ನಮ್ಮ ಸುಖಕ್ಕೆ ನಾವು ಬದುಕುವುದು ಸಾಮಾನ್ಯ. ಪರೋಪಕಾರಕ್ಕಾಗಿ ಬದುಕುವುದು ಉನ್ನತ ವ್ಯಕ್ತಿತ್ವ.
ಇದಕ್ಕೆ ಜಾತಿ, ಮತ, ವರ್ಣ, ಅಂತಸ್ತುಗಳ ಚೌಕಟ್ಟಿಲ್ಲ. ವಿದ್ಯಾವಂತರಾಗಿರುವುದೂ ಬೇಕಿಲ್ಲ. ಇದಕ್ಕೆ ಕಗ್ಗ ಖ್ಯಾತಿಯ ಕವಿ ಡಿ.ವಿ.ಗುಂಡಪ್ಪ ಜೀವನದಲ್ಲಿ ನಡೆದ ಒಂದು ಪ್ರಸಂಗ ಸಾಕ್ಷಿ.
ಗುಂಡಪ್ಪನವರು ಬೆಂಗಳೂರಿನ ಪ್ರಸಿದ್ಧ ಬಡಾವಣೆಯೊಂದರಲ್ಲಿ ವಾಸಿಸುತ್ತಿದ್ದರು. ಬೆಂಗಳೂರು ದಕ್ಷಿಣ ತುದಿಗಂಬದ ಬನಶಂಕರಿ ಕಾಡಿನಿಂದ (ಈಗಿನ ಸೌತ್ ಎಂಡ್ ನಂತರದ ಏರಿಯಾ) ಹಲವರು ಸೌದೆ ಮಾರುವವರು ಸೌದೆ ಸಂಗ್ರಹಿಸಿ, ನಗರವಾಸಿಗಳಿಗೆ ಮಾರುತ್ತಿದ್ದರು. ಅವರಲ್ಲಿ ಒಬ್ಬ ಮುನಿಯನೆಂಬ ವ್ಯಕ್ತಿ ಡಿವಿಜಿಯವರ ಮನೆಗೆ ಸೌದೆ ಒದಗಿಸುತ್ತಿದ್ದ. ಒಂದಾಳು ಹೊರುವಷ್ಟು ಸೌದೆ ಹೊರೆಗೆ ಆತನಿಗೆ ಸಿಗುತ್ತಿದ್ದುದು ಒಂದು ಪಾವಲಿ ಅಂದರೆ 25 ಪೈಸೆ.
ಅದೊಂದು ದಿನ ಮುನಿಯ ಡಿವಿಜಿಯವರಲ್ಲಿ ಐದು ರೂಪಾಯಿ ಕೇಳಿದ. ವಿನೀತನಾಗಿ ‘ನನ್ನೊಡೆಯಾ ನಿಮ್ಮ ಧರ್ಮ ನಿಮ್ಮನ್ನು ಕಾಯ್ತದೆ. ಸೌದೆ ತಂದಾಕಿ ಸಾಲ ತೀರಿಸ್ತೀನಿ’ ಎಂದೂ ಹೇಳಿದ. ಡಿವಿಜಿ ಆತನಿಗೆ ಹಣ ಕೊಟ್ಟು ಕಳುಹಿಸಿದರು. ಆದರೆ, ಮುಂದೆ ನಾಲ್ಕು ದಿನ ಮುನಿಯನ ಪತ್ತೆಯೇ ಇಲ್ಲದಂತಾದಾಗ ತಾನು ಆತನಿಗೆ ಹಣಕೊಟ್ಟು ಮೊಸಹೋದೆ ಎಂಬ ಭಾವನೆ ಡಿವಿಜಿಯವರಲ್ಲಿ ಸುಳಿಯಿತು. ಐದನೇ ದಿನ ಮುನಿಯ ಬಂದ, ಅದೂ ಬರಿಗೈಲಿ. ಡಿವಿಜಿಯವರ ಕಣ್ಣುಗಳಲ್ಲೇ ಕೋಪ ಸ್ಪಷ್ಟವಾಗಿ ಕಾಣುತ್ತಿದ್ದದ್ದನ್ನು ನೋಡಿ-‘ಕ್ವಾಪ ಮಾಡ್ಕೋಬೇಡಿ ನನ್ನ ಧಣಿ. ಒಸಿ ನಂಜೊತೆ ಬನ್ನಿ’ ಎಂದು ಅವರನ್ನು ಬನಶಂಕರಿಯ ಕಾಡಿನಂಚಿಗೆ ಕರೆದುಕೊಂಡು ಹೋದ. ಅಲ್ಲಿ ಮೂರು ಚಪ್ಪಡಿಕಲ್ಲುಗಳಿಂದ ಸಿದ್ಧಮಾಡಿದ ಒಂದು ಅಟ್ಟಣಿಗೆ ಇತ್ತು.
‘ಒಡೆಯ ಈ ಕಲ್ಲಿಗಾಗಿ ನಿಮ್ಮಿಂದ ಐದು ರೂಪಾಯಿ ಪಡೆದೆ. ಸೌದೆಹೊರೆಯನ್ನು ಕಾಡಿನಿಂದ ಹೊತ್ತು ತಂದು ಬಳಲಿದವರು, ಸ್ವಲ್ಪ ಹೊತ್ತು ಇಲ್ಲಿ ವಿಶ್ರಮಿಸಲು ಅನುವಾಗುತ್ತದೆ. ಸೌದೆ ಹೊರೆಯನ್ನು ಈ ಕಲ್ಲುಕಟ್ಟೆಯ ಮೇಲೆ ಇಳಿಸಿ, ದಣಿವಾರಿಸಿಕೊಳ್ಳಲು ಅನುಕೂಲವಾಗುತ್ತದೆ. ಸೌದೆ ಹೊರೆಯನ್ನು ನೆಲದಿಂದ ತಲೆಯ ಮೇಲಕ್ಕೆ ಹೊರಲು ಬೇರೊಬ್ಬರ ಸಹಾಯ ಬೇಕು. ಎಲ್ಲ ಸಮಯದಲ್ಲೂ ಸಹಚರರು ಸಹಾಯಕ್ಕೆ ಸಿಗುವುದಿಲ್ಲ. ಅದಕ್ಕೆಂದೇ ಈ ಕೆಲಸ ಮಾಡಿದೆ ನಾಳೆಯಿಂದ ಮಾಮೂಲಿ ಸೌದೆ ಹೊರೆ ತಂದು ಹಾಕುವೆ ನಾಕು ದಿನ ಸೌದೆ ತರದೇ ನಿಮ್ಗೆ ತ್ರಾಸ ಮಾಡಿದೆ. ನನ್ನ ತಪ್ಪನ ಹೊಟ್ಟೆಗಾಕ್ಕೊಳಿ’ ಎಂದ.
ಇದನ್ನೆಲ್ಲ ಕಂಡು ಡಿವಿಜಿಯವರಿಗೆ ಮಾತು ಹೊರಡದಂತಾಗಿ ಗಂಟಲು ಬಿಗಿಯಿತು. ಅವಿದ್ಯಾನಂತನಾದರೂ ಎಂಥ ಮಾನವೀಯ ಗುಣ ಈತನಲ್ಲಿದೆ ಎಂದು ಮೆಚ್ಚುಗೆಯ ನೋಟ ಬೀರಿ, ಆತನನ್ನು ಹರಸಿದರು. ಇದಲ್ಲವೇ ಪ್ರತಿಫಲಾಪೇಕ್ಷೆ ಇಲ್ಲದ ಜನಸೇವೆ.
ಕೃಪೆ:ಪ್ರಮೀಳಮ್ಮ