(ಕಥೆ-192) ದಸರಾಕೆ ಅನ್ವರ್ಥಕ ನಾಮ ಮೈಸೂರು
ಪ್ರತಿವರ್ಷವೂ ವೈಭವೋಪೇತವಾಗಿ ಜರುಗುವ ಮೈಸೂರು ದಸರಾ ಜಂಬೂಸವಾರಿ ಆಚರಣೆಯ ಮೂಲ ವಿಜಯನಗರ ಸಾಮ್ರಾಜ್ಯದ್ದು. ಮಹಾರಾಷ್ಟ್ರದ ದೇವಗಿರಿ ಮೂಲದ ೭೫೦ಕೆಜಿಯ ಸ್ವರ್ಣದ ಅಂಬಾರಿಗೆ ೮ ಶತಮಾನಗಳ ಇತಿಹಾಸವಿದೆ. ಕಂಪಿಲ, ವಿಜಯನಗರ ಸಾಮ್ರಾಜ್ಯಗಳನ್ನು ದಾಟಿ ಮೈಸೂರು ಅರಸರನ್ನು ತಲುಪಿ ಈಗಲೂ ನಾಡಹಬ್ಬ ದಸಾರದಂದು ಚಾಮುಂಡೇಶ್ವರಿಯನ್ನು ಕುಳ್ಳಿರಿಸಿಕೊಂಡು ಮೆರವಣಿಗೆ ಸಾಗುತ್ತದೆಸ್ವಚ್ಛ ಊರು, ಹೂವಿನಿಂದ, ವಿದ್ಯುತ್ ಬಲ್ಬಗಳಿಂದ ಅಲಂಕೃತಗೊಂಡ ಬೀದಿಗಳು, ತುಂಬಿ ತುಳುಕುವ ರಸ್ತೆಗಳು, ವಸ್ತು ಪ್ರದರ್ಶನ, ಯುವ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು, ಚಲನಚಿತ್ರೋತ್ಸವ, ಕ್ರೀಡಾ, ಕುಸ್ತಿ ಪಂದ್ಯಾವಳಿಗಳು, ಯೋಗ ಕಾರ್ಯಕ್ರಮಗಳು, ಲಲಿತಕಲೆ, ಕರಕುಶಲ ಕಲಾ, ಪುಸ್ತಕ ಮೇಳ, ಕವಿಗೋಷ್ಟಿಯಂತಹ ಸಾಹಿತ್ಯಿಕ ಕಾರ್ಯಕ್ರಮಗಳು ಕಡೆಗೆ ಬೃಹತ್ ಮೆರವಣಿಗೆ, ಅಂತ್ಯದಲ್ಲಿ ಪಂಜಿನ ಕವಾಯತು! ವೈಭವೋಪೇತವಾಗಿ ಜರಗುವ ಇವೆಲ್ಲವನ್ನು ಕಂಡು ಕಣ್ಮನ ತುಂಬಿಸಿಕೊಳ್ಳಬೇಕಿದ್ದರೆ, ನೀವು ಒಮ್ಮೆಯಾದರೂ ಮೈಸೂರಿನಲ್ಲಿ ನಡೆವ ದಸರೆಯನ್ನು ನೋಡಲೇಬೇಕು. ಒಂಭತ್ತು ದಿನಗಳ ವೃತಾಚರಣೆಯ ನಂತರ ಹತ್ತನೇ ದಿವಸದ ವಿಜಯದಶಮಿಯಂದು ನಡೆಯುವ ಜಂಬೂ ಸವಾರಿಯನ್ನು 1610ನೇ ಇಸವಿಯಲ್ಲಿ ಮೈಸೂರಿನ ಯದುವಂಶದ 9ನೇ ಒಡೆಯರಾದ ರಾಜಾ ಒಡೆಯರ್ ಮೊದಲ ಬಾರಿಗೆ ಆರಂಭಿಸಿದರು. ಚಾಮುಂಡಿ ಮೈಸೂರು ಮಹಾರಾಜರ ಕುಲದೈವವಾಗಿ ದಶಮಿಯ ದಿನದಂದು ಆನೆಯ ಮೇಲೆ 750 ಕೆಜಿ ತೂಕದ ಸ್ವರ್ಣಖಚಿತ ಅಂಬಾರಿಯಲ್ಲಿ ಕುಳಿತು ಅರಮನೆಯಿಂದ ಬನ್ನಿ ಮಂಟಪದವರೆಗೆ ರಾಜ ಬೀದಿಯಲ್ಲಿ ಮೆರವಣಿಗೆ ಹೋಗುತ್ತಾಳೆ.
ಅತ್ಯಂತ ಬೃಹತ್ ಸಾಮ್ರಾಜ್ಯವೆಂದು, ಬಹುಕಾಲ ಆಳ್ವಿಕೆ ನಡೆಸಿದ ಸಾಮ್ರಾಜ್ಯವೆಂದೂ ಹೆಸರಾಗಿರುವ, ಕರ್ನಾಟಕದ ಇತಿಹಾಸದಲ್ಲೇ ಸುವರ್ಣಯುಗವನ್ನು ಸೃಷ್ಟಿಸಿ, ಸಾಂಸ್ಕೃತಿಕ ಹಿರಿಮೆಯನ್ನು ಹೆಚ್ಚಿಸಿದ ವಿಜಯನಗರ ಸಾಮ್ರಾಜ್ಯದ ಅರಸರು ಆರಂಭಿಸಿದ್ದ ನವರಾತ್ರಿ ಹಬ್ಬ ಹಾಗೂ ವಿಜದಶಮಿ ಆಚರಣೆಗೆ ವರ್ಣಮಯ ಕಳೆ ಬಂದದ್ದು ಪ್ರಖ್ಯಾತ ಅರಸ ಶ್ರೀ ಕೃಷ್ಣದೇವರಾಯನ ಕಾಲದಲ್ಲಿ. ಈ ಮಹೋತ್ಸವದ ಕೇಂದ್ರಗಳಾಗಿ ನಿರ್ಮಾಣವಾದದ್ದೇ ಮಹಾನವಮಿ ದಿಬ್ಬ. ತಮ್ಮ ಶೌರ್ಯ-ಪರಾಕ್ರಮಗಳನ್ನು, ವೀರತ್ವ, ಧೀರತ್ವವನ್ನು, ಕಲೆ, ಸಾಹಿತ್ಯ, ಸಂಗೀತ, ನೃತ್ಯ, ಸಂಸ್ಕೃತಿ. ಹೀಗೆ ಸರ್ವ ವಿಧಗಳಲ್ಲೂ ತಾವು ಶಕ್ತರು, ಪ್ರತಿಭಾವಂತರೆಂದು ತಮ್ಮ ಹಿರಿಮೆಯನ್ನು ತೋರ್ಪಡಿಸಿಕೊಳ್ಳಲು ಈ ಮಹಾನವಮಿ ದಿಬ್ಬದಲ್ಲಿ ಸತತ ಹತ್ತೂ ದಿನಗಳ ಕಾಲ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು.
ವಿಜಯನಗರದ ಅರಸರ ಸಾಂಪ್ರದಾಯಿಕ ಆಚರಣೆಗಳನ್ನೇ ಮೊದಲಿಗೆ ಯಥಾವತ್ತಾಗಿ ಆಚರಿಸಿಕೊಂಡು ಬಂದ ಮೈಸೂರ ಒಡೆಯರು ಕಾಲಾಂತರದಲ್ಲಿ ಪರಿಸ್ಥಿತಿಗೆ ತಕ್ಕನಾಗಿ ಕೆಲವು ಮಾರ್ಪಾಡುಗಳನ್ನೂ ಮಾಡಿಕೊಂಡಿದ್ದಾರೆ.
ನಂತರದ ದಿನಗಳಲ್ಲಿ ಪ್ರತಿ ವರ್ಷವೂ ಅರಸರಿಂದಲೇ ನಡೆದು ಬಂದ ದಸರೆಯು ರಾಜಾಶ್ರಯದಲ್ಲಿ ಮೈಸೂರು ಸಂಸ್ಥಾನದ ಕೊನೆಯ ರಾಜರಾದ ಜಯಚಾಮರಾಜ ಒಡೆಯರ್(1941-47) ಕ್ಕೆ ಕೊನೆಗೊಂಡಿತು. ಭಾರತ ದೇಶ ಸ್ವಾತಂತ್ರ್ಯಗೊಂಡು, ಭಾಷಾವಾರು ಪ್ರಾಂತ ವಿಂಗಡಣೆಯಾಗಿ, ಮೈಸೂರು ರಾಜ್ಯ ನಿರ್ಮಾಣವಾಗಿ ರಾಜ್ಯದ ಆಡಳಿತವನ್ನುಸರಕಾರದ ಮುಖ್ಯಮಂತ್ರಿಗಳಾದ ಕೆ.ಸಿ.ರೆಡ್ಡಿಯವರಿಗೆ ಒಡೆಯರ್ ಅಧಿಕಾರವನ್ನು ಹಸ್ತಾಂತರಿಸಿ ತಾವು ಭಾರತ ಸರಕಾರದ ಪ್ರತಿನಿಧಿಯಾಗಿ ರಾಜ್ಯಪಾಲರಾಗಿ, ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದು ಇತಿಹಾಸ. ಅಂದಿನಿಂದ ಶುರುವಾದ ಖಾಸಗಿ ದರ್ಬಾರ್ ಇಂದಿನವರೆಗೂ ನಡೆದುಕೊಂಡು ಬಂದಿದೆ.
ಅಂಬಾರಿಯ ಇತಿಹಾಸ
ಈ ಅಂಬಾರಿಯ ಮೂಲ ಮಹಾರಾಷ್ಟ್ರದ ದೇವಗಿರಿ ಎನ್ನಲಾಗುತ್ತದೆ. ಶತ್ರುಗಳ ದಾಳಿಗೆ ನಲುಗಿದ್ದ ದೇವಗಿರಿ ನಾಶವಾಗುತ್ತದೆ. ಆಗ ಮುಮ್ಮಡಿ ಸಿಂಗನಾಯಕನೆಂಬ ದೊರೆಯು ಅದನ್ನು ಹೊತ್ತೊಯ್ದು ಬಳ್ಳಾರಿಯ ರಾಮದುರ್ಗ ಕೋಟೆಯಲ್ಲಿ ಅಡಗಿಸಿಡುತ್ತಾನೆ. ಬಳಿಕ ಈತನ ಮಗನಾದ ಕಂಪಿಲರಾಯನು ಒಂದು ಶಕ್ತಿಯುತ ಸಾಮ್ರಾಜ್ಯವನ್ನು ನಿರ್ಮಿಸಿದ ನಂತರ ಅಂಬಾರಿಯನ್ನು ಹೊರ ತಂದು ಅದರಲ್ಲಿ ದುರ್ಗಾದೇವಿಯ ಮೂರ್ತಿಯನ್ನಿಟ್ಟು ಪೂಜಿಸಲು ಆರಂಭಿಸಿದ. ಕಂಪಿಲರಾಯನ ಮಗನಾದ ಗಂಡುಗಲಿ ಕುಮಾರರಾಮನ ಕಾಲದಲ್ಲಿ ತನ್ನ ರಾಜ್ಯ ಕಂಪ್ಲಿಯನ್ನು ಉಚ್ಛ್ರಾಯ ಸ್ಥಿತಿಗೆ ಕೊಂಡೊಯ್ದಿದ್ದ. ಸುಮಾರು 1327ರ ಹೊತ್ತಿಗೆ ದೆಹಲಿ ಸುಲ್ತಾನರ ದಾಳಿಯಿಂದಾಗಿ ಮರಣಹೊಂದಿದ ಕುಮಾರರಾಮನು ಕಂಪಿಲಿ ರಾಜ್ಯದ ಕೊನೆಯ ರಾಜನಾಗಿದ್ದಾನೆ. ಆ ಸಮಯಕ್ಕಾಗಲೆ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ವಿಜಯನಗರ ಸಾಮ್ರಾಜ್ಯ ನಿರ್ಮಾಣಕ್ಕೆ ತೊಡಗಿದ್ದ ಹಕ್ಕ-ಬುಕ್ಕರು ಈ ಅಂಬಾರಿಯನ್ನು ಸಂರಕ್ಷಿಸುತ್ತಾರೆ. ನಂತರದಲ್ಲಿ ಹಂಪಿಯನ್ನು ರಾಜಧಾನಿಯನ್ನಾಗಿಸಿದಾಗ ಅಲ್ಲಿಗೆ ಬುಕ್ಕ ಅರಸನು ಅಂಬಾರಿಯನ್ನು ತಂದು ಮಹಾನವಮಿಯಂದು ಮೆರವಣಿಗೆ ಆರಂಭಿಸಿದನು.
ಜಂಬೂ ಸವಾರಿ ಸುವರ್ಣಯುಗದ, ಎರಡನೇ ದೇವರಾಯನ ಕಾಲದಲ್ಲಿ ಶ್ರೀಕೃಷ್ಣದೇವರಾಯನ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಗೆ ತಲುಪಿತ್ತು... ಸಾಮ್ರಾಜ್ಯವು ಪತನಗೊಂಡ ಸಮಯಕ್ಕೆ ಅತ್ತ ಮೈಸೂರು ಸಂಸ್ಥಾನ ಶ್ರೀರಂಗಪಟ್ಟಣವನ್ನು ರಾಜಧಾನಿಯಾಗಿಸಿಕೊಂಡು ತಲೆಯೆತ್ತುತಲಿತ್ತು. ಆಗ ಅಂಬಾರಿಯನ್ನು ಕಾಪಾಡಲು ಮೊದಲು ಪೆನುಕೊಂಡಕ್ಕೆ ಸಾಗಿಸಲಾಯಿತು. ಬಳಿಕ ಅಂಬಾರಿಯನ್ನು ಕಾಪಾಡುವ ಹೊಣೆ ಶ್ರೀರಂಗಪಟ್ಟಣದ ಒಡೆಯರ ಹೆಗಲಿಗೆ ಬಂದಿತು. ಸುಮಾರು 800 ವರ್ಷಗಳ ಇತಿಹಾಸವುಳ್ಳ ಅಂಬಾರಿಯು ಕಳೆದ 409 ವರ್ಷಗಳಿಂದ ಮೈಸೂರು ಅರಸರ ಸುಪರ್ದಿಯಲ್ಲಿದ್ದು, ಈಗ ಕರ್ನಾಟಕ ಸರಕಾರದ ರಕ್ಷಣೆಯಲ್ಲಿದ್ದು ನಾಡ ಹಬ್ಬ ದಸರೆಯ ದಿವಸ ರಾಜಬೀದಿಯಲ್ಲಿ ಠೀವಿಯಿಂದ ಮೆರವಣಿಗೆಯಲ್ಲಿ ಸಾಗುತ್ತ ಭಕ್ತಾದಿಗಳ ಮನಸೋರೆಗೊಳಿಸುತ್ತ, ಭಕ್ತಿಭಾವದಿಂದ ತುಂಬಿಕೊಂಡಿದೆ.
ವಿಜಯದಶಮಿಯಂದು ಹೊರಡುವ ಜಂಬೂ ಸವಾರಿಯು ಅರಮನೆಯಲ್ಲಿ ಸಾಂಪ್ರದಾಯಿಕ ವಿಧಿವಿದಾನಗಳನ್ನು ಪೂರ್ಣಗೊಳಿಸಿ ಅರಮನೆಯ ಆವರಣದಲ್ಲಿ ಮೊದಲ್ಗೊಳ್ಳುತ್ತದೆ. ಲಕ್ಷಾಂತರ ಭಕ್ತ ಸಮೂಹದ ಮಧ್ಯೆ ಸಾಗುವ ಅಂಬಾರಿಯ ಮೆರವಣಿಗೆ ಬನ್ನಿ ಮಂಟಪವನ್ನು ತಲುಪುವವರೆಗೂ ನೋಡುಗರನ್ನು ರೋಮಾಂಚನಗೊಳಿಸುತ್ತದೆ..