ಭರವಸೆಯ ಬೆಳಕು
ಅದೊಂದು ಟೆಕ್ವಾಂಡೋ ತರಬೇತಿ ಶಾಲೆ. 5 ರಿಂದ 15 ವರ್ಷಗಳ ವಯೋಮಿತಿಯ ಮಕ್ಕಳಿಗೆ ಟೆಕ್ವಾಂಡೋ ಕಲಿಸಿಕೊಡಲಾಗುತ್ತಿತ್ತು. ತರಬೇತಿ ನೀಡುತ್ತಿದ್ದ ಶಿಕ್ಷಕಿಯ ಅಣತಿಯಂತೆ ಮಕ್ಕಳು ಮನಸ್ಸಿಟ್ಟು, ದೈಹಿಕ ಶ್ರಮವಹಿಸಿ, ಶ್ರದ್ಧೆಯಿಂದ ಕಲಿಯುತ್ತಿದ್ದರು. ಹೀಗಿರಲು ಒಂದು ದಿನ ರಾಜ್ಯ ಮಟ್ಟದ ಟೆಕ್ವಾಂಡೋ ಸ್ಪರ್ಧೆ ಏರ್ಪಡಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಲು ಮಕ್ಕಳೆಲ್ಲರೂ ಉತ್ಸುಕರಾಗಿದ್ದರು. ಸ್ಪರ್ಧೆಯ ಹಿಂದಿನ ದಿನ ತರಬೇತಿ ಶಾಲೆಯ ಶಿಕ್ಷಕಿ ಮಕ್ಕಳನ್ನು ಉದ್ದೇಶಿಸಿ, ‘ನಾಳೆ ಸ್ಪರ್ಧೆಯಿರುವುದು ನಿಮಗೆಲ್ಲ ತಿಳಿದಿದೆ. ಬೆಳಗ್ಗೆ 9.30ಕ್ಕೆ ಸ್ಪರ್ಧಾ ಸ್ಥಳದಲ್ಲಿ ಬಂದು ಸೇರಬೇಕು. ಶಿಸ್ತನ್ನು ಕಾಪಾಡಿಕೊಳ್ಳಬೇಕು. ಎಲ್ಲೆಂದರಲ್ಲಿ ಅಡ್ಡಾಡದೆ ನಿಮಗಾಗಿ ಮೀಸಲಿರುವ ಸ್ಥಳದಲ್ಲಿ ಕುಳಿತಿರಬೇಕು. ಸ್ಪರ್ಧೆ ಶುರುವಾದಾಗ ನಿಮ್ಮ ಗೆಳೆಯರು/ಗೆಳತಿಯರು ಭಾಗವಹಿಸುತ್ತಿರುವಾಗ ಚಪ್ಪಾಳೆಯೊಂದಿಗೆ ಪ್ರೋತ್ಸಾಹಿಸಬೇಕು. ಸ್ಪರ್ಧಿಸುವಾಗ ಯಾರಾದರೂ ಕೆಳಗೆ ಬಿದ್ದಲ್ಲಿ, ಸೋತಲ್ಲಿ, ನಗದೆ, ಎದ್ದು ಹೋಗದೆ, ಸ್ಪರ್ಧೆ ಮುಗಿಯುವವರೆಗೂ ಇದ್ದು ಚಪ್ಪಾಳೆಯೊಂದಿಗೆ ಹುರಿದುಂಬಿಸುತ್ತಿರಬೇಕು. ಸೋತವರಿಗೆ ಅಣಕಿಸದೆ ಮುಂದಿನ ಬಾರಿ ಗೆಲ್ಲುವ ಭರವಸೆ ನೀಡಬೇಕು’ ಎಂದರು. ಮಕ್ಕಳೆಲ್ಲ ಆಗಲಿ ಎಂದು ತಲೆಯಾಡಿಸಿದರು.
ಶಿಕ್ಷಕಿಯ ಮಾತುಗಳನ್ನು ಕೇಳಿದಾಗ ಹೌದಲ್ಲವೇ, ಈ ನುಡಿಗಳು ಮಕ್ಕಳಿಗೆ ಮಾತ್ರ ಅನ್ವಯಿಸುವುದಿಲ್ಲ. ನಾವೆಲ್ಲರೂ ಈ ನುಡಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಎಷ್ಟು ಚೆನ್ನ ಎಂದೆನಿಸುವುದು ಸುಳ್ಳಲ್ಲ. ನಮ್ಮ ಸ್ನೇಹಿತರು, ಪರಿಚಿತರು ಜೀವನದಲ್ಲಿ ಸೋತಾಗ ಅವರನ್ನು ಮೇಲೆತ್ತಲು ನಮ್ಮ ಸಹಾಯ ಹಸ್ತ ಚಾಚಬೇಕು. ಮತ್ತೊಮ್ಮೆ ಪ್ರಯತ್ನ ಪಡಲು ಪ್ರೋತ್ಸಾಹಿಸಬೇಕು. ಸತತ ಪರಿಶ್ರಮದಿಂದ ಪ್ರಯತ್ನಿಸಿದರೆ ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುವೆವು ಎಂಬುದನ್ನು ಮನದಟ್ಟಾಗುವಂತೆ ತಿಳಿಹೇಳಬೇಕು. ಜೀವನದಲ್ಲಿ ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳು. ಸೋಲಿನ ಪಾಠದಿಂದ ಗೆಲುವನ್ನು ಕೈವಶ ಮಾಡಿಕೊಳ್ಳಬಹುದು. ಗೆದ್ದಾಗ ಮೆರೆಯದೆ, ಸೋತಾಗ ಕುಗ್ಗದೆ, ಜೀವನದಲ್ಲಿ ಮುನ್ನುಗ್ಗುತ್ತಿರಬೇಕು. ಬಾಳೆಂಬ ಪಯಣದಲ್ಲಿ ಭರವಸೆಯ ಬೆಳಕು ನಮ್ಮನ್ನು ಯಾವಾಗಲೂ ಮುಂದೆ ಹೆಜ್ಜೆ ಹಾಕುವಂತೆ ಸಹಾಯ ಮಾಡುತ್ತದೆ. ಆ ಬೆಳಕನ್ನು ಸದಾ ಪ್ರಕಾಶಮಾನವಾಗಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯ. ಆ ಬೆಳಕಲ್ಲಿ ನಮ್ಮೊಂದಿಗೆ ನಮ್ಮ ಸಹಚರರನ್ನೂ ಮುನ್ನಡೆಸುವ ಸ್ಥೈರ್ಯ ಪ್ರತಿಯೊಬ್ಬರಲ್ಲೂ ಮೂಡಬೇಕು. ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಕೈ ಹಿಡಿದು ಆದರಿಸಿದಾಗ ಮಾತ್ರ ಮಾನವೀಯತೆಗೆ ಒಂದು ಸ್ಪಷ್ಟವಾದ ಅರ್ಥ ದೊರಕುತ್ತದೆ. ಆ ಅರ್ಥಪೂರ್ಣವಾದ ಬದುಕಿನತ್ತ ನಮ್ಮ ಪಯಣ ಸಾಗಲಿ. ಎಲ್ಲರೊಂದಿಗೆ ಬೆರೆತು ಬಾಳುವುದರಲ್ಲಿ ಸ್ವರ್ಗ ಸುಖವಿದೆ. ಸಹೃದಯತೆಯಿಂದ ಮತ್ತೊಬ್ಬರ ಏಳಿಗೆಗೆ ಪೋ›ತ್ಸಾಹಿಸಿದಾಗ ಬಾಳಿಗೊಂದು ದೈವಸ್ವರೂಪವಾದ ಅನುಭವವುಂಟಾಗುತ್ತದೆ. ಆ ಅನುಭವದೊಂದಿಗೆ ಆತ್ಮತೃಪ್ತಿಯೂ ನಮ್ಮದಾಗುತ್ತದೆ.
ಕೃಪೆ:ಜೆ. ಅಪೂರ್ವ.