ಪ್ರಾಮಾಣಿಕತೆಯಿಂದ ಉತ್ತಮ ಫಲ
(7 Rupees Changed my life)
ಭೌತಶಾಸ್ತ್ರದಲ್ಲಿ ‘ರಾಮನ್ ಪರಿಣಾಮ’ ಎಂಬ ಅಪೂರ್ವ ಸಂಶೋಧನೆ ಗಾಗಿ ನೊಬೆಲ್ ಪ್ರಶಸ್ತಿ ಪಡೆದ ಪ್ರಪ್ರಥಮ ಭಾರತೀಯ, ಬ್ರಿಟಿಷ್ ಸರ್ಕಾರ ನೀಡುತ್ತಿದ್ದ ‘ಸರ್’ ಗೌರವಕ್ಕೆ ಪಾತ್ರರಾದ ಭಾರತದ ಹೆಮ್ಮೆಯ ಪುತ್ರ ‘ಭಾರತ ರತ್ನ’ ಚಂದ್ರಶೇಖರ ವೆಂಕಟ ರಾಮನ್. 11ನೆಯ ವಯಸ್ಸಿಗೇ ಮೆಟ್ರಿಕ್ಯುಲೇಷನ್ ಪರೀಕ್ಷೆ ಪಾಸುಮಾಡಿಕೊಂಡ ಈ ಅಪ್ರತಿಮ ಪ್ರತಿಭೆ, ಬೆಂಗಳೂರಿನ ಪ್ರತಿಷ್ಠಿತ ವಿಜ್ಞಾನ ಸಂಸ್ಥೆ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್’ನ ಪ್ರಥಮ ಭಾರತೀಯ ನಿರ್ದೇಶಕರಾಗಿ ಸೇವೆ ಸಲ್ಲಿಸಿ, 1948ರಲ್ಲಿ ‘ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಅಂತೆಯೇ ತಮ್ಮ ಪ್ರಯೋಗಶಾಲೆಯಲ್ಲಿ ಸಂಶೋಧನೆ ನಡೆಸಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದರು. ನೂರಾರು ಅರ್ಜಿಗಳು ಬಂದಿದ್ದರೂ, ಖಾಲಿ ಇರುವ 3 ಹುದ್ದೆಗಳಿಗೆ 5 ಅಭ್ಯರ್ಥಿಗಳನ್ನು ಮಾತ್ರ- ಅವರ ಪ್ರಯಾಣಭತ್ಯೆ ನೀಡುವುದರ ಜತೆಗೆ- ಅಂತಿಮ ಸಂದರ್ಶನಕ್ಕಾಗಿ ಕರೆಯುತ್ತಾರೆ. ಅವರ ಪೈಕಿ ಮೂವರನ್ನು ಮಾತ್ರ ಆಯ್ಕೆಮಾಡಿ, ಉಳಿದಿಬ್ಬರಿಗೆ ಪ್ರಯಾಣಭತ್ಯೆ ತೆಗೆದುಕೊಂಡು ಹೋಗುವಂತೆ ಸೂಚಿಸುತ್ತಾರೆ.
ರಾಮನ್ ಸಂಜೆ ಮನೆಗೆ ಹಿಂದಿರುಗಿದಾಗ ವ್ಯಕ್ತಿಯೊಬ್ಬ ಗೋಚರಿಸುತ್ತಾನೆ. ಈತ ಮುಂಜಾನೆ ಅಂತಿಮ ಸಂದರ್ಶನಕ್ಕಾಗಿ ತಮ್ಮ ಕಚೇರಿಗೆ ಬಂದಿದ್ದ ಅಭ್ಯರ್ಥಿಯೆಂದು ಗೊತ್ತಾದ ಮೇಲೆ ಆತನನ್ನು ಕರೆದು, ‘ಯಾಕಪ್ಪಾ ಇಲ್ಲೇ ನಿಂತಿದ್ದೀಯ? ನೀನು ಈ ಬಾರಿ ಆಯ್ಕೆಯಾಗಲಿಲ್ಲ. ನಿನ್ನ ಪ್ರಯಾಣಭತ್ಯೆಯನ್ನು ತೆಗೆದುಕೊಂಡು ಮನೆಗೆ ಹೋಗಬಾರದೇ?’ ಎಂದು ಕೇಳುತ್ತಾರೆ. ಅದಕ್ಕೆ ಆ ಯುವಕ, ‘ಹೊರಡುವವನಿದ್ದೆ. ಆದರೆ ನನಗೆ ನೀಡಿರುವ ಪ್ರಯಾಣಭತ್ಯೆಯನ್ನು ಎಣಿಸಿದಾಗ ಹೆಚ್ಚುವರಿಯಾಗಿ 7 ರೂಪಾಯಿ ಪಾವತಿಯಾಗಿರುವುದು ಗಮನಕ್ಕೆ ಬಂತು. ಅದನ್ನು ಹಿಂದಿರುಗಿಸಲು ನಿಂತಿದ್ದೇನೆ’ ಎಂದುತ್ತರಿಸಿದ. ಆತನ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡ ರಾಮನ್ ‘ನೀನು ಸಂಶೋಧನೆ ಸಂಬಂಧಿತ ಸಂದರ್ಶನದಲ್ಲಿ ಆಯ್ಕೆಯಾಗಿಲ್ಲದಿರಬಹುದು; ಆದರೆ ಪ್ರಾಮಾಣಿಕತೆಯ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವೆ. ನನ್ನ ಪ್ರಯೋಗಾಲಯದಲ್ಲಿ ನಿನಗೊಂದು ಹುದ್ದೆಯನ್ನು ಸೃಷ್ಟಿಸುತ್ತೇನೆ. ನಾಳೆ ಬಂದು ಸೇರಿಕೋ’ ಎಂದರಂತೆ. ಈ ಯುವಕ ಮುಂದೆ ಅತಿದೊಡ್ಡ ವಿಜ್ಞಾನಿಯಾಗಿ ಹೆಸರು ಮಾಡಿದರು. ನಕ್ಷತ್ರಗಳು ತರುವಾಯ ಒಳಪಡುವ ಬೆಳವಣಿಗೆಗೆ ಸಿದ್ಧಾಂತಗಳನ್ನು ರೂಪಿಸಿದರು ಅದಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಪಡೆದರು. ಆವರೇ ನಮ್ಮ ಹೆಮ್ಮೆಯ ವಿಜ್ಞಾನಿ ಡಾ. ಸುಬ್ರಹ್ಮಣ್ಯನ್ ಚಂದ್ರಶೇಖರ್.
ಇವರು ಒಂದು ಕಡೆ ಬರೆಯುತ್ತಾರೆ (7 Rupees Changed my life)
ನೈತಿಕತೆಯ ಬೃಹತ್ ಭಂಡಾರದಲ್ಲಿ ಪ್ರಾಮಾಣಿಕತೆ ಎಂಬುದು ಒಂದು ಅರ್ನ್ಯಘರತ್ನ. ಇದನ್ನು ಅಗ್ಗದ ವ್ಯಕ್ತಿಗಳಿಂದ ನಿರೀಕ್ಷಿಸಲಾಗದು. ಪ್ರಾಮಾಣಿಕರಾಗಿರಲು ಬೇಕು ಮೌಲ್ಯಗಳಿಗೆ ಮನ್ನಣೆ ಹಾಗೂ ಇದಕ್ಕೆ ಕಟಿಬದ್ಧರಾಗಿರುವಂಥ ಸಂಕಲ್ಪಶಕ್ತಿ. ಪ್ರಾಮಾಣಿಕತೆ ಎಲ್ಲರಲ್ಲೂ ಇದ್ದರೆ ಪ್ರಪಂಚ ಸ್ವರ್ಗಸದೃಶವಾದೀತು, ಬಾಳು ಹಸನಾದೀತು.
🙏🙏💐💐