ನಿರ್ಮೋಹ
ಸುಕರಾತನು ಗ್ರೀಸ್ ದೇಶದ ಮಹಾನ್ ಸಂತ. ಆತನ ವಾಣಿ ಕೇಳಿದರೆ ದೇಶವೇ ತಲೆಬಾಗುತ್ತಿತ್ತು. ಅಂತ ಜ್ಞಾನಿ. ಆದರೇನು . ಆತನಿಗೆ ಇರಲಿಕ್ಕೊಂದು ಒಳ್ಳೆಯ ಮನೆ ಇರಲಿಲ್ಲ. ಅಂದು ಹಬ್ಬ. ಊರೆಲ್ಲ ಶೃಂಗಾರಗೊಂಡಿದೆ. ಸುಕರಾತನ ಮನೆಗೆ ಮಾತ್ರ ಕಟ್ಟಿದಾಗಿನಿಂದ ಸುಣ್ಣವಿಲ್ಲ ಬಣ್ಣವಿಲ್ಲ. ಹಬ್ಬದ ಶೃಂಗಾರ ನೋಡಲು ಸಂತ ಹೊರಬಂದ. ಒಂದಕ್ಕಿಂತ ಒಂದು ಸುಂದರವಾದ ಮನೆಗಳು. ನೋಡಿ ಸಂತಸಪಡುತ್ತ ನಡೆದಿದ್ದ. ಊರೆಲ್ಲ ಸುಕರಾತನ ಶಿಷ್ಯರು! ಆಟ ತಮ್ಮ ಮನೆಯೊಳಗೇ ಬರಲೆಂದು ಎಲ್ಲರೂ ಬಯಸುವವರೇ! ಆದರೆ ಸಂತ ಎಲ್ಲೂ ನಿಲ್ಲದೆ ಸುಮ್ಮನೆ ಹೊರಟಿದ್ದ. ಅಲ್ಲೊಬ್ಬ ಆಗರ್ಭ ಸಿರಿವಂತ. ಸುಕರಾತನ ಮೇಲೆ ಘನಪ್ರೇಮ. ಮನೆಯೊಳಗೆ ಬರಬೇಕೆಂದು ಹಠ ಹಿಡಿದ. ಸುಕರಾತನು ಒಳನಡೆದ. ಆತನು ಸದ್ಗುರುಗಳನ್ನು ಸತ್ಕರಿಸಿ ನುಡಿದ- “ಗುರುಗಳೇ, ನಿಮ್ಮ ಕರುಣೆಯಿಂದ ನನಗೇನೂ ಕೊರತೆಯಿಲ್ಲ, ಅಲ್ಪ ಕಾಣಿಕೆಯೆಂದು ತಾವೀ ಮನೆಯನ್ನು ಸ್ವೀಕರಿಸಬೇಕು” ಎಂದು ಪ್ರಾರ್ಥಿಸಿದ. ಆಗ ಸುಕರಾತ ನುಡಿದ “ನಾನು, ನಿಮ್ಮ ಮನೆ ನೋಡಿ, ಸಂತಸಪಡಲು ಬಂದವನೇ ವಿನಃ ತೆಗೆದುಕೊಂಡು ಹೋಗಲಲ್ಲ!”
ಶಿಷ್ಯನಿಗೆ ಪರಮಾಶ್ಚರ್ಯ!” “ಗುರುಗಳೇ, ನಿಮಗೆ ಇಂಥ ನಿರಾಶೆ, ನಿರ್ಮೋಹ ಪ್ರಾಪ್ತವಾದುದು ಹೇಗೆ?” ಎಂದು ಕೇಳಿದ. ಸುಕರಾತ ಉತ್ತರಿಸಿದ, “ನಮ್ಮ ಹೃದಯ ವಿಕಾಸವಾಗಬೇಕು. ಎಂದರೆ ನಾವು ಒಳಗೆ ಸಿರಿವಂತರಾಗಬೇಕು. ಆಗ ನಾವು ಹೊರಗೆ ಎಷ್ಟೇ ಬಡವರಾಗಿದ್ದರೂ ಏನೊಂದು ಬೇಕೆನಿಸುವುದಿಲ್ಲ. ನಿತ್ಯ ತೃಪ್ತರಾಗಿರುತ್ತೇವೆ!” ಇಂಥ ಹೃದಯ ವೈಶಾಲ್ಯ ಉಳ್ಳವರೆ ಸಂತರು, ಶರಣರು.
ಕೃಪೆ:ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು.