ನೋಡುವ ದೃಷ್ಟಿ ಬದಲಾಗಲಿ*
ಹುಡುಗಿಯೊಬ್ಬಳು ಟೆನಿಸ್ ಆಡಲು ಯೋಗ್ಯಸ್ಥಳವನ್ನು ಹುಡುಕುತ್ತಿದ್ದಳು. ಪ್ರೋತ್ಸಾಹ, ಉತ್ಸಾಹ, ಆಹ್ಲಾದ ನೀಡುವಂತಹ ಅಭ್ಯಾಸದ ಸ್ಥಳದ ಅಗತ್ಯ ಆಕೆಗಿತ್ತು. ಕೊನೆಗೂ ತನ್ನ ಅಭ್ಯಾಸಕ್ಕೆ ಅನುಕೂಲಕರವಾಗಿದ್ದ ಒಂದು ವಿಶಾಲ ಪ್ರಾಂಗಣವನ್ನು ಆರಿಸಿಕೊಂಡು ಕಲಿಕೆ ಆರಂಭಿಸಿದಳು. ಆ ಪ್ರಾಂಗಣದಲ್ಲೊಂದು ವಿಶೇಷತೆ ಇತ್ತು- ಅದರ ತುಂಬೆಲ್ಲ ಬರಿಯ ಕನ್ನಡಿಗಳೇ ಅಲಂಕರಿಸಿದ್ದವು. ಪ್ರತಿದಿನ ಆಕೆ ಅಲ್ಲೇ ಅಭ್ಯಾಸ ಮಾಡುತ್ತ ಆಟದಲ್ಲಿ ಪಳಗಿದಳು, ಆತ್ಮವಿಶ್ವಾಸ ಬೆಳೆಸಿಕೊಂಡಳು. ತಾನೊಬ್ಬಳೇ ಆಟವಾಡುತ್ತಿದ್ದರೂ ಪ್ರತಿಬಾರಿ ತಾನು ಹೊಡೆದ ಚೆಂಡು ಗೋಡೆಗೆ ಬಡಿದು ತಿರುಗಿ ತನ್ನತ್ತಲೇ ಪುಟಿದು ಬರುವಾಗ ಚಪ್ಪಾಳೆ ತಟ್ಟಿ ಖುಷಿಪಡುತ್ತಿದ್ದಳು. ಆಗ ಕನ್ನಡಿ ತುಂಬೆಲ್ಲ ಬೀಳುತ್ತಿದ್ದ ಪ್ರತಿಫಲನದಿಂದ ನೂರಾರು ಜನ ಚಪ್ಪಾಳೆ ತಟ್ಟಿ ಪೋ›ತ್ಸಾಹಿಸಿದಂತೆ ಭಾಸವಾಗಿ, ಅದರಲ್ಲೇ ಸಂಭ್ರಮಿಸುತ್ತಿದ್ದಳು. ಅಲ್ಲೇ ಅಭ್ಯಾಸ ಮುಂದುವರಿಸಿದ ಆಕೆ ದೊಡ್ಡಮಟ್ಟದಲ್ಲಿ ಬೆಳೆದಳು.
ಹೀಗೆಯೇ ಒಂದು ದಿನ ಮುಂಗೋಪಿ ಯುವಕನೊಬ್ಬ ಕೋಪದಿಂದ ಧುಮುಗುಡುತ್ತಲೇ ಅದೇ ಪ್ರಾಂಗಣದ ಮುಂಭಾಗದಲ್ಲಿ ಹಾದುಹೋಗುತ್ತಿದ್ದವನು, ಸುಸ್ತಾಯಿತೆಂದು ಕೆಲಕಾಲ ವಿರಮಿಸಲು ಪ್ರಾಂಗಣದ ಒಳಬಂದ. ಬಂದವನಿಗೆ ತನ್ನಂತೆಯೇ ಇನ್ನೂ ಹಲವು ಜನ ಕೋಪದಿಂದ ತನ್ನತ್ತ ನೋಡುತ್ತಿರುವಂತೆ ಅವನಿಗೆ ಭಾಸವಾಯಿತು. ಒಡನೆಯೇ ಸಿಟ್ಟುಗೊಂಡ ಆತ ಅವರೆಲ್ಲರಿಗೂ ಹೊಡೆಯಲೆಂದು ಕೈ ಎತ್ತುತ್ತಾನೆ. ಆಶ್ಚರ್ಯ! ಕನ್ನಡಿಯಲ್ಲಿನ ಎಲ್ಲ ಪ್ರತಿಬಿಂಬಗಳೂ ಅವನತ್ತಲೇ ಕೈಬೀಸಿ ಹೊಡೆಯಲು ಸನ್ನದ್ಧರಾಗಿರುವಂತೆ ಕಾಣಿಸಿತು. ಭಯಗೊಂಡ ಆತ ಅಲ್ಲಿಂದ ಓಡಿಹೋದ!
ಈ ರೂಪಕ ಚಿಕ್ಕದಾದರೂ ಸಂದೇಶ ದೊಡ್ಡದು. ಈ ಪ್ರಪಂಚವೆಂಬುದು, ಕನ್ನಡಿಯಲ್ಲಿ ಪ್ರತಿಫಲಿಸುವ ಬಿಂಬದಂತೆ. ನಾವು ಏನನ್ನು ನೀಡುತ್ತೇವೋ ಅದು ಗೋಡೆಗೆೆ ಒಗೆದ ಚೆಂಡಿನಂತೆ ಮರಳಿ ನಮ್ಮತ್ತಲೇ ಬರುತ್ತದೆ. ನಮ್ಮ ಕ್ರಿಯೆಗೊಂದು ಸಮನಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಈ ಸತ್ಯ ಅರಿತು ನಾವು ಯಾವುದೇ ಸ್ಥಾನದಲ್ಲಿರಲಿ, ನಮ್ಮ ನಡೆ-ನುಡಿ, ಆಚಾರ-ವಿಚಾರ, ವ್ಯವಹರಿಸುವ ರೀತಿಗಳಲ್ಲಿ, ಗೌರವ, ನಯ-ವಿನಯ, ಪ್ರಾಮಾಣಿಕತೆ ತುಂಬಿರುವಂತೆ ನೋಡಿಕೊಳ್ಳಬೇಕು. ನಕಾರಾತ್ಮಕ ಭಾವನೆಗಳನ್ನು ಹೊರತಳ್ಳಿ ಆತ್ಮವಿಶ್ವಾಸ ವೃದ್ಧಿಸಿಕೊಳ್ಳಬೇಕು. ಇನ್ನೊಬ್ಬರನ್ನು ಸದಾ ಟೀಕಿಸುವುದು, ಅಪನಂಬಿಕೆ, ದ್ವೇಷ, ತಿರಸ್ಕಾರಗಳನ್ನು ಹೊಮ್ಮಿಸುವುದು ಸಮಾಜದಲ್ಲಿ ಘರ್ಷಣೆಗೆ ಕಾರಣವಾಗುತ್ತದೆ.
ಜೀವನವನ್ನು ಇನ್ನಷ್ಟು ಸುಂದರ, ಸುಖಮಯ, ಸಂತೋಷವಾಗಿಸಿ, ಶಾಂತಿ- ಸೌಹಾರ್ದಯುತವಾಗಿಸಿ, ಸಮಾಜದಲ್ಲಿನ ಎಲ್ಲ ತೆರನಾದ ಜನಗಳ ಮಧ್ಯೆ ಜೀವಿಸಲೋಸುಗ ಈ ಪ್ರಪಂಚವನ್ನು ನೋಡುವ ದೃಷ್ಟಿಯನ್ನು ಬದಲಾಯಿಕೊಂಡಲ್ಲಿ ನಮ್ಮ ಜೀವನವೂ ಹಸನಾಗುತ್ತದೆ.
ಕೃಪೆ :ರಾಗಿಣಿ.