ ಬದುಕು ಸಾಗಿಸಿದರು. ಒಂದು ಮರದ ಕೆಳಗೆ ಕುಳಿತು ಅವರು ಕೆಲಸ ಮಾಡುತ್ತಿದ್ದರು. ಅಶೋಕ್‌ ಅವರು ಇಂದಿಗೂ 

ಆ ಮರವನ್ನು ಸ್ಮರಿಸುತ್ತಾರೆ ಮತ್ತು ಆರಾಧಿಸುತ್ತಾರೆ. 

ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್‌ ಅವರ ತಂದೆ ಕೂಡ ಮೋಚಿಯಾಗಿ ಕೆಲಸ ಮಾಡುತ್ತಿದ್ದರು. ಅಪಮಾನ ಮಾಡುವ ಉದ್ದೇಶದಿಂದ ಅಮೆರಿಕೆಯ ಲೋಕಸಭೆಯಲ್ಲಿ ಕೆಲವು ಸದಸ್ಯರು "ಲಿಂಕನ್‌ ಮೋಚಿಯ ಮಗ' ಎಂದು ಹೀಯಾಳಿಸಿ ಮಾತನಾಡಿದರು. ಲಿಂಕನ್‌ ಸ್ವಲ್ಪವೂ ವಿಚಲಿತರಾಗದೆ ""ಹೌದು ನಾನು ಮೋಚಿಯ ಮಗ. ನನ್ನ ತಂದೆ ಅತ್ಯಂತ ಶ್ರದ್ಧೆಯಿಂದ ಕಲಾತ್ಮಕವಾಗಿ ಚಪ್ಪಲಿ ಹೊಲಿಯುತ್ತಿದ್ದರು. ಇದು ನನಗೆ ಹೆಮ್ಮೆಯ ಸಂಗತಿ!'' ಎನ್ನುತ್ತಿದ್ದರು

ದಲಿತ ಕುಟುಂಬದಲ್ಲಿ ಜನಿಸಿ ದೊಡ್ಡ ಮಟ್ಟದಲ್ಲಿ ಬೆಳೆದಂತಹ ಇಂತಹ ಮಹನೀಯರು ನಿಜಕ್ಕೂ ಮಾದರಿ ಅಲ್ಲದೆ

ಗಳಿಕೆಯ ಸಂಪತ್ತನ್ನು ಸಾಮಾಜಿಕ ಕ್ರಾಂತಿ ಹಾಗೂ ಅವಶ್ಯಕತೆ ಇರುವವರಿಗೆ, ಸಮಾಜದ ಬದಲಾವಣೆಗೆ ಬಳಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಮತ್ತು ಅನುಕರಣೀಯ

💐💐💐💐💐

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು