ವಿದ್ಯೆ ಕಲಿಸುವುದು ಶಾಲೆ ಬುದ್ಧಿ ಬೆಳೆಸುವುದು ಮನೆ*
ಒಳ್ಳೆಯ ನೌಕರಿ ಸಿಗಬೇಕೆಂದರೆ ಫಸ್ಟ್ರ್ಯಾಂಕ್ ಒಂದೇ ಬಂದರೆ ಸಾಕಾಗುವುದಿಲ್ಲ. ಬುದ್ಧಿಶಕ್ತಿ, ಜ್ಞಾನ, ವಿಚಾರಶಕ್ತಿ ಮೊದಲಾದವು ಬೇಕಾಗುತ್ತವೆ. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ತಿದ್ದುವುದಕ್ಕೆ ಶಾಲೆ ಮಾತ್ರ ಸಾಲದು, ತಂದೆ-ತಾಯಿ ಮಕ್ಕಳಿಗೆ ಮೊದಲ ಗುರುಗಳು.
ಮಕ್ಕಳನ್ನು ಬೆಳೆಸುವ ಕ್ರಮ ಅವರ ವಯಸ್ಸಿಗೆ ತಕ್ಕ ಹಾಗೆ ಬದಲಾಗಬೇಕು. ಸಣ್ಣವರಿರುವಾಗ ಪಕ್ಕದಲ್ಲಿ ಮಲಗಿಸಿಕೊಂಡು ಕಥೆಗಳನ್ನು ಹೇಳಬೇಕು. ಟೀನೇಜ್ ಬಂದಾಗ ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಮಾಡಿಸಬೇಕು. ಪೇಪರ್ಗಳಲ್ಲಿನ ವಿಷಯಗಳನ್ನು ಡೈನಿಂಗ್ ಟೇಬಲ್ನಲ್ಲಿ ರ್ಚಚಿಸಿದರೆ ಮಕ್ಕಳಲ್ಲಿ ಲೋಕಜ್ಞಾನ ಮಾತ್ರವಲ್ಲದೆ, ಕುಟುಂಬ ಸದಸ್ಯರ ನಡುವೆ ಕಮ್ಯುನಿಕೇಷನ್ ಕೂಡ ಬೆಳೆಯುತ್ತದೆ.
ಮಕ್ಕಳಿಗೆ ಸ್ಪೂರ್ತಿದಾಯಕ ಕಥೆಗಳನ್ನು ಹೇಳಬೇಕು. ಅವು ಅರ್ಥವಾಗಬೇಕೆಂದರೆ ದೊಡ್ಡವರು ಓದಬೇಕು. ರಾಶಿರಾಶಿ ಕಥೆಗಳಿವೆ. ಉದಾಹರಣೆಗೆ ಈ ಕಥೆ ನೋಡಿ-ಒಬ್ಬ ಹುಡುಗ ಹತ್ತನೆಯ ವಯಸ್ಸಿನಲ್ಲಿ ಹಣ್ಣು ಕದಿಯುವಾಗ ಸಿಕ್ಕಿಬಿದ್ದ. ಅವನಿಗೆ ತೋಟದ ಮಾಲಿ ಹೊಡೆಯುತ್ತಿದ್ದಾಗ, ‘ನನಗೆ ಅಪ್ಪ ಇಲ್ಲ, ದಯವಿಟ್ಟು ಬಿಟ್ಟುಬಿಡಿ’ ಎಂದು ಬೇಡಿಕೊಂಡ. ಅವನನ್ನು ಬಿಡುತ್ತ ‘ತಂದೆ ಇಲ್ಲದಿರುವುದರಿಂದ ನೀನು ಮತ್ತಷ್ಟು ಗೌರವದಿಂದ ಬದುಕಬೇಕು’ ಎಂದನು ಆ ಮಾಲಿ. ಆ ಮಾತು ಹುಡುಗನ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ, ಅವನು ಭಾರತದ ಪ್ರಧಾನಮಂತ್ರಿಗಳಲ್ಲೇ ಅತ್ಯಂತ ಪ್ರಾಮಾಣಿಕ ಎಂದು ಹೆಸರು ಪಡೆದನು. ಆ ಹುಡುಗನೇ ಲಾಲ್ ಬಹಾದ್ದೂರ್ ಶಾಸ್ತ್ರಿ.
ಕಣ್ಣಲ್ಲಿ ನೀರು ತರಿಸುವ, ಶಾಸ್ತ್ರಿಗಳ ಕುರಿತ ಇನ್ನೊಂದು ಕಥೆ ಇಲ್ಲಿದೆ ನೋಡಿ. ಶಾಸ್ತ್ರಿ ಪ್ರಧಾನಿ ಆದ ಮೇಲೂ ಅವರ ಮಕ್ಕಳು ಸಿಟಿಬಸ್ನಲ್ಲೇ ಪ್ರಯಾಣ ಮಾಡುತ್ತಿದ್ದರು. ಸ್ನೇಹಿತರು ಗೇಲಿ ಮಾಡಿದ್ದರಿಂದ, ಕಾರ್ ಕೊಳ್ಳಲು ಮಕ್ಕಳು ತಂದೆಯನ್ನು ಪೀಡಿಸಿದಾಗ ಅವರು ಸಾಲ ಮಾಡಿ ಒಂದು ಫಿಯಟ್ ಕಾರ್ ಕೊಂಡರು. ಸಾಲದ ಕಂತುಗಳಿನ್ನೂ ಬಾಕಿ ಇರುವಾಗಲೇ ಶಾಸ್ತ್ರಿ ಅಜರಾಮರರಾದರು. ಈ ವಿಷಯ ದಿನಪತ್ರಿಕೆಗಳಲ್ಲಿ ಪ್ರಕಟವಾಯ್ತು. ದೇಶದೆಲ್ಲೆಡೆಯಿಂದ ಜನ ಹಣ ಕಳಿಸಿದರು. ಆ ದಿನಗಳಲ್ಲೇ ಅದು ಹಲವು ಲಕ್ಷಗಳಷ್ಟಿತ್ತು. ಒಂದು ವರ್ಷವಾದರೂ ಮನಿಯಾರ್ಡರ್ಗಳು ಬರುತ್ತಲೇ ಇದ್ದವು. ಆದರೆ ಲಲಿತಾ ಶಾಸ್ತ್ರಿ ಆ ಹಣವನ್ನೆಲ್ಲ ಅವರವರಿಗೆ ಮರಳಿ ಕಳುಹಿಸಿ, ಜತೆಗೆ ಕೃತಜ್ಞತೆ ಸಲ್ಲಿಸಿ ಪತ್ರವನ್ನೂ ಬರೆದರು. ಇಂದಿಗೂ ಕೆಲವರು ಆ ಪತ್ರವನ್ನು ಅಮೂಲ್ಯ ಆಸ್ತಿಯಂತೆ ಕಾಪಾಡಿಟ್ಟುಕೊಂಡಿದ್ದಾರೆ.
ಹೀಗೆ ಪ್ರಾಮಾಣಿಕವಾಗಿ ಬಾಳಿದವರ ಕಥೆಗಳನ್ನು ಮಕ್ಕಳಿಗೆ ಹೇಳಬೇಕು. ಅವು ಆಸಕ್ತಿಯ ಜತೆಗೆ ಜ್ಞಾನವನ್ನು, ಅದಕ್ಕಿಂತ ಮುಖ್ಯವಾಗಿ ಕುತೂಹಲವನ್ನು ಬೆಳೆಸುತ್ತವೆ.
ಹಿಂದೆಲ್ಲ ಎಷ್ಟು ಹೊಸ ವಸ್ತುಗಳನ್ನು ಮಾನವನು ಕಂಡುಹಿಡಿದನೋ, 20ನೇ ಶತಮಾನದಲ್ಲಿ (ಕೇವಲ ನೂರು ವರ್ಷಗಳಲ್ಲಿ) ಅಷ್ಟು ಕಂಡು ಹಿಡಿದಿದ್ದಾನೆ. ಆ ವೇಗದಲ್ಲಿ ಮಾನವರ ಬುದ್ಧಿಶಕ್ತಿ ಬೆಳೆಯುತ್ತಿದೆ. ಅದೇ ವೇಗದಲ್ಲಿ ಮಕ್ಕಳ ಯೋಗ್ಯತೆ ಕೂಡ ಬೆಳೆಯುತ್ತಿದೆ. ಹಿಂದೆಲ್ಲ ಎಸ್ಎಸ್ಎಲ್ಸಿ ಪಾಸಾದರೂ ನೌಕರಿ ಸಿಗುತ್ತಿತ್ತು. ನಂತರ ಉತ್ತಮ ಡಿಗ್ರಿಗೆ ನೌಕರಿ. ಈಗ ವಿದ್ಯೆ+ರ್ಯಾಂಕ್. ಈ ರೀತಿಯಲ್ಲಿ ಮಕ್ಕಳಲ್ಲಿ ಯೋಗ್ಯತೆ ಬೆಳೆದಂತೆಲ್ಲ ಇಂಟರ್ವ್ಯೂಗಳಲ್ಲಿ ಆಯ್ಕೆ ಕಷ್ಟವಾಗುತ್ತಿದೆ.
ಲ್ಯಾಟರಲ್ ಥಿಂಕಿಂಗ್: ಹಿಂದೆಲ್ಲ ತಲೆಸ್ನಾನ ಮಾಡುತ್ತ ಅಂಗೈಗೆ ಷಾಂಪೂ ಹಾಕಿಕೊಳ್ಳುತ್ತಿದ್ದೆವು. ಬಾಟಲ್ ಒಂದು ಕೈಯಲ್ಲಿ, ಮುಚ್ಚಳ+ಷಾಂಪೂ ಒಂದು ಕೈಯಲ್ಲಿ ಇರುತ್ತಿದ್ದವು. ಮುಚ್ಚಳವನ್ನು ಹೇಗೆ ಮುಚ್ಚಬೇಕೋ ತಿಳಿಯದೆ, ಅಂಗೈಯಲ್ಲಿರುವ ಷಾಂಪೂವನ್ನು ತಲೆಗೆ ಹಚ್ಚಿಕೊಂಡು ಅದೇ ಕೈಯಿಂದ ಮುಚ್ಚಳ ಮುಚ್ಚುತ್ತಿದ್ದೆವು. ಬಾಟಲ್ಸ್ ಈಗ ಬೇರೆ ವಿಧದಲ್ಲಿ ಬರುತ್ತಿವೆ. ಮುಚ್ಚಳಕ್ಕೆ ತೂತು ಕೊರೆದು ಕ್ಯಾಪ್ ಜೋಡಿಸಿರುತ್ತಾರೆ. ಕೆಲಸ ಸುಲಭವಾಗುತ್ತದೆ.
ಆದರೆ ಇದನ್ನು ಕಂಡು ಹಿಡಿಯುವುದಕ್ಕೆ ನಮಗೆ 30 ವರ್ಷ ಬೇಕಾಯಿತು. ಎಲ್ಲರೂ ಯೋಚಿಸುವ ಕ್ರಮದಲ್ಲಲ್ಲದೆ ಹೊಸ ಕೋನದಲ್ಲಿ ಯೋಚಿಸುವುದಕ್ಕೆ ಲ್ಯಾಟರಲ್ ಥಿಂಕಿಂಗ್ ಅನ್ನುತ್ತಾರೆ.
ಕೆಲವರು ಕೆಲಸಕ್ಕೆ ಸೇರಿದ ಒಂದು ವರ್ಷದಲ್ಲೇ ಅವರ ಸಂಬಳ ಎರಡು ಪಟ್ಟಾಗುತ್ತದೆ. ಕಾರಣ? ಅವರ ಬುದ್ಧಿಶಕ್ತಿ, ನೈಪುಣ್ಯ, ಲ್ಯಾಟರಲ್ ಥಿಂಕಿಂಗ್. ಕೆಲ ಸರ್ಜನರು ಆಪರೇಷನ್ ಮಾಡಿದರೆ ಹೊಲಿಗೆಗಳು ಕಾಣಿಸುವುದಿಲ್ಲ. ಅದೇ ನೈಪುಣ್ಯ!
ಕಂಪ್ಯೂಟರ್ನಲ್ಲಿ ಕೆಲಸ ಮಾಡುವವರಿಗೆ ಈ ಮೂರು ಇದ್ದರೆ, ಬೇರೆಯವರು ತಿಂಗಳಲ್ಲಿ ಮುಗಿಸುವ ಕೆಲಸವನ್ನು ಇವರು 20 ದಿನಗಳಲ್ಲಿ ಮುಗಿಸಬಲ್ಲರು. 20 ಸಾವಿರದಿಂದ ಪ್ರಾರಂಭವಾದ ಸಂಬಳ ವರ್ಷ ಮುಗಿಯುವಷ್ಟರಲ್ಲಿ 50 ಸಾವಿರ ಆಗುತ್ತದೆ
ದೇಹದಲ್ಲಿರುವ ಪ್ರತಿ ಅಂಗವೂ ಕೆಲಸ ಮಾಡಿದಂತೆಲ್ಲ ದಣಿದು ಹೋಗುತ್ತವೆ. ಕೆಲಸ ಮಾಡಿದಷ್ಟು ಚುರುಕಾಗುವುದು ಮಿದುಳು ಮಾತ್ರ. ಬಳಸದಿದ್ದರೆ ಕಬ್ಬಿಣ ತುಕ್ಕು ಹಿಡಿಯುತ್ತದೆ. ಹರಿಯದಿದ್ದರೆ ನೀರು ಮಲೆತುಹೋಗುತ್ತದೆ. ಹೆಪ್ಪುಗಟ್ಟಿಸುವ ಚಳಿಯಲ್ಲಿ ಗಾಳಿ ಚಲಿಸುವುದಿಲ್ಲ. ವಿಧವಿಧವಾದ ಪ್ರಶ್ನೆಗಳನ್ನು ಉತ್ತರಿಸುತ್ತ, ಕ್ವಿಜ್ಗಳನ್ನು ಪರಿಹರಿಸುತ್ತ, ಸಾಣೆ ಹಿಡಿದಷ್ಟೂ ಮಿದುಳು ಚುರುಕಾಗಿ, ಬುದ್ಧಿಶಾಲಿಯಾಗಿ ತಯಾರಾಗುತ್ತದೆ.
ಅಂಕ ಚೆನ್ನಾಗಿ ತಂದುಕೊಳ್ಳುವ ಮಕ್ಕಳೆಲ್ಲ ಬುದ್ಧಿವಂತರಲ್ಲ. ಹತ್ತನೆ ತರಗತಿವರೆಗೆ ಅಂಕ ಬುದ್ಧಿಯನ್ನು ಅವಲಂಬಿಸದೆ ಭಟ್ಟಿ ಇಳಿಸಿ ನೆನಪಿಟ್ಟುಕೊಳ್ಳುವ ವಿಧಾನವನ್ನು ಅವಲಂಬಿಸಿರುತ್ತದೆ. ಉನ್ನತ ವ್ಯಾಸಂಗಕ್ಕೆ ಹೋದಾಗಲೂ ಉತ್ತಮ ಅಂಕಗಳು ಬರಬೇಕೆಂದರೆ ಜ್ಞಾನದೊಂದಿಗೆ ‘ತಿಳಿವಳಿಕೆ’ ಕೂಡ ಬೆಳೆಯಬೇಕು.
‘ದಶರಥನ ಮಗ ಶ್ರೀರಾಮ’ ಎಂದು ಉರುಹೊಡೆದ ಹುಡುಗ ‘ರಾಮನ ತಂದೆ ಯಾರು?’ ಎಂಬ ಪ್ರಶ್ನೆಗೆ ಉತ್ತರಿಸದಿದ್ದರೆ ‘ನಾಲೆಡ್ಜ್ ಇದೆ ತಿಳಿವಳಿಕೆ ಇಲ್ಲ’ ಎನ್ನಬಹುದು.
ಜ್ಞಾನವೆಂದರೆ ನಾಲೆಡ್ಜ್+ತಿಳಿವಳಿಕೆ+ವಿಚಾರಕ್ತಿ+ಪ್ರತಿಸ್ಪಂದನೆ.
ಮೊದಲೇ ಹೇಳಿದಂತೆ ಮಕ್ಕಳಲ್ಲಿ ಓದಿನ ಆಸಕ್ತಿ ಹೆಚ್ಚುವಂತೆ ಮಾಡಬೇಕಿದೆ ಬದಲಾಗಿ ಕಂಠಪಾಠವಲ್ಲ ಅರಿತು ತಿಳಿದುಕೊಂಡರೆ ಒಳ್ಳೆಯದೇ. ಇಲ್ಲದಿದ್ದರೆ ಕೊನೆಯಲ್ಲಿ ಯಾವುದೂ ನೆನಪಿರುವುದಿಲ್ಲ,
ನಿಮಗೆ ಗೊತ್ತೇ? ಇಂಜಿನಿಯರಿಂಗ್, ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಶೇಕಡ 90 ಮಂದಿಗೆ ಭಾರತದ ನೆರೆರಾಷ್ಟ್ರಗಳ ಬಗ್ಗೆ ತಿಳಿದಿಲ್ಲ. ಸಂಸತ್ತಿಗೂ ವಿಧಾನಸಭೆಗೂ ವ್ಯತ್ಯಾಸ ತಿಳಿದಿಲ್ಲ. ಸೆಮಿನಾರ್ನಲ್ಲಿ ಪಿಯುಸಿ ವಿದ್ಯಾರ್ಥಿನಿಯನ್ನು ಎರಡು ದಿನಪತ್ರಿಕೆಗಳ ಹೆಸರು ಹೇಳು ಎಂದಾಗ ‘ಗೊತ್ತಿಲ್ಲ’ ಎಂದಳು.
ವಿದ್ಯಾರ್ಥಿಯ ಮಿದುಳೆಂಬ ಕಬ್ಬಿಣದ ಪೆಟ್ಟಿಗೆಯಲ್ಲಿ ಪ್ರತಿ ಪ್ರಶ್ನೆಗೆ ಒಂದು ರೆಡಿಮೇಡ್ ಉತ್ತರವನ್ನು ತುಂಬಿಡುವುದು ನಮ್ಮ ಉದ್ದೇಶವಲ್ಲ.
ವಿಷಯಗಳನ್ನು ತಿಳಿದುಕೊಳ್ಳಬೇಕೆನ್ನುವ ಆಸಕ್ತಿಯನ್ನು ಮಕ್ಕಳಲ್ಲಿ ನಾವು ಬೆಳೆಸಬೇಕು. ನೌಕರಿ ಸಿಗಬೇಕೆಂದರೆ ಈ ವಿಷಯಗಳಲ್ಲಿ ಈ ಉತ್ತರಗಳು ತಿಳಿದಿರಬೇಕು ಎಂಬ ನಿಯಂತ್ರಣ ಇರಬಾರದು. ಅಭ್ಯರ್ಥಿಯನ್ನು ‘ನಿನಗೇನು ತಿಳಿದಿದೆಯೋ, ಅದರಲ್ಲೇ ನಾವು ಪ್ರಶ್ನೆಗಳನ್ನು ಕೇಳುತ್ತೇವೆ’ ಎಂದು ಇಂಟರ್ವ್ಯೂಗಳಲ್ಲಿ ಹೇಳುವಂತಿರಬೇಕು. ತನಗೆ ಆಸಕ್ತಿಯಿರುವ ವಿಷಯದ ಬಗ್ಗೆ ಅಭ್ಯರ್ಥಿ ಹೇಳುತ್ತಾನೆ. ಅವನಿಗೆ ಆ ವಿಷಯದಲ್ಲಿ ಎಷ್ಟು ಜ್ಞಾನವಿದೆ ಎಂದು ಪರಿಶೀಲಿಸುತ್ತಾರೆ. ಕಲಿತ ಶಿಕ್ಷಣಕ್ಕೂ (ವಿದ್ಯೆಗೂ) ನೌಕರಿಗೂ ಸಂಬಂಧವಿರದ ಈ ವಿದ್ಯೆ ಏತಕ್ಕೆ? ಭವಿಷ್ಯತ್ತಿನಲ್ಲಿ ತಾನೇನು ಆಗುತ್ತಾನೋ ತಿಳಿಯದೆ ಅನಗತ್ಯವಾದ ವಿಷಯಗಳನ್ನು ಓದುವುದರಿಂದ ವಿದ್ಯಾರ್ಥಿಗೆ ಆಸಕ್ತಿ ಕಡಿಮೆಯಾಗುತ್ತದೆ. ಸಬ್ಜೆಕ್ಟ್ ಒಂದು ಸಬ್ಜೆಕ್ಟ್ ಅಷ್ಟೇ!
ಕಲಿಕೆಗೆ ಮಾರ್ಕ್ಸ್ ಇಲ್ಲದಿದ್ದರೂ ರಿಮಾರ್ಕ್ಸ್ ಬೇಡ