Monday, November 13, 2023

 ಕಥೆ-212 ಗಿಡ ಬೆಳೆಸುವ ಸ್ಪರ್ಧೆ 

 ಗಿಡ ಬೆಳೆಸುವ ಸ್ಪರ್ಧೆ ಚೀನಾದ ಸಾಮ್ರಾಜ್ಯವೊಂದನ್ನು ರಾಜನೊಬ್ಬ ಆಳುತ್ತಿದ್ದ. ರಾಜನಿಗೆ ವಯಸ್ಸಾಗಿತ್ತು. ಅವನಿಗೆ ಮಕ್ಕಳಿರಲಿಲ್ಲ. ಹೀಗಾಗಿ, ತನ್ನ ನಂತರ ಈ ರಾಜ್ಯದ ಆಡಳಿತವನ್ನು ಯಾರ ಕೈಗೆ ವಹಿಸುವುದು ಎಂದು ರಾಜ ಯೋಚಿಸತೊಡಗಿದ. ಕೊನೆಗೊಂದು ನಿರ್ಧಾರಕ್ಕೆ ಬಂದ. ಆತನಿಗೆ ತೋಟಗಾರಿಕೆ, ಗಿಡ-ಮರಗಳ ಬಗ್ಗೆ ಅತೀವ ಪ್ರೀತಿಯಿತ್ತು. ಆದ ಕಾರಣ, ತನ್ನ ಸಾಮ್ರಾಜ್ಯದಲ್ಲಿರುವ ಎಲ್ಲ ಯುವಕರಿಗೂ ಒಂದೊಂದು ಬಿತ್ತನೆ ಬೀಜ ವಿತರಿಸುವುದಾಗಿಯೂ, ಯಾರು ಆ ಬೀಜವನ್ನು ಬಿತ್ತಿ, ಹುಲುಸಾದ ಗಿಡವನ್ನು ಬೆಳೆಯುತ್ತಾರೋ ಅವರಿಗೇ ತನ್ನ ಉತ್ತರಾಧಿಕಾರಿ ಪಟ್ಟ ನೀಡುವುದಾಗಿಯೂ ಘೋಷಿಸಿಬಿಟ್ಟ. ರಾಜನ ಘೋಷಣೆ ಹೊರಬೀಳುತ್ತಿದ್ದಂತೆ, ರಾಜ್ಯದ ಮೂಲೆ ಮೂಲೆಗಳಿಂದಲೂ ಯುವಕರು ಅರಮನೆಯತ್ತ ಧಾವಿಸತೊಡಗಿದರು. ಎಲ್ಲರಿಗೂ ಒಂದೊಂದು ಮಡಕೆಯಲ್ಲಿ ಒಂದರಂತೆ ಬಿತ್ತನೆ ಬೀಜವನ್ನು ಹಾಕಿ ವಿತರಿಸಲಾಯಿತು. ಆ ಯುವಕರ ಪೈಕಿ ಪಿಂಗ್‌ ಎಂಬ ಹುಡುಗನೂ ಇದ್ದ. ಅವನು ಗಿಡ ಬೆಳೆಯುವುದರಲ್ಲಿ ನಿಸ್ಸೀಮ. ಆತ ಬೆಳೆದ ಹಣ್ಣುಗಳು, ತರಕಾರಿಗಳು ಅತ್ಯಂತ ಸಿಹಿ ಹಾಗೂ ತಾಜಾವಾಗಿರುತ್ತವೆ ಎಂದು ಎಲ್ಲರೂ ಹೊಗಳುತ್ತಿದ್ದರು. ಇತರರಂತೆಯೇ ರಾಜನಾಗುವ ಆಸೆ ಪಿಂಗ್‌ನಲ್ಲೂ ಮೊಳಕೆಯೊಡೆದಿತ್ತು. ಹಾಗಾಗಿ, ಅವನೂ ಅರಮನೆಗೆ ಬಂದು ಬೀಜವಿರುವ ಮಡಕೆಯನ್ನು ಹೊತ್ತು ಒಯ್ದ. ಮನೆ ತಲುಪುತ್ತಿದ್ದಂತೆ ಪಿಂಗ್‌ ತಾನು ತಂದಿದ್ದ ಮಡಕೆಗೆ ಸಮೃದ್ಧಭರಿತ ಮಣ್ಣನ್ನು ಹಾಕಿದ. ಪ್ರತಿದಿನವೂ ಮಡಕೆಯ ಬಳಿ ಬಂದು, ನೀರು ಹಾಕಿ ಆರೈಕೆ ಮಾಡತೊಡಗಿದೆ. ಆದರೆ, ಬೀಜ ಮೊಳಕೆಯೊಡೆಯಲೇ ಇಲ್ಲ. ಆದರೆ, ಅರಮನೆಯಿಂದ ಬೀಜ ಕೊಂಡೊಯ್ದಿದ್ದ ಇತರೆ ಎಲ್ಲ ಯುವಕರ ಮಡಕೆಗಳಲ್ಲೂ ಹುಲುಸಾಗಿ ಗಿಡ ಬೆಳೆಯಲಾರಂಭಿಸಿತು. ಜತೆಗೆ, ಅವರೆಲ್ಲ ಪಿಂಗ್‌ನನ್ನು ನೋಡಿ ಹಾಸ್ಯ ಮಾಡತೊಡಗಿದರು. ರಾಜನ ಪಟ್ಟದ ಕನಸನ್ನು ಬಿಟ್ಟು, ಸರಿಯಾಗಿ ಕೆಲಸ ಮಾಡುವುದನ್ನು ಕಲಿ ಎಂದೆಲ್ಲ ಲೇವಡಿ ಮಾಡಿದರು. ಇದೆಲ್ಲ ಕೇಳಿ ಪಿಂಗ್‌ ದುಃಖೀತನಾದ. ಆದರೂ ಛಲ ಬಿಡಲಿಲ್ಲ. ಹೊಸ ಮಡಿಕೆಯಲ್ಲಿ ಇನ್ನಷ್ಟು ಫ‌ಲವತ್ತಾದ ಮಣ್ಣನ್ನು ತುಂಬಿ ಬೀಜವನ್ನು ಬಿತ್ತಿದ. ತನಗೆ ಗೊತ್ತಿದ್ದ ಎಲ್ಲ ಉತ್ತಮ ಗೊಬ್ಬರಗಳನ್ನೂ ಹಾಕಿದ. ಆದರೂ, ಪ್ರಯೋಜನವಾಗಲಿಲ್ಲ. ಕೊನೆಗೆ ರಾಜನು ಹೇಳಿದ ದಿನ ಬಂದೇಬಿಟ್ಟಿತು. ಎಲ್ಲರೂ ತಮ್ಮ ತಮ್ಮ ಮಡಕೆಗಳನ್ನು ಹೊತ್ತುಕೊಂಡು ಅರಮನೆಯತ್ತ ನಡೆದರು. ಅವರೆಲ್ಲರ ಮಡಕೆಗಳಲ್ಲೂ ಹಚ್ಚ ಹಸಿರಾದ ಗಿಡಗಳು ಬೆಳೆದು ನಿಂತಿದ್ದವು. ತೀವ್ರ ಹತಾಶೆಗೊಳಗಾಗಿದ್ದ ಪಿಂಗ್‌, ಬೇರೇನೂ ದಾರಿ ಕಾಣದೇ ತನ್ನ ಖಾಲಿ ಮಡಕೆಯನ್ನೇ ಹೊತ್ತುಕೊಂಡ ಅರಮನೆಗೆ ಹೋದ. ರಾಜನು ಪ್ರತಿಯೊಬ್ಬರ ಬಳಿ ಬಂದು ಅವರು ಬೆಳೆದ ಗಿಡಗಳನ್ನು ವೀಕ್ಷಿಸಿದ. ಕೊನೆಗೆ ಪಿಂಗ್‌ನ ಸರದಿ ಬಂತು. ಅವನು ತಂದಿದ್ದ ಖಾಲಿ ಮಡಕೆಯನ್ನು ನೋಡಿ ರಾಜ ಅಚ್ಚರಿಯಿಂದ ಕೇಳಿದ, "ಏನಿದು? ಖಾಲಿ ಮಡಕೆಯನ್ನು ತಂದಿದ್ದೀಯಾ?'. ಪಿಂಗ್‌ ನಾಚಿಕೆಯಿಂದ ತಲೆತಗ್ಗಿಸಿದ. ನಂತರ ಹೇಳಿದ- "ದೊರೆಯೇ, ನನ್ನನ್ನು ಕ್ಷಮಿಸು. ನೀವು ಕೊಟ್ಟ ಬೀಜವನ್ನು ಬಿತ್ತಿ, ಅದನ್ನು ಬೆಳೆಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಿದೆ. ಆದರೆ, ಬೀಜ ಮೊಳಕೆಯೊಡೆಯಲೇ ಇಲ್ಲ' ಎಂದು ಹೇಳಿದ. ಅಷ್ಟರಲ್ಲಿ ಪಿಂಗ್‌ನ ಕೆನ್ನೆಗೆ ಪ್ರೀತಿಯಿಂದ ಚಿವುಟಿದ ರಾಜ ಮುಗುಳ್ನಕ್ಕ. ನಂತರ ಅಲ್ಲಿ ಸೇರಿದ್ದವರನ್ನು ಉದ್ದೇಶಿಸಿ, "ನಾನಿವತ್ತು ಈ ಸಾಮ್ರಾಜ್ಯದ ಹೊಸ ಸಾಮ್ರಾಟನನ್ನು ಘೋಷಿಸುತ್ತಿದ್ದೇನೆ. ಇವನೇ ನನ್ನ ಉತ್ತರಾಧಿಕಾರಿ' ಎಂದು ಹೇಳುತ್ತಾ ಪಿಂಗ್‌ನತ್ತ ಕೈಚಾಚಿದ. ಎಲ್ಲರೂ ಆಶ್ಚರ್ಯಚಕಿತರಾಗಿ ಪರಸ್ಪರ ಮುಖ ನೋಡಿಕೊಳ್ಳಲು ಶುರುಮಾಡಿದರು. ಅದನ್ನು ಅರಿತ ರಾಜ, "ನೋಡಿ, ಯಾರು ಪ್ರಾಮಾಣಿಕರು ಎಂಬುದನ್ನು ನನಗೆ ಪತ್ತೆಹಚ್ಚಬೇಕಿತ್ತು. ಅದಕ್ಕಾಗಿ ನಾನು ಎಲ್ಲರಿಗೂ ಬೇಯಿಸಿದ್ದ ಬಿತ್ತನೆ ಬೀಜವನ್ನು ಕೊಟ್ಟಿದ್ದೆ. ಆ ಬೀಜ ಯಾವ ಕಾರಣಕ್ಕೂ ಮೊಳಕೆಯೊಡೆಯಲು ಸಾಧ್ಯವಿಲ್ಲ. ಆದರೆ, ಪಿಂಗ್‌ ಒಬ್ಬನನ್ನು ಹೊರತುಪಡಿಸಿ ಉಳಿದವರೆಲ್ಲರೂ ನನಗೆ ಮೋಸ ಮಾಡಿ, ಬೇರೆ ಬೀಜದಿಂದ ಗಿಡಗಳನ್ನು ಬೆಳೆದಿದ್ದಾರೆ. ಹೀಗಾಗಿ, ಪಿಂಗ್‌ನ ಪ್ರಾಮಾಣಿಕತೆಯನ್ನು ಮೆಚ್ಚಿ, ಅವನನ್ನೇ ರಾಜನ ಪಟ್ಟಕ್ಕೆ ಏರಿಸುತ್ತಿದ್ದೇನೆ' ಎಂದು ಘೋಷಿಸಿದ. ಇದನ್ನು ಕೇಳಿ ಪಿಂಗ್‌ನ ಕಣ್ಣಂಚಲ್ಲಿ ಸಂತೋಷದ ಕಣ್ಣೀರು ಜಿನುಗಿತು. ಉಳಿದವರೆಲ್ಲ ಪೆಚ್ಚು ಮೋರೆ ಹಾಕಿ, "ಬಂದ ದಾರಿಗೆ ಸುಂಕವಿಲ್ಲ' ಎಂದು ಹೊರನಡೆದರು.

ವಿಷಯ ತಪ್ಪಾದಾಗ ಧೈರ್ಯವನ್ನು ಬಿಡಬಾರದು.. ಸುಳ್ಳು ಹೇಳುವ ಬದಲು ವಿಷಯದ ತಪ್ಪಿಗೆ ಕಾರಣ ಹುಡುಕಿದಾಗ ಸುಳ್ಳು ಹೇಳುವ ಪ್ರಸಂಗ ಬರುವುದಿಲ್ಲ..

ಸತ್ಯಕ್ಕೆ ಸಾವಿಲ್ಲ. ಸುಳ್ಳಿಗೆ ಸುಖವಿಲ್ಲ ಎನ್ನುವ ಮಾತನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಸುಳ್ಳು ನಮ್ಮ ಜನ­ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಸತ್ಯ ಎನ್ನುವುದು ಜನ ಜೀವನ­ದಲ್ಲಿ ಕಹಿ ಅನುಭವ ನೀಡುವ, ಸಂಕಷ್ಟದಲ್ಲಿ ಸಿಲುಕಿಸುವ ಸಂಗತಿಯಾಗಿ ಬಿಟ್ಟಿದೆ. ಬದಲಿಗೆ ಸುಳ್ಳು ಹೇಳುವ ಕ್ರಿಯೆ ಎಲ್ಲರಿಗೂ ಸುಲಭದ, ಆರಾ­ಮದ ಸಂಗತಿಯಾ­ಗಿದೆ. ಸುಳ್ಳೇ ಸುಖದ ದಾರಿಯಾಗಿ ಬಿಟ್ಟಿದೆ ಈಗೇನಿದ್ದರೂ ತನ್ನ ಸ್ವಾರ್ಥ ಪರತೆಗೆ ಅದು ಅನುಕೂಲವಾಗುವಂತಿದ್ದರೆ ಮಾತ್ರ ಸತ್ಯ ಅಭಿವ್ಯಕ್ತಗೊಳ್ಳುತ್ತದೆ. ಸತ್ಯದಿಂದ ತನಗೆ ಪ್ರಯೋಜನವೂ ಇಲ್ಲ, ನಷ್ಟವೂ ಇಲ್ಲ ಎಂದಾಗ ತಟಸ್ಥ ಧೋರಣೆ ಅನುಸರಿಸುತ್ತಾರೆ..

ಪ್ರಾಮಾಣಿಕತೆಗೆ ಯಾವಾಗಲೂ ಬೆಲೆ ಇದೆ...ಪ್ರಾಮಾಣಿಕತೆ ನಮಗೆ ಸರಳವಾಗಿರಲು ಸಂತೋಷವಾಗಿರಲು ಸಹಾಯಕ..

ಕೃಪೆ:ಉದಯ ವಾಣಿ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು