ಮಕ್ಕಳ ದಿನಾಚರಣೆ
ಜವಾಹರಲಾಲ್ ನೆಹರೂ ಅವರ ಜನ್ಮದಿನದ ಸವಿನೆನಪಿಗಾಗಿ ನವೆಂಬರ್ 14 ರಂದು ಭಾರತದಲ್ಲಿ ಮಕ್ಕಳ ದಿನಾಚರಣೆ ಆಚರಣೆ ಮಾಡಲಾಗುತ್ತಿದೆ.ಮಕ್ಕಳ ಮೇಲಿನ ಪ್ರೀತಿಗೆ ಇವರು ತಮ್ಮ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸಲು ಹೇಳಿದ್ದರು. ಅಂದಿನಿಂದಲೂ ಜವಾಹರಲಾಲ್ ನೆಹರು ಅವರ ಹುಟ್ಟಿದ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಿಕೊಂಡು ಬರಲಾಗಿದೆ.
ಜವಾಹರರಿಗೆ ಮೊದಲಿನಿಂದಲೂ ಮಕ್ಕಳೆಂದರೆ ಬಹಳ ಪ್ರೀತಿ.ಮಕ್ಕಳೊಡನೆ ಆಟವಾಡುವುದೆಂದರೆ ಆನಂದ. ಸ್ವತಂತ್ರ ಭಾರತದ ಪ್ರಧಾನಮಂತ್ರಿಯಾಗಿ ದಿನವಿಡೀ ದುಡಿತವಿದ್ದಾಗಲೂ ಅವರು ಮಕ್ಕಳೊಡನೆ ಆಡುವ ಪ್ರಸಂಗ ತಪ್ಪಿಸುತ್ತಿರಲಿಲ್ಲ. ಯಾವುದೇ ಸಭೆಗೆ ಹೋಗಿರಲಿ, ಎಷ್ಟೇ ಅವಸರದ ಕಾರ್ಯಕ್ರಮವಿರಲಿ ಅವರು ಮಕ್ಕಳನ್ನು ನೋಡಿದ ಕೂಡಲೆ ಎತ್ತಿ ಮುದ್ದಾಡುತ್ತಿದ್ದರು. ‘‘ನಿಜವಾದ ಜವಾಹರರನ್ನು ನೋಡಬೇಕಾದರೆ ಅವರು ಮಕ್ಕಳೊಂದಿಗೆ ಇರುವಾಗ ನೋಡಬೇಕು. ಮಕ್ಕಳಂತೆಯೇ ಮಾತನಾಡಿ, ಅವರ ಹಾಗೆಯೇ ಆಟವಾಡಿ ನಲಿದು ಆನಂದಪಡುತ್ತಾರೆ’’ ಎಂದು ಅವರ ತಂಗಿ ಶ್ರೀಮತಿ ವಿಜಯಲಕ್ಷ್ಮಿ ಪಂಡಿತರು ಹೇಳಿದ್ದಾರೆ. ಜವಾಹರರನ್ನು ಮಕ್ಕಳು ‘ಚಾಚಾ ನೆಹರೂ’ ಎಂದು ಪ್ರೀತಿ-ಗೌರವಗಳಿಂದ ಕರೆಯುತ್ತಿದ್ದರು. ಚಾಚಾ ಎಂದರೆ ಚಿಕ್ಕಪ್ಪ.
ಅವರ ಮನೆತನದವರ ಮನೆ ಕಾಲುವೆಯ ಪಕ್ಕದಲ್ಲಿ ಕಾರಣ. ಕಾಲುವೆಗೆ ಹಿಂದಿ ಭಾಷೆಯಲ್ಲಿ ‘ನಹರ್’ ಎನ್ನುತ್ತಾರೆ. ಹೀಗಾಗಿ ‘ನಹರ್’ ಪಕ್ಕದ ಮನೆಯವರು ‘ನೆಹರೂ’ ಆದರು ಎಂದು ಹೇಳಲಾಗುತ್ತದೆ..
Born with Silver spoon..
ಬಾಲ್ಯ–ವಿದ್ಯಾಭ್ಯಾಸ
ಜವಾಹರ ನೆಹರು ಅವರ ತಂದೆ ಮೋತೀಲಾಲರು ಅಲಹಾಬಾದಿನಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿ ಅಪಾರ ಕೀರ್ತಿ ಮತ್ತು ಹಣ ಗಳಿಸಿದರು. ಜವಾಹರರು ಹುಟ್ಟಿದ್ದು 1889ನೇ ನವಂಬರ 14 ರಂದು. ತಾಯಿ ಸ್ವರೂಪರಾಣಿ. ವೈಭವದ ಜೀವನ ಶ್ರೀಮಂತ ತಂದೆಯ ಒಬ್ಬನೇ ಮಗನಾದ ಜವಾಹರರು ರಾಜಕುಮಾರನಂತೆ ಅತ್ಯಂತ ಸುಖದಿಂದ ಬೆಳೆದರು. ಮೋತೀಲಾಲರು ಹೊಸದಾಗಿ ಕಟ್ಟಿಸಿದ ‘ಆನಂದಭವನ’ ವೆಂಬ ಹೆಸರಿನ ಮನೆಯು ಅರಮನೆಯಂತೆಯೇ ಇತ್ತು.
ಒಮ್ಮೆ ಜವಾಹರರು ಚೆನ್ನಾಗಿ ಪೆಟ್ಟು ತಿಂದರು. ಆದದ್ದು ಇಷ್ಟೇ. ಮೋತೀಲಾಲರ ಕೋಣೆಯಲ್ಲಿ ಮೇಜಿನ ಮೇಲೆ ಎರಡು ಪೆನ್ನುಗಳಿದ್ದವು. ಅವನ್ನು ನೋಡಿದಾಗ ಬಾಲಕ ಜವಾಹರರು ‘‘ಎರಡು ಪೆನ್ನುಗಳಿಂದ ಯಾರಾದರೂ ಬರೆಯುತ್ತಾರೆಯೇ, ಒಂದನ್ನು ನಾನು ಇಟ್ಟುಕೊಂಡರೆ ತಪ್ಪೇನು?’’ ಎಂದು ಆಲೋಚಿಸಿ ಒಂದನ್ನು ತೆಗೆದುಕೊಂಡರು. ಆ ಬಳಿಕ ತಂದೆ ಪೆನ್ನು ಕಾಣದೆ ಎಲ್ಲರನ್ನು ಕೇಳಿದರು. ಮಗನನ್ನು ಕೇಳಿದಾಗ ತಾನು ತೆಗೆದುಕೊಂಡಿಲ್ಲವೆಂದ. ಆದರೆ ಹುಡುಕಿದಾಗ ಮಗನ ಬಳಿ ಸಿಕ್ಕಿಬಿಟ್ಟಿತು. ಮಗನಿಗೆ ಚೆನ್ನಾಗಿ ಏಟುಬಿದ್ದವು! ಹೀಗೆ ಸಿಟ್ಟಿನ ಸ್ವಭಾವವಿದ್ದರೂ ತಂದೆಗೆ ಮಗನ ಮೇಲೆ ಬಹಳ ಪ್ರೇಮವಿತ್ತು. ಮಗನಿಗೆ ಒಳ್ಳೆ ಶಿಕ್ಷಣ ಕೊಡಿಸಬೇಕೆಂದು ಮನೆಯಲ್ಲಿಯೇ ಉತ್ತಮ ಶಿಕ್ಷಕರನ್ನಿಟ್ಟರು. ಮಗನಿಗೆ ಇಂಗ್ಲಿಷ್ ಶಿಕ್ಷಣ ಕೊಡಿಸಲು ಫರ್ಡಿನೆಂಡ್ ಬ್ರುಕ್ಸ್ ಎಂಬುವರನ್ನು ನೇಮಿಸಿದ್ದರು. ಆತನು ಜವಾಹರರಲ್ಲಿ ಒಳ್ಳೊಳ್ಳೆಯ ಪುಸ್ತಕ ಓದುವ ರುಚಿ ಹುಟ್ಟಿಸಿದ. ಈ ರುಚಿಯು ಜವಾಹರರಿಗೆ ವಿದ್ಯಾರ್ಥಿಯಾಗಿದ್ದಾಗ ಮತ್ತು ಮುಂದೆಯೂ ಬಹಳ ಸಹಾಯಕವಾಯಿತು. ಚಿಕ್ಕಂದಿನಲ್ಲಿ ಜವಾಹರರೊಡನೆ ಆಟವಾಡಲು ‘ಆನಂದಭವನ’ ದಲ್ಲಿ ಸಣ್ಣ ಹುಡುಗರು ಇರಲಿಲ್ಲ. ಅವರ ತಂಗಿ ಸ್ವರೂಪಕುಮಾರಿ-ಮುಂದೆ ಶ್ರೀಮತಿ ವಿಜಯಲಕ್ಷಿ ಪಂಡಿತ್ ಎಂದು ಹೆಸರಾದರು..
ಜವಾಹರರಿಗೆ ಅವರ ಕಕ್ಕಿ ರಾಮಾಯಣ-ಮಹಾಭಾರತಗಳ ಕಥೆಗಳನ್ನೂ, 1857ರ ಸ್ವಾತಂತ್ರ ಸಮರದಲ್ಲಿ ಹೋರಾಡಿದ ದೇಶಭಕ್ತ ವೀರರ ಕಥೆಗಳನ್ನೂ ಹೇಳುತ್ತಿದ್ದರು. ಇದರಿಂದ ಜವಾಹರರಿಗೆ ನಮ್ಮ ದೇಶದ ಹಿರಿಮೆ ತಿಳಿಯುತ್ತಿತ್ತು. ನಮ್ಮ ದೇಶವನ್ನು ಆಳುತ್ತಿದ್ದ ಬ್ರಿಟಿಷರು ನಡೆಸುವ ಅತ್ಯಾಚಾರಗಳ ಬಗ್ಗೆ ಹಿರಿಯರು ಮಾತನಾಡುವುದನ್ನು ಜವಾಹರರು ಬಹಳ ಕುತೂಹಲದಿಂದ ಕೇಳುತ್ತಿದ್ದರು. ಭಾರತೀಯರಿಗೆ ಎಲ್ಲಿಯೂ ಗೌರವದ ಸ್ಥಾನ-ಮಾನವಿರಲಿಲ್ಲ. ಉಪಾಹಾರ ಗೃಹಗಳಲ್ಲಿ, ರೈಲುಡಬ್ಬಿಗಳಲ್ಲಿ, ಸಾರ್ವಜನಿಕ ಉದ್ಯಾನಗಳಲ್ಲಿ- ಹೀಗೆ ಎಲ್ಲ ಕಡೆ ಬ್ರಿಟಿಷರಿಗೆ ಪ್ರತ್ಯೇಕ ಆಸನ ವ್ಯವಸ್ಥೆಯಿರುತ್ತಿತ್ತು. ಬ್ರಿಟಿಷರು ಭಾರತೀಯರನ್ನು ಬಹಳ ಕೀಳುಭಾವನೆಯಿಂದ ಕಾಣುತ್ತಿದ್ದರು.
ಜವಾಹರರಿಗೆ 15 ವರುಷ ದಾಟಿದಾಗ ಮೋತಿಲಾಲರು ಅವರನ್ನು ಇಂಗ್ಲೆಂಡಿನಲ್ಲಿ ‘ಹ್ಯಾರೋ’ ಎಂಬ ಸಾರ್ವಜನಿಕ ಶಾಲೆಗೆ ಸೇರಿಸಿದರು. ಅಲ್ಲಿ ಜವಾಹರರು ಬೀಜಗಣಿತ, ರೇಖಾಗಣಿತ, ಇತಿಹಾಸ, ಸಾಹಿತ್ಯ ವಿಜ್ಞಾನ ಮುಂತಾದ ಎಲ್ಲ ವಿಷಯಗಳಲ್ಲಿ ಉತ್ತಮ ವಿದ್ಯಾರ್ಥಿಯೆಂದು ಹೆಸರು ಪಡೆದು ಬಹುಮಾನ ಗಳಿಸಿದರು.
1912 ರ ಆಗಸ್ಟ್ ತಿಂಗಳಲ್ಲಿ ಭಾರತಕ್ಕೆ ಮರಳಿದರು.. 1916 ರ ಫೆಬ್ರವರಿ 8 ರ ವಸಂತಪಂಚಮಿಯ ದಿನ ದಿಲ್ಲಿಯಲ್ಲಿ ಜವಾಹರರ ಮದುವೆ ಬಹಳ ವೈಭವದಿಂದ ನೆರವೇರಿತು. ಅವರ ಪತ್ನಿ ಕಮಲಾ. ಆಕೆಯೂ ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕೀರ್ತಿ ಗಳಿಸಿದರು. ಜವಾಹರರಿಗೆ ಒಬ್ಬಳೇ ಮಗಳು, ಇಂದಿರಾ ಪ್ರಿಯದರ್ಶಿನಿ.
ಜವಾಹರರ ಜೀವನ ನಾಡಿನ ಸ್ವಾತಂತ್ರ ದ ಹೋರಾಟದ ಒಂದು ಭಾಗವಾಗಿ ಹೋಯಿತು. ದೇಶದ ಸ್ವಾತಂತ್ರ ಕ್ಕಾಗಿ ಹೋರಾಟ ನಡೆದಾಗ ಅವರು ನಾಲ್ಕು ಬಾರಿ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಗೊಂಡರು. ಅವರ ಇಡೀ ಜೀವನ ದೇಶಕ್ಕಾಗಿ ಸಮರ್ಪಿತವಾಗಿತ್ತು. ಅವರು ಸರ್ವಶಕ್ತಿಯಿಂದ ಸದಾಕಾಲವೂ ದೇಶಕ್ಕಾಗಿ ದುಡಿಯುತ್ತ ಮುಂದೆ ಮುಂದೆ ಸಾಗಿದರು. ಸೆರೆಮನೆಯಲ್ಲೇ ಇರಲಿ, ಹೊರಗೇ ಇರಲಿ, ಜವಾಹರರು ಯಾವಾಗಲೂ ದೇಶದ ಸ್ವಾತಂತ್ರ , ದೇಶದ ಉನ್ನತಿ, ದೇಶದ ಪ್ರಗತಿ ಇವುಗಳ ಚಿಂತೆಯನ್ನೇ ಮಾಡುತ್ತಿದ್ದರು.
ಸ್ವತಂತ್ರ ಭಾರತಕ್ಕೆ ಜವಾಹರಲಾಲ್ ನೆಹರೂ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಸ್ವತಂತ್ರಭಾರತದ ಮೊದಲನೆಯ ಪ್ರಧಾನಮಂತ್ರಿಯಾಗಿ ದೇಶದ ಪ್ರಗತಿ ಸಾಧಿಸುವ ಪೂರ್ಣ ಹೊಣೆ ಹೊರಬೇಕಾಯಿತು. ಹದಿನೇಳು ವರ್ಷಕಾಲ ಅವರು ಸ್ವತಂತ್ರ ಭಾರತದ ಪ್ರಧಾನಿಯಾಗಿದ್ದರು. ಈ ಕಾಲದಲ್ಲಿ ಅವರು ನಮ್ಮ ದೇಶದ ಉನ್ನತಿಗಾಗಿಯಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸಿದರು.
‘ಭಾರತ ರತ್ನ’
1955ರಲ್ಲಿ ದೇಶದ ಜನತೆಯ ಪರವಾಗಿ ರಾಷ್ಟ್ರಪತಿಯವರು ಜವಾಹರರಿಗೆ ‘ಭಾರತರತ್ನ’ ಪದವಿ ನೀಡಿ ಗೌರವಿಸಿದರು.
ನಮ್ಮ ದೇಶದ ಉನ್ನತಿಗಾಗಿ ಚಾಚಾ ನೆಹರೂ ಕೊಟ್ಟ ಮಂತ್ರವೆಂದರೆ
‘‘ಆರಾಮ್ ಹರಾಮ್ ಹೈ.’’ ನಾವು ಎಂದಿಗೂ ಸೋಮಾರಿಗಳಾಗಬಾರದೆಂಬುದೇ ಆ ಮಂತ್ರದ ಅರ್ಥ.
ಜವಾಹರರು ಸಾಹಿತಿಗಳೂ ಆಗಿದ್ದರು. ಚಿಕ್ಕಂದಿನಿಂದಲೂ ಅವರಿಗೆ ಪುಸ್ತಕಗಳನ್ನು ಓದುವುದೆಂದರೆ ಬಹು ಆಸಕ್ತಿ. ದಿನವಿಡೀ ಬೇರೆ ಬೇರೆ ಕೆಲಸಗಳಿಂದ ದಣಿವಾದರೂ ಅವರು ರಾತ್ರಿ ಮಲಗುವ ಮುಂಚೆ ಸ್ವಲ್ಪ ಸಮಯ ಉತ್ತಮ ಪುಸ್ತಕ ಓದುತ್ತಿದ್ದರು. ಅವರಿಂದ ಇಂಗ್ಲಿಷ್ ಭಾಷೆಯಲ್ಲಿ ರಚಿತವಾದ ಮೂರು ಪುಸ್ತಕಗಳು ಜಗತ್ಪ್ರಸಿದ್ಧವಾಗಿವೆ. ಸಹಜವಾಗಿ ಅನುಕಂಪ ತೋರುವ ಹೃದಯ, ಯಾವ ಸಮಸ್ಯೆಯನ್ನೂ ವಿಶಾಲವಾದ ದೃಷ್ಟಿಯಿಂದ ಕಾಣುವ ವಿವೇಕ ಅವರ ಎಲ್ಲ ಪುಸ್ತಕಗಳಲ್ಲಿ ಕಾಣುತ್ತವೆ.
1964ರ ಮೇ 27
ರಂದು ನೆಹರು ನಿಧನರಾದರು. ಎಲ್ಲ ದೇಶಗಳ ಪ್ರಮುಖರು ಅಂತಿಮಯಾತ್ರೆಯಲ್ಲಿ ಭಾಗವಹಿಸಿ ತಮ್ಮ ಗೌರವ ಸಲ್ಲಿಸಿದರು.
ಭಾರತ ಯುಗಧರ್ಮಕ್ಕೆ ಅನುಗುಣವಾಗಿ ಬದಲಾಗಬೇಕು, ತನ್ನ ಚಿಂತನೆ-ಸಂಸ್ಕೃತಿಗಳಲ್ಲಿ ಸತ್ವವಿರುವುದನ್ನು ಉಳಿಸಿಕೊಳ್ಳಬೇಕು, ಆದರೆ ಹೊಸ ಜ್ಞಾನ ಹೊಸ ಚಿಂತನೆಗಳಿಗೆ ಮನಸ್ಸನ್ನು ತೆರೆದಿರಬೇಕು ಎಂದು ನೆಹರೂ ಅವರು ಸಾರಿದರು.
ಮಕ್ಕಳ ಬಗ್ಗೆ ಅಪಾರವಾದ ಪ್ರೀತಿ ಮತ್ತು ವಾತ್ಸಲ್ಯವನ್ನು ಹೊಂದಿದ್ದ ನೆಹರೂ ಅವರು ಮಕ್ಕಳನ್ನು ರಾಷ್ಟ್ರದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯ ಎಂದು ಪರಿಗಣಿಸಿದ್ದರು. ಭಾರತದ ಮಕ್ಕಳಿಗೆ ಅಗತ್ಯ ಶಿಕ್ಷಣ ಕೊಡಿಸಬೇಕೆಂಬುದು ಅವರ ಧ್ಯೇಯವಾಗಿತ್ತು. ಮಕ್ಕಳ ಮೇಲಿನ ಪ್ರೀತಿಗೆ ಇವರು ತಮ್ಮ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸಲು ಹೇಳಿದ್ದರು. ಅಂದಿನಿಂದಲೂ ಜವಾಹರಲಾಲ್ ನೆಹರು ಅವರ ಹುಟ್ಟಿದ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಿಕೊಂಡು ಬರಲಾಗಿದೆ. ಇಂದಿನ ಮಕ್ಕಳು ನಾಳಿನ ಭಾರತವನ್ನು ಕಟ್ಟುತ್ತಾರೆ, ನಾವು ಮಕ್ಕಳನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆಯೋ ಅಷ್ಟು ಉತ್ತಮ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ಚಾಚಾ ನೆಹರೂ ಯಾವಾಗಲೂ ಹೇಳುತ್ತಿದ್ದರು. ಹೀಗಾಗಿ ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಶಿಕ್ಷಣದ ಹಕ್ಕಿನ ರಕ್ಷಣೆ ನಮ್ಮೆಲ್ಲರ ಹೊಣೆಯಗಿದೆ. ಬಾಲಕಾರ್ಮಿಕ ಪದ್ಧತಿಯಿಂದ ಅವರನ್ನು ರಕ್ಷಿಸುವುದು, ಅವರಿಗೆ ಉತ್ತಮ ಶಿಕ್ಷಣ ಕೊಡಿಸುವುದು, ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಯುವುದು, ಎಲ್ಲಾ ವರ್ಗದ ಮಕ್ಕಳಿಗೆ ಸಮಾನ ಅವಕಾಶ ಕಲ್ಪಿಸುವುದು ಎಲ್ಲರ ಜವಾಬ್ದಾರಿಯಾಗಿದೆ.
'Tomorrow is Yours', ಅಂದರೆ 'ನಾಳೆ ನಿಮ್ಮದು' ಎಂದು ನೆಹರೂ ಅವರು ಮಕ್ಕಳಿಗೆ ಹೇಳುತ್ತಿದ್ದರು.
ಮುದ್ದು ಮನಸ್ಸು ಮೃದುವಾಗಿ, ಮೊಗ್ಗುಗಳೆಲ್ಲಾ ಹೂವಾಗಿ, ಬಾಳು ನಯವಾಗಿ, ಸುಂದರ ಬದುಕು ನೀನಾಗು...
ಮಗು ಆ ದೇವರ ರೂಪ, ನೋಡಲು ಬಹು ಅಪರೂಪ. ನಿತ್ಯವೂ ನಿನ್ನ ದಿನ ಅದುವೇ ಈ ಮಕ್ಕಳ ದಿನ.
ಮಕ್ಕಳ ದಿನಾಚರಣೆ ಶುಭಾಶಯಗಳು💐💐💐💐💐