ಬಡ ಶ್ರೀಮಂತರೋ ಶ್ರೀಮಂತ ಬಡವರೋ ?
ಏನಿದು ವಿಚಿತ್ರ? ಬಡವರು ಎಂದರೆ ಅಥವಾ ಶ್ರೀಮಂತರು ಎಂದರೆ ಅರ್ಥ ಮಾಡಿಕೊಳ್ಳಬಹುದು. ಆದರೆ ಬಡ-ಶ್ರೀಮಂತರೆಂದರೆ ಅಥವಾ ಶ್ರೀಮಂತ-ಬಡವ ರೆಂದರೆ ಅರ್ಥ ಮಾಡಿಕೊಳ್ಳುವುದು ಹೇಗೆ? ಅದಕ್ಕೆ ಸಂಬಂಧಪಟ್ಟ ಪುಟ್ಟ ಪ್ರಸಂಗವೊಂದು ಇಲ್ಲಿದೆ. ಒಂದೂರಿನಲ್ಲಿ ಒಬ್ಬ ಸಾಹುಕಾರರು ತಮ್ಮ ಮಕ್ಕಳು, ಮೊಮ್ಮಕ್ಕಳೇ ಅಲ್ಲ, ಮರಿಮಕ್ಕಳೂ ಕುಳಿತು ತಿಂದರೂ ಕಡಿಮೆಯಾಗದಷ್ಟು ಆಸ್ತಿ-ಪಾಸ್ತಿ ಮಾಡಿಟ್ಟಿದ್ದರು.
ಎಣಿಸಲಾಗದಷ್ಟು ಹಣ ಗಳಿಸಿಟ್ಟಿದ್ದರು. ಅವರಿಗೂ ವಯಸ್ಸಾಯಿತು. ಅನಾರೋಗ್ಯ ಆವರಿಸಿತು. ಕೊನೆಗಾಲ ಸಮೀಪಿಸಿತು, ಇನ್ನೇನು ಈಗಲೋ ಪ್ರಾಣ ಹೋಗುವ ಸಮಯ ಅರೆಪ್ರಜ್ಞಾವಸ್ಥೆಯಲ್ಲಿ ಅವರು ಮಲಗಿದ್ದರು. ಮಕ್ಕಳು, ಮೊಮ್ಮಕ್ಕಳು ಅವರ ಹಾಸಿಗೆಯ ಸುತ್ತ ನಿಂತಿದ್ದರು. ಆಗ ಅವರ ಮೊಮ್ಮಕ್ಕಳಲ್ಲಿ ಒಬ್ಬನಿಗೆ ಏನೋ ಕುತೂಹಲ. ಅವನು ಅಜ್ಜನ ಪ್ರಾಣ ಹೋದ ಮೇಲೆ, ಅವರ ಹೆಣವನ್ನು ಸ್ಮಶಾನಕ್ಕೆ ಹೇಗೆ ಸಾಗಿಸುತ್ತಾರೆ? ಎಂದು ಕೇಳಿದ.
ಆಗ ಸಾಹುಕಾರರ ಪತ್ನಿ ಕಣ್ಣೀರು ಸುರಿಸುತ್ತಾ ವಿಶೇಷವಾಗಿ ಪುಷ್ಪಾಲಂಕೃತವಾದ ಲಾರಿಯಲ್ಲಿ ಹೆಣವನ್ನಿಟ್ಟು ಮೆರವಣಿಗೆಯಲ್ಲಿ ಸ್ಮಶಾನದತ್ತ ಹೋಗಲಾಗುತ್ತದೆ. ಮುಂದೆ ದೊಡ್ಡ ಬ್ಯಾಂಡ್ ಸೆಟ್ ಇರುತ್ತದೆ. ಮೆರವಣಿಗೆಯ ಹಿಂದೆ ನಾವೆಲ್ಲ ಕಾರುಗಳಲ್ಲಿ ಹೋಗು ತ್ತೇವೆ ಎಂದರು. ತಕ್ಷಣ ಸಿರಿವಂತರ ಹಿರಿಯ ಮಗ ತೆರೆದ ಲಾರಿಗೆ, ಪುಷ್ಪಗಳ ಅಲಂಕಾರಕ್ಕೆ, ದೊಡ್ಡ ಬ್ಯಾಂಡ್ ಸೆಟ್ಟಿಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ ಎಂದರು. ಆಗ ಎರಡನೆಯ ಮಗ ನಿಧಾನವಾಗಿ ಪುಷ್ಪಾಲಂಕೃತ ವಾಹನ ದೊಡ್ಡ ಬ್ಯಾಂಡ್ ಸೆಟ್ಟುಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲು ಇದೇನು ಮದುವೆಯ ಮೆರವಣಿಗೆಯೇ? ಅವೆಲ್ಲ ಏನೂ ಬೇಡ. ಅಂತಿಮಯಾತ್ರೆಗೆ ಒಂದು ಟೆಂಪೋ ತರಿಸಿದರಾಯಿತು.
ಹತ್ತು-ಹದಿನೈದು ಸಾವಿರ ಖರ್ಚು ಮಾಡಿದರೆ ಸಾಕಲ್ಲವೇ? ಎಂದರು. ಆಗ ಮೂರನೆಯವ ಟೆಂಪೋಗಾಗಿ, ಮೆರವಣಿಗೆಗಾಗಿ ಸಾವಿರಾರು ರೂಪಾಯಿಗಳು ಏಕೆ ಖರ್ಚು ಮಾಡಬೇಕು? ನಗರ ಕಾರ್ಪೋರೇಷನ್ನಿನವರಿಗೆ ಫೋನ್ ಮಾಡಿದರೆ ಅವರು ಉಚಿತ ವಾಗಿ ವ್ಯಾನ್ ಕಳುಹಿಸಿಕೊಡುತ್ತಾರೆ. ನಾವೆಲ್ಲ ಅದರಲ್ಲೇ ಕುಳಿತು ಹೋದರಾಯಿತು. ಹಣವೂ ಉಳಿತಾಯವಾಗುತ್ತದೆ. ಸಮಯವೂ ಉಳಿಯುತ್ತದೆ! ಎಂದ.
ಆಗ ಕೊನೆಯುಸಿರಿಗೆ ಪರದಾಡುತ್ತಿದ್ದ ಸಾಹುಕಾರರು ಕಷ್ಟಪಟ್ಟು ಕಣ್ತೆರೆದು ಯಾರಾದರು ನನ್ನ ಪಾದರಕ್ಷೆಗಳನ್ನು ತಂದು ಕೊಡುತ್ತೀರಾ? ಎಂದು ಮೆಲುದನಿಯಲ್ಲಿ ಕೇಳಿದರು. ಹಿರಿಯ ಮಗ ಪ್ರಾಣ ಹೋಗುವ ಸಮಯದಲ್ಲಿ ನಿಮಗೆ ಪಾದರಕ್ಷೆಗಳೇಕೆ ಬೇಕು? ಎಂದು ಕೇಳಿದರು. ಸಾಹುಕಾರರು ನಾನು ಹಾಕಿಕೊಂಡು ಕಾಲ್ನಡಿಗೆಯಲ್ಲೇ ಸ್ಮಶಾನಕ್ಕೇ ಹೋಗಿ ಸಾಯುತ್ತೇನೆ.
ನೀವೆಲ್ಲ ನನ್ನ ಹಿಂದೆಯೇ ಕಾಲ್ನಡಿಗೆಯಲ್ಲೇ ನಡೆದು ಬನ್ನಿ. ನನ್ನ ಅಂತ್ಯಕ್ರಿಯೆ ನಡೆಸಿ ಹಿಂತಿರುಗಿ ಎಂದರು. ತಕ್ಷಣ ಮಕ್ಕಳು, ಮೊಮ್ಮಕ್ಕಳೆಲ್ಲ ಒಕ್ಕೊರಲಿನಿಂದ ಅದರಿಂದ ಏನು ಪ್ರಯೋಜನ? ಎಂದು ಕೇಳಿದರು. ಸಿರಿವಂತರು ನಾನು ಸ್ಮಶಾನದವರೆಗೂ ನಡೆದುಕೊಂಡು ಹೋಗುವುದರಿಂದ, ನೀವೆಲ್ಲ ನನ್ನ ಹಿಂದೆ ನಡೆದು ಬರುವುದರಿಂದ ಅಂತಿಮ ಯಾತ್ರೆಯ ಖರ್ಚೆಲ್ಲ ಉಳಿತಾಯ ವಾಗುತ್ತದೆ. ಮತ್ತು ಕೋಟ್ಯಾಂತರ ರೂಪಾಯಿಗಳನ್ನು ಸಂಪಾದಿಸಿರುವ ನಾನು ಸಾಯುವ ಸಮಯದಲ್ಲಿ ಸ್ಮಶಾನದವರೆಗೆ ನಡೆದು ಹೋಗುವುದನ್ನೂ ನನ್ನ ಹಿಂದೆ ನೀವೆಲ್ಲ ನಡೆದು ಬರುವುದನ್ನೂ, ನೋಡಿದವರಿಗೆ ನಾನು ಎಂತಹ ಕೃತಘ್ನ ಮಕ್ಕಳಿಗಾಗಿ ಹಣ ಸಂಪಾದನೆ ಮಾಡಿಟ್ಟೆನೆಂದು ಗೊತ್ತಾಗುತ್ತದೆ ಎಂದು ಹೇಳಿದರು.
ಈ ಕತೆಯಲ್ಲಿ ಬರುವ ಧನದಲ್ಲಿ ಸಾಹುಕಾರರಾದರೂ, ಮನದಲ್ಲಿ ಬಡವರಾದವರು... ’ಬಡ-ಶ್ರೀಮಂತರ’ನ್ನು ನೀವೂ ಕಂಡಿರಬಹುದು! ನಾವು ಸಾಹುಕಾರರಾಗದಿದ್ದರೆ ಚಿಂತೆಯಿಲ್ಲ, ಆದರೆ ಅಂತಹ ಬಡ-ಶ್ರೀಮಂತರಾಗದಿದ್ದರೆ ಸಾಕಲ್ಲವೇ? ಬಡತನ ಶ್ರೀಮಂತಿಕೆಗಳು ಅದೃಷ್ಟದ ಆಟವಿರಬಹುದು! ಆದರೆ ಬಡ-ಶ್ರೀಮಂತಿಕೆ ಅಥವಾ ಶ್ರೀಮಂತ-ಬಡತನ ನಾವೇ ಬೆಳೆಸಿಕೊಳ್ಳುವ ಮನಃಸ್ಥಿತಿ ಅಲ್ಲವೇ?
ಕೃಪೆ :ವಿಶ್ವ ವಾಣಿ.