ಪತಿ-ಪತ್ನಿಯರ ನಡುವಿನ ಲೆಕ್ಕಾಚಾರ ಪಕ್ಕಾ ಇರಬೇಕು !*
ಪತಿ ಪತ್ನಿಯರ ನಡುವೆ ಲೆಕ್ಕಾಚಾರವೇ ಎಂದು ಹುಬ್ಬೇರಿಸಬೇಡಿ. ಆದರೆ ಅವರ ನಡುವೆಯೂ ಇರುತ್ತದೆ ಮತ್ತು ಅದು ಪಕ್ಕಾ ಇರುತ್ತದೆ! ಇದೊಂದು ಬಗೆಯ ’ಘರ್-ಘರ್ ಕೀ ಕಹಾನಿ’! ಅಂತಹ ಲೆಕ್ಕಾಚಾರದ ಬಗೆಗಿನ ಘಟನೆಯೊಂದು ಇಲ್ಲಿದೆ.
ಒಂದು ನಗರದಲ್ಲಿ ಹೊಸದಾಗಿ ಮದುವೆಯಾದ ಜೋಡಿ. ಸುಖೀಸಂಸಾರ ಅವರದ್ದಾಗಿತ್ತು. ಆತ ಉದ್ಯೋಗಸ್ಥರಾದರು. ಆಕೆ ಗೃಹಿಣಿಯಾದರು. ಹತ್ತು ವರ್ಷಗಳಲ್ಲಿ ಸ್ವಂತ ಮನೆಯಾಯಿತು. ಮೂರು ಜನ ಮಕ್ಕಳಾದರು. ಮಕ್ಕಳು ಶಾಲೆಗೆ ಹೋಗತೊಡಗಿದರು. ಆತ ವೃತ್ತಿಯಲ್ಲಿ ಯಶಸ್ಸಿನ ಮೆಟ್ಟಿಲುಗಳನ್ನು ಏರಿದಂತೆ, ಆಕೆ ಸಂಸಾರ ಸಾಗರದಲ್ಲಿ ಮುಳುಗಿದರು. ಇಬ್ಬರಿಗೂ ಮಧ್ಯವಯಸ್ಸಾಗುವಷ್ಟರಲ್ಲಿ ಒಮ್ಮೊಮ್ಮೆ ಸಂಸಾರದ ಏಕತಾನತೆ ಬೇಸರ ತರಿಸುತ್ತಿತ್ತು. ಆತ ಯಾವಾಗಲೂ ವೃತ್ತಿಯಲ್ಲೇ ಮುಳುಗಿ ತನ್ನ ಕಡೆ ಗಮನವೇ ಕೊಡುತ್ತಿಲ್ಲವೆಂದು ಆಕೆಗನಿಸುತ್ತಿತ್ತು. ಮನೆಯಲ್ಲಿರುವ ಗ್ರೈಂಡರ್, ವಾಷಿಂಗ್ ಮೆಷಿನ್ನುಗಳಂತೆ ತಾನೂ ಒಂದು ಮೆಷಿನ್ನಾಗಿಬಿಟ್ಟಿದ್ದೇನೇನೋ ಎನಿಸುತ್ತಿತ್ತು.
ಯಾವಾಗಲೋ ಒಮ್ಮೊಮ್ಮೆ ಇಬ್ಬರೂ ಮನೆಯಲ್ಲಿದ್ದ ಸಮಯದಲ್ಲಿ, ಅವರಿಬ್ಬರ ಮಧ್ಯೆ ಸರಸಕ್ಕಿಂತ ವಿರಸವೇ ಹೆಚ್ಚಾಗಿರುತ್ತಿತ್ತು. ಸಣ್ಣ-ಪುಟ್ಟ ಕಾರಣಕ್ಕಾಗಿ ಜಗಳವಾಗಿಬಿಡುತ್ತಿತ್ತು. ಒಮ್ಮೆ ಇಂತಹದ್ದೇ ಜಗಳದಲ್ಲಿ, ಆಕೆ ನಿಮ್ಮಿಂದಾಗಿ ನನಗೆ ಬದುಕು ಸಾಕೆನಿಸಿಬಿಟ್ಟಿದೆಯೆಂದು ಕಿರುಚಾಡಿದರು.
ಆತ ಏನೂ ಮಾತನಾಡಲಿಲ್ಲ. ಆಕೆಯ ಕೈಗೊಂದಷ್ಟು ಕಾಗದಗಳನ್ನು ಕೊಟ್ಟ. ತಾನೂ ಒಂದಷ್ಟು ಹಾಳೆಗಳನ್ನು ಹಿಡಿದು ಸಂಸಾರದ ಹಿರಿಯನಾಗಿ, ದುಡಿಯುವ ಗಂಡನಾಗಿ ಏನೆಲ್ಲ ಮಾಡಬೇಕೋ ಅದನ್ನು ನಾನು ಮಾಡುತ್ತಿದ್ದೇನೆ. ಮನೆಯ ಯಜಮಾನತಿಯಾಗಿ ಏನೆಲ್ಲ ಮಾಡಬೇಕೋ ಅದನ್ನು ನೀನು ಮಾಡುತ್ತಿದ್ದೀಯೆ. ಆದರೆ ನಮ್ಮಿಬ್ಬರಲ್ಲೂ ಇತ್ತೀಚೆಗೆ ಜಗಳಗಳು ಹೆಚ್ಚಾಗುತ್ತಿವೆ. ಈಗೊಂದು ಕೆಲಸ ಮಾಡೋಣ, ನನ್ನ ತಪ್ಪುಗಳು ಏನೆಲ್ಲ ಇವೆಯೋ ಅದನ್ನು ನೀನು ಬರೆದು ಪಟ್ಟಿ ಮಾಡು. ನಾನೂ ನಿನ್ನ ತಪ್ಪುಗಳ ಪಟ್ಟಿ ಮಾಡುತ್ತೇನೆ. ಆನಂತರ ಆ ತಪ್ಪುಗಳನ್ನು ತಿದ್ದಿಕೊಳ್ಳಲು ಸಾಧ್ಯವೇ ಯೋಚಿಸೋಣ. ತಿದ್ದಿಕೊಳ್ಳಲಾಗುವುದೇ ಇಲ್ಲವೆನ್ನುವಂತಹ ತಪ್ಪುಗಳಾದರೆ, ಜಗಳವಾಡುತ್ತಾ ಬದುಕುವುದರ ಬದಲು ಬೇರೆ ದಾರಿಗಳ ಬಗ್ಗೆ ಚಿಂತಿಸೋಣ ಎಂದ.
ಆಕೆಗೂ ಸಲಹೆ ಸರಿಯೆನಿಸಿತು. ಇಬ್ಬರೂ ಎದುರು-ಬದರು ಕುಳಿತರು. ಆತನನ್ನು ನೋಡುತ್ತಾ ಆಕೆ, ಆಕೆಯನ್ನು ನೋಡುತ್ತಾ ಆತ ಬರೆಯುತ್ತಾ ಕುಳಿತರು. ಸುಮಾರು ಸಮಯದ ನಂತರ, ಇಬ್ಬರೂ ಬರೆದು ಮುಗಿಸಿ ತಮ್ಮತಮ್ಮ ಹಾಳೆಗಳನ್ನು ಅದಲು ಬದಲು ಮಾಡಿಕೊಂಡರು. ಆಕೆ ಮೂರು ಹಾಳೆಗಳ ತುಂಬ ಬರೆದಿದ್ದಳು. ಅದರಲ್ಲಿ ’ನೀವು ಯಾವಾಗಲೂ ಕೆಲಸದಲ್ಲೇ ಮಗ್ನರಾಗಿರುತ್ತೀರಿ, ನಿಮಗೆ ವೇತನ-ಬಡ್ತಿಗಳೇ ನಮ್ಮ ಗಮನವೇ ನಿಮಗಿಲ್ಲ, ಮದುವೆಯಾದ ಹೊಸದರಲ್ಲಿ ಹೋಗುತ್ತಿದ್ದಂತೆ ಈಗ ನಾವು ಪ್ರವಾಸಗಳಿಗೆ ಹೋಗುವುದಿಲ್ಲ’ ಎಂಬಿತ್ಯಾದಿಯಾಗಿ ಕ್ರಮಸಂಖ್ಯೆಗಳನ್ನು ಹಾಕಿ ನೂರಾರು ತಪ್ಪುಗಳ ಪಟ್ಟಿ ಮಾಡಲಾಗಿತ್ತು.
ಆತ ಗಂಭೀರವದನರಾಗಿ ಪಟ್ಟಿಯನ್ನು ಓದುತ್ತಾ ಹೋದ. ಅಷ್ಟರಲ್ಲಿ ಆಕೆ ಆತನ ಪಟ್ಟಿಯನ್ನು ನೋಡಿದಳು. ಅದರಲ್ಲಿ *’ನನ್ನೆದುರಿಗೆ ಕುಳಿತಿರುವ ನಿನ್ನನ್ನು ನೋಡುತ್ತಿದ್ದರೆ, ನನಗೆ ನಿನ್ನ ತಪ್ಪುಗಳು ಯಾವುದೂ ನೆನಪಾಗುತ್ತಿಲ್ಲ. ನೀನು ಅಂದಿನಂತೆಯೇ ಇಂದೂ ಸುಂದರಳಾಗಿಯೇ ಕಾಣುತ್ತಿದ್ದೀಯ. ನಾನು ನಿನ್ನನ್ನು ಪ್ರೀತಿಸುತ್ತೇನೆ. ಐ ಲವ್ ಯು ಮೈ ಡಾರ್ಲಿಂಗ್* ಎಂದು ದಪ್ಪಕ್ಷರಗಳಲ್ಲಿ ಬರೆದಿತ್ತು. ಅದನ್ನು ನೋಡುತ್ತಿದ್ದಂತೆ ಆಕೆಗೆ ಏನೆನಿಸಿತೋ ಏನೋ, ಎದ್ದು ಬಂದು ಗಂಡನ ಕೈಯ್ಯಲ್ಲಿದ್ದ ತಾನೇ ಬರೆದಿದ್ದ ತಪ್ಪುಗಳ ಪಟ್ಟಿಯನ್ನು ಕಿತ್ತುಕೊಂಡು ಹರಿದು ಹಾಕಿದಳು. ಆತನನ್ನೊಮ್ಮೆ ದಿಟ್ಟಿಸಿ ನೋಡಿದರು.
’ನಾನೂ ನಿಮ್ಮನ್ನು ಪ್ರೀತಿಸುತ್ತೇನೆ. ಐ ಲವ್ ಯು ಟೂ’ ಎಂದು ಹೇಳಿದಳು.
ಮುಂದೇನಾಯಿತೆಂದು ಹೇಳಬೇಕಾಗಿಲ್ಲ. ಅಂದಿನಿಂದಾಚೆಗೆ ಅವರು ಎಂದೂ ಜಗಳವಾಡಲಿಲ್ಲವಂತೆ. ಎಲ್ಲ ಕಹಾನಿಗಳಲ್ಲಿ ಹೇಳುವಂತೆ ಅವರು ಸುಖ-ಶಾಂತಿಗಳಿಂದ ಬಾಳಿದರಂತೆ. ಆಗೊಮ್ಮೆ ಈಗೊಮ್ಮೆ ಪತಿ-ಪತ್ನಿಯರ ಜಗಳಗಳ ಜತೆಯಲ್ಲಿ ಇಂತಹ ಲೆಕ್ಕಾಚಾರ ನಡೆಯುವುದು ಒಳ್ಳೆಯದೇ ಅಲ್ಲವೇ?
ಇನ್ನೊಬ್ಬರಲ್ಲಿನ ಕೇವಲ ತಪ್ಪುಗಳನ್ನು ಹುಡುಕುವದರ ಬದಲು ಅವರಲ್ಲಿನ ಒಳ್ಳೆಯ ಗುಣಗಳನ್ನು ಕಾಣಬಹುದು.....🙏💐