ಕಥೆ-216 ಆತ್ಮಹತ್ಯೆಗೆ ಯತ್ನಿಸಿದ್ದ ಶಮಿ.. ಇಂದು ಭಾರತವನ್ನು ಫೈನಲಿಗೆ ತಲುಪಿಸಿದ..
ಸಣ್ಣ ಸಣ್ಣ ಕಾರಣಕ್ಕೆ ಸಾಯಲು ಬಯಸುವವರು ಅನೇಕ ಅಂತವರು ಒಮ್ಮೆ ಮೊಹಮ್ಮದ್ ಶಮಿಯ ಕತೆಯನ್ನು ಓದಬೇಕು!
ಮನಸ್ಸಿನಲ್ಲಿ ಸಾವಿರ ನೋವು ಇಟ್ಟುಕೊಂಡು ನಗೋದನ್ನು ಕಲಿಯಬೇಕು!
------------------------------------------
ಭಾರತೀಯರಿಗೆ ಮೊಹಮ್ಮದ ಶಮಿ ಅವರ ನಿಜವಾದ ಮೌಲ್ಯವು ಗೊತ್ತಾದದ್ದು ಈ ಬಾರಿಯ ವಿಶ್ವಕಪ್ ಕೂಟದಲ್ಲಿಯೇ! ಅದರಲ್ಲಿಯೂ ಮೊನ್ನೆ ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತದ ಬೇರೆಲ್ಲಾ ಬೌಲರಗಳು ವಿಕೆಟ್ ಪಡೆಯಲು ಪರದಾಡುತ್ತಿದ್ದಾಗ ಮತ್ತು ದುಬಾರಿಯಾದಾಗ ಬರೋಬ್ಬರಿ ಏಳು ವಿಕೆಟ್ ಪಡೆದು ಭಾರತವನ್ನು ಫೈನಲ್ ಪಂದ್ಯಕ್ಕೆ ಕರೆದುಕೊಂಡು ಹೋದದ್ದನ್ನು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಯಾವತ್ತಿಗೂ ಮರೆಯುವುದಿಲ್ಲ.
ಈ ವಿಶ್ವಕಪ್ ಕೂಟದ ಪ್ರತೀ ಪಂದ್ಯದಲ್ಲಿ ಎಂಬಂತೆ ಅವರು ವಿದೇಶದ ಪ್ರತಿಯೊಬ್ಬ ಬ್ಯಾಟರುಗಳನ್ನು ಕಾಡಿದ್ದಾರೆ. ಅವರ ಸ್ವಿಂಗ್, ಔಟ್ ಸ್ವಿಂಗ್, ರಿವರ್ಸ್ ಸ್ವಿಂಗ್ ಮತ್ತು ಯಾರ್ಕರ್ ಎಸೆತಗಳಿಗೆ ವಿಶ್ವದ ಭಾರೀ ಬಲಿಷ್ಠ ಆಟಗಾರರು ಶರಣಾಗತ ಆದದ್ದು ನಿಜಕ್ಕೂ ಅದ್ಭುತ! ಮೊಹಮದ್ ಶಮಿ ವಿಶ್ವಕಪ್ ಕೂಟದಲ್ಲಿ 50 ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಕೀರ್ತಿ ಪಡೆದಿದ್ದಾರೆ. ಭಾರತಕ್ಕೆ ಕಪಿಲ್ ದೇವ್ ನಂತರ ದೊರೆತ ಅತ್ಯುತ್ತಮ ವೇಗದ ಬೌಲರ್ ಅವರು ಎಂಬುದನ್ನು ನಾವು ಒಪ್ಪದೇ ಇರಲು ಸಾಧ್ಯವೇ ಇಲ್ಲ!
ಅಂತಹ ಶಮಿ ಸಾಗಿ ಬಂದ ದಾರಿ..
-----------------------------------------
ಮೊಹಮ್ಮದ್ ಶಮಿ 1990 ಸೆಪ್ಟೆಂಬರ್ 3 ರಂದು ಉತ್ತರ ಪ್ರದೇಶದ ಆಮ್ರೋಹ ಪ್ರದೇಶದ ಒಂದು ಹಳ್ಳಿಯಲ್ಲಿ ಒಬ್ಬ ರೈತನ ಮಗನಾಗಿ ಜನಿಸಿದ. ಬಡತನ, ಹಸಿವು, ಅಪಮಾನ ಎಲ್ಲವನ್ನೂ ದಾಟಿಕೊಂಡು ಬರಬೇಕಾಯಿತು.
15 ವರ್ಷ ಪ್ರಾಯದಲ್ಲಿ ಬದ್ರುದ್ದೀನ್ ಸಿದ್ದೀಕ್ ಎಂಬ ಕೋಚ್ ಆತನ ಪ್ರತಿಭೆಯನ್ನು ಗುರುತಿಸಿ ತರಬೇತು ಕೊಡಲು ಆರಂಭ ಮಾಡಿದ್ದರು.
ಮೊಹಮ್ಮದ್ ಶಮಿ ಬಾಲ್ಯದಿಂದಲೂ ಕಠಿಣ ಪರಿಶ್ರಮದ ಹಾಗೂ ದುಡಿಮೆಯ ಮೇಲೆ ನಂಬಿಕೆಯನ್ನು ಇಟ್ಟ ಹುಡುಗ. ಕೋಚ್ ಹೇಳಿದ ಎಲ್ಲ ಕೌಶಲಗಳನ್ನು ಅತೀವ ಶ್ರದ್ಧೆಯಿಂದ ಕಲಿಯುತ್ತಾ ಹೋದ ಶಮಿಯ ಕನಸು ಅಂಡರ್ 19 ವಿಶ್ವ ಕೂಟದಲ್ಲಿ ಭಾರತಕ್ಕೋಸ್ಕರ ಆಡುವುದಾಗಿತ್ತು. ಆಗಲೇ ಆತನ ಬೌಲಿಂಗ್ ವೇಗ 140km/h ದಾಟಿತ್ತು ಮತ್ತು ಹೆಚ್ಚಿನ ವಿಕೆಟ್ ಬೌಲ್ಡ್ ಮಾಡಿ ಪಡೆಯುತ್ತಿದ್ದರು. ಆತನಿಗೆ ಯಾವ ಪ್ರಾಯೋಜಕರೂ ಇರಲಿಲ್ಲ. ಒಂದು ಹೊತ್ತಿನ ಊಟಕ್ಕೂ ಆತ ಪರದಾಡುವ ಸ್ಥಿತಿ ಇತ್ತು. ಆದರೆ ಶಮಿಯ ಅಂಡರ್ 19 ಕನಸು ನನಸಾಗಲಿಲ್ಲ.
ಆಗ ಆತನ ಕೋಚ್ ಆತನ ಪ್ರತಿಭೆ ಸಾಯಬಾರದು ಎಂಬ ಕಾರಣಕ್ಕೆ ಯಾರದೋ ಅಡ್ರೆಸ್ ಹುಡುಕಿ ಆತನನ್ನು ಕೊಲ್ಕತ್ತಾಗೆ ಕರೆದುಕೊಂಡು ಬಂದರು. ಅವಕಾಶಗಳಿಗಾಗಿ ಶಮ್ಮಿ ಅನೇಕರ ಮನೆಬಾಗಿಲು ಬಡಿಯಬೇಕಾಯಿತು.
'ಹಸಿವನ್ನಾದರೂ ತಡೆಯಬಹುದು. ಆದರೆ ಅಪಮಾನಗಳ ಅಗ್ನಿದಿವ್ಯ ತಡೆಯುವುದು ಕಷ್ಟ ' ಎಂದು ಶಮಿ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಹೆಚ್ಚು ಶಾಲೆ ಓದಿಲ್ಲ ಎಂಬ ಕಾರಣಕ್ಕೆ ಕೂಡ ಆತನು ಹಲವು ಬಾರಿ ಬಿಸಿಸಿಐ ಮತ್ತು ಆಯ್ಕೆ ಮಂಡಳಿಯ ಅವಕೃಪೆಗೆ ಪಾತ್ರ ಆಗಬೇಕಾಯಿತು ಅನ್ನುತ್ತಾರೆ..
ಶಮಿ ಬದುಕಿನ ಕರಾಳ ಅಧ್ಯಾಯ ಆರಂಭ ಆದದ್ದು ಮದುವೆಯಿಂದ!
--------------------------------------
ಶಮ್ಮಿ 2014ರಲ್ಲಿ ಹಸೀನ್ ಜಹಾನ್ ಎಂಬ ಹುಡುಗಿಯನ್ನು ಮದುವೆಯಾದರು. ಒಂದು ಮಗು ಕೂಡ ಜನಿಸಿತು. ಆದರೆ ಅದೇ ಹಸೀನ್ ಜಹಾನ್ ಆತನ ಬದುಕಿನ ವಿಲನ್ ಆದದ್ದು ದುರಂತ. ಸ್ವತಃ ಹೆಂಡತಿ ಆತನ ಮೇಲೆ ಲೈಂಗಿಕ ಹಿಂಸೆ ಮತ್ತು ವ್ಯಭಿಚಾರದ ಕೇಸ್ ದಾಖಲಿಸಿದಳು! ತನ್ನ ಗಂಡನ ಮಾನಸಿಕ ಆರೋಗ್ಯವು ಸರಿ ಇಲ್ಲ ಎಂಬ ಆರೋಪ. ವಿದೇಶದ ಪ್ರವಾಸದಲ್ಲಿ ಇದ್ದಾಗ 2018ರಲ್ಲಿ ಆತನ FIR ಆಗಿ ಅರೆಸ್ಟ್ ವಾರಂಟ್ ಹೊರಟಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಶಮ್ಮಿ ಅರೆಸ್ಟ್ ಆಗುವುದು ತಪ್ಪಿತು.
ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನ!
---------------------------
ಈ ಸಂದರ್ಭದಲ್ಲಿ ತಾನು ಮೂರು ಬಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದೇನೆ ಎಂದು ಶಮಿ ಒಪ್ಪಿಕೊಂಡಿದ್ದಾರೆ. ಕ್ರಿಕೆಟ್ ಮೇಲೆ ಫೋಕಸ್ ಔಟ್ ಆಗಿತ್ತು. ತಾನು ನಿರಪರಾಧಿ ಎಂದು ಎಷ್ಟೇ ಬಾರಿ ಕೂಗಿ ಹೇಳಿದರೂ ಆತನನ್ನು ಯಾರೂ ನಂಬಲಿಲ್ಲ. ನಿರಂತರ ಕೋರ್ಟ್ ವಿಚಾರಣೆ, ಪೊಲೀಸ್ ಸ್ಟೇಶನ್ ಅಲೆದಾಟ ಶಮ್ಮಿಯನ್ನು ಹೈರಾಣ ಮಾಡಿತ್ತು. ಆಗ ಅನೇಕ ಸ್ನೇಹಿತರು ಆತನ ಪರವಾಗಿ ನಿಂತು ನೈತಿಕ ಬೆಂಬಲ ನೀಡಿದ್ದನ್ನು ಆತನು ಇಂದಿಗೂ ಮರೆತಿಲ್ಲ. ಆ ಕೇಸಿನಿಂದ ಹೊರಬರಲು ಶಮ್ಮಿಗೆ ತುಂಬಾ ಕಷ್ಟ ಆಯಿತು. ಶಮ್ಮಿ ತುಂಬಾ ಜರ್ಜರಿತ ಆದರು.
ಮ್ಯಾಚ್ ಫಿಕ್ಸಿಂಗ್ ಎಂಬ ಬೆಂಬಿಡದ ಭೂತ!
---------------------------------------
'ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿ' ಎಂಬ ಗಾದೆ ಮಾತಿನಂತೆ ಶಮಿ ಬದುಕಿನಲ್ಲಿ ಎರಡನೇ ಬಿರುಗಾಳಿ ಬೀಸಿತ್ತು. ಅದು 'ಮ್ಯಾಚ್ ಫಿಕ್ಸಿಂಗ್' ಆರೋಪ! ದುಡ್ಡು ತೆಗೆದುಕೊಂಡು ವಿದೇಶಗಳ ತಂಡಕ್ಕೆ ಫೇವರ್ ಮಾಡಿದ್ದಾರೆ ಎನ್ನುವ ದೂರು ಬಂದಾಗ ಒಮ್ಮೆಗೇ ಶಮ್ಮಿ ಕುಗ್ಗಿಹೋದರು. ಆ ಆರೋಪವು ಸಾವಿಗೆ ಸಮ ಆಗಿತ್ತು. ಪತ್ರಿಕೆಗಳು ಆತನ ವಿರುದ್ಧ ಬರೆದವು. ಹೆಂಡತಿಯ ಕಡೆಯವರು ಆತನ್ನು ಬಹಿರಂಗವಾಗಿ ನಿಂದಿಸಿದರು. ಆಗಲೂ ಆತನ ಪರವಾಗಿ ನಿಂತವರು ಸ್ನೇಹಿತರೇ. ಈ ಆರೋಪವೂ ಮುಂದೆ ಸುಳ್ಳು ಎಂದು ಸಾಬೀತಾಯಿತು. ಆ ಹಂತದಲ್ಲಿ ಶಮಿ ಕ್ರಿಕೆಟ್ ಬಿಟ್ಟು ಹೋಗುವ ತೀರ್ಮಾನಕ್ಕೆ ಬಂದಿದ್ದರು. ಆಗಲೂ ನೆರವಿಗೆ ನಿಂತವರು ಚಿನ್ನದಂತಹ ಗೆಳೆಯರೇ!
ಕೆಲವು ಮಾಧ್ಯಮಗಳು'ಯಾವ ಹುತ್ತದಲ್ಲಿ ಯಾವ ಹಾವೋ! ಯಾರಿಗ್ಗೊತ್ತು?' ಮೊದಲಾದ ಶೀರ್ಷಿಕೆಯನ್ನು ನೀಡಿ ಆತನ ತೇಜೋವಧೆಗೆ ಇಳಿದವು. ಆಗಲೂ ಶಮಿ ಪರವಾಗಿ ನಿಂತವರು ಗೆಳೆಯರೇ! ಈ ಅಗ್ನಿದಿವ್ಯವನ್ನು ಗೆಲ್ಲುವುದು ಶಮಿಗೆ ತುಂಬಾ ಕಷ್ಟವಾಗಿತ್ತು.
ಅದೇ ಶಮಿ ಇಂದು ಭಾರತಕ್ಕೆ ಚಿನ್ನದಂತಹ ಬೌಲರ್ ಆಗಿದ್ದಾರೆ.
-------------------
ಶಮಿ ಜಾಗದಲ್ಲಿ ಬೇರೆ ಯಾರಿದ್ದರೂ ಕ್ರಿಕೆಟಿಗೆ ವಿದಾಯ ಹೇಳಿ ಓಡಿಹೋಗುತ್ತಿದ್ದರು. ಆದರೆ ಮೊಹಮ್ಮದ್ ಶಮಿ ಈ ಸಾಲು ಸಾಲು ಅಗ್ನಿಪರೀಕ್ಷೆಗಳ ನಡುವೆ ಕ್ರಿಕೆಟ್ ಬಿಟ್ಟು ಹೋಗಿಲ್ಲ. ಇಂತಹ ದೈತ್ಯ ಪ್ರತಿಭೆ ಇದ್ದರೂ ಆತನಿಗೆ ಆದ ಅನ್ಯಾಯ ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೆ ನಗುನಗುತ್ತ ಭಾರತವನ್ನು ಪ್ರತೀ ಪಂದ್ಯದಲ್ಲಿಯೂ ಗೆಲ್ಲಿಸುವ ಪ್ರಯತ್ನ ಮಾಡಿದರು, ಯಾವ ಬಂಜರು ಕ್ರಿಕೆಟ್ ಪಿಚ್ಚಿನಲ್ಲಿಯೂ ಸ್ವಿಂಗ್ ಪಡೆದು ಭಾರತದ ನೆರವಿಗೆ ನಿಲ್ಲುವ ಶಮಿಗೆ ಹ್ಯಾಟ್ಸಾಫ್ !
ಅದರಲ್ಲಿಯೂ ಬೇರೆ ಬೇರೆ ಕ್ರಿಕೆಟರುಗಳ ಹೆಂಡತಿಯರು ಮ್ಯಾಚ್ ನೋಡಲು ಬಂದು ತಮ್ಮ ಗಂಡಂದಿರ ನೆರವಿಗೆ ನಿಲ್ಲುತ್ತಿರುವಾಗ, ಒಂದಿಷ್ಟೂ ಬೇಜಾರು ಮಾಡದೆ ಪ್ರತೀ ವಿಕೆಟ್ ಪಡೆದಾಗ ಅತಿ ಅಗ್ರೆಸ್ಸಿವ್ ಪ್ರತಿಕ್ರಿಯೆ ನೀಡದೆ ಅತ್ಯಂತ ಸರಳವಾಗಿ ಖುಷಿಯನ್ನು ಆನಂದಿಸುವ ಅವರ ಸರಳತೆಯನ್ನು ಮೆಚ್ಚಲೇಬೇಕು..
ಪ್ರತಿಯೊಬ್ಬರಿಗೂ ದೋಷಾರೋಪಗಳು, ಅಗ್ನಿಪರೀಕ್ಷೆಗಳು, ತೇಜೋ ವಧೆಗಳು, ಕಾಲೆಳೆಯುವಿಕೆ, ಸರ್ವೇಸಾಮಾನ್ಯ ಅವುಗಳಿಗೆ ಅಂಜಿ ಆತ್ಮಹತ್ಯೆಯಂತಹ ಹೇಡಿ ಕೆಲಸ ಮಾಡಬಾರದು ನಮ್ಮ ಗುರಿ ಸ್ಪಷ್ಟವಾಗಿದ್ದು ಪ್ರಯತ್ನ ಅಚಲವಾಗಿದ್ದರೆ ಬೇಡವೆಂದರೂ ಸಾಧನೆ ಆಗಿಬಿಟ್ಟಿರುತ್ತದೆ..
ಇದು ನಮಗೂ ಸಹ ಮಾದರಿ..
💐💐💐💐💐💐
