ಕೆಟ್ಟದ್ದನ್ನು ಮೊಳಕೆಯಲ್ಲೇ ಚಿವುಟೋಣ.*
ಅಂತ್ಯಕಾಲ ಸಮೀಪಿಸಿದೆ ಎಂಬುದನ್ನರಿತ ತಂದೆ, ಮೂವರು ಮಕ್ಕಳನ್ನು ಸಮೀಪದ ಹೊಲಕ್ಕೆ ಕರೆದುಕೊಂಡು ಹೋದ. ಅಲ್ಲಿ- ಎಳೆಯ ಸಸಿ, ಪೊದೆ, ಪೂರ್ಣವಾಗಿ ಬೆಳೆದ ಮರ- ಹೀಗೆ ಮೂರು ಬಗೆಯ ಸಸ್ಯಗಳಿದ್ದವು. ಚಿಕ್ಕಮಗನನ್ನು ಕರೆದ ಅಪ್ಪ, ‘ಮಗೂ, ಈ ಎಳೆಯ ಸಸಿಯನ್ನು ಕೀಳು ನೋಡೋಣ’ ಎಂದ. ಇದೇನು ಅಪ್ಪ ಹೀಗೆ ಹೇಳುತ್ತಿದ್ದಾರೆ? ಎನಿಸಿದರೂ ಆತ ನಿರಾಯಾಸವಾಗಿ ಅದನ್ನು ಕಿತ್ತು ಬಿಸುಟ. ತರುವಾಯ, ಎರಡನೇ ಮಗನಿಗೆ, ‘ಈ ಪೊದೆಯನ್ನು ಕಿತ್ತುಹಾಕು’ ಎಂದು ಅಪ್ಪ ಸೂಚಿಸಿದ. ಅಂತೆಯೇ ಅವನು ಮೊದಲು ಒಂದು ಕೈಯಿಂದ ಯತ್ನಿಸಿದಾಗ, ಅದು ಸಾಧ್ಯವಾಗಲಿಲ್ಲ. ಎರಡೂ ಕೈ ಬಳಸಿ ಎಳೆದಾಗ ಪೊದೆ ಅವನ ಶಕ್ತಿಗೆ ಸೋತಿತು. ನಂತರ, ಅತ್ಯಂತ ಶಕ್ತಿವಂತನಾದ ಹಿರಿಯ ಮಗನನ್ನು ಕರೆದ ಅಪ್ಪ, ಪೂರ್ಣ ಬೆಳೆದು ನಿಂತಿದ್ದ ಮರವನ್ನು ಕಿತ್ತು ಬಿಸುಡುವಂತೆ ಆದೇಶಿಸಿದ. ಆತ ಇದ್ದಬದ್ದ ಶಕ್ತಿಯನ್ನೆಲ್ಲ ಬಳಸಿ ಹಲವು ಬಾರಿ ಯತ್ನಿಸಿದರೂ ಮರ ಅಲ್ಲಾಡಲಿಲ್ಲ. ‘ಇದು ತುಂಬ ಗಟ್ಟಿಯಾಗಿದೆ, ನನ್ನ ಕೈಲಿ ಸಾಧ್ಯವಿಲ್ಲ’ ಎಂದು ಹಿರಿಯ ಮಗ ಅಪ್ಪನಿಗೆ ಹೇಳಿದ. ‘ಹಾಗಾದರೆ ಮೂವರೂ ಸೇರಿ ಒಮ್ಮೆ ಯತ್ನಿಸಬಹುದಲ್ಲ?’ ಎಂದ ಅಪ್ಪ. ಮೂವರ ಶಕ್ತಿ ವಿನಿಯೋಗವಾದರೂ ಮರ ಜಪ್ಪಯ್ಯ ಎನ್ನಲಿಲ್ಲ. ‘ಇದು ಮಾತ್ರ ನಮ್ಮಿಂದ ಸಾಧ್ಯವಾಗದು’ ಎಂದು ಸೋದರರು ಕೈಚೆಲ್ಲಿದರು.
ಆಗ ಅಪ್ಪ, ‘ಮಕ್ಕಳೇ, ನಾನಿನ್ನು ಹೆಚ್ಚು ದಿನ ಬದುಕಿರುವುದಿಲ್ಲ. ಈ ಸಸ್ಯಗಳು ಬೋಧಿಸುವ ಪಾಠವನ್ನು ನೀವು ಬದುಕಿನಲ್ಲಿ ಅಳವಡಿಸಿಕೊಳ್ಳಲಿ ಎಂಬ ಉದ್ದೇಶದಿಂದಲೇ ನಿಮ್ಮನ್ನಿಲ್ಲಿಗೆ ಕರೆತಂದೆ. ನಮ್ಮಲ್ಲಿರಬಹುದಾದ ಕೆಟ್ಟಗುಣ, ದುರಭ್ಯಾಸ, ದುರಾಲೋಚನೆಗಳನ್ನು ಅವಿನ್ನೂ ಮೊಳಕೆಯ ಹಂತದಲ್ಲಿರುವಾಗಲೇ ಚಿವುಟಿದರೆ ಕ್ಷೇಮ; ಒಂದೊಮ್ಮೆ ಬೆಳೆದು ನಿಂತಲ್ಲಿ, ಅವನ್ನು ಕಿತ್ತುಹಾಕುವುದು ಅಷ್ಟು ಸುಲಭವಲ್ಲ. ಒಳ್ಳೆಯ ಸಂಬಂಧಗಳು ಜೀವನದ ಆಸ್ತಿ, ಒಳ್ಳೆಯ ಗುಣಗಳು ಮನಸ್ಸಿನ ಆಸ್ತಿ ಮತ್ತು ಪ್ರೀತಿ ಹೃದಯದ ಆಸ್ತಿ. ದ್ವೇಷಿಸುವುದನ್ನು ಕ್ಷಣಮಾತ್ರದಲ್ಲಿ ಕಲಿಯವ ಕೆಲವರು, ಪ್ರೀತಿಸುವ ಗುಣವನ್ನು ಕಲಿಯಲು ಜೀವನದ ಕೊನೇಕ್ಷಣದವರೆಗೆ ಕಾಯುತ್ತಾರೆ. ನೀವು ಹಾಗಾಗಬೇಡಿ’ ಎಂದು ಹೇಳಿ ಮಕ್ಕಳನ್ನು ಹರಸಿದ.
ನಕಾರಾತ್ಮಕ ವಿಚಾರಧಾರೆಗಳು, ದುಷ್ಟ ಧೋರಣೆಗಳು, ದುರಭ್ಯಾಸಗಳು ನಮಗರಿವಿಲ್ಲದಂತೆಯೇ ನಮ್ಮ ಬದುಕನ್ನು ಹಾಳುಮಾಡುತ್ತವೆ. ಆದ್ದರಿಂದ ‘ದುಷ್ಟರನ್ನು ಕಂಡರೆ ದೂರವಿರು’ ಎಂಬ ಮಾತಿನಂತೆ ಅವುಗಳಿಂದ ಸಾಧ್ಯವಾದಷ್ಟು ದೂರವುಳಿಯುವುದೇ ಜಾಣತನ.
ಕೃಪೆ: ವಿದ್ಯಾ ಉಪೇಂದ್ರ