Wednesday, August 16, 2023

 


ಹೆಸರಿಗೆ ಅನ್ವರ್ಥವಾಗಿ ಬದುಕಿದವನನ್ನು ಸ್ಮರಿಸದಿದ್ದರೆ ಹೇಗೆ ?

1919ರ ಏಪ್ರಿಲ್ 13ನೇ ತಾರೀಖು. ಪಂಜಾಬ್‌ನ ತುಂಬೆಲ್ಲ ಬೈಸಾಖಿ ಹಬ್ಬದ ಖುಷಿಯ ವಾತಾವರಣ. ಅದರ ಆಚರಣೆಗೆಂದೇ ಸುಮಾರು 20 ಸಾವಿರಕ್ಕೂ ಹೆಚ್ಚಿನ ಮಂದಿ ಅಮೃತಸರದ ಜಲಿಯನ್‌ವಾಲಾ ಬಾಗ್ ಎಂಬ ಉದ್ಯಾನದಲ್ಲಿ ಸೇರಿದ್ದರು. ದುರದೃಷ್ಟವಶಾತ್ ಪಂಜಾಬಿನ ಲೆಫ್ಟಿನೆಂಟ್ ಗವರ್ನರ್ ಮೈಕೆಲ್ ಡಯರ್ ಅದೇ ದಿನ ಬೆಳಗ್ಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದ. ನಾಲ್ವರಿಗಿಂತ ಹೆಚ್ಚು ಜನ ಒಂದೆಡೆ ಗುಂಪುಗೂಡಬಾರದು ಎಂಬುದೂ ಆ ಆಜ್ಞೆಯ ನಿಯಮಗಳಲ್ಲೊಂದಾಗಿತ್ತು. ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹೆಚ್ಚುತ್ತಿದ್ದ ಸಂದರ್ಭವದು. ಭಾರತೀಯರಲ್ಲಿ ಒಗ್ಗಟ್ಟು, ಸಮಾಲೋಚನೆ, ಕಾರ್ಯತಂತ್ರಗಳು ಒಡಮೂಡ ಬಾರದೆಂಬ ಬ್ರಿಟಿಷರ ಕುಟಿಲ ನೀತಿ ಅರ್ಥವಾಗುವಂಥದ್ದೇ. ಆದರೆ ಜಲಿಯನ್‌ವಾಲಾಬಾಗ್‌ನಲ್ಲಿ ಸೇರಿದ್ದ ಬಹುತೇಕರು ಯಾತ್ರಾರ್ಥಿಗಳು. ಬೇರೆ ಊರುಗಳಿಂದಲೂ ಬಂದಿದ್ದವರು. ಅವರಿಗೆ ಈ ನಿಷೇಧಾಜ್ಞೆಯ ಸುಳಿವಾಗಲೀ ಅದರ ಅರ್ಥದ ತಿಳಿವಳಿಕೆಯಾಗಲೀ ಇರಲಿಲ್ಲ. ಹೀಗೆ ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿದ್ದಾರೆ ಎಂದು ತಿಳಿದುಬರುತ್ತಲೇ ಮೈಕೆಲ್ ಡಯರ್‌ನ ಕೈಕೆಳಗೆ ಸೇನಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ರೆಜಿನಾಲ್ಡ್ ಡಯರ್, ತನ್ನ ಬಾಸ್‌ನ ಅಪ್ಪಣೆ ಪಡೆದು ಉದ್ಯಾನದ ಕಡೆ ನುಗ್ಗಿದ. ಹೇಗೂ ಅವನ ಬಳಿ ಮೊದಲ ವಿಶ್ವ ಯುದ್ಧದಲ್ಲಿ ಪಳಗಿದ್ದ ಭಾರತೀಯ ಸೈನಿಕರ ಗೂರ್ಖಾ ರೆಜಿಮೆಂಟ್‌ನ ತುಕಡಿ ಇದ್ದೇ ಇತ್ತು.


ಇನ್ನು ಜಲಿಯನ್ ವಾಲಾಬಾಗ್ ವಿಸ್ತೀರ್ಣದಲ್ಲಿ ದೊಡ್ಡದಾದರೂ ಅದರ ಸುತ್ತ ಇದ್ದದ್ದು ಹತ್ತು ಅಡಿ ಎತ್ತರದ ಗೋಡೆ. ಉದ್ಯಾನದ ಐದೂ ಪ್ರವೇಶದ್ವಾರಗಳು ತೀರಾ ಸಣ್ಣವು. ಎಲ್ಲ ಬಾಗಿಲುಗಳನ್ನೂ ಮುಚ್ಚಿಸಿದ ಡಯರ್ ತನ್ನ ತುಕಡಿಯೊಂದಿಗೆ ಸೇರಿ ಸುಮಾರು ಹತ್ತು ನಿಮಿಷಗಳ ಕಾಲ ಒಂದೇ ಸಮನೆ ಗುಂಡಿನ ಮಳೆಗರೆದ. ಜನ ದಿಕ್ಕಾಪಾಲಾದರು. ತಪ್ಪಿಸಿಕೊಳ್ಳುವ ದಾರಿಕಾಣದೆ ಹಾಹಾಕಾರ ಮಾಡಿದರು. ಕೆಲವರು ಅಲ್ಲಿದ್ದ ಒಂದೇ ಬಾವಿಗೆ ಒಬ್ಬರ ಮೇಲೊಬ್ಬರಂತೆ ಹಾರಿದರು. ಏನಿಲ್ಲವೆಂದರೂ ಸಾವಿರಕ್ಕೂ ಹೆಚ್ಚಿನ ಮಂದಿ ಗುಂಡೇಟಿನಿಂದಲೇ ಸತ್ತರು. ಸಾವಿರಾರು ಜನ ಗಾಯಗೊಂಡರು. ಈ ಘಟನೆ ದೇಶದೆಲ್ಲೆಡೆ ತಲ್ಲಣ ಸೃಷ್ಟಿಸಿತು. ಅಷ್ಟೇ ಅಲ್ಲ, ಬ್ರಿಟಿಷರ ಕ್ರೌರ್ಯಕ್ಕೆ ಕೊನೆ ಹಾಡಿ ಅವರನ್ನು ಈ ದೇಶದಿಂದ ಒದ್ದೋಡಿಸಲೇಬೇಕೆಂಬ ಕೆಚ್ಚನ್ನು ಕೆಲ ಎಳೆ ಹೃದಯಗಳಲ್ಲಿ ಮೂಡಿಸಿತು. ಅಂಥ ಎಳೆಯರಲ್ಲಿ ಚಂದ್ರಶೇಖರ ತಿವಾರಿಯೂ ಒಬ್ಬ. ಈ ಘಟನೆ ನಡೆದಾಗ ಅವನಿಗೆ ಹದಿಮೂರರ ವಯಸ್ಸು. ತಂದೆ ಸೀತಾರಾಮ ತಿವಾರಿ ಹಾಗೂ ತಾಯಿ ಜಗರಾಣಿ ದೇವಿಗೆ ಮಗ ಸಂಸ್ಕೃತ ವಿದ್ವಾಂಸ ನಾಗಲಿ ಎಂಬ ಮಹದಾಸೆ. ಆದ್ದರಿಂದಲೇ ಅವನನ್ನು ಕಾಶಿಯ ಸಂಸ್ಕೃತ ಪಾಠಶಾಲೆಗೆ ಸೇರಿಸಿದ್ದರು.


ಆದರೆ ಮಗನ ಧಮನಿಗಳಲ್ಲಿ ಹರಿಯುತ್ತಿದ್ದುದು ದೇಶಭಕ್ತಿಯ ನೆತ್ತರು. ಓದಿಗಿಂತ ಹೆಚ್ಚಾಗಿ ಅವನ ಆಸಕ್ತಿಯೆಲ್ಲ ಈಜು, ಕುಸ್ತಿ ಮುಂತಾದವುಗಳಲ್ಲೇ. ಚೆನ್ನಾಗಿ ಸಾಮು ಮಾಡಿ, ಎಂಥವರೂ ಈರ್ಷ್ಯೆ ಪಡಬಹುದಾದ ದೇಹದಾರ್ಢ್ಯವನ್ನು ಗಳಿಸಿಕೊಂಡಿದ್ದ. 1920- 21ರಲ್ಲಿ ಗಾಂಧಿ ಅಸಹಕಾರ ಚಳವಳಿಯನ್ನು ಶುರುಮಾಡುತ್ತಿದ್ದ ಹಾಗೇ, ಅದಕ್ಕೇ ಕಾದಿದ್ದವನಂತೆ ಅದರೊಳಗೆ ಧುಮುಕಿದ. ಒಮ್ಮೆ ಪ್ರತಿಭಟನೆಯೊಂದರಲ್ಲಿ ಪಾಲ್ಗೊಂಡಿದ್ದಾಗ ಸೆರೆ ಸಿಕ್ಕವನನ್ನು ಪೊಲೀಸರು, ‘ನಿನ್ನ ಹೆಸರೇನು?’ ಎಂದು ಕೇಳಿದ್ದರು. ‘ಆಜಾದ್’ (ಸ್ವತಂತ್ರ) ಎಂದು ತಾನೇ ಇಟ್ಟುಕೊಂಡಿದ್ದ ಹೊಸ ಹೆಸರನ್ನು ಹೇಳಿ ಹದಿನೈದು ಛಡಿ ಏಟುಗಳನ್ನು ತಿಂದು ಏನೂ ಆಗಿಲ್ಲದವನಂತೆ ಬಂದಿದ್ದ. ಅಂದಿನಿಂದ ಚಂದ್ರಶೇಖರ ತಿವಾರಿ ಚಂದ್ರಶೇಖರ ಆಜಾದನೇ ಆಗಿಹೋದ. ಆಗಲೇ ಅವನು, ‘ನಾನು ಜೀವಮಾನದಲ್ಲಿ ಇನ್ಯಾವತ್ತೂ ಪೊಲೀಸರಿಗೆ ಸೆರೆ ಸಿಕ್ಕುವುದಿಲ್ಲ’ ಎಂಬ ಪ್ರತಿಜ್ಞೆ ಮಾಡಿದ್ದು. ಈ ಮಧ್ಯೆ ಗಾಂಧಿ ಅಸಹಾಕಾರ ಚಳವಳಿಯನ್ನು ಹಿಂಪಡೆದರು.


ಅವರನ್ನೇ ನೆಚ್ಚಿಕೊಂಡು ಚಳವಳಿಗಿಳಿದ ತರುಣರ ಮನಸ್ಥಿತಿ ಏನಾಗಬೇಡ? ಆಜಾದ್ ಅವರ ಸಂಗ ಬಿಟ್ಟು ರಾಮ್‌ಪ್ರಸಾದ್ ಬಿಸ್ಮಿಲ್‌ನ ಜತೆಗೂಡಿ ‘ಹಿಂದೂಸ್ಥಾನ್ ರಿಪಬ್ಲಿಕನ್ ಅಸೋಸಿಯೇಷನ್’ ಎಂಬ ರಾಷ್ಟ್ರಪ್ರೇಮಿಗಳ ಸಂಘಟನೆಯನ್ನು ಸೇರಿದ. ಅಷ್ಟು ಹೊತ್ತಿಗೆ ಅವನಿಗೆ ಬಂದೂಕು, ಬಾಂಬು, ರಕ್ತಪಾತಗಳಿಲ್ಲದೆ ಬ್ರಿಟಿಷರನ್ನು ಭಾರತದಿಂದ ಅಟ್ಟುವುದು ಸಾಧ್ಯವಿಲ್ಲವೆಂಬ ಸತ್ಯ ಮನವರಿಕೆಯಾಗಿತ್ತು. ಆದರೆ ಬಂದೂಕುಗಳನ್ನು ಕೊಳ್ಳಲು, ಬಾಂಬುಗಳನ್ನು ತಯಾರಿಸಲು ದುಡ್ಡು ತರುವುದೆಲ್ಲಿಂದ? ಸರಿ, ಸರಕಾರವನ್ನೇ ಲೂಟಿ ಮಾಡಬೇಕೆಂಬ ಆಲೋಚನೆ ಮಾಡಿತು ಬಿಸ್ಮಿಲ್ ನೇತೃತ್ವದ ತಂಡ. ಆಜಾದ್ ತಾನೂ ಹುಮ್ಮಸ್ಸಿನಿಂದಲೇ ಜತೆಯಾದ. ಮೊದಲೇ ಪೈಲ್ವಾನ. ಇನ್ನು ಇಂಥ ಅಪಾಯಕಾರಿ ಕೆಲಸದಿಂದ ಹೇಗೆ ದೂರವಿದ್ದಾನು? ಆವತ್ತು 1925ರ ಆಗ್ಟ್ ಒಂಬತ್ತು. ಶಹಜಹಾನಪುರದಿಂದ ಲಕ್ನೌಗೆ ಬರುತ್ತಿದ್ದ ರೈಲನ್ನು ಕಾಕೋರಿಯಲ್ಲಿ ತಡೆದು, ಭದ್ರತೆ ಒದಗಿಸುತ್ತಿದ್ದ ಗಾರ್ಡನ್ನು ಹೊಡೆದುರುಳಿಸಿ ಸುಮಾರು ಏಳೆಂಟು ಸಾವಿರ ರೂಪಾಯಿಗಳಿದ್ದ ಪೆಟ್ಟಿಗೆಯನ್ನು ದೋಚಿತು ದೇಶಭಕ್ತರ ಪಡೆ. ಆದರೆ ಎಲ್ಲವೂ ಎಣಿಸಿದಂತೆ ನಡೆಯಲಿಲ್ಲ. ಇವರ ಹಾಗೂ ಪೊಲೀಸರ ನಡುವೆ ಶುರುವಾದ ಗುಂಡಿನ ಚಕಮಕಿಯಲ್ಲಿ ವೃಥಾ ಅಮಾಯಕ ಪ್ರಯಾಣಿಕನೊಬ್ಬ ಬಲಿಯಾಗಬೇಕಾಯಿತು. ಅಲ್ಲದೆ ಬಿಸ್ಮಿಲ್ ಹಾಗೂ ಕೆಲ ಗೆಳೆಯರು ಸೆರೆಸಿಕ್ಕರು. ತನ್ನನ್ನು ಹಿಡಿಯಲು ಬಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಆಜಾದ್ ಪರಾರಿಯಾದ

ಅತ್ತ ಬಿಸ್ಮಿಲ್, ಅಶಫಕುಲ್ಲಾ ಖಾನ್ ಹಾಗೂ ಇನ್ನಿಬ್ಬರು ಸ್ನೇಹಿತರನ್ನು ಬ್ರಿಟಿಷ್ ಸರಕಾರ ನೇಣಿಗಟ್ಟುತ್ತಿದ್ದರೆ ಇತ್ತ ಆಜಾದ್ ಹೊಸಬರ ತಂಡ ಕಟ್ಟಲು ಸಜ್ಜಾಗುತ್ತಿದ್ದ. ಆಗ ಅವನಿಗೆ ಕಾನ್ಪುರದಲ್ಲಿ ಸಿಕ್ಕವರೇ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್. 1928ರ ಅಕ್ಟೋಬರ್ 30. ಲಾಲಾ ಲಜಪತ್ ರಾಯ್ ಲಾಹೋರಿನಲ್ಲಿ ಸೈಮನ್ ಕಮಿಷನ್‌ನ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆಯ ವೇಳೆ ಯಾವುದೇ ಹಿಂಸಾತ್ಮಕ ಅಥವಾ ಪ್ರಚೋದನಕಾರಿ ಘಟನೆಗಳು ನಡೆಯದಿದ್ದರೂ ಗುಂಪಿನ ಮೇಲೆ ಲಾಠಿ ಚಾರ್ಜ್ ನಡೆಸುವಂತೆ ಬ್ರಿಟಿಷ್ ಅಧಿಕಾರಿ ಜೇಮ್ಸ್ ಸ್ಕಾಟ್ ಆದೇಶ ಹೊರಡಿಸಿದ. 

ಹಿರಿಯರಾದ ಲಾಲಾ ಮುಂಚೂಣಿಯಲ್ಲಿದ್ದಾರೆಂಬುದನ್ನೂ ನೋಡದೆ ಕಾರ್ಯಪ್ರವೃತ್ತರಾದರು ಪೊಲೀಸರು. ಲಾಠಿ ಏಟುಗಳ ಭರಕ್ಕೆ ತೀವ್ರವಾಗಿ ಗಾಯಗೊಂಡ ಲಾಲಾ ನವೆಂಬರ್ ಹದಿನೇಳರಂದು ಕೊನೆಯುಸಿರೆಳೆದರು.


ಆಜಾದ್ ಹಾಗೂ ಅವನ ಗೆಳೆಯರು ಸಹಜವಾಗೇ ರೊಚ್ಚಿಗೆದ್ದರು. ಲಾಲಾರ ಸಾವಿನ ಸೇಡು ತೀರಿಸಿಕೊಳ್ಳುವುದಕ್ಕಾಗಿ ಅವರು ಜೇಮ್ಸ್ ನ ಹತ್ಯೆಯ ಸಂಚು ರೂಪಿಸಿದರು. ಲಾಲಾ ಸತ್ತ ಒಂದು ತಿಂಗಳಿಗೆ ಸರಿಯಾಗಿ ಅವನನ್ನೂ ಸಾಯಿಸುವುದೆಂದು ತೀರ್ಮಾನವಾಯಿತು. ಆದರೆ ಗ್ರಹಚಾರ ಕೆಟ್ಟು, ಇವರು ಹಾರಿಸಿದ ಗುಂಡಿಗೆ ಜೇಮ್ಸ್ ಸ್ಕಾಟ್‌ನ ಬದಲಿಗೆ ಜಾನ್ ಸಾಂಡರ್ಸ್ ಎಂಬ ಬೇರೊಬ್ಬ ಪೊಲೀಸ್ ಅಧಿಕಾರಿ ಬಲಿಯಾದ. ಕೋಪಾವಿಷ್ಟವಾದ ಬ್ರಿಟಿಷ್ ಸರಕಾರ ಆಜಾದ್ ಮತ್ತು ಸಂಗಡಿಗರನ್ನು ಹುಡುಕತೊಡಗಿತು. ಭಗತ್ ಹಾಗೂ ಅವನ ಇಬ್ಬರು ಗೆಳೆಯರೇನೋ ಬೇಕೆಂದೇ ಸೆರೆ ಸಿಕ್ಕರು. ಆದರೆ ಆಜಾದ್ ಹಾಗೆ ಸಿಗುವ ಪೈಕಿಯವನಲ್ಲ ವಲ್ಲ! ಅವನನ್ನು ಹಿಡಿಯುವುದು ಸರಕಾರಕ್ಕೆ ನಿಜವಾಗಿಯೂ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿತು. ಅವನ ಬಗ್ಗೆ ಸುಳಿವು ಕೊಟ್ಟವರಿಗೆ ಭಾರೀ ಮೊತ್ತದ ಬಹುಮಾನವನ್ನು ಘೋಷಿಸಿತು. 1931ರ ಫೆಬ್ರವರಿ 27. ತನ್ನ ಕೆಲ ಗೆಳೆಯರನ್ನು ಭೇಟಿಯಾಗಲು ಅಲಹಾಬಾದಿನ ಆಲ್ಫ್ರೆಡ್ ಪಾರ್ಕ್ ಗೆ ಬಂದ ಆಜಾದ್. ಅವನ ಬರುವಿಕೆಯ ಬಗ್ಗೆ ಅವನ ಗೆಳೆಯರಲ್ಲೇ ಒಬ್ಬ ಪೊಲೀಸರಿಗೆ ಸುಳಿವು ನೀಡಿಬಿಟ್ಟಿದ್ದ. ಪಾರ್ಕನ್ನು ಸುತ್ತುವರಿದ ಪೊಲೀಸರು ಆಜಾದ್‌ನತ್ತ ಗುಂಡು ಹಾರಿಸತೊಡಗಿದರು.

ನಿಷ್ಣಾತ ಗುರಿಕಾರ ಆಜಾದ್ ತನ್ನ ಕೈಲಾದ ಮಟ್ಟಿಗೆ ಹೋರಾಡಿದ. ಗೆಳೆಯರೆಲ್ಲ ತಪ್ಪಿಸಿಕೊಂಡು ಓಡುವ ಹಾಗೆ ಮಾಡಿದ. ಇನ್ನೆಲ್ಲಿ ಅವನೂ ಓಡಿಹೋಗುತ್ತಾನೋ ಎಂದು ಅವನ ಕಾಲಿಗೇ ಗುಂಡು ಹೊಡೆದರು ಬ್ರಿಟಿಷರು. ಕಾಲಿಗೆ ಗಾಯವಾಗಿದ್ದರಿಂದ ತಪ್ಪಿಸಿಕೊಂಡು ಹೋಗಲಾರದೆ ಒಂದು ಮರದ ಹಿಂದೆ ನಿಂತು ಅಲ್ಲಿಂದಲೇ ಅವರ ಜತೆ ಕಾದಾಡುತ್ತಿದ್ದ ಆಜಾದ್ ನ ಪಿಸ್ತೂಲಿನ ಗುಂಡುಗಳು ಮುಗಿಯುತ್ತಾ ಬಂದವು. ಕಟ್ಟಕಡೆಯ ಗುಂಡು ಉಳಿಯುವಷ್ಟರ ಹೊತ್ತಿಗೆ ಅವನಿಗೆ ತಾನಿನ್ನು ಸೆರೆಸಿಕ್ಕುವುದು ಖಚಿತ ಎಂಬುದು ಮನದಟ್ಟಾಯಿತು. ಹಾಗೇ ತಾನು ಮಾಡಿಕೊಂಡ, ಇಷ್ಟೂ ದಿನವೂ ಪಾಲಿಸುತ್ತಲೇ ಬಂದ ತನ್ನ ಪ್ರತಿಜ್ಞೆಯೂ ನೆನಪಾಯಿತು.

ಹಿಂದೆ- ಮುಂದೆ ನೋಡದೆ, ಉಳಿದಿದ್ದ ಆ ಕೊನೆಯ ಗುಂಡನ್ನು ತನ್ನ ತಲೆಗೆ ಹೊಡೆದುಕೊಂಡ. ಇನ್ನೇನು ಅವನನ್ನು ಹಿಡಿದೇಬಿಟ್ಟೆವು ಎಂದು ಸಂಭ್ರಮದಿಂದ ಸುತ್ತುವರಿದ ಬ್ರಿಟಿಷರಿಗೆ ಸಿಕ್ಕಿದ್ದು ಸತ್ತು ಹೆಣವಾಗಿದ್ದ ಆಜಾದ್ ಮಾತ್ರ! ಅವನ ಸಾವು ಸ್ವಾತಂತ್ರ್ಯದ ಕಿಡಿಯನ್ನು ಇನ್ನಷ್ಟು ಹೊತ್ತಿ ಉರಿಯುವಂತೆ ಮಾಡಿತು. ಆಜಾದ್ ಎಂದೊಡನೆ ಹುರಿಮೀಸೆಯ ಮೇಲೆ ಕೈಯಾಡಿಸುತ್ತಿರುವ ಬಲಿಷ್ಠ ಯುವಕನ ಚಿತ್ರವೇ ಈಗಲೂ ಕಣ್ಮುಂದೆ ಬರುವುದು. ಅವನ ಬಗ್ಗೆ ಲಭ್ಯವಿರುವ ಚಿತ್ರಗಳು ಮಾತ್ರವಲ್ಲ, ಅಲಹಾಬಾದಿನ ಆಜಾದ್ ಪಾರ್ಕಿನಲ್ಲಿರುವ (ಆಲ್ಫ್ರೆಡ್ ಪಾರ್ಕಿಗೆ ಅವನ ಹೆಸರನ್ನೇ ಇಡಲಾಗಿದೆ) ಅವನ ಪ್ರತಿಮೆಯೂ ಅದೇ ಭಂಗಿಯದೇ. ಭಗತ್ ಸಿಂಗ್, ರಾಜಗುರು, ಸುಖದೇವ್ ಮುಂತಾದವರಿಗೆ ಶಸ್ತ್ರಾಸ್ತ್ರಗಳ ಬಳಕೆಯ ತರಬೇತಿ ನೀಡಿ ಅಕ್ಷರಶಃ ಅವರ ಗುರುವೇ ಆಗಿಹೋಗಿದ್ದ ಆಜಾದ್ ವಯಸ್ಸಿನಲ್ಲೇನು ಮಹಾ ದೊಡ್ಡವನಲ್ಲ.

1906ರ ಜುಲೈನಲ್ಲಿ ಹುಟ್ಟಿ, 1931ರ ಫೆಬ್ರವರಿ 27ರಂದು ಹುತಾತ್ಮನಾದ ಅವನು ಬದುಕಿದ್ದು ಇಪ್ಪತ್ತೈದೇ ವರ್ಷ. ಆದರೆ ಅಷ್ಟರಲ್ಲೇ ಅವನು ಬದುಕಿದ ರೀತಿ, ಅವನೊಳಗಿದ್ದ ದೇಶಭಕ್ತಿಯ ಪರಿಮಾಣ ಯಾವ ಅಳತೆಗೂ ನಿಲುಕದ್ದು. ಕಡೆಯತನಕ ತಮ್ಮ ನಿಲುವು, ಸಿದ್ಧಾಂತಗಳಿಗೆ ಅಂಟಿಕೊಂಡಿರುವವರು ಸಿಗುವುದು ಅತಿ ವಿರಳ. ಗೋಸುಂಬೆಗಳ ಹಾಗೆ ಬಣ್ಣ ಬದಲಾಯಿಸುವ, ತಮ್ಮನ್ನೇ ನೆಚ್ಚಿಕೊಂಡ ಹಿಂಬಾಲಕರನ್ನು ನಡುನೀರಿನಲ್ಲೇ ಕೈಬಿಡುವರು ಹೆಚ್ಚಿರುವ ಈ ದಿನಗಳಲ್ಲಿ ಆಜಾದ್ ನೆನಪಾಗುತ್ತಾರೆ. ಬ್ರಿಟಿಷರ ಕೈಗೆ ಸಿಗಬಾರದು ಎಂದು ಅವನು ಭೀಷ್ಮ ಪ್ರತಿಜ್ಞೆ ಮಾಡಿಕೊಂಡ  ಮಾತೇ ಅವನಿಗೆ ಎಲ್ಲಕ್ಕಿಂತ ಹೆಚ್ಚಾಗಿತ್ತು. ಸ್ವತಂತ್ರನಾಗೇ ಉಳಿದ.

 ಬರೀ ಮಾತಿನ ಮನೆ ಕಟ್ಟಿ ಗಳಿಸಿಕೊಂಡಿದ್ದಲ್ಲ ಈ ಸ್ವಾತಂತ್ರ್ಯ.

“Time Creates a Leader’ ಎಂಬ ಹೇಳಿಕೆಯಂತೆ ಕಾಲಕಾಲಕ್ಕೊಬ್ಬ ಆಜಾದ್ ಹುಟ್ಟಿರದಿದ್ದರೆ ಹೋರಾಟದ ಮನೋಭಾವವೇ ನಮ್ಮೊಳಗಿರುತ್ತಿರಲಿಲ್ಲ. ಈ ಮಾತು ನಮಗೆ ಸದಾ ನೆನಪಿನಲ್ಲಿದ್ದರೆ ಸಾಕು. ಅಲ್ಲ, ನೆನಪಿರಲೇಬೇಕು! ಇಲ್ಲದಿದ್ದರೆ ಆಜಾದ್‌ನಂಥ ಅಪ್ರತಿಮ ದೇಶಭಕ್ತನ ಶೌರ್ಯ, ಬಲಿದಾನಗಳು ನಿರರ್ಥಕವಾಗಿ ಹೋಗುತ್ತವೆ. ಕೃಪೆ: ಅಂತರ್ಜಾಲ.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು