ಹೃದಯ-ದಾರಿದ್ರ್ಯ
ರಾಜನ ಆಸ್ಥಾನದಲ್ಲಿ ಒಬ್ಬ ಹಿರಿಯ ಶಿಲ್ಪಕಲಾವಿದನಿದ್ದ. ಒಂದು ದಿನ ಒಬ್ಬ ತರುಣ ಕಲಾವಿದ ಅದೇ ಆಸ್ಥಾನಕ್ಕೆ ಬಂದ. ತನ್ನ ಕಲಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ರಾಜನಿಗೆ ಕೇಳಿಕೊಂಡ. ಉದಾರಿಯಾದ ರಾಜನು ಒಪ್ಪಿದ. ತರುಣ ಶಿಲ್ಪಿ ಒಂದು ಸುಂದರ ಮೂರ್ತಿಯನ್ನು ನಿರ್ಮಿಸಿದ. ಅದನ್ನು ಕಂಡು ರಾಜನಿಗೆ ಬಹಳ ಆನಂದವಾಯಿತು! “ಇಂಥ ಮೂರ್ತಿಯನ್ನು, ನನ್ನ ಆಯುಷ್ಯದಲ್ಲಿಯೇ ನೋಡಿರಲಿಲ್ಲ!” ಎಂದು ಉದ್ಗರಿಸಿದ. ಆಸ್ಥಾನದ ಹಿರಿಯ ಶಿಲ್ಪಿಗೂ ಅದು ಮೆಚ್ಚುಗೆ ಆಯಿತು. “ಇದು ನಿಜವಾಗಿಯೂ ಸುಂದರ ಮೂರ್ತಿ!” ಎಂದ ಹಿರಿಯ ರಾಜಶಿಲ್ಪಿ.
ರಾಜನ ಆಜ್ಞೆಯಂತೆ ಮರುದಿನ ಅರಮನೆಯಲ್ಲಿ ಆ ತರುಣ ಶಿಲ್ಪಿಗೆ ಸತ್ಕಾರ ಮಾಡಲು ನಿಶ್ಚಯಿಸಿದರು. ಅದೇ ಸಂದರ್ಭದಲ್ಲಿ ರಾಜನು ಹಿರಿಯ ಶಿಲ್ಪಿಗೆ ಹೇಳಿದ “ತಾವು ಒಪ್ಪಿದರೆ ಈ ತರುಣ ಶಿಲ್ಪಿ ತಮ್ಮ ಸ್ಥಾನಕ್ಕೆ ಬರಲಿ ಹೇಗೂ ತಮಗೆ ವಯಸ್ಸಾಗಿದೆ.” ಹಿರಿಯ ಶಿಲ್ಪಿ ಹಿಂದೆ ಮುಂದೆ ನೋಡದೆ “ಆಗಲಿ ಮಹಾಪ್ರಭು ಇಂಥ ಶ್ರೇಷ್ಠ ಶಿಲ್ಪಿ ನನ್ನ ತರುವಾಯ ತಮ್ಮ ಆಸ್ಥಾನಕ್ಕೆ ಬರುತ್ತಿರುವುದು ಹೆಮ್ಮೆಯ ವಿಷಯ!” ಆ ಶಿಲ್ಪಿಯ ಔದಾರ್ಯಕ್ಕೆ ಎಲ್ಲರೂ ಮೆಚ್ಚಿದರು.
ಹಿರಿಯ ಶಿಲ್ಪಿ ಮನೆಗೆ ಹೋಗಿ ಅಂದುಕೊಂಡ “ನಾಳೆಯಿಂದ ಆ ತರುಣನೇ ರಾಜಶಿಲ್ಪಿ. ಇನ್ನು ಮೇಲೆ ನನಗೆ ಗೌರವ, ರಾಜಭೋಗವಿಲ್ಲ. ಹೇಗಾದರೂ ಮಾಡಿ ಆ ತರುಣ ಶಿಲ್ಪಿಯನ್ನು ಈ ನಾಡಿನಿಂದ ದೂರ ಸರಿಸಬೇಕು, ರಾಜ್ಯದಿಂದ ಹೊರದೂಡಲು ಬಯಸಿದ. ಈ ವಿಷಯ ಹೇಗೋ ತರುಣ ಶಿಲ್ಪಿಗೆ ತಿಳಿಯಿತು. ಮರುದಿನ ಆತ ಹಿರಿಯ ಶಿಲ್ಪಿಗೆ ಒಂದು ಪತ್ರ ಕೊಟ್ಟು ಕಳಿಸಿದ. ಅಲ್ಲದೆ ತರುಣಶಿಲ್ಪಿ ತಾನಾಗಿಯೇ ಆ ರಾಜ್ಯ ಬಿಟ್ಟು ಹೊರಟು ಹೋದ. ಹಿರಿಯ ಶಿಲ್ಪಿ ಪತ್ರ ತೆಗೆದು ನೋಡಿದ. “ನಿಮಗೆ ಇಷ್ಟವಿಲ್ಲದಿದ್ದರೆ ಈ ಸ್ಥಾನ ನನಗೆ ಬೇಕಾಗಿಲ್ಲ. ಏಕೆಂದರೆ ನಾನು ಕಲೋಪಾಸಕನೇ ವಿನಹ ಸ್ಥಾನೋಪಾಸಕನಲ್ಲ ಎಂದು ಅದರಲ್ಲಿ ಬರೆಯಲಾಗಿತ್ತು. ಅದನ್ನು ನೋಡಿದ ಹಿರಿಯ ಶಿಲ್ಪಿ ತನ್ನ ಬಗ್ಗೆ ತಾನೇ ಅಸಹ್ಯ ಪಟ್ಟುಕೊಂಡ. ‘ಒಬ್ಬ ಹಿರಿಯ ಕಲಾವಿದನಲ್ಲಿ ಇರಬೇಕಾದ ವೃತ್ತಿ ಗೌರವ ಸಹೃದಯತೆ ನನ್ನಲ್ಲಿ ಇಲ್ಲವಲ್ಲ’ ಎಂದು ವ್ಯಥೆ ಪಟ್ಟ. ಕಾಲ ಮಿಂಚಿತ್ತು. ತರುಣ ಶಿಲ್ಪಿ ದೂರ, ಬಹುದೂರ ಹೋಗಿದ್ದ.
ಕೃಪೆ:ಶ್ರೀ ಸಿದ್ಧೇಶ್ವರ ಸ್ವಾಮೀಜಿ.