ತಾಳ್ಮೆಗಿಂತ ತಪವಿಲ್ಲ.*
ಶಿಲ್ಪಿಯೊಬ್ಬ ತನ್ನ ಕಾಯಕದಲ್ಲಿ ನಿರತನಾಗಿದ್ದ. ಪಕ್ಕದಲ್ಲಿದ್ದ ಶಿಲೆ ಆತನನ್ನು ಕುರಿತು, ‘ಅಯ್ಯಾ, ಸ್ಥೂಲರೂಪದಲ್ಲಿ ನಾವೆಲ್ಲ ಕಲ್ಲುಗಳೇ; ಆದರೆ ನೀನು ನಮ್ಮನ್ನು ಬೇರ್ಪಡಿಸಿ, ಒಂದನ್ನು ಪಾಣಿಪೀಠವನ್ನಾಗಿ ಮಾಡಿದೆ ಮತ್ತೊಂದನ್ನು ವಿಗ್ರಹವಾಗಿ ಮಾರ್ಪಡಿಸಿದೆ. ಇನ್ನು ನನ್ನನ್ನಂತೂ ದೇಗುಲದ ಮೆಟ್ಟಿಲಾಗಿಸಿ ಜನರ ತುಳಿತಕ್ಕೆ ಗುರಿಪಡಿಸಿಬಿಟ್ಟೆ. ಇಂಥ ಪಕ್ಷಪಾತ ಸರಿಯೇ? ಇದು ಅನ್ಯಾಯವಲ್ಲವೇ?’ ಎಂದು ಕೇಳಿತು.
ಆಗ ಶಿಲ್ಪಿ, ‘ಇದು ಪಕ್ಷಪಾತವೂ ಅಲ್ಲ, ಅನ್ಯಾಯವೂ ಅಲ್ಲ; ಪ್ರಕೃತಿ ನಿಯಮ. ಚಾಣದ ನೂರಾರು ಏಟು ತಿನ್ನಲೂ ನಿನ್ನಿಂದ ಸಾಧ್ಯವಾಗಲಿಲ್ಲ. ಹಾಗಾಗಿ ನೀನು ಜನರಿಂದ ಮೆಟ್ಟಲ್ಪಡುವ ಮೆಟ್ಟಿಲುಗಲ್ಲಾಗಬೇಕಾಯಿತು. ಲಕ್ಷಗಟ್ಟಲೆ ಚಾಣದೇಟು ಸಹಿಸಿದ ನಂತರವಷ್ಟೇ ಸ್ಥಿರತೆ ಕಳೆದುಕೊಂಡ ಆ ಕಲ್ಲು ಪಾಣಿಪೀಠದ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಆದರೆ ಚಾಣದಿಂದ ಕೋಟಿಗಟ್ಟಲೆ ಏಟುತಿಂದರೂ ಬೆಚ್ಚದೆ-ಬೆದರದೆ ಸಂಯಮ ತೋರಿದ, ತನ್ಮೂಲಕ ನನ್ನಂಥ ಶಿಲ್ಪಿಗೆ ಸಹಕರಿಸಿದ ಮತ್ತೊಂದು ಕಲ್ಲು ಇಂದು ವಿಗ್ರಹವಾಗಿ ಗರ್ಭಗುಡಿಯಲ್ಲಿ ರಾರಾಜಿಸುತ್ತಿದೆ. ಅದಕ್ಕೆ ನಿತ್ಯವೂ ಪಂಚಾಮೃತ ಅಭಿಷೇಕ ನಡೆಯುತ್ತಿದೆ. ಜಗದ ನಿಯಮವೇ ಹಾಗೆ; ಅನುಗಾಲವೂ ಸುಖಕ್ಕೆ ಮಾತ್ರವೇ ಆಸೆಪಡುವವರಿಗೆ, ಸೋಮಾರಿಗಳಿಗೆ ನಿರೀಕ್ಷಿತ ಪ್ರಾಮುಖ್ಯ ದೊರೆಯುವುದಿಲ್ಲ. ಇದು ನಿತ್ಯಸತ್ಯ. ಅರ್ಥವಾಯಿತೇ?’ ಎಂದಾಗ ಪ್ರಶ್ನಿಸಿದ ಶಿಲೆ ಮೌನವಾಯಿತು.
ತಾಳ್ಮೆ ಮತ್ತು ಸಹಿಷ್ಣುತೆ ಮನುಷ್ಯನಲ್ಲಿ ಇರಬೇಕಾದ ಪರಮೋಚ್ಚ ಗುಣ ಎಂಬುದನ್ನು ಅರುಹಲು ಇದೊಂದು ರೂಪಕವಷ್ಟೇ. ಕೃಷಿಕರು ಬಿಸಿಲು-ಮಳೆ-ಚಳಿಯನ್ನು ಲೆಕ್ಕಿಸದೆ ಪರಿಶ್ರಮದಿಂದ ಸಾಗುವಳಿ ಮಾಡಿದರಷ್ಟೇ ಉತ್ತಮ ಫಸಲು ಪಡೆಯಬಹುದು. ನಿದ್ರೆಯೇ ಮೊದಲಾದ ಸುಖದ ಬಾಬತ್ತುಗಳನ್ನು ತ್ಯಜಿಸಿದರೆ ಮಾತ್ರವೇ ವಿದ್ಯೆ ಕರಗತವಾದೀತು. ಸಂಕಟ-ಸಂಕಷ್ಟಗಳು ಮಹಾತ್ಮರನ್ನೂ ಬಿಟ್ಟಿಲ್ಲ ಎಂಬುದಕ್ಕೆ ಶ್ರೀರಾಮ-ಸೀತೆಯರಿಗೆ ಒದಗಿದ ಸಂಕಟ, ಹರಿಶ್ಚಂದ್ರ ಪಟ್ಟ ಪಾಡು, ನಳ-ದಮಯಂತಿಯರ ಗೋಳೇ ಸಾಕ್ಷಿ. ಕ್ಷುಲ್ಲಕ ಕಾರಣಗಳಿಗೆ ಹೆದರಿ, ಮುಂದಿಟ್ಟ ಹೆಜ್ಜೆಯಿಂದ ಹಿಂದಕ್ಕೆ ಸರಿಯಬಾರದು. ‘ಧೈರ್ಯಂ ಸರ್ವತ್ರ ಸಾಧನಂ’ ಎಂಬ ಧ್ಯೇಯವಾಕ್ಯವನ್ನು ಆದರ್ಶವಾಗಿಟ್ಟುಕೊಂಡು, ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು, ಸಾಧನೆಗೈಯಬೇಕು. ತನ್ಮೂಲಕ ನಮ್ಮನ್ನು ನಾವು ಉದ್ಧರಿಸಿಕೊಳ್ಳಬೇಕು.
ಕೃಪೆ:ರಾಮ ಸುಬ್ರಾಯಶೇಟ್.