*ಭಗವಾನ್ ಗೌತಮ ಬುದ್ಧ*
ಬುದ್ಧ ಪೂರ್ಣಿಮೆ ಬೌದ್ಧ ಧರ್ಮೀಯರ ಪಾಲಿನ ಪವಿತ್ರ ದಿನಗಳಲ್ಲಿ ಒಂದಾಗಿದೆ. ಗೌತಮ ಬುದ್ಧ ಹುಟ್ಟಿದ ದಿನವಾದ ವೈಶಾಖ ಮಾಸದ ಶುಕ್ಲ ಪಕ್ಷ ಹುಣ್ಣಿಮೆ ದಿನದಂದು ಬುದ್ಧ ಪೂರ್ಣಿಮೆ ಆಚರಿಸಲಾಗುತ್ತದೆ. ಮಾನವರ ಹಿತಕ್ಕಾಗಿ ಜನ್ಮತಾಳಿದ ಬುದ್ಧನ ಹುಟ್ಟಿದ ದಿನವಾಗಿ ಆಚರಿಸಲಾಗುತ್ತದೆ. ರಾಜಕುಮಾರನಾಗಿದ್ದ ಸಿದ್ಧಾರ್ಥ ಮಾನವರ ಕಲ್ಯಾಣಕ್ಕಾಗಿ ತನ್ನೆಲ್ಲಾ ಸುಖವನ್ನು ತ್ಯಾಗ ಮಾಡಿ ನೋವು ಮತ್ತು ಸಾವಿನ ಅರ್ಥವನ್ನು ಕಂಡುಕೊಂಡ ದಿವಸವಾಗಿದೆ.
ತನ್ನ ಹದಿನಾರನೇ ವಯಸ್ಸಿನಲ್ಲಿ ಯಶೋಧರೆಯನ್ನು ಮದುವೆಯಾಗಿ ಒಂದು ಮಗುವಿನ ತಂದೆಯಾಗಿದ್ದ ಸಿದ್ಧಾರ್ಥ ಜೀವನದ ನಿಜವಾದ ಅರ್ಥವನ್ನು ಕಂಡ ಒಡನೇ ತಮ್ಮ ಸುಖವನ್ನು ತೊರೆದು ಸನ್ಯಾಸಿಯಾಗಿ ಮೋಕ್ಷವನ್ನು ಕಂಡುಕೊಳ್ಳುವ ದಾರಿಯಲ್ಲಿ ನಡೆಯುತ್ತಾರೆ.
ವೃದ್ಧರು, ಒಂದು ಮೃತದೇಹ ಮತ್ತು ತಪಸ್ವಿಗಳನ್ನು ಕಾಣುತ್ತಾರೆ. ಇಷ್ಟೆಲ್ಲಾ ಕಷ್ಟಗಳನ್ನು ಜನರು ಅನುಭವಿಸುತ್ತಿದ್ದಾರೆ ಮತ್ತು ತಾನು ಅನುಭವಿಸುತ್ತಿರುವುದೇ ಸುಖವೆಂದು ಅದುವರೆಗೆ ಅರಿತಿದ್ದ ಸಿದ್ಧಾರ್ಥ ಒಂದು ರಾತ್ರಿ ತಮ್ಮ ಪತ್ನಿ, ಪುತ್ರ, ರಾಜವೈಭೋಗದ ಎಲ್ಲಾ ಸುಖವನ್ನು ತ್ಯಜಿಸಿ ಹೊರಟು ಹೋಗುತ್ತಾರೆ.
ಗೌತಮ ಬುದ್ಧನು ಅರಣ್ಯಕ್ಕೆ ತೆರಳಿ ಅಲ್ಲಿ ತಪ್ಪಸ್ಸನ್ನು ಆಚರಿಸಲು ಆರಂಭಿಸುತ್ತಾರೆ. ಎಂಟು ವರ್ಷಗಳ ಬಳಿಕ ಬೋಧಿ ವೃಕ್ಷದ ಅಡಿಯಲ್ಲಿ ಗೌತಮನಿಗೆ ಮೋಕ್ಷ ಸಿಗುತ್ತದೆ. ತಮ್ಮ ೮೦ ರ ಹರೆಯದಲ್ಲಿ ಮರಣವನ್ನಪ್ಪಿದ ಸಿದ್ಧರ್ಥ ಮಾನವ ಜಗತ್ತಿಗೆ ಅತ್ಯುನ್ನತವಾದ ವಿಷಯಗಳನ್ನು ಬಿಟ್ಟು ಹೋಗಿದ್ದರು. ಅವರು ನಮಗೆ ತಿಳಿಸಿಕೊಟ್ಟ ಅಂಶಗಳು ಸರಳವಾಗಿದ್ದರೂ ಬದುಕಿಗೆ ಅದೊಂದು ಪಾಠವಾಗಿದೆ. ತಮ್ಮ ಜ್ಞಾನದಿಂದ ಎಲ್ಲರ ಜೀವನವನ್ನು ಮಾರ್ಪಡಿಸಿದ ಮಹಾನ್ ಶಕ್ತಿ ಅವರಾಗಿದ್ದಾರೆ. ಪ್ರತಿಯೊಬ್ಬರನ್ನೂ ಸಮನಾಗಿ ಕಂಡ ಗೌತಮ ಬುದ್ಧ ಜೀವನದ ಪಾಠವನ್ನು ಸಮನಾಗಿ ಎಲ್ಲರಿಗೂ ತಿಳಿಸಿಕೊಟ್ಟಿದ್ದಾರೆ.
ಅವರ ಜೀವನದ ಎರಡು ಘಟನೆಗಳ ಮೆಲುಕು..
*ಮಹಿಳೆ ಮತ್ತು ಮುಷ್ಟಿಯಷ್ಟು ಸಾಸಿವೆ*
ಜೀವನದ ನಿಜರ್ಥವನ್ನು ಕಂಡುಕೊಳ್ಳಲು ಗೌತಮನು ದಾರಿಯಲ್ಲಿ ಸಾಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ದುಃಖವು ಎಲ್ಲರ ಮನೆಯ ಕದವನ್ನೂ ತಟ್ಟುತ್ತದೆ ಆದರೆ ನಾವು ಅದನ್ನು ಮರೆತು ಮುಂದುವರಿಯಬೇಕು ಎಂಬುದು ಇದರಲ್ಲಿರುವ ಸಾರವಾಗಿದೆ.
ಒಬ್ಬ ಮಹಿಳೆ ತನ್ನ ಮಗನ ಸಾವಿನ ಶೋಕದಿಂದ ದುಃಖತಪ್ತಳಾಗಿದ್ದಳು. ಬುದ್ಧನ ಆಗಮನವನ್ನು ನೋಡಿದ ಆಕೆ ತನ್ನ ಪುತ್ರನನ್ನು ಬದುಕಿಸಕೊಡುವಂತೆ ಪ್ರಾರ್ಥಿಸುತ್ತಾಳೆ. ಹಾಗೆಯೇ ಬುದ್ಧನು ಆಕೆಯಲ್ಲಿ ಸಾವಿಲ್ಲದ ಮನೆಯಿಂದ ಒಂದು ಮುಷ್ಟಿ ಸಾಸಿವೆಯನ್ನು ತರುವಂತೆ ಹೇಳುತ್ತಾರೆ. ಹೀಗೆ ತಂದರೆ ನಿನ್ನ ಮಗನನ್ನು ನಾನು ಬದುಕಿಸಿಕೊಡುತ್ತೇನೆ ಎಂಬುದಾಗಿ ಬುದ್ಧ ನುಡಿಯುತ್ತಾರೆ. ಮಹಿಳೆ ಊರೆಲ್ಲಾ ಸುತ್ತಿದ್ದರೂ ಸಾವಿಲ್ಲದ ಮನೆಯಿಂದ ಸಾಸಿವೆಯನ್ನು ತರಲು ಆಕೆಗೆ ಆಗುವುದಿಲ್ಲ. ಇದರಿಂದ ಬುದ್ಧನು ಏನು ತಿಳಿಸಿಕೊಡುತ್ತಿದ್ದಾರೆ ಎಂಬುದರ ಅರಿವು ಆಕೆಗೆ ಉಂಟಾಗುತ್ತದೆ. ಸಾವು ಎಂಬುದು ವಿಶ್ವ ಸತ್ಯವಾಗಿದ್ದು ಇದರ ಬಂಧನದಿಂದ ಯಾರಿಗೂ ಮುಕ್ತಿಯನ್ನು ಪಡೆಯಲು ಸಾಧ್ಯವಿಲ್ಲ ಎಂಬುದಾಗಿದೆ. ಸತ್ತ ಆತ್ಮಕ್ಕೆ ಶಾಂತಿ ದೊರೆಯಲಿ ಎಂಬುದಾಗಿ ಪ್ರಾರ್ಥಿಸುವ ಕೆಲಸವನ್ನು ನಾವು ಮಾಡಬಹುದು. ಇದರಿಂದ ಆ ಆತ್ಮ ಮುಕ್ತಿಯನ್ನು ಪಡೆಯುತ್ತದೆ ಎಂಬುದಾಗಿ ಗೌತಮಬುದ್ಧರು ನುಡಿಯುತ್ತಾರೆ.
*ಗೌತಮ ಬುದ್ಧ ಮತ್ತು ಕೋಪಿಷ್ಟ ಮನುಷ್ಯ*
ನಮ್ಮಲ್ಲಿರುವ ಕೋಪ ಮತ್ತು ಋಣಾತ್ಮಕ ಶಕ್ತಿಯನ್ನು ಹೇಗೆ ದಮನ ಮಾಡಬೇಕು ಎಂಬುದನ್ನು ಇಲ್ಲಿ ಸಿದ್ಧರ್ಥರು ತಿಳಿಸಿಕೊಡುತ್ತಿದ್ದಾರೆ. ಒಮ್ಮೆ ಒಬ್ಬಾತ ಗೌತಮ ಬುದ್ಧನ ಮೇಲೆ ಹೆಚ್ಚು ಕೋಪಿಷ್ಟರಾಗಿದ್ದರು. ಬುದ್ಧ ಸುಳ್ಳು ಮತ್ತು ಅವರ ತತ್ವಗಳು ಹಾಗೂ ಸಿದ್ಧಾಂತಗಳು ಕಪಟ ಎಂಬುದಾಗಿ ಆತ ನಂಬಿದ್ದನು. ಆತನು ಬುದ್ಧನನ್ನು ಸಮೀಪಿಸಿ ಅವರನ್ನು ಹೀನಾಯಮಾನವಾಗಿ ಬೈಯಲು ತೊಡಗುತ್ತಾನೆ. ಆತ ಬುದ್ಧನಿಗೆ ಬೈಯುವ್ಯುದನ್ನು ನಿಲ್ಲಿಸಿದ ನಂತರ ಬುದ್ಧನು ನಗೆಯಾಡಿ ಆತನಲ್ಲಿ ಪ್ರಶ್ನೆಯೊಂದನ್ನು ಕೇಳುತ್ತಾರೆ. ನೀವು ಒಂದು ಉಡುಗೊರೆಯನ್ನು ಖರೀದಿಸಿದ್ದೀರಿ ಮತ್ತು ಆ ಉಡುಗೊರೆಯನ್ನು ನೀವು ನೀಡಿದ ವ್ಯಕ್ತಿ ತೆಗೆದುಕೊಂಡಿಲ್ಲ ಎಂದಾದಲ್ಲಿ ಆ ಉಡುಗೊರೆ ಯಾರಿಗೆ ಸಲ್ಲುತ್ತದೆ ಎಂಬುದಾಗಿ ಕೇಳುತ್ತಾರೆ? ಅದು ನನಗೆ ಸೇರುತ್ತದೆ ಎಂಬುದಾಗಿ ಆ ವ್ಯಕ್ತಿ ಉತ್ತರಿಸುತ್ತಾನೆ. ಆ ಬುದ್ಧನು ” ಅಂತೆಯೇ ನೀನು ನನ್ನ ಮೇಲೆ ವ್ಯಕ್ತಪಡಿಸಿದ ಎಲ್ಲಾ ಕೋಪವೂ ನನಗೆ ಪರಿಣಾಮವನ್ನು ಉಂಟುಮಾಡಿಲ್ಲ ನಾನು ಅದನ್ನು ಸ್ವೀಕರಿಸಿಲ್ಲ. ಆದ್ದರಿಂದ ನಿನ್ನ ಕೋಪ ನಿನ್ನದೇ ಆಗಿದೆ. ಇದರಿಂದ ನೀವು ವ್ಯಕ್ತಪಡಿಸುವ ಕೋಪ ಮತ್ತು ಅವಾಚ್ಯ ಶಬ್ಧಗಳು ನಿಮ್ಮ ಮೇಲೆಯೇ ಪರಿಣಾಮವನ್ನು ಬೀರುತ್ತವೆ.
ಕೃಪೆ:ಕನ್ನಡ ದಿನ ಪತ್ರಿಕೆ.