ದೃಢನಿಷ್ಠೆಯಿಂದ ಯಶಸ್ಸು*
ಬಿರುಬೇಸಿಗೆಯ ಒಂದು ದಿನ. ರಾಮಣ್ಣ ಎತ್ತುಗಳನ್ನು ಹೊಲದೆಡೆ ಕರೆದುಕೊಂಡು ಹೋದ. ಬರಗಾಲ ಅದೆಷ್ಟು ಭೀಕರವಾಗಿತ್ತೆಂದರೆ ನೀರಿಗೂ ದುಸ್ತರವಾಗಿತ್ತು. ಹೊಲದಲ್ಲಿ ಬಾವಿ ತೋಡಿ ನೀರು ಪಡೆಯಲೇಬೇಕೆಂದು ರಾಮಣ್ಣ ಸಂಕಲ್ಪಿಸಿದ.
ಆಳುಗಳಿಲ್ಲದೆ ಕೆಲಸ ಆರಂಭಿಸಿದ. ಮೂರು ಅಡಿ ಆಳದವರೆಗೆ ಮಣ್ಣು ತೆಗೆದರೂ ನೀರು ಬರುವ ಸೂಚನೆ ಕಾಣಲಿಲ್ಲ. ಬೇಸರವಾಗಿ ಅಲ್ಲಿ ಅಗೆಯುವುದನ್ನು ನಿಲ್ಲಿಸಿದ. ಸ್ವಲ್ಪ ದೂರ ನಡೆದ. ಇಲ್ಲಿ ನೀರಿರಬಹುದು ಎಂದೆಣಿಸಿ ಅಗೆಯತೊಡಗಿದ. ಅಲ್ಲಿಯೂ ಅದೇ ಭ್ರಮನಿರಸನ! ಹೀಗೆಯೇ ಸ್ಥಳ ಬದಲಾಯಿಸುತ್ತ ಐದಾರು ಕಡೆ ಯತ್ನಿಸಿದ; ಆದರೆ ಫಲಿತಾಂಶ ಮಾತ್ರ ಶೂನ್ಯ. ಹತಾಶನಾಗಿ ಅಳತೊಡಗಿದ. ಇದನ್ನು ಕಂಡ ಪಕ್ಕದ ಹೊಲದ ಭೀಮಣ್ಣ ಕಾರಣ ಕೇಳಿದಾಗ, ರಾಮಣ್ಣ ತನ್ನೆಲ್ಲ ವ್ಯಥೆ ಹೇಳಿಕೊಂಡ. ದುರದೃಷ್ಟವನ್ನು ಹಳಿದುಕೊಂಡ.
‘ಎಲ್ಲಿ ನಿನ್ನ ಬಾವಿ ತೋರಿಸು’ ಎಂದ ಭೀಮಣ್ಣ. ರಾಮಣ್ಣ ನಾಲ್ಕಾರು ಕಡೆ ತಾನು ಅಗೆದಿದ್ದನ್ನು ತೋರಿಸಿ, ‘ನೋಡು ಇಷ್ಟೊಂದು ಯತ್ನಿಸಿದರೂ ಫಲಿತಾಂಶ ಶೂನ್ಯ’ ಎಂದು ಮತ್ತೆ ಅಳತೊಡಗಿದ.
ಅದಕ್ಕೆ ಭೀಮಣ್ಣ, ‘ನೋಡಯ್ಯಾ, ನೀನು ಶ್ರಮಪಟ್ಟಿರುವುದೇನೋ ನಿಜ; ಆದರೆ ತೋಡುವಾಗ ಸ್ವಲ್ಪವಾದರೂ ಯೋಚಿಸಿದೆಯಾ? ಇಲ್ಲ. 3 ಅಡಿಗಳ ನಾಲ್ಕಾರು ಹೊಂಡ ತೋಡುವ ಬದಲು ಒಂದೇ ಕಡೆ ಹತ್ತು ಅಡಿ ಆಳ ತೋಡಿದ್ದರೆ ನೀರು ಸಿಗುತ್ತಿತ್ತು. ಈಗ ನೋಡು ಶ್ರಮವೂ ವ್ಯರ್ಥ. ಪ್ರಯೋಜನವಂತೂ ಇಲ್ಲವೇ ಇಲ್ಲ’ ಎಂದ ಭೀಮಣ್ಣ.
ಇದು ನಮ್ಮಲ್ಲಿ ಬಹುತೇಕರ ಪರಿಸ್ಥಿತಿ. ಜೀವನದ ಸಾಫಲ್ಯಕ್ಕಾಗಿ ಹತ್ತಾರು ಕಡೆ ಸುತ್ತುತ್ತೇವೆ, ಯಾವ್ಯಾವುದೋ ಪ್ರಯತ್ನ ಮಾಡುತ್ತೇವೆ. ಯಾವುದೂ ಫಲಕೊಡದಿದ್ದಾಗ ಹತಾಶರಾಗಿಬಿಡುತ್ತೇವೆ. ಅದಕ್ಕೆ ಬದಲು ಒಂದು ಸರಿಯಾದ ಮಾರ್ಗ ಹಿಡಿದು ದೃಢವಾಗಿ ತೊಡಗಿಸಿಕೊಂಡರೆ ಯಶಸ್ಸು ಕಟ್ಟಿಟ್ಟಬುತ್ತಿ. ಆದರೆ, ಶ್ರಮ-ಬೇಸರದ ನೆಪವೊಡ್ಡಿಯೋ, ಯಾರೋ ಹೇಳಿದರೆಂದೋ ಹಿಡಿದ ಕೆಲಸವನ್ನು ಬಿಡಬಾರದಷ್ಟೆ!
ಕೃಪೆ: ವಿಜಯ ವಾಣಿ.