Monday, November 6, 2023

ಕಥೆ-205 ವೈದ್ಯೋ ನಾರಾಯಣ 



 ಸಕಾಲಕ್ಕೆ ಚಿಕಿತ್ಸೆ ಸಿಗದೆ ರೋಗಿ ಸಾವು’-ದಿನ ಬೆಳಗಾಗೆದ್ದು ಪತ್ರಿಕೆಗಳಲ್ಲಿ ಇಂಥ ಶೀರ್ಷಿಕೆಗಳು ಓದುತ್ತಿರಬೇಕಾದರೆ ಮನಸ್ಸು ಸಂಕಟದಿಂದ ಭಾರವಾಗುತ್ತದೆ. ಬಡತನ ಅನ್ನೋದು ಎಂಥ ದೊಡ್ಡ ಶಾಪ ಅಲ್ವಾ… ಹಣ ಇಲ್ಲ ಎಂಬ ಒಂದೇ ಕಾರಣಕ್ಕೆ ಜೀವ, ಜೀವನಕ್ಕೆ ಬೆಲೆಯಿಲ್ಲ ಎಂತಾದರೆ ಮಾನವೀಯ ಮೌಲ್ಯಗಳೆಲ್ಲ ಎಲ್ಲಿ ಕಣ್ಮರೆಯಾದವು ಎಂಬ ಪ್ರಶ್ನೆ ಜತೆಗೆ ವ್ಯವಸ್ಥೆ ಬಗ್ಗೆ ಒಂದಿಷ್ಟು ಬೇಸರ ಮೂಡುವುದು ಸಹಜ, ಸ್ವಾಭಾವಿಕ. ಇನ್ನು ಅದೆಷ್ಟೋ ಜನರು ‘ನನ್ನೊಬ್ಬನಿಂದ ಇದನ್ನೆಲ್ಲ ಬದಲಾಯಿಸಲು ಸಾಧ್ಯವುಂಟಾ?’ ಅಂತ ಗುಂಪಿನಲ್ಲಿ ಗೋವಿಂದ ಆಗಿಬಿಡುತ್ತಾರೆ. ಹಳ್ಳಿಯಲ್ಲಿ ಬೆಳೆದ ಈ ಯುವಕನಿಗೆ ಇದನ್ನೆಲ್ಲ ಬದಲಾಯಿಸುವ ತುಡಿತ. ಒಳ್ಳೆ ಗುರಿ, ಕೆಲಸಕ್ಕೆ ಕಠಿಣ ನಿರ್ಧಾರಗಳನ್ನು ತಳೆಯಲೇ ಬೇಕಾಗುತ್ತದೆ. ಮನೆಯವರ ಕನಸಿನಂತೆ ಡಾಕ್ಟರ್ ಆಗಿದ್ದಾಯಿತು, ಉದ್ಯೋಗವೂ ಸಿಕ್ಕಿತು. ಆದರೆ, ಈ ವಿದ್ಯೆ, ಜ್ಞಾನದ ಉಪಯೋಗ ಬಡವರಿಗೆ, ನಿರ್ಗತಿಕರಿಗೆ ಆಗಬೇಕು ಎಂಬ ಅಂತರಾತ್ಮದ ಕರೆಗೆ ಓಗೊಟ್ಟು ಅಸಾಧಾರಣವಾದ ಹಾದಿ ತುಳಿದಿದ್ದಾರೆ, ಆ ಮೂಲಕ ಸಮಾಜದ ಒಳಗಣ್ಣು ತೆರೆಸುವ ಕೆಲಸ ಮಾಡುತ್ತಿದ್ದಾರೆ ಡಾ.ಸುನೀಲ್ ಕುಮಾರ್ ಹೆಬ್ಬಿ (33).

ವಿಜಯಪುರ ಜಿಲ್ಲೆಯ ಮಮದಾಪುರ ಸಣ್ಣ ಹಳ್ಳಿ. ಅಲ್ಲೇ ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದ ಬಳಿಕ ಬಾಗಲಕೋಟ ಜಿಲ್ಲೆಯ ಮುಧೋಳದಲ್ಲಿ ಪಿಯು ವ್ಯಾಸಂಗ ಮಾಡಿ ವಿಜಯಪುರದಲ್ಲಿ ವೈದ್ಯಕೀಯ ಪದವಿ ಪಡೆದ ಸುನೀಲ್ ಅಲ್ಲಿಂದ ಬೆಂಗಳೂರಿಗೆ ಬಂದು ಕೆಲ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಿದರು. ಸುನೀಲ್ ತಂದೆ-ತಾಯಿ ಕೃಷಿಕರು. ಸಂಬಂಧಿಕರ ಪೈಕಿ ಹೆಚ್ಚಿನವರೆಲ್ಲ ಫಾರ್ಮಸಿ ಓದಿ ಹಲವು ಊರುಗಳಲ್ಲಿ ಮೆಡಿಕಲ್ ಸ್ಟೋರ್ ಹೊಂದಿದ್ದಾರೆ. ಹಾಗಾಗಿ, ಮನೆಯಲ್ಲಿ ಒಬ್ಬರಾದರೂ ಡಾಕ್ಟರ್ ಆಗಬೇಕು ಎಂಬ ಕನಸನ್ನು ಇವರು ಈಡೇರಿಸಿದ್ದರು. ಆದರೆ, ಸುನೀಲ್ ಬೆಂಗಳೂರಿಗೆ ಬಂದ ಬಳಿಕ ಕಂಡಿದ್ದು ಹೊಸ ಮತ್ತು ವಿಚಿತ್ರ ಜಗತ್ತನ್ನು.


ರಾಜಧಾನಿಯ ಗರ್ಭದಲ್ಲಿ ಮಿನಿ ಉತ್ತರ ಕರ್ನಾಟಕವೇ ನೆಲೆಸಿದ್ದು, ಕಟ್ಟಡ ಕಾರ್ವಿುಕರು, ಇತರೆ ಕೌಶಲಗಳುಳ್ಳ ಬಡವರು ಭಾರಿ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಹೊಟ್ಟೆ ತುಂಬಿಸಿಕೊಳ್ಳುವುದೇ ದೊಡ್ಡ ಸವಾಲು, ಸಾಹಸವಾಗಿರುವಾಗ ಇನ್ನು ಆರೋಗ್ಯದ ಬಗ್ಗೆ ಕಾಳಜಿಯೋ, ಚಿಕಿತ್ಸೆಗೆಂದು ದುಡ್ಡು ಎಲ್ಲಿಂದ ಬರಬೇಕು. ಹೀಗಾಗಿ ಸಣ್ಣಪುಟ್ಟ ಕಾಯಿಲೆಗೇ ಪ್ರಾಣ ಕಳೆದುಕೊಳ್ಳುವ ದಯನೀಯ ಸ್ಥಿತಿ. ಆಸ್ಪತ್ರೆಗೆ ಕಾಲಿಟ್ಟರೆ ಅಲ್ಲಿನ ಖರ್ಚು ಭರಿಸಲು ಸಾಧ್ಯವಾಗುವುದಿಲ್ಲ ಎಂಬ ಭಯದಲ್ಲೇ ಕಾಯಿಲೆಯನ್ನು ಅಲಕ್ಷಿಸಿ ಬಿಡುತ್ತಾರೆ ಇಲ್ಲವೆ ನರಳಿ-ನರಳಿ ಜೀವನವನ್ನು ನರಕಸದೃಶವಾಗಿಸಿಕೊಂಡು ಬಿಡುತ್ತಾರೆ. ಇದಕ್ಕೆಲ್ಲ ಕಾರಣ ಒಂದೇ ಬಡತನ. ಇಂಥ ಬಡ, ನಿರ್ಗತಿಕರ ಬಳಿ ತೆರಳಿ ಅವರಿಗೆ ವೈದ್ಯಕೀಯ ಸೇವೆ ಉಚಿತವಾಗಿ ನೀಡಬೇಕು ಎಂದು ಸಂಕಲ್ಪಿಸಿ 2007ರಲ್ಲಿ ಡಾ.ಸುನೀಲ್ ಮೊದಲಿಗೆ ವಾರದಲ್ಲಿ ಒಂದೆರಡು ದಿನ ಆರೋಗ್ಯ ಶಿಬಿರಗಳನ್ನು ಏರ್ಪಾಡು ಮಾಡತೊಡಗಿದರು. ಆದರೂ, ಸಮಾಧಾನವಾಗಲಿಲ್ಲ. ಈ ಬೃಹತ್ ಸಮಸ್ಯೆಗೆ ಪರಿಹಾರವೂ ದೊಡ್ಡ ಮಟ್ಟದಲ್ಲಿ ಒದಗಿಸಬೇಕು ಎಂದು ನಿರ್ಧರಿಸಿ, ಮಾತೃಸಿರಿ ಫೌಂಡೇಷನ್ ಆರಂಭಿಸಿದರು. 2010ರಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣ ಅವಧಿ ಇದಕ್ಕೆ ಮೀಸಲಾಗಿರಿಸಿದರು. ಕೆಲಸ ಬಿಟ್ಟಾಗ ಕುಟುಂಬ, ಸ್ನೇಹಿತರಿಂದ ಆರಂಭದಲ್ಲಿ ಆಕ್ಷೇಪ ವ್ಯಕ್ತವಾಯಿತಾದರೂ ಸುನೀಲ್​ರಿಗೆ ಬಡವರ ಬಗ್ಗೆ ಇರುವ ಕಳಕಳಿ, ಕಾರ್ಯಶ್ರದ್ಧೆ ಕಂಡು ಹುರಿದುಂಬಿಸಿದರು.


ಕಟ್ಟಡ ಕಾರ್ವಿುಕರು, ಇತರೆ ಕಾರ್ವಿುಕರು ನೆಲೆಸಿರುವ ಕಾಲನಿಗಳು, ಕೊಳೆಗೇರಿಗಳು, ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ತೆರಳಿ ಅವರ ಆರೋಗ್ಯ ತಪಾಸಣೆ ಮಾಡಿ, ಔಷಧ ನೀಡುವುದು ದಿನನಿತ್ಯದ ಕಾಯಕವಾಯಿತು. ಇದಕ್ಕಾಗಿ ತಮ್ಮ ಕಾರ್​ನ್ನೇ ಮೊಬೈಲ್ ಕ್ಲಿನಿಕ್ ಆಗಿಸಿ, ಸಂಚಾರಿ ಆರೋಗ್ಯ ಸಾರಥಿ ಎಂದು ನಾಮಕರಣ ಮಾಡಿದರು. ಈ ವ್ಯಾನ್​ಲ್ಲಿ ವೈದ್ಯರು, ನರ್ಸ್, ವೈದ್ಯಕೀಯ ಉಪಕರಣಗಳು, ಔಷಧ ಎಲ್ಲವೂ ಉಂಟು. ಈ ಕಾರ್ಯದ ವ್ಯಾಪ್ತಿ ಮತ್ತು ವೇಗ ಹೆಚ್ಚಿಸಲು ‘ಮಾತೃಸಿರಿ’ ಮೂಲಕ ವೈದ್ಯರ, ಇತರೆ ಸ್ವಯಂಸೇವಕರ ದೊಡ್ಡ ಪಡೆಯನ್ನೇ ಕಟ್ಟಿದ್ದಾರೆ. ಹೀಗೆ ಬದಲಾವಣೆ ತರುವ ತುಡಿತದಿಂದ ಇರಿಸಿದ ಸಣ್ಣ ಹೆಜ್ಜೆಗೆ ಸಮಾನಮನಸ್ಕರ, ಗೆಳೆಯರ ಬೆಂಬಲ ದೊರೆಯತೊಡಗಿದಾಗ ಸುನೀಲ್ ಹಿಂತಿರುಗಿ ನೋಡಿದ್ದೇ ಇಲ್ಲ. ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಶುಶ್ರೂಷಕರು ಸಮರ್ಪಣಾಭಾವದಿಂದ ಈ ಕಾರ್ಯಕ್ಕೆ ಕೈಜೋಡಿಸಿದ್ದು, ವಾರದ ಕೆಲ ದಿನಗಳನ್ನು ಬಡವರ ಸೇವೆಗಾಗಿ ಮೀಸಲಿಡುತ್ತಿದ್ದಾರೆ. ಆಸ್ಪತ್ರೆಗಳಿಗೆ ಹೋಗಲು ಆರ್ಥಿಕವಾಗಿ ಶಕ್ತರಲ್ಲದ ಜನರ ಬಳಿ ಈ ತಂಡ ತಲುಪುತ್ತಿದ್ದು, ಇದರಿಂದಾಗಿ ವೈದ್ಯೋ ನಾರಾಯಣ ಹರಿ ಎಂಬ ಮಾತು ಪ್ರತ್ಯಕ್ಷದಲ್ಲಿ ಅನುಷ್ಠಾನಕ್ಕೆ ಬರುತ್ತಿದೆ. ಒಳ್ಳೆಯ ಉದ್ದೇಶದ ಕಾರ್ಯಗಳಿಗೆ ಸಮಾಜದ ಬೆಂಬಲ ಸದಾ ಸಿಗುತ್ತದೆ ಎಂಬುದಕ್ಕೆ ಈ ಫೌಂಡೇಷನ್ ಕಾರ್ಯಗಳು ಸಾಕ್ಷಿ. ಕಳೆದೊಂದು ದಶಕದಲ್ಲಿ 700ಕ್ಕೂ ಹೆಚ್ಚು ಆರೋಗ್ಯ ಶಿಬಿರಗಳನ್ನು ನಡೆಸಲಾಗಿದ್ದು, 35 ಸಾವಿರ ಜನರಿಗೆ ಉಚಿತ ವೈದ್ಯಕೀಯ ಸೇವೆ ತಲುಪಿಸಲಾಗಿದೆ. ಔಷಧಗಳನ್ನು ಕಾರ್ಪೇರೇಟ್ ಸಂಸ್ಥೆಗಳು ದೇಣಿಗೆಯ ರೂಪದಲ್ಲಿ ನೀಡುತ್ತಿದ್ದು, ಮಿಕ್ಕೆಲ್ಲ ಖರ್ಚುಗಳನ್ನು ಫೌಂಡೇಷನ್ ಭರಿಸುತ್ತಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ಹಾಗೂ ಅಸಾಕ್ಷರ ಜನಸಮುದಾಯದಲ್ಲಿ ಆರೋಗ್ಯ ಬಗ್ಗೆ ಅರಿವು ತುಂಬದೇ ಹೋದಲ್ಲಿ ಸದೃಢ-ಆರೋಗ್ಯಯುತ ಸಮಾಜ ನಿರ್ಮಾಣ ಕಷ್ಟ ಎಂಬ ವಾಸ್ತವವನ್ನರಿತು ಈ ಜನರನ್ನೇ ಹೆಚ್ಚು-ಹೆಚ್ಚಾಗಿ ತಲುಪಲಾಗುತ್ತಿದೆ. ಆ ಮೂಲಕ ಆರೋಗ್ಯ ರಕ್ಷಣೆಯ ಸರಳ ಸೂತ್ರಗಳನ್ನು ತಿಳಿಸಿ, ಕಾಯಿಲೆಗಳಿದ್ದಲ್ಲಿ ಅವುಗಳಿಗೆ ಔಷಧ ಒದಗಿಸಲಾಗುತ್ತಿದೆ. 2017ರ ಆಗಸ್ಟ್ ತಿಂಗಳಿಗೆ ಡಾ.ಸುನೀಲರ ಈ ಕಾರ್ಯಕ್ಕೆ ದಶಕದ ಸಂಭ್ರಮ. ಹಾಗಾಗಿ, ಈ ಕಾರ್ಯವನ್ನು ಮತ್ತಷ್ಟು ವಿಸ್ತರಿಸಲು ಯೋಜನೆ ಹಾಕಿಕೊಂಡಿದ್ದು, ಕನಿಷ್ಠ ಪಕ್ಷ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ಬಡವರು ವೈದ್ಯಕಿಯ ಸೇವೆಯಿಂದ ವಂಚಿತವಾಗದಂತೆ ನೋಡಿಕೊಳ್ಳುವ ಗುರಿ ಹೊಂದಿದ್ದಾರೆ. ಇಷ್ಟು ಮಾತ್ರವಲ್ಲದೆ, ಸರ್ಜಾಪುರದಲ್ಲಿ ಹ್ಯೂಮ್ಯಾನಿಟಿ ಕ್ಲಿನಿಕ್ ಅನ್ನು ತೆರೆದಿದ್ದು, ಇಲ್ಲಿ ಕೇವಲ 100 ರೂಪಾಯಿಯಲ್ಲಿ ರೋಗಿಯ ತಪಾಸಣೆ ನಡೆಸಿ, ಔಷಧ ನೀಡಲಾಗುತ್ತದೆ. ವೈದ್ಯರ ಕನ್ಸಲ್ಟಿಂಗ್ ಶುಲ್ಕವೂ ಸೇರಿ. ಬೆಂಗಳೂರಿನ ಇತರೆ ಕೊಳೆಗೇರಿ ಪ್ರದೇಶಗಳಲ್ಲಿ ಇಂಥ ಮತ್ತಷ್ಟು ಕ್ಲಿನಿಕ್​ಗಳನ್ನು ತೆರೆಯುವ ಇರಾದೆ ಇದ್ದು, ಬಡವರು ಹಾಗೂ ಕೆಳ ಮಧ್ಯಮವರ್ಗದವರಿಗೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ. ಸದ್ಯ, ಸುನೀಲ್ ಅವರ ಜತೆ 350 ತಜ್ಞವೈದ್ಯರ ತಂಡ, 1000ಕ್ಕೂ ಅಧಿಕ ಜನರ ಸ್ವಯಂಸೇವಕರ ಪಡೆಯಿದ್ದು, ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ಅದನ್ನು ಪರಿಹರಿಸುವ ಪ್ರಯತ್ನ ಮಾಡಲಾಗುತ್ತಿದೆ. 

 

ಮಮದಾಪುರ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಹೆಲ್ತ್ ಸ್ಮಾರ್ಟ್​ಕಾರ್ಡ್​ನ್ನು ರೂಪಿಸುತ್ತಿದ್ದು, ಮುಂದೆ ಇತರೆ ಸರ್ಕಾರಿ ಶಾಲೆಗಳಿಗೂ ವಿಸ್ತರಿಸುವ ಚಿಂತನೆಯಿದೆ.


‘‘ನಮ್ಮ ದೇಶದಲ್ಲಿ ಶಿಕ್ಷಣದ ಹಕ್ಕಿದೆ, ಮಾಹಿತಿಯ ಹಕ್ಕಿದೆ. ಆದರೆ, ಆರೋಗ್ಯದ ಹಕ್ಕು ಚೆನ್ನಾಗಿರುತ್ತಿತ್ತು ಎನ್ನುತ್ತಾರೆ ಡಾ.ಸುನೀಲ.. 

ಬಡವರಲ್ಲಿ ದೈಹಿಕ ಕಾಯಿಲೆ ಕೊರತೆಗಳಿಗಿಂತ ಮಾನಸಿಕ ಸಮಸ್ಯೆಗಳು ತುಂಬ ಇವೆ. ಅವುಗಳನ್ನು ಸಂವೇದನೆಯ ನೆಲೆಯಲ್ಲಿ ಪರಿಹರಿಸಬೇಕಾಗುತ್ತದೆಯೇ ವಿನಾ ಬರೀ ಔಷಧದಿಂದ ವಾಸಿಯಾಗುವಂಥದ್ದಲ್ಲ. ಹೀಗಾಗಿ, ವೈದ್ಯರು ಮಾನವೀಯ ಸ್ಪರ್ಶದ ಮೂಲಕ ಕಾರ್ಯನಿರ್ವಹಿಸುವ ಅಗತ್ಯ ಇದೆ. ವೈದ್ಯಕೀಯ ರಂಗ ಉದ್ಯಮದ ಸ್ವರೂಪ ತಳೆದಿರುವುದು ನಿಜವಾದರೂ ಸಮಾಜಕ್ಕಾಗಿ ಏನಾದರೂ ಒಳ್ಳೆದನ್ನು ಮಾಡಬೇಕು ಎಂಬ ತುಡಿತ ಹೊಂದಿರುವ ವೈದ್ಯರಿಗೆ ಕೊರತೆ ಇಲ್ಲ. ಆದರೆ, ಇವರಿಗೆ ಹೇಗೆ ಮಾಡುವುದು, ಎಲ್ಲಿ ಮಾಡುವುದು? ಎಂಬ ಪ್ಲಾಟ್​ಫಾರಂ ಸಮಸ್ಯೆ ಇದ್ದು, ಇದನ್ನು ನಿವಾರಿಸಲು ಬಡರೋಗಿ ಮತ್ತು ವೈದ್ಯರ ನಡುವೆ ಸೇತುವೆಯಾಗಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ’ ಎನ್ನುವ ಡಾ.ಸುನೀಲ್ (9741958428)ಇತರರಿಗೆ ಪ್ರೇರಣೆ, ಸ್ಪೂರ್ತಿಯ ದಾರಿ ತೋರುತ್ತಿದ್ದಾರೆ. ಮಾತ್ರವಲ್ಲ, ಜ್ಞಾನದ ಬಲವನ್ನು ಸಮಾಜದ ಉತ್ಕರ್ಷಕ್ಕೆ ಧಾರೆ ಎರೆದರೆ ಎಂಥ ಅಭೂತಪೂರ್ವ ಬದಲಾವಣೆ ತರಬಹುದು ಎಂಬುದನ್ನು ಸಾಕ್ಷಾತ್ಕರಿಸಿದ್ದಾರೆ.  ಸಮಾಜದಲ್ಲಿನ ಕೊರತೆಗಳ ಬಗ್ಗೆ ಮಾತನಾಡುತ್ತ ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ. ಪರಿಹಾರದ ಹಾದಿಯಲ್ಲಿ ಯಾರಾದರೂ ಮೊದಲು ಹೆಜ್ಜೆ ಇರಿಸಲೇಬೇಕು. ಆಗದು ಪರಿವರ್ತನೆಯ ಹೆದ್ದರೆಯಾಗಬಲ್ಲದು ಎಂಬುದನ್ನು ಡಾ.ಸುನೀಲ್ ಹಾಗೂ ಮತ್ತವರ ತಂಡ ತೋರಿಸಿಕೊಟ್ಟಿದೆ.

ಸ್ಟೆತೋಸ್ಕೋಪ್ ಮೂಲಕ ವ್ಯಷ್ಟಿ ಮಾತ್ರವಲ್ಲ ಸಮಷ್ಟಿಯ ಕಾಯಿಲೆಗಳನ್ನೂ ನಿವಾರಿಸುತ್ತಿರುವ ಇಂಥ ವೈದ್ಯರ ಸಂಖ್ಯೆ ಬೆಳೆಯಲಿ. ಸೇವೆಯ ಈ ಕಂಪು ಇತರರಿಗೂ ದಾರಿದೀಪವಾಗಲಿ ಎಂಬುದೇ ಆಶಯ...

🙏🙏🙏💐💐💐💐


ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು