ಹೊಸ ತಲೆಮಾರಿನ ಮಕ್ಕಳು.
ಇದು ಒಂದು ಭರವಸೆ, ಒಂದು ನಿರೀಕ್ಷೆ, ಒಂದು ಮಹತ್ವಾಕಾಂಕ್ಷೆ ಕೋಮಾಸ್ಥಿತಿಯಲ್ಲಿ ಮಲಗಿದ ದಾರುಣ ಕತೆ. ಕತೆ ಅಂದರೆ ಕತೆ ಅಲ್ಲ, ಇದು ವಾಸ್ತವ. ನಮ್ಮ ಕಣ್ಣೆದುರಿನ ಒಂದು ಕುಟುಂಬದ ಯಾತನಾಮಯ ಚಿತ್ರ.
ಅಪ್ಪ, ಅಮ್ಮ ಇಬ್ಬರು ವೈದ್ಯರು. ಅಪ್ಪ ವೈಯಕ್ತಿಕ ವಾಗಿ ತುಂಬಾ ಯಶಸ್ವಿಯಾಗಿ ವೃತ್ತಿ ನಿರ್ವಹಿಸುತ್ತಿದ್ದರು. ಅವರಿಗೊಬ್ಬ ನೇ ಮಗ. ಬಹುತೇಕ ಮಕ್ಕಳಂತೆ ಸೆಲ್ಫಿ ಕ್ರೇಜು, ಅದರ ಟ್ರೆಂಡ್ ಪ್ರಭಾವಕ್ಕೊಳಗಾಗಿದ್ದ ಆ ಹುಡುಗ ಒಂದು ದಿನ ರೈಲ್ವೆ ಟ್ರ್ಯಾಕ್ ಪಕ್ಕ ನಿಂತು ಹಿಂಬದಿಯಿಂದ ರೈಲು ಬರುತ್ತಿರುವ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದ. ವೇಗವಾಗಿ ಬಂದ ರೈಲು ಈತನನ್ನೂ ತಾಕಿಕೊಂಡೇ ಹೋಯಿತು. ಕ್ಷಣಾರ್ಧದಲ್ಲಿ ಆ ಹುಡುಗನ ದೇಹ ಮುಗುಚಿ ಬಿತ್ತು. ಸದ್ಯ ಜೀವ ಹಿಡಿದುಕೊಂಡಿದ್ದ ಆತನನ್ನು ತಕ್ಷಣ ಬೆಂಗಳೂರಿನ ಆಸ್ಪತ್ರೆಗೆ ಸೇರಿಸಲಾಯಿತು. ಆ ಹುಡುಗ ಈಗ ಕೋಮಾದಲ್ಲಿದ್ದಾನೆ. ಇದೆಲ್ಲ ಎಂಟೊಂಬತ್ತು ತಿಂಗಳಾಗಿದೆ.
ಸದಾ ಮಲಗಿದ ಸ್ಥಿತಿಯಲ್ಲೇ ಇರುವ ಮಗನ ಯೋಗಕ್ಷೇಮವನ್ನು ತಾಯಿ ನೋಡಿ ಕೊಳ್ಳುತ್ತಿದ್ದಾರೆ. ತಂದೆ, ತಾಯಿ ಇಬ್ಬರ ವಾಸ್ತವ್ಯ ಬಹುತೇಕ ಆಸ್ಪತ್ರೆಯಲ್ಲೇ ಎನ್ನುವಂತಾಗಿದೆ. ಅಪ್ಪ ಸರಕಾರಿ ವೈದ್ಯರ ಸ್ಥಾನಕ್ಕೆ ರಾಜೀನಾಮೆ ನೀಡಿ, ಮಗ ಚಿಕಿತ್ಸೆಯ ಪಡೆಯುತ್ತಿರುವ ಆಸ್ಪತ್ರೆಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ. ಇದುವರೆಗೂ ಮಗನ ಚಿಕಿತ್ಸೆಗಾಗಿ ಐವತ್ತು ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಇನ್ನು ಮಾಡುತ್ತಲೇ ಇದ್ದಾರೆ. ನಮ್ಮ ಭರವಸೆಯ ಕುಡಿ ಎಂದಿನಂತೆ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಆ ವೈದ್ಯ ದಂಪತಿ ಇದ್ದಾರೆ. ಶೀಘ್ರ ಆ ಕುಟುಂಬದಲ್ಲಿ ಶಾಂತಿ, ನೆಮ್ಮದಿ ಮೂಡಿಸಲಿ ಎಂದು ನಾವೂ ಕೂಡಾ ಹಾರೈಸೋಣ.
ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜೀವ ಹರಣ ಮಾಡಿಕೊಂಡ ಅದೆಷ್ಟೋ ನಿದರ್ಶನ ನಾವು ಕೇಳಿದ್ದೇವೆ. ಓದಿದ್ದೇವೆ. ಆದರೆ, ನಾವು ಬಲ್ಲ ಈ ಕುಟುಂಬದ ಕತೆ ಕೊನೆ ಇಲ್ಲದ ವಿಷಾದದಂತೆ ಭಾಸವಾಗುತ್ತಿದೆ. ಇದನ್ನು ಹೇಳುವುದಕ್ಕೊಂದು ಕಾರಣ ಇದೆ.
ಎಲ್ಲ ತಲೆಮಾರಿನ ಮಕ್ಕಳಂತೆ ಈ ತಲೆಮಾರಿನ ಮಕ್ಕಳು ತುಂಬಾ ಅಡ್ವಾನ್ಸ್ಡ್ ಆಗಿದ್ದಾರೆ. ಅವರು ಎಲ್ಲವನ್ನೂ ಕ್ಷಣಾರ್ಧದಲ್ಲಿ ಕಲಿಯಬಲ್ಲರು, ತಮ್ಮ ಜಾಣ್ಮೆ ಪ್ರದರ್ಶಿಸಬಲ್ಲರು. ಅವರ ವೇಗ, ಚುರುಕುತನ, ಚಾಲಾಕಿತನ ಎಲ್ಲವೂ ನಮಗೆ ಬೆರಗು ಹುಟ್ಟಿಸುತ್ತದೆ. ಕೆಲವೊಮ್ಮೆ ಈ ಪ್ರಪಂಚ ಅವರಿಗೆ ಸಾಲುವುದಿಲ್ಲ ಅನಿಸುತ್ತದೆ. ಅಂತಹ ಪರಿಸರ ನಮಗೆ ಸಿಕ್ಕಿರಲಿಲ್ಲ ಎನ್ನುವ ಕೊರಗಿನಲ್ಲಿರುವ ನಾವು, ಮಕ್ಕಳಿಗೆ ಕೇಳಿದ್ದೆಲ್ಲವನ್ನೂ ಕೊಡಿಸುತ್ತೇವೆ. ಇವೆಲ್ಲ ಮಾಡುವ ಮುನ್ನ ಯೋಚಿಸಿ. ಮಕ್ಕಳ ಉತ್ತಮ ಭವಿಷ್ಯವೇ ನಿಮ್ಮ ಗುರಿ, ಭರವಸೆ ಎರಡೂ ಆಗಿದ್ದರೆ, ಅವರಲ್ಲಿ ವಿವೇಕ ಬೆಳೆಸಲು ಪ್ರಯತ್ನಿಸಿ. ಜೀವಕ್ಕೆ ಎರವಾಗಬಲ್ಲ ಹವ್ಯಾಸ, ಪ್ರವೃತ್ತಿಗಳ ಕುರಿತು ತಿಳುವಳಿಕೆ ನೀಡಿ. ಅದು ಮಕ್ಕಳನ್ನೂ, ನಿಮ್ಮನ್ನೂ ಹೆಚ್ಚು ಕಾಲ ನೆಮ್ಮದಿಯಲ್ಲಿಡಬಲ್ಲದು.
ಇಲ್ಲದಿದ್ದರೆ ಸೆಲ್ಫಿ ಹೋಗಿ ಕುಲ್ಫಿ ಆಗಬಹುದು👍
ಕೃಪೆ:ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ.