ಕಥೆ-200 *ಕನ್ನಡ ರಾಜ್ಯೋತ್ಸವ*
ನವೆಂಬರ್ ಮಾಸಕ್ಕೆ ಮೀಸಲಾಗದಿರಲಿ ಕನ್ನಡ ರಾಜ್ಯೋತ್ಸವ....
ಸುಮಾರು ಎರಡೂವರೆ ಸಹಸ್ರಮಾನದ ಇತಿಹಾಸ ಹೊಂದಿರುವ ಶ್ರೀಮಂತ ಭಾಷೆ ಕನ್ನಡ. ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಸಹ ಪ್ರಮುಖವಾಗಿದೆ.
ನಮ್ಮ ಕನ್ನಡ ನಾಡನ್ನು ಶ್ರೀಗಂಧದ ನಾಡು, ಕರುನಾಡು, ಕನ್ನಡಾಂಭೆಯ ನಾಡು, ತಾಯಿ ಭುವನೇಶ್ವರಿಯ ನಾಡು ಎಂಬೆಲ್ಲ ಹೆಸರುಗಳಿಂದ ಕರೆಯಲಾಗುತ್ತದೆ. ಹಚ್ಚಹಸುರಿನ ಸುಂದರ ಬೆಟ್ಟ ಗುಡ್ಡಗಳ ನದಿಗಳು ಹರಿಯುವ ಸಾಧು-ಸಂತರು-ದಾಸರು- ಶಿವಶರಣರು - ಕವಿಗಳಿಂದ ಕಂಗೊಳಿಸುತ್ತಿರುವ ಕನ್ನಡ ನಾಡು ಎಂಬ ಹೆಸರಿಗೆ ಒಂದು ಧೀಮಂತ ಶಕ್ತಿ ಇದೆ. ಈ ಸುಂದರ, ಸಮೃದ್ಧ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಅದೃಷ್ಟ. ನವೆಂಬರ್ 1 ರಂದು ನಾವೆಲ್ಲರೂ ಅತ್ಯಂತ ಸಡಗರ-ಸಂಭ್ರಮದಿಂದ ಎಲ್ಲ ಜಾತಿ ಮತ ಧರ್ಮಗಳ ಜನರು ಸೇರಿ ಒಗ್ಗೂಡಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೇವೆ.
ನವಂಬರ್ 1
ಕರ್ನಾಟಕ ರಚನೆಯ ದಿನ ಅಥವಾ ಕರ್ನಾಟಕ ದಿನ ಎಂದೂ ಕರೆಯಲಾಗುತ್ತದೆ. ನವಂಬರ್ 1, 1956 ರಲ್ಲಿ ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಮೈಸೂರು ರಾಜ್ಯವನ್ನು ರಚಿಸಲಾಯಿತು..
ನಂತರ ನವಂಬರ್ 1,1973 ರಲ್ಲಿ ದೇವರಾಜ್ ಅರಸು ಸರ್ಕಾರ ಕರ್ನಾಟಕ ರಾಜ್ಯವೆಂದು ಮರುನಾಮಕರಣ ಮಾಡಿತು..
ಕರ್ನಾಟಕ ಹೆಸರು ಬಂದದ್ದು ಹೇಗೆ ?
ಕರ್ನಾಟಕ ಪದದ ಮೂಲ ಸಂಸ್ಕೃತ. ಸಂಸ್ಕೃತದ ಕನ್ನಡ ಎಂಬ ಪದದಿಂದ ಕರ್ನಾಟಕ ಹುಟ್ಟಿದೆ. ಕನ್ನಡಿಗರ ನಾಡು, ಕನ್ನಾಡು, ಕನ್ನಡ ನಾಡು ಎಂಬುದು ಇದರ ಅರ್ಥ. ಆದರೆ ಕರ್ನಾಟಕ ಎಂಬ ಪದದ ಹುಟ್ಟು ಅಥವಾ ಅರ್ಥದ ಬಗ್ಗೆ ಹಲವು ಅಭಿಪ್ರಾಯಗಳಿವೆ. ಕರು + ನಾಡು = ಕರುನಾಡು ಎಂಬ ಪದವು ಕರ್ನಾಟಕವಾಯಿತು ಎನ್ನಲಾಗುತ್ತದೆ. ಕರು ಎಂದರೆ ಕಪ್ಪು, ಇದರರ್ಥ ಕಪ್ಪು ಮಣ್ಣಿನ ನಾಡು ಎಂದು ಹೇಳಲಾಗುತ್ತದೆ. ಹಳೆಯ ಗ್ರಂಥಗಳು ಇದನ್ನು ಕರ್ನಾಟ ಎಂಬ ಪದದಿಂದ ಪಡೆಯಲಾಗಿದೆ ಎಂದು ಸೂಚಿಸುತ್ತವೆ. ಕೆಲವು ಮೂಲಗಳು ಕರ್ನಾಟಕವನ್ನು ಎತ್ತರದ ಭೂಮಿಗೆ ಅನುವಾದಿಸಿವೆ.
ಕರ್ನಾಟಕ ಏಕೀಕರಣ
ಆಲೂರು ವೆಂಕಟರಾವ್ ರವರು 1905 ರಲ್ಲಿ ಕರ್ನಾಟಕ ಏಕೀಕರಣ ಚಟುವಳಿಯೊಂದಿಗೆ ರಾಜ್ಯವನ್ನು ಏಕೀಕರಿಸುವ ಕನಸು ಕಂಡ ಮೊದಲ ವ್ಯಕ್ತಿ. ನಂತರ ಕೆ.ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್, ಬಿ. ಎಂ. ಶ್ರೀಕಂಠಯ್ಯ, ನಾಡಿಗೇರ್, ಹುಯಿಲಗೋಳ ನಾರಾಯಣರಾವ್ ಇನ್ನು ಅನೇಕ ಮಹನೀಯರು ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ್ದಾರೆ..
ನಿರ್ದಿಷ್ಟ ಪ್ರದೇಶದಲ್ಲಿ ಮಾತನಾಡುವ ಭಾಷೆಯ ಆಧಾರದ ಮೇಲೆ ರಾಜ್ಯಗಳ ಉಗಮವಾಗಲಿ ಎಂದು ಸಾಹಿತಿಗಳ ಚಿಂತಕರ ಹೋರಾಟದ ಫಲವಾಗಿ 1956 ರಲ್ಲಿ ಭಾಷೆಗಳ ಆಧಾರದಲ್ಲಿ ರಾಜ್ಯಗಳ ವಿಂಗಡಣೆ ಆಯಿತು .
ಹಳದಿ ಮತ್ತು ಕೆಂಪು ವರ್ಣದ ಕನ್ನಡ ಧ್ವಜದಲ್ಲಿ ಹಳದಿ ಬಣ್ಣವು ಕನ್ನಡಾಂಬೇಯ ಆರಿಶಿನ ಮತ್ತು ಕೆಂಪು ಬಣ್ಣವು ಕುಂಕುಮವನ್ನು ಸೂಚಿಸುತ್ತದೆ ಹಾಗೂ ಹಳದಿ ಬಣ್ಣವು ಶಾಂತಿ, ಸೌಹಾರ್ದತೆ ಸೂಚಿಸಿದರೆ ಕೆಂಪು ಬಣ್ಣ ಕ್ರಾಂತಿಯ ಸಂದೇಶ ನೀಡುತ್ತದೆ. ಕನ್ನಡಿಗರೂ ಶಾಂತಿಗೆ ಬದ್ಧ, ಸಮರಕ್ಕೂ ಸಿದ್ಧ ಎಂಬ ಸಂದೇಶವನ್ನು ನೀಡುತ್ತದೆ...
ಕನ್ನಡವನ್ನು ಕಲಿಸಿ, ನಾವು ಹೆಚ್ಚು ಬಳಕೆ ಮಾಡುವ ಮೂಲಕ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಎತ್ತಿಹಿಡಿಯಬೇಕು. ನಾವು ಕೇವಲ ನವೆಂಬರ್ ಕನ್ನಡಿಗರಾಗದೇ, 'ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರ ದಲ್ಲಿ ಕನ್ನಡವನ್ನೇ ಬಳಸುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ, ಕನ್ನಡ ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಕಟಿಬದ್ಧರಾಗಿರುತ್ತೇವೆ' ಎಂದು ಇದೇ ವೇಳೆ ದೃಢ ನಿರ್ಧಾರ ಮಾಡೋಣ.
ಕನ್ನಡ ನಮ್ಮ ಹೆತ್ತ ತಾಯಿಯಾಗಿಯೇ ಉಳಿಯಲಿ...
ಸಿರಿಗನ್ನಡಂ ಬಾಳ್ಗೆ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಏಳ್ಗೆ..
ಎಲ್ಲಾದರೂ ಇರಲಿ ಎಂತಾದರು ಇರಲಿ ಎಂದೆಂದಿಗೂ ನಾವು ಕನ್ನಡಿಗರಾಗಿರೋಣ..
👍💐💐💐💐💐