Thursday, September 7, 2023

 ಆತ್ಮಾಭಿಮಾನ ಕೆದಕಿದಾಗ

ಅದೊಂದು ಮೊಬೈಲ್ ಅಂಗಡಿ. ಅಂದು ಎಂದಿನಂತೆ ಉತ್ತಮ ವ್ಯಾಪಾರವಿತ್ತು. ಅಮಿತ್ ಅಂದರೆ ಮಾಲಿಕನಿಗೆ ಬಹಳ ಅಚ್ಚು ಮೆಚ್ಚು. ಅದಕ್ಕೆ ಕಾರಣವೂ ಇಲ್ಲದಿಲ್ಲ. ಯಾವುದೇ ಗಿರಾಕಿ ಅಂಗಡಿಯೊಳಗೆ ಕಾಲಿಟ್ಟರೆ ಬರಿಗೈನಲ್ಲಿ ಹೋಗುತ್ತಿರಲಿಲ್ಲ. ಅಮಿತ್ ತನ್ನ ಚಾಲಾಕಿತನದಿಂದ ವ್ಯಾಪಾರ ಕುದುರಿಸುತ್ತಿದ್ದ. ಇದು ಮಾಲಿಕನ ಮೇಲೆ ಬಹಳನೇ ಪ್ರಭಾವ ಬೀರಿತ್ತು.

ಅಂದು ಬಂದಿದ್ದ ಒಂದೆರಡು ಗಿರಾಕಿಗಳು ತೆರಳಿದ ಮೇಲೆ ಅಮಿತ್ ಅಂಗಡಿಯಲ್ಲಿ ಕುಳಿತು ಅದೇನೋ ಯೋಚಿಸುತ್ತಿದ್ದ. ಇನ್ನೂ ಚಿಗುರು ಮೀಸೆಯ ಯುವಕ. ಸಹಜವಾಗಿಯೇ ಜೀವನದಲ್ಲಿ ನೂರಾರು ಕನಸುಗಳು. ಅಮಿತ್ ತನ್ನದೇ ಲೋಕದಲ್ಲಿ ತಲ್ಲೀನನಾಗಿದ್ದ. ಪಕ್ಕದಲ್ಲೇ ಕುಳಿತಿದ್ದ ಮಾಲಿಕ ಅಮಿತ್ ಯಾವುದೋ ಯೋಚನೆಯಲ್ಲಿರುವುದನ್ನು ಗಮನಿಸಿದ. "ಏನು ಮಾರೆಯಾ ಬಹಳ ಯೋಚನೆ ಮಾಡುತ್ತಿದ್ದಿ?" ಎಂದು ಮಾಲಿಕ ಕೇಳಿದಾಗಲೇ ಅಮಿತ್ ವಾಸ್ತವಕ್ಕೆ ಮರಳಿದ್ದು.

ಅಮಿತ್ ಆ ದಿನ "ನಾನು ಒಂದು ಮೊಬೈಲ್ ಅಂಗಡಿ ತೆರೆದಿದ್ದರೆ ಎಷ್ಟು ಚೆನ್ನಾಗಿತ್ತು" ಎಂದು ಯೋಚಿಸುತ್ತಿದ್ದ. ತನ್ನ ಸ್ವಂತ ಅಂಗಡಿಯನ್ನು ಕಲ್ಪಿಸಿಕೊಂಡು ಅದೆಲ್ಲೋ ದಿಟ್ಟಿಸುತ್ತಿದ್ದ. ಮಾಲಿಕನ ಪ್ರಶ್ನೆಗೆ ವಾಸ್ತವಕ್ಕೆ ಮರಳಿದ ಅಮಿತ್ " ಧಣಿಗಳೇ ನನಗೂ ಒಂದು ಮೊಬೈಲ್ ಅಂಗಡಿ ತೆರೆಯಬೇಕೆಂದು ಆಸೆಯಾಗುತ್ತಿದೆ" ಎಂದು ಉತ್ತರಿಸಿದ.

ಮಾಲಿಕ ಮನಸ್ಸಿನಲ್ಲೇ ನಕ್ಕು ಬಿಟ್ಟ. ಕೈಯಲ್ಲಿ ಬಿಡಿಗಾಸು ಇಲ್ಲ. ತಿಂಗಳ ಇಪ್ಪತ್ತು ದಾಟಿದರೆ ಮುಂದಿನ ಸಂಬಳಕ್ಕೆ ದಿನ ಎಣಿಸುತ್ತಿರುತ್ತಾನೆ. ಈತನೂ ಒಂದು ಅಂಗಡಿಯ ಕನಸು ಕಾಣುತ್ತಾನಲ್ಲಾ!!! ಎಂದು ಮನದಲ್ಲೇ ಅಂದುಕೊಂಡ. ಆತ ಅಮಿತ್ ನ ಅಸಹಾಯಕತೆಯ ಬಗ್ಗೆ ಮರುಕ ಪಡುತ್ತಿದ್ದ. ಆದರೆ ಮಾಲಿಕ ಅಮಿತ್ ಮುಂದೆ ತನ್ನ ಅಭಿಪ್ರಾಯ ತಿಳಿಸಲಿಲ್ಲ. ಆಗಲೇ ಇನ್ನೊಬ್ಬ ಗಿರಾಕಿ ಬಂದಿದ್ದು, ಅಮಿತ್ ಅವನೊಂದಿಗೆ ವ್ಯಾಪಾರ ಕುದುರಿಸ ತೊಡಗಿದ.

ಅಮಿತ್ ನ ಮೊಬೈಲ್ ರಿಂಗಾಯಿತು. ಮನೆಯಿಂದ ಅಪ್ಪ ಮಾತಾಡುತ್ತಿದ್ದರು. ಮಾತು ಮುಗಿಸುತ್ತಿದ್ದಂತೆ ಅಮಿತ್ ತನ್ನ ಮೊಬೈಲ್ ನೋಡಿದ. ಅದೊಂದು ಸಾಮಾನ್ಯ ಮೊಬೈಲ್. ತೀರಾ ಹಳತಾಗಿತ್ತು. ಆತನಿಗೆ ಅದೇನೋ ಯೋಚನೆ ಬಂತು. ಮಾಲಿಕನಿಗೆ ಆ ಮೊಬೈಲನ್ನು ತೋರಿಸುತ್ತಾ " ಈ ಮೊಬೈಲ್ ಬದಲಾಯಿಸಿ ಒಂದು ಹೊಸ ಮೊಬೈಲ್ ಕೊಡಿ, ಸಂಬಳದಲ್ಲಿ ಸ್ವಲ್ಪ ಸ್ವಲ್ಪ ಕಡಿತ ಮಾಡಿ ಕೊಳ್ಳಿ" ಎಂದ. ಮಾಲಿಕ ಇದಕ್ಕೆ ತಯಾರಿರಲಿಲ್ಲ. ಅಮಿತ್ ನನ್ನು ಹಾಸ್ಯ ಮಾಡುತ್ತಾ "ನೀನು ಹೊಸ ಮೊಬೈಲ್ ಅಂಗಡಿ ಮಾಡುತ್ತಿಯಲ್ವಾ! ಅಲ್ಲೇ ಎಕ್ಸ್ ಚೇಂಜ್ ಮಾಡಿಕೋ" ಎಂದು ಮಾತಿನಿಂದ ಚುಚ್ಚಿದ.

 ಅಮಿತನ ಆತ್ಮಾಭಿಮಾನಕ್ಕೆ ಬಹಳನೇ ಪೆಟ್ಟು ಬಿತ್ತು. ಆತ ತೀರಾ ಸ್ವಾಭಿಮಾನಿ. ಆತನಿಗೆ ಮಾಲಿಕನ ಮಾತನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂದು ಸಂಜೆ ಮನೆಗೆ ಬಂದವನೇ ಮೊಬೈಲ್ ಅಂಗಡಿ ತೆರೆಯುವ ಬಗ್ಗೆನೇ ಯೋಚಿಸತೊಡಗಿದ. ಗೂಗಲ್ ನಲ್ಲಿ ಇಂಟೀರಿಯರ್ ಡೆಕೋರೇಷನ್ ಮಾಡುವವರ ನಂಬರ್ ಸರ್ಚ್ ಮಾಡಿ ಕೆಲವರಲ್ಲಿ ಮಾತಾಡಿದ. ಅಂದಾಜು ಖರ್ಚಿನ ಬಗ್ಗೆ ಮಾಹಿತಿ ಪಡೆದ. ಆತನ ಅಂತರಂಗಕ್ಕೆ ಮಾಲಿಕನ ಮಾತು ಪಟಾಕಿಗೆ ಬೆಂಕಿ ಹಚ್ಚಿದಂತಾಗಿತ್ತು. ತನ್ನ ಆತ್ಮೀಯನೊಬ್ಬನಿಗೆ ಕರೆ ಮಾಡಿ ಎರಡು ಲಕ್ಷ ಸಾಲ ಕೇಳಿದ. ಪರಿಚಿತರ ಮೂಲಕ ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸಿದ. ಸಾಲ ಮಂಜೂರಾಗಿತ್ತು.  

ಅಮಿತ್ ಅಖಾಡಕ್ಕೆ ಇಳಿದಾಗಿತ್ತು. ಅಂಗಡಿಯ ಕೆಲಸ ಭರದಿಂದ ಸಾಗಿತ್ತು. ಬಿಡಿಕಾಸು ಕೈಯಲ್ಲಿ ಇಲ್ಲದೆ ಆತ ಧುಮುಕಿದ್ದ. ಮಾಲಿಕನ ಮಾತು ಆತನಿಗೆ ಪ್ರತಿಷ್ಠೆಯಾಗಿತ್ತು. ಸಾಲವೇ ಆತನ ಬಂಡವಾಳವಾಗಿತ್ತು. ಕೊನೆಗೂ ಅಂಗಡಿ ತೆರೆದೇ ಬಿಟ್ಟ. "ಸ್ವಲ್ಪ ಸಮಯ ನಡೆಸಿಯಾನು. ಮತ್ತೆ ಬಿಟ್ಟು ಓಡಿಯಾನು" ಎಂಬುವುದು ಸರ್ವತ್ರ ಅಭಿಪ್ರಾಯವಾಗಿತ್ತು. ಹಾಗಾಗಿದ್ದರೆ ಅಮಿತ್ ಪರಿಸ್ಥಿತಿ ಚಿಂತಾಜನಕವಾಗಿರುತ್ತಿತ್ತು.

ಅಮಿತ್ ಅಂದು ತೆಗೆದುಕೊಂಡ ದಿಟ್ಟ ನಿರ್ಧಾರ ಆತನ ಯಶಸ್ಸಿನ ಮೊದಲ ಹೆಜ್ಜೆಯಾಗಿತ್ತು. ಆತನ ಮಾಲಿಕನನ್ನೇ ಬೆರಗುಗೊಳಿಸುವಂತೆ ಆತ ಬೆಳೆದ.‌ ವ್ಯಕ್ತಿಯ ಆಂತರ್ಯದಲ್ಲಿ ಅದೊಂದು ಕಿಡಿ ಹೊತ್ತಿಕೊಂಡಿತ್ತು. ಆದು ಆತನನ್ನು ಬಡಿದೆಬ್ಬಿಸಿತ್ತು. ಆತ ಸೋಲನ್ನು ಅಪ್ಪಿ ಕೊಳ್ಳದೆ ಮುನ್ನುಗ್ಗಿ ಯಶಸ್ವಿಯಾಗಿದ್ದಾನೆ. ಆತ ಮೊದಲಿದ್ದ ಮೊಬೈಲ್ ಅಂಗಡಿ ಮಾಲೀಕನಿಗಿಂತಲೂ ಎತ್ತರ ಬೆಳೆದ. ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಿದ್ದಾನೆ. ಆತ ಇಂದು ಬೆಲೆ ಬಾಳುವ ಮೊಬೈಲ್ ಉಪಯೋಗಿಸುತ್ತಿದ್ದರೂ, ಅಂದು ಮಾಲಿಕನಲ್ಲಿ ಬದಲಾಯಿಸಲು ಹೇಳಿದ್ದ ಮೊಬೈಲ್ ತನ್ನಲ್ಲೇ ಇಟ್ಟುಕೊಂಡಿದ್ದಾನೆ. ಅದು ಆತನ ಬದುಕನ್ನು ಬದಲಾಯಿಸಿದ ನೆನಪಿಗಾಗಿ, ತನ್ನನ್ನು ಸ್ವಾವಲಂಬಿಯಾಗಿ ಪರಿವರ್ತಿಸಿದ ಕಾರಣಕ್ಕಾಗಿ ತನ್ನ ಬಳಿಯೇ ಉಳಿಸಿಕೊಂಡಿದ್ದಾನೆ ಆತ್ಮಾಭಿಮಾನದ ಸಂಕೇತವಾಗಿ. 

ಮನಸ್ಥಿತಿ ಬದಲಾಗದ ಹೊರತು ನಾವು ಬದಲಾಗಲ್ಲ ಕೆಲವೊಂದು ಗಟ್ಟಿ ನಿರ್ಧಾರಗಳು ನಮ್ಮ ಜೀವನದ ಚಿತ್ರಣವನ್ನೇ ಬದಲಿಸುತ್ತವೆ..

ನಾ ಬದಲಾಗಬೇಕೆಂಬ ಗಟ್ಟಿ ನಿರ್ಧಾರ ಬಂದಾಗ ಮಾತ್ರ ಇದೆಲ್ಲ ಸಾಧ್ಯ..👍

💐💐💐💐💐

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು