ಸರಕಾರದ ಅಧಿಕಾರಿಗಳು ದೇವರಾ ?
ಸರಕಾರದ ಕೆಲಸ ದೇವರ ಕೆಲಸ ಎಂಬ ವಾಕ್ಯವನ್ನು ಕನ್ನಡಿಗರಾದ ನಾವೆಲ್ಲರೂ ಬಲ್ಲೆವು. ಆ ವಾಕ್ಯವನ್ನು ವಿಧಾನ ಸೌಧದ ಮೇಲೆ ಕೆತ್ತಲಾಗಿದೆಯಲ್ಲವೇ? ಹಾಗಾದರೆ ಸರಕಾರದ ಅಧಿಕಾರಿಗಳನ್ನು ದೇವರುಗಳೆಂದು ಕರೆಯಬಹುದೇ ಎಂಬ ಪ್ರಶ್ನೆ ಎದುರಾದರೆ, ನಮ್ಮೆಲ್ಲರ ಉತ್ತರಗಳು ಬೇರೆ ಬೇರೆ ಇರುತ್ತವಲ್ಲವೇ? ಆದರೆ ಹದಿನಾರು ವರ್ಷ ವಯಸ್ಸಿನ ಹೆಣ್ಣುಮಗಳೊಬ್ಬಳು ಹಾಗೆ ಹೇಳಿದ ಹೃದಯಸ್ಪರ್ಶಿ ಪ್ರಸಂಗವೊಂದು ಇಲ್ಲಿದೆ.
ಆ ಹೆಣ್ಣುಮಗಳ ಹೆಸರು ರಾಜಲಕ್ಷ್ಮಿ. ಆಕೆಯ ತಾಯಿ-ತಂದೆಯರು ತಿರುವಣ್ಣಾಮಲೈ ನಗರದಲ್ಲಿ ಕೂಲಿ ಕೆಲಸಗಾರರು. ರಾಜಲಕ್ಷ್ಮಿ ವಿದ್ಯಾರ್ಥಿನಿ. 1998ರ ಒಂದು ಮಧ್ಯಾಹ್ನ ರಾಜಲಕ್ಷ್ಮಿಯು ತನ್ನ ತಂದೆಗೆ ಊಟದ ಡಬ್ಬಿಯನ್ನು ತೆಗೆದುಕೊಂಡು ಸೈಕಲನ್ನೇರಿ ಅವಸರವಸರವಾಗಿ ಹೋಗುತ್ತಿದ್ದರು. ಆಗ ನಡೆದ ಆಕಸ್ಮಿಕ ಅಪಘಾತವೊಂದರಲ್ಲಿ ಆಕೆ ಲಾರಿಯ ಚಕ್ರಕ್ಕೆ ಸಿಕ್ಕಿಕೊಂಡರು. ಆಕೆಯ ಎರಡೂ ಕಾಲುಗಳು ಛಿದ್ರ-ಛಿದ್ರವಾದವು.
ಆಕೆಯನ್ನು ತಕ್ಷಣ ಸಮೀಪದ ಸರಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ತೀವ್ರ ರಕ್ತಸ್ರಾವದಿಂದ, ನೋವಿನಿಂದ ನರಳುತ್ತಿದ್ದ ಆಕೆ ಬದುಕುವುದಿಲ್ಲವೆಂದು ವೈದ್ಯರಿಗೆ ಅನಿಸಿರಬೇಕು. ಅವರು ಸಂತೈಸುತ್ತ ನಿಮಗೇನಾದರೂ ಬೇಕೆ? ಎಂದು ಕೇಳಿದರು. ಆಕೆ ನಾನು ಬದುಕುವುದು ಕಷ್ಟವೆಂದು ಗೊತ್ತಾಗುತ್ತಿದೆ. ಸಾಯುವ ಮುಂಚೆ ನನಗೆ ಬೇಕು ಎನಿಸುವ ಮೂರು ಮಾತುಗಳನ್ನು ಹೇಳುತ್ತೇನೆ. ಮೊದಲನೆಯದ್ದು: ನನ್ನ ತಾಯಿತಂದೆ ಪ್ರತಿದಿನವೂ ಕಿತ್ತಾಡುತ್ತಾರೆ. ನಾನು ಸತ್ತಮೇಲಾದರೂ ಅವರು ಕಿತ್ತಾಡುವುದನ್ನು ನಿಲ್ಲಿಸಿ, ಪ್ರೀತಿವಿಶ್ವಾಸಗಳಿಂದ ಬದುಕಬೇಕು.
ಎರಡನೆಯದ್ದು: ನಾನು ಸತ್ತ ಮೇಲೆ, ನನ್ನ ಕಣ್ಣುಗಳನ್ನು ಹುಟ್ಟು ಕುರುಡಿಯಾಗಿರುವ ನನ್ನ ಸೋದರ-ಸಂಬಂಧಿ ಭುವನಾಳಿಗೆ, ದಾನವಾಗಿ ಕೊಡಬೇಕು.
ಮೂರನೆಯದ್ದು: ತಿರುವಣ್ಣಾಮಲೈ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಶ್ರೀಮತಿ ಕನ್ನಗಿ ಐ.ಎ.ಎಸ್. ಎನ್ನುವವರು ಕೊಡಿಸಿಕೊಟ್ಟ ಪಠ್ಯಪುಸ್ತಕಗಳಿಂದ ನಾನು ಶಾಲೆಗೆ ಹೋಗಲು ಸಾಧ್ಯವಾಯಿತು. ಅವರನ್ನು ಕಂಡಿಲ್ಲ. ಅವರನ್ನು ಕಂಡು ಧನ್ಯವಾದಗಳನ್ನು ಸಲ್ಲಿಸಬೇಕು. ಸಾಧ್ಯವಿದ್ದರೆ ಸಾಯುವ ಮುಂಚೆ ನಾನು ಅವರನ್ನೂ ನೋಡಬೇಕು. ನನ್ನ ತಾಯಿತಂದೆಯರನ್ನೂ ಕರೆಸಿದರೆ ಅವರನ್ನೂ ನೋಡಬೇಕು ಎಂದರು. ವೈದ್ಯರು ಆಗಬಹುದು. ಅದರ ವ್ಯವಸ್ಥೆ ಮಾಡಲಾಗುವುದು ಎನ್ನುವಷ್ಟರಲ್ಲಿ ಆಕೆ ಕೊನೆಯುಸಿರೆಳೆದರು. ಆಕೆಯ ಮೂರು ಬೇಡಿಕೆಗಳಲ್ಲಿ ಒಂದು ಈಡೇರಿತು. ಆಕೆಯ ಕಣ್ಣುಗಳನ್ನು ಭುವನಾಳಿಗೆ ಜೋಡಿಸಲಾಯಿತು. ಈಗ ಭುವನ ಕುರುಡಿಯಲ್ಲ. ಆಕೆ ನೋಡಬಲ್ಲಳು! ಆಕೆ ಸತ್ತ ಬಹಳ ಹೊತ್ತಿನ ನಂತರ ಜಿಲ್ಲಾಧಿಕಾರಿ ಶ್ರೀಮತಿ ಕನ್ನಗಿಯವರಿಗೆ ಸುದ್ದಿ ತಿಳಿಯಿತು.
ಆಸ್ಪತ್ರೆಗೆ ಧಾವಿಸಿ ಬಂದು, ಈ ಹೆಣ್ಣುಮಗಳು ಯಾರೋ ನನಗೆ ಗೊತ್ತೇ ಇಲ್ಲ. ಆದರೆ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು ಕೊಡಬೇಕೆನ್ನುವ ಸರ್ಕಾರದ ಸ್ಕೀಮ್ ಒಂದನ್ನು ನಾನು ಜಾರಿಗೆ ತಂದಿದ್ದೇನೆ. ಅಷ್ಟೇ ನಾನು ಮಾಡಿರುವ ಕೆಲಸ. ಆದರೆ ಸಾಯುವ ಮುಂಚೆ ನನ್ನನ್ನು ಜ್ಞಾಪಿಸಿಕೊಂಡದ್ದು ಆ ಸಣ್ಣ ಹುಡುಗಿಯ ದೊಡ್ಡಸ್ತಿಕೆ ಎಂದರಂತೆ. ರಾಜಲಕ್ಷ್ಮಿಯ ತಾಯಿತಂದೆಯರೂ ಆಸ್ಪತ್ರೆಗೆ ಬರುವಷ್ಟರಲ್ಲಿ ರಾಜಲಕ್ಷ್ಮಿ ಸತ್ತುಹೋಗಿದ್ದರು. ಈಗ ಅವರು ಕಿತ್ತಾಡುವುದಿಲ್ಲವಂತೆ. ಅವರ ಮನೆಯ ಗೋಡೆಯ ಮೇಲೆ ಅವರ ಮಗಳ ಜೊತೆಗೆ ಜಿಲ್ಲಾಧಿಕಾರಿಯ ಭಾವಚಿತ್ರವೂ ಇದೆಯಂತೆ.
ಸರಕಾರದ ಕೆಲಸ ದೇವರ ಕೆಲಸ ಎನ್ನುವ ಮಾತು ನಮ್ಮ-ನಮ್ಮ ನಂಬಿಕೆಗಳಿಗೆ ಸತ್ಯ ಅನಿಸಬಹುದು! ಅನಿಸದೆಯೂ ಇರಬಹುದು! ಆದರೆ ಜನರಿಗೆ ಉಪಯೋಗವಾಗುವ ಯೋಜನೆಗಳನ್ನು ಪ್ರಾಮಾಣಿಕವಾದ ರೀತಿಯಲ್ಲಿa ಜಾರಿಗೆ ತರುವ ಅಧಿಕಾರಿಗಳನ್ನು ದೇವರು! ಎಂದು ಯಾರಾದರೂ ಫಲಾನುಭವಿಗಳು ಹೇಳಿದರೆ ಅದನ್ನು ನಂಬಲೇಬೇಕಲ್ಲವೇ?
ಕೃಪೆ:ವಿಶ್ವವಾಣಿ.