ಕಥೆ-210 ರಾಷ್ಟ್ರೀಯ ಶಿಕ್ಷಣ ದಿನಾಚರಣೆ
ಶಿಕ್ಷಣ ಎಂದರೆ ಕೇವಲ ಓದುವುದು ಅಲ್ಲ. ಇತರರಿಂದ ಕಲಿಯುವುದು ಮತ್ತು ಇತರರಿಗೂ ಕಲಿಸುವುದು'
----ಮೌಲಾನಾ ಅಬ್ದುಲ್ ಕಲಾಂ ಅಜಾದ್
ಶ್ರೀ ಮೌಲಾನ ಅಬ್ದುಲ್ ಕಲಾಂ ಆಜಾದ್ ಅವರು ದೇಶಕ್ಕೆ ನೀಡಿದ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಅವರ ಹುಟ್ಟಿದ ದಿನವನ್ನು ರಾಷ್ಟ್ರೀಯ ಶಿಕ್ಷಣ ದಿನ ಎಂದು ಆಚರಿಸಲಾಗುತ್ತಿದೆ..
ಡಾ. ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರು ಸೌದಿ ಅರೇಬಿಯಾದ ಮೆಕ್ಕಾದಲ್ಲಿ 1888 ನವೆಂಬರ್ 11ರಂದು ಜನಿಸಿದರು. ಅಜಾದ್ ಅವರು ಹತ್ತು ವರ್ಷದವರಿದ್ದಾಗ ಅವರ ಕುಟುಂಬ ಕೋಲ್ಕತ್ತಾಗೆ ಬಂದು ನೆಲಸಿತು. ಅರಬ್ಬೀ, ಉರ್ದು, ಪರ್ಷಿಯನ್, ಇಂಗ್ಲಿಷ್ ಭಾಷೆ, ಗಣಿತ, ಸಾಹಿತ್ಯ, ಯುನಾನಿ ವೈದ್ಯ ವಿಜ್ಞಾನಗಳನ್ನು ಅಜಾದ್ ಅವರು ಕರಗತ ಮಾಡಿಕೊಂಡಿದ್ದರು.
ಉರ್ದು ವಿದ್ವಾಂಸರಾದ ಅವರು, ತಮ್ಮ ಬರಹಗಳಿಗೆ 'ಅಜಾದ್' ಎಂಬ ನಾಮಾಕಿಂತವನ್ನು ಬಳಸುತ್ತಿದ್ದರು. ಆದ್ದರಿಂದ ಅವರು ಮೌಲಾನಾ ಅಜಾದ್ ಎಂದೇ ಪ್ರಸಿದ್ಧಿಯಾದರು. ಅಜಾದ್ ಅವರು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ಖಿಲಾಫತ್ ಚಳವಳಿಯ ಮುಂದಾಳತ್ವ ವಹಿಸಿಕೊಂಡಿದ್ದರು.
ಡಾ. ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರು, ಸ್ವಾತಂತ್ರ್ಯ ಭಾರತದ ಮೊಟ್ಟ ಮೊದಲ ಶಿಕ್ಷಣ ಸಚಿವರು. ಸ್ವತಂತ್ರ ಭಾರತದ ಮೊದಲ ಶಿಕ್ಷಣ ಸಚಿವರಾಗಿ ಮೌಲಾನ್ ಅಜಾದ್ ರವರು 1947 ರ ಆಗಸ್ಟ್ 15 ರಿಂದ 1958 ರ ಫೆಬ್ರುವರಿ 2ರ ವರೆಗೆ ಸೇವೆ ಸಲ್ಲಿಸಿದ್ದರು.
ಅಜಾದ್ ಅವರು ಶಿಕ್ಷಣ ಸಚಿವರಾಗಿದ್ದ ಸಮಯದಲ್ಲಿ'ರಾಷ್ಟ್ರೀಯ ಶಿಕ್ಷಣ ನೀತಿ' NEP ಯನ್ನು ಜಾರಿಗೆ ತಂದಿದ್ದರು. ಪೂರ್ವ ಪ್ರಾಥಮಿಕ ಶೀಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಕೇಂದ್ರ ಶಿಕ್ಷಣ ಸಲಹಾ ಮಂಡಳಿಯ ಅಧ್ಯಕ್ಷರಾಗಿದ್ದ ಅಜಾದ್ ಅವರು ವಯಸ್ಕರ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದರು.
ದಿಲ್ಲಿಯಲ್ಲಿ ಕೇಂದ್ರ ಇನ್ಸಿಟಿಟ್ಯೂಟ್ ಸ್ಥಾಪಿಸಿದರು. ಅದು ಮುಮದೆ ಡಿಯು ಶಿಕ್ಷಣ ಇಲಾಖೆಯಾಗಿ ಮಾರ್ಪಟ್ಟಿತು. ಅಜಾದ್ ಅಧ್ಯಕ್ಷತೆಯಲ್ಲಿ ಶಿಕ್ಷಣ ಸಚಿವಾಲಯವು 1951ರಲ್ಲಿ ಮೊಟ್ಟ ಮೊದಲ ಬಾರಿಗೆ ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸಿತು.(IIT)
1953 ರಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗವನ್ನು (UGC) ರಚಿಸಲಾಯಿತು. ಹೀಗೆ ಅನೇಕ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಕಾರಣರಾದರು.. ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (IISc) ಮತ್ತು ದೆಹಲಿಯಲ್ಲಿ ವಿಶ್ವವಿದ್ಯಾಲಯದಲ್ಲಿ ತಂತ್ರಜ್ಞಾನ ವಿಭಾಗ ತೆರೆಯಲು ಒತ್ತು ನೀಡಿದರು. ಜಮಿಲಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ.
ಡಾ. ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರು, ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅಪಾರ ಕೋಡುಗೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರ 1992 ರಲ್ಲಿ ಇವರಿಗೆ ಮರಣೋತ್ತರವಾಗಿ 'ಭಾರತ ರತ್ನ' ನೀಡಿ ಗೌರವಿಸಿತು.
ಶಿಕ್ಷಣ ಎಂದರೆ ಕೇವಲ ಓದುವುದು ಅಲ್ಲ. ಇತರರಿಂದ ಕಲಿಯುವುದು ಮತ್ತು ಇತರರಿಗೂ ಕಲಿಸುವುದು' ಇದು ಅವರ ಮಹತ್ವದ ಹೇಳಿಕೆಯಾಗಿದೆ.