ಅಮೂಲ್ಯವಾದ ಕಲ್ಲು.
ತನಗೆ ವಿದ್ಯೆ ಕಲಿಸಿದ ಗುರುಗಳನ್ನು ಅರಮನೆಗೆ ಬರುವಂತೆ ರಾಜನೊಬ್ಬ ಆಗಾಗ ಆಮಂತ್ರಿಸುತ್ತಲೇ ಇದ್ದ. ಗುರುಗಳಿಗೆ ಅರಮನೆಯನ್ನು ನೋಡಲೇಬೇಕೆಂಬ ಅಪೇಕ್ಷೆ ಇಲ್ಲದಿದ್ದರೂ ರಾಜನ ಒತ್ತಾಯಪೂರ್ವಕ ಆಹ್ವಾನಕ್ಕೆ ಇಲ್ಲವೆನ್ನಲಾಗದೆ ತೆರಳಿದರು. ರಾಜ, ತನ್ನ ವಶದಲ್ಲಿದ್ದ ಭವ್ಯ ಮಹಲುಗಳು, ಅಪಾರ ಸಂಪತ್ತು, ಅಲಂಕಾರಿಕ ವಸ್ತುಗಳು, ಚಿನ್ನಾಭರಣದ ಸಂಪುಟಗಳನ್ನು ಗುರುಗಳಿಗೆ ತೋರಿಸುತ್ತ ಹೋದ. ಕೊನೆಗೆ ಅಮೂಲ್ಯ ಎನ್ನಲಾಗುವ ವಜ್ರವೊಂದನ್ನು ತೋರಿಸುತ್ತ, ‘ಇದು ಕೋಟಿ ವರಹಗಳಷ್ಟು ಬೆಲೆಬಾಳುವ ವಜ್ರ; ಹೇಗಿದೆ ಗುರುಗಳೇ?’ ಎಂದು ಹೆಮ್ಮೆಯಿಂದ ಕೇಳಿದ. ಗುರುಗಳು ನಿರ್ಲಿಪ್ತ ಭಾವದಲ್ಲಿ, ‘ಇದೇನು ಮಹಾ…. ನಮ್ಮ ಮನೆಯ ಸಮೀಪದ ಹಾಲುಮಾರುವವಳ ಮನೆಯಲ್ಲಿ ಇದಕ್ಕಿಂತಲೂ ಬೆಲೆಬಾಳುವ ರತ್ನವಿದೆ. ಅದನ್ನು ನೋಡಿದರೆ ಏನನ್ನುವಿಯೋ?!’ ಎಂದುಬಿಟ್ಟರು. ಕುತೂಹಲಗೊಂಡ ರಾಜ, ‘ಹೌದೇ? ಹಾಗಿದ್ದಲ್ಲಿ ಅದನ್ನೊಮ್ಮೆ ನೋಡಲೇಬೇಕು’ ಎಂದ. ಇಬ್ಬರೂ ಹಾಲು ಮಾರುವಾಕೆಯ ಮನೆಗೆ ಬಂದರು. ಆಕೆಯ ಅಡುಗೆಮನೆಗೆ ರಾಜನನ್ನು ಒಯ್ದ ಗುರುಗಳು, ‘ನೋಡಲ್ಲಿ, ನಾನು ಹೇಳಿದ ಬೆಲೆಬಾಳುವ ರತ್ನ ಅದೇ…’ ಎಂದು ಮೂಲೆಯ ಕಡೆಗೆ ಬೆರಳುಮಾಡಿ ತೋರಿಸಿದರು. ಅಲ್ಲಿದ್ದುದೇನು? ಬೀಸುವ ಕಲ್ಲು!
ಕುಹಕದ ನಗೆ ಬೀರಿದ ರಾಜ, ‘ಗುರುಗಳೇ, ಇದೆಂಥಾ ರತ್ನ? ಇದು ರಾಗಿಯನ್ನು ಬೀಸಿ ಹಿಟ್ಟುಮಾಡುವ ಸಾಧಾರಣ ಬೀಸುವಕಲ್ಲು ಅಲ್ಲವೇ?’ ಎಂದಾಗ ಗುರುಗಳು, ‘ನಿನ್ನ ಲೆಕ್ಕದಲ್ಲಿ ಅದು ಸಾಧಾರಣವೇ ಇರಬಹುದು; ಆದರೆ ಅದರಲ್ಲಿ ರಾಗಿಯನ್ನು ಬೀಸಿದರೆ ಹಿಟ್ಟು ಬರುತ್ತದೆ, ಹಿಟ್ಟಿನಿಂದ ರೊಟ್ಟಿಯಾಗುತ್ತದೆ, ಲಕ್ಷಾಂತರ ಜನ ಹಸಿವನ್ನು ಹಿಂಗಿಸಿಕೊಂಡು ಸಂತೃಪ್ತರಾಗುತ್ತಾರೆ. ಹೀಗೆ ಅದು ಜೀವವನ್ನು ಉಳಿಸುತ್ತದೆ. ಆದರೆ ನಿನ್ನ ಸಂಗ್ರಹದಲ್ಲಿರುವ ರತ್ನದಿಂದ ಹೊಟ್ಟೆ ತುಂಬಿಸಲು ಸಾಧ್ಯವೇ? ಯಾವುದರಿಂದ ತೃಪ್ತಿ ಸಿಗುತ್ತದೋ ಅದನ್ನೇ ‘ಅಮೂಲ್ಯವಸ್ತು’ ಎಂದು ತಿಳಿಯಬೇಕು. ಹಸಿದ ಹೊಟ್ಟೆ ಆ ಕ್ಷಣಕ್ಕೆ ಬೇಡುವುದು ಹಿಡಿ ಆಹಾರವನ್ನೇ ವಿನಾ, ಬಂಗಾರ-ವಜ್ರ-
ವೈಢೂರ್ಯವನ್ನಲ್ಲ’ ಎಂದರು. ಸತ್ಯದ ಅರಿವಾದ ರಾಜ ಗುರುಗಳ ಪಾದಗಳಿಗೆರಗಿದ. ಸಂಪತ್ತು ಸಂಗ್ರಹಿಸುವ ಆಸೆಯಿಂದಾಗಿ ಮನುಷ್ಯ ದುಃಖಿತನಾಗುತ್ತಾನೆ. ಎಷ್ಟಿದ್ದರೂ ಮತ್ತಷ್ಟು ಬೇಕು ಎಂಬ ದುರಾಸೆಯೇ ಇದಕ್ಕೆ ಕಾರಣ. ಆದ್ದರಿಂದ, ನಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಮಿತಿ ಹಾಕಿಕೊಂಡು ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು. ಸಂಪತ್ತು ಸಂಗ್ರಹ ಹಾಗೂ ಪ್ರದರ್ಶನಪ್ರಿಯತೆಯ ಭರದಲ್ಲಿ ಐಷಾರಾಮಿ ವಸ್ತುಗಳನ್ನು ಪೇರಿಸಿಟ್ಟುಕೊಂಡು ಸುಖಜೀವನದ ಭ್ರಮೆಯಲ್ಲಿ ತೇಲುವುದಕ್ಕಿಂತ, ನಾಲ್ಕು ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಬದುಕುವುದರಲ್ಲೇ ಸಾರ್ಥಕತೆಯಿದೆ...👍💐