ಸಣ್ಣಗೆ ಕುಟುಕಿದರೂ ಗೊಣಗುತ್ತಿದ್ದ ಮರ ಇವತ್ತು ಕ್ಷೀಣ ದನಿಯನ್ನೂ ಹೊರ ಹಾಕದೇ ಮೌನವಾಗಿದೆಯಲ್ಲ! ಮರಕುಟಿಗನಿಗೆ ಆಶ್ಚರ್ಯವಾಯಿತು .
ಕುತೂಹಲ ತಡೆಯಲಾರದೇ ಕೆಣಕಿತು- '' ಎಲೈ ಆಶ್ರಯದಾತನೇ , ನಿನ್ನ ಮೌನದ ಹಿಂದಿನ ಕಾರಣವಾದರೂ ಏನು? ನೀನು ಸತ್ತು ಹೋಗಿರಬಹುದು ಎಂಬ ಅನುಮಾನ ಶುರುವಾಗುವ ಮುಂಚೆ ನನ್ನ ಪ್ರಶ್ನೆಗೆ ಉತ್ತರಿಸು!"
ಮರ ಹೇಳಿತು- "ಎಂಥಾ ಶಕುನ ನುಡಿದೆ ಮರಕುಟಿಗ ನೀನು , ನೀನು ಹೇಳಿದ ಹಾಗೆ ನಾನು ಸಾಯುವ ಘಳಿಗೆ ಬಂದೇಬಿಟ್ಟಿದೆ.. ನಾಳೆ ನನ್ನನ್ನು ಕಡಿಯುತ್ತಾರಂತೆ, ಈಗಷ್ಟೇ ನನಗೆ ರೇಟು ನಿಗದಿ ಮಾಡಿ ಹೋದರು"
ಆ ಮಾತಿನಿಂದ ಮರವೆಂಬ ವಠಾರದ ವಾಸಿಗಳಿಗೆ ಬರಸಿಡಿಲು ಬಡಿದಂತಾಯಿತು. ಇಳಿಸಂಜೆಯ ಹೊತ್ತಿನಲ್ಲಿ ಆಗಷ್ಟೇ ಗೂಡು ಸೇರಿದ ಹಕ್ಕಿಗಳು ,ಅಳಿಲುಗಳು ಭೀಕರ ಸುದ್ದಿ ಕೇಳಿ ತತ್ತರಿಸಿದುವು.
ಅವಕ್ಕೆ ನಾಳೆ ನಮ್ಮ ಕಥೆಯೇನು ಎಂಬ ಚಿಂತೆಗಿಂತ ಮರಕ್ಕೆ ಒದಗಲಿರುವ ಸಾವನ್ನು ನೆನೆದೇ ಹೆಚ್ಚು ದುಃಖವಾಯಿತು.
ಗೀಜಗ ಆತಂಕದಿಂದ ಕೇಳಿತು - " ಮರವೇ ನಿನಗೆ ರೇಟು ನಿಗದಿಯಾಗಿರುವುದನ್ನು ಕೇಳಿ ದುಃಖವಾಯ್ತು, ನೆರಳು ನೀಡಿದ್ದಕ್ಕೆ ಕೊರಳನ್ನೇ ಕಡಿಸಿಕೊಳ್ಳುವ ಪರಿಸ್ಥಿತಿ ಬಂತಲ್ಲ, ಛೇ"
ಮರ ಮಾರುತ್ತರ ನೀಡಿತು - " ಮನುಷ್ಯನಿಗೇ ರೇಟು ನಿಗದಿಯಾಗುತ್ತಿದೆ, ಸರ್ವಶಕ್ತ ಮನುಷ್ಯನೇ ಇಂದು ಮಾರಾಟದ ಸರಕಾಗುತ್ತಿದ್ದಾನೆ , ಇನ್ನು ನಾನ್ಯಾವ ಲೆಕ್ಕ ಹೇಳು "
ಗಿಳಿ ಮರುಕದಿಂದ ದನಿಗೂಡಿಸಿತು - ''ಅಯ್ಯೋ ! ಆ ದೇವರು ನಮಗೂ ಮನುಷ್ಯನಂತೆ ಕಾಂಚಾಣವನ್ನು ಸಂಪಾದಿಸುವ ಬುದ್ಧಿಯನ್ನು ಕೊಡಬಾರದಿತ್ತೇ ! ನನ್ನಂಥ ನೂರಾರು ಪಕ್ಷಿಗಳಿಗೆ ಆಶ್ರಯದಾತನಾಗಿರುವ ನಿನಗೆ ಪ್ರತಿತಿಂಗಳು ಇಂತಿಷ್ಟು ಬಾಡಿಗೆ ಕೊಡುತ್ತಿದ್ದೆವು , ಆಗ ನೀನು ಆ ಮನುಷ್ಯ ನಿನ್ನ ಮಾರಾಟಕ್ಕೆ ನಿಗದಿ ಮಾಡಿರುವ ರೇಟನ್ನು ಅವನಿಗೆ ಕೊಟ್ಟು ಪ್ರಾಣ ಉಳಿಸಿಕೊಳ್ಳಬಹುದಾಗಿತ್ತು
ಮರ ಹೇಳಿತು- "ನಿನ್ನ ಕಲ್ಪನೆಯೇನೋ ಸುಂದರವಾಗಿದೆ ಗಿಳಿರಾಯ, ಆದರೆ ಆ ಬುದ್ಧಿ ನನಗೆ ನಿಮಗೆ ಎಂದೂ ಬಾರದಿರಲಿ, ಅದು ಮನುಷ್ಯನಿಗೆ ಮಾತ್ರ ಸೀಮಿತವಾಗಿರಲಿ.. ಅದರಿಂದ ಬಳುವಳಿಯಾಗಿ ಬರುವ ಸ್ವಾರ್ಥದ , ದುರಾಸೆಯ ಸೋಂಕು ಮನುಷ್ಯ ಪ್ರಪಂಚಕ್ಕೆ ಮಾತ್ರ ಸೀಮಿತವಾಗಿರಲಿ.. ನಮ್ಮನ್ನು ಪೊರೆಯುವ ಭೂತಾಯಿಯ ಒಳಿತಿಗಾಗಿ ನಾವು ಹೀಗಿದ್ದರೇ ಚೆನ್ನ "
ಅಳಿಲು ದನಿಗೂಡಿಸಿತು - " ಆ ಮನುಷ್ಯ ಅಂಬೆಗಾಲಿಡುವ ವಯಸ್ಸಿನಿಂದ ಹಿಡಿದು ನಿನ್ನ ಕೊಂಬೆ ಹಿಡಿದು ಜೀಕುವ ವಯಸ್ಸಿನವರೆಗೂ ನಿನ್ನ ತಂಪು ನೆರಳಿನಲ್ಲೇ ಬೆಳೆದು ಅರಳಿದ್ದಾನೆ .. ದಶಕಗಳ ಬಹುದೊಡ್ಡ ಬಾಂಧವ್ಯಕ್ಕೆ ಕ್ಷಣದಲ್ಲಿ ಕೊಡಲಿಯೇಟು ಹಾಕಲು ಹೊರಟಿದ್ದಾನಲ್ಲ, ಅವನಿಗಿಂತ ಕಲ್ಲುಹೃದಯಿ ಇಲ್ಲ.. ಆಕಸ್ಮಾತ್ ಆತ ನಾಳೆ ನಿನ್ನನ್ನು ಕಡಿಯುವ ಮುಂಚೆ ಅಪರಾಧಿ ಪ್ರಜ್ಞೆಯಿಂದ ತಲೆತಗ್ಗಿಸಿ ನಿನ್ನನ್ನು ನೇವರಿಸಿದಾಗ ಕೊನೆಯ ಮಾತು ಏನು ಹೇಳುತ್ತೀ?"
ಮರ- "ಇನ್ನು ಹೇಳುವುದಕ್ಕೆ ಏನು ಉಳಿದಿದೆ ? ಅಷ್ಟೊತ್ತಿಗೆ ನೀವೆಲ್ಲ ಸುರಕ್ಷಿತ ಜಾಗಕ್ಕೆ ತಲುಪಿಕೊಳ್ಳಿ .. ಮೊಟ್ಟೆಯಿಟ್ಟಿರುವ ಹಕ್ಕಿಗಳದ್ದೇ ನನಗೆ ಚಿಂತೆ , ಗುಟುಕು ತಿನ್ನುವ ಬೋಳು ಮರಿಗಳದ್ದೇ ನನಗೆ ಚಿಂತೆ.. ನನ್ನನ್ನು ಮೆಲ್ಲಗೆ ಉರುಳಿಸಯ್ಯಾ ಎಂದು ಬೇಡಿಕೊಳ್ಳುತ್ತೇನೆ ..
ಹ್ಞಾಂ.. ಇನ್ನೊಂದು ಬೇಡಿಕೆಯಿದೆ, ನನ್ನನ್ನು ಬಳಸಿ ನೀನು ಮಹಲನ್ನಾದರೂ ಕಟ್ಟು ,ಮಂದಿರವನ್ನಾದರೂ ಕಟ್ಟು.. ಆದರೆ ನನ್ನನ್ನು ಕೊಡಲಿಯ ಹಿಡಿಕೆಯನ್ನಾಗಿ ಮಾತ್ರ ಮಾಡಬೇಡ , ನನ್ನಿಂದ ಇನ್ನೂ ಹಲವು ಜೀವಗಳು ನಶಿಸುವಂತೆ ಮಾಡಬೇಡ, ಈ ಮಾತನ್ನು ಕೊಳ್ಳುವವನಿಗೆ ಹೇಳೆಂದು ಅವನ ಕಿವಿಯಲ್ಲಿ ಉಸುರುತ್ತೇನೆ ".
ಮರದ ಮಾತು ಕೇಳಿ ಹಕ್ಕಿಗಳ ಚಿಲಿಪಿಲಿ ನಿಶ್ಯಬ್ಧವಾಯಿತು, ರೆಂಬೆಕೊಂಬೆಗಳ ತುಂಬಾ ಮೌನ ಹೆಪ್ಪುಗಟ್ಟಿತು..
ದೂರದಲ್ಲಿ ಕೊಡಲಿ ಮಸೆಯುವ ಸದ್ದು..