ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಶುಭಾಶಯಗಳು
ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಪ್ರತಿ ವರ್ಷ ಸಪ್ಟೆಂಬರ್ 17 ರಂದು ಆಚರಿಸಲಾಗುತ್ತದೆ
ಆಗಸ್ಟ್ 15, 1947 ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು
ಆದರೆ ನಮ್ಮ ಭಾಗಗಳಾದ ಬೀದರ್ ಮತ್ತು ಅವಿಭಜಿತ ಕಲಬುರ್ಗಿ, ರಾಯಚೂರು ಜಿಲ್ಲೆಗಳು ಹಿಂದೆ ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದವು. ನಿಜಾಮ ತನ್ನ ಸಂಸ್ಥಾನವನ್ನು ಸ್ವತಂತ್ರ ಭಾರತದಲ್ಲಿ ವಿಲೀನಗೊಳಿಸಲು ಒಪ್ಪದ ಕಾರಣ ಹೈದರಾಬಾದ್ ಕರ್ನಾಟಕದ ಈ ಭಾಗಕ್ಕೆ ಸ್ವಾತಂತ್ರ್ಯ ದೊರೆಯಲೇ ಇಲ್ಲ. ಅಂದಿನ ಕೇಂದ್ರ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಬಿಗಿ ನಿಲುವಿನಿಂದಾಗಿ ಹೈದರಾಬಾದ್ ನಿಜಾಮ ಸಂಸ್ಥಾನ 1948 ಸೆಪ್ಟೆಂಬರ್ 17 ರಂದು ಭಾರತ ಒಕ್ಕೂಟದಲ್ಲಿ ವಿಲೀನವಾಯಿತು. ಈ ಭಾಗಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಸೆ.17ರಂದು. ಹೀಗಾಗಿ ಪ್ರತಿ ವರ್ಷವೂ ಸೆಪ್ಟೆಂಬರ್ 17ನ್ನು ಈ ಜಿಲ್ಲೆಗಳಲ್ಲಿ ‘ಹೈದರಾಬಾದ್ ಕರ್ನಾಟಕ ವಿಮೋಚನಾ ದಿನ’ ಎಂದು ಆಚರಿಸಲಾಗುತ್ತಿತ್ತು
ಈಗ ಕಲ್ಯಾಣ ಕರ್ನಾಟಕ ವಿಮೋಚನಾ ದಿನವಾಗಿ ಆಚರಿಸಲಾಗುತ್ತಿದೆ.
ಅವಿಭಜಿತ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಸಮಯದಲ್ಲಿ ಭಾರತದಲ್ಲಿ 565 ಚಿಕ್ಕ ಚಿಕ್ಕ ರಾಜ್ಯಗಳು/ಸಂಸ್ಥಾನಗಳು/(Princely States) ಗಳಿದ್ದವು. ಬ್ರಿಟಿಷ ಸರ್ಕಾರ ಈ ಎಲ್ಲಾ ರಾಜ್ಯಗಳಿಗೆ/ಸಂಸ್ಥಾನಗಳಿಗೆ ಹೊಸದಾಗಿ ರಚಿಸಲ್ಪಡುವ ಭಾರತ ಅಥವಾ ಪಾಕಿಸ್ತಾನದ ಜೊತೆ ವಿಲೀನವಾಗಲು ಅಥವಾ ಸ್ವತಂತ್ರವಾಗಿ ಇರಲು ಆಯ್ಕೆಗಳನ್ನು ಕೊಟ್ಟಿತ್ತು.
ಬ್ರಿಟಿಷರ ನೇರ ಆಡಳಿತಕ್ಕೆ ಒಳಪಟ್ಟ ಪ್ರದೇಶಗಳು ಅವತ್ತಿನ ದಿನದಿಂದ ಭಾರತಕ್ಕೆ/ ಪಾಕಿಸ್ತಾನಕ್ಕೆ ಸೇರಿಸಲ್ಪಟ್ಟವು (ಒಂದು ಜಿಲ್ಲೆಯ ಧರ್ಮದ ಜನಸಂಖ್ಯೆಯ (ಹಿಂದೂ ಮತ್ತು ಸಿಖ್ ಮತ್ತು ಮುಸ್ಲಿಮ್) ಆಧಾರದ ಮೇಲೆ, ಆವಾಗಿನ ಬಂಗಾಳ, ಸಿಂಧ್ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ) ಉಳಿದ ಕಡೆಗೆ ಸಾಮಾನ್ಯವಾಗಿ ಭಾರತದಲ್ಲಿ ವಿಲೀನವಾದವು.
ಕೆಲವು ಸಂಸ್ಥಾನಗಳು ಮೊದಮೊದಲು ಭಾರತದಲ್ಲಿ ವಿಲೀನವಾಗಲು ಒಪ್ಪದಿದ್ದರು ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತಿಯಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ರಾಜಕೀಯ ಮುತ್ಸದ್ದಿತನ ಮತ್ತು ಚಾಣಾಕ್ಷತನದಿಂದ ನಂತರ ಒಪ್ಪಿದರು. ಅವುಗಳಲ್ಲಿ ಕೊಚ್ಚಿ, ತಿರುವನಂತಪುರ, ಭೋಪಾಲ್, ಗುಜರಾತಿನಲ್ಲಿ ಬರುವ ಕೆಲವು ಚಿಕ್ಕ ಚಿಕ್ಕ ರಾಜ್ಯಗಳು.
ಆದರೆ ಹೈದರಾಬಾದ್, ಜಮ್ಮು ಮತ್ತು ಕಾಶ್ಮೀರ, ಜುನಾಗಢ ಈ ಮೂರು ರಾಜ್ಯಗಳು ಭಾರತಕ್ಕೆ ಸೇರಲು ಒಪ್ಪಲಿಲ್ಲ. ಹೈದರಾಬಾದ್ ರಾಜ್ಯ ತೆಲಂಗಾಣ, ಮಹಾರಾಷ್ಟ್ರದ ಮರಾಠವಾಡ, ಕರ್ನಾಟಕದ ಹೈದರಾಬಾದ್ ಕರ್ನಾಟಕ ಪ್ರದೇಶಗಳನ್ನೊಳಗೊಂಡ ರಾಜ್ಯವಾಗಿತ್ತು.
ಹೈದರಾಬಾದ್ ರಾಜ್ಯ ಬಹುಸಂಖ್ಯಾತ ಹಿಂದೂಗಳನ್ನು ಹೊಂದಿದ್ದರು ಮುಸ್ಲಿಮ್ ರಾಜರ ಆಳ್ವಿಕೆಗೆ ಒಳಪಟ್ಟಿತ್ತು ಮತ್ತು ಹೈದರಾಬಾದಿನ ನಿಜಾಮ ಮೊದಮೊದಲು ತನ್ನದು ಸ್ವತಂತ್ರ ರಾಜ್ಯ ಎಂದು ಘೋಷಿಸಿಕೊಂಡಿದ್ದರು. ಕಾಶ್ಮೀರದ ಸಮಸ್ಯೆ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರುವ ವಿಚಾರವೇ. ಇದಕ್ಕಾಗಿ ತುಂಬಾ ಯೋಜನೆಗಳನ್ನು ನಿಜಾಮ ರೂಪಿಸಿದ್ದ, ಈ ಕುತಂತ್ರದ ಬಗ್ಗೆ ಅರಿತಿದ್ದ ಅಂದಿನ ಗೃಹ ಮಂತ್ರಿ ಮತ್ತು ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರು ಈ ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸಲು ಕಾರ್ಯತಂತ್ರ ರೂಪಿಸಿದರು.
ಹೈದರಾಬಾದ್ ರಾಜ್ಯದ ಬಹುಸಂಖ್ಯಾತ ಜನ ಭಾರತಕ್ಕೆ ಸೇರಲು ಬಯಸಿದ್ದರು ಆದರೆ ಅಲ್ಲಿನ ರಾಜ ನಿಜಾಮ ಜನರ ಆಶಯದ ವಿರುದ್ಧ ಸ್ವತಂತ್ರವಾಗಿರಬೇಕೆಂದು, ಭಾರತದಲ್ಲಿ ವಿಲೀನವಾಗಲು ಒಪ್ಪಲಿಲ್ಲ. ಅದಕ್ಕಾಗಿ ರಜಾಕಾರರೆಂಬ ಧಾರ್ಮಿಕ ಮತಾಂಧರ ಖಾಸಗಿ ಸೈನ್ಯ ಕಟ್ಟಿ ಖಾಸಿಂ ರಜ್ವಿ ಎಂಬ ಮತಾಂಧನನ್ನು ಅದರ ಮುಖ್ಯ ಸೇನಾಧಿಕಾರಿಯಾಗಿ ನೇಮಿಸಿದ. ಈ ರಜಾಕಾರರು ಯಾರು ಭಾರತದ ಜೊತೆ ವಿಲೀನವಾಗಲು ಬಯಸಿದ್ದರೋ (90% ಪ್ರತಿಶತಕ್ಕಿಂತಲೂ ಮೇಲೆ) ಅವರೆಲ್ಲರನ್ನೂ ಸದೆಬಡಿಯುವ ಕೆಲಸ ಮಾಡತೊಡಗಿದರು ಮತ್ತು ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗತೊಡಗಿತು, ರಜಾಕಾರರು ತುಂಬಾ ಕ್ರೂರತನದಿಂದ ಜನರ ಮೇಲೆ ತಮ್ಮ ಸೇನಾಧಿಕಾರ ಮತ್ತು ಮತಾಂಧತೆ ತೋರಿಸತೊಡಗಿದರು.
ತುಂಬಾ ಜನ ತಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ, ಅದರಲ್ಲಿ , ಸ್ವಾಮಿ ರಾಮನಂದ ತೀರ್ಥರು ಸರದಾರ ಶರಣಗೌಡ ಇನಾಮದಾರ್, ನಮ್ಮ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರಡಿ ಭೀಮಜ್ಜ ಪ್ರಮುಖರು. ಹಲವಾರು ಸಾಮಾನ್ಯ ಜನರು ತಮ್ಮ ಪ್ರಾಣವನ್ನು ನೀಡಿದ್ದಾರೆ. ರಜಾಕಾರರ ಕಿರುಕುಳ ತಾಳದೆ ಕೆಲವರು ಪಕ್ಕದ ಜಿಲ್ಲೆಗಳಾದ ಬಿಜಾಪುರ ಮತ್ತು ಸೋಲಾಪುರಕ್ಕೆ ಹೊರಟರು. ಎಲ್ಲ ಮಾತುಕತೆಗಳು, ರಾಜತಾಂತ್ರಿಕ ಒತ್ತಡ, ಷರತ್ತುಗಳಿಗೆ ನಿಜಾಮ ಒಪ್ಪದಿದ್ದಾಗ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಭಾರತೀಯ ಸೇನೆಗೆ ಆದೇಶ ಕೊಟ್ಟು ಪೊಲೀಸ್ ಕಾರ್ಯಾಚರಣೆ ಮೂಲಕ ಹೈದರಾಬಾದ್ ಅನ್ನು ಭಾರತದಲ್ಲಿ 17ನೇ ಸಪ್ಟೆಂಬರ್ 1948 ರಂದು ಹೈದರಾಬಾದಿನ ನಿಜಾಮ ಶರಣಾದ ನಂತರ ಭಾರತದೊಂದಿಗೆ ವಿಲೀನ ಮಾಡಿಲಾಯಿತು. 1956 ರಲ್ಲಿ ಭಾಷಾವಾರು ಪುನರ್ವಿಂಗಡನೆಯ ಕಾಯಿದೆಯ ನಂತರ ಕನ್ನಡ ಮಾತನಾಡುವ ಹೈದರಾಬಾದ್ ಕರ್ನಾಟಕದ ಪ್ರದೇಶಗಳು ಆಗಿನ ಮೈಸೂರು ರಾಜ್ಯದಲ್ಲಿ ಸೇರಿದವು.
ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಬಹಳ ವಿಜೃಂಭಣೆಯಿಂದ ವಿಮೋಚನಾ ದಿನಾಚರಣೆಯನ್ನು ಆಚರಿಸಲಾಗುತ್ತದೆ..
ಹೈದರಾಬಾದ್ ಕರ್ನಾಟಕದ ಹೆಸರಿನಲ್ಲಿಯೇ ದಾಸ್ಯ ಇದೆ. ಹೀಗಾಗಿ ಶರಣರ ಈ ನಾಡಿಗೆ ‘ಕಲ್ಯಾಣ ಕರ್ನಾಟಕ’ಎಂದು ನಾಮಕರಣ ಮಾಡಬೇಕು ಎಂಬ ಬೇಡಿಕೆ ಇತ್ತು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುತ್ತಿದ್ದಂತೆಯೇ 2019ರ ಸೆಪ್ಟೆಂಬರ್ 17ರಂದು ಈ ಪ್ರದೇಶಕ್ಕೆ ‘ಕಲ್ಯಾಣ ಕರ್ನಾಟಕ’ ಎಂದು ಹೆಸರಿಟ್ಟರು. ಇದು ಕಲ್ಯಾಣ ಕರ್ನಾಟಕ ಉತ್ಸವದ ಎರಡನೇ ದಿನಾಚರಣೆ.
ಹೈದರಾಬಾದ್ ನಿಜಾಮ ಸಂಸ್ಥಾನದ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಿ, ಈ ಸಂಸ್ಥಾನ ಸ್ವತಂತ್ರ ಭಾರತದ ಒಕ್ಕೂಟದಲ್ಲಿ ವಿಲೀನವಾಗುವಂತೆ ಮಾಡುವಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಕಾರ್ಯ ಪ್ರಮುಖವಾಗಿತ್ತು. ಹೈದರಾಬಾದ್ ಕರ್ನಾಟಕಕ್ಕೆ ವಿಮೋಚನೆ ದೊರಕಿಸಿಕೊಟ್ಟಿದ್ದಕ್ಕಾಗಿ ಕಲಬುರ್ಗಿಯಲ್ಲಿ ಪಟೇಲ್ ಅವರ ಪ್ರತಿಮೆ ಸ್ಥಾಪಿಸಲಾಗಿದೆ. ಈ ಕಾರ್ಯಕ್ರಮಕ್ಕೂ ಮುನ್ನ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸುವುದು ಸಾಂಪ್ರದಾಯವಾಗಿದೆ