ಕಥೆ-247
ಕೆಲಸ ಪ್ರೀತಿಸಿ
ಇದೊಂದು ಫ್ರೆಂಚ್ ಕತೆ.
ಮೂವರು ಬಡಗಿಗಳು ಒಂದು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಕೆಲಸ ನಡೆಯುತ್ತಿದ್ದ ಜಾಗಕ್ಕೆ ಬಂದ ದಾರಿಹೋಕನೊಬ್ಬ ಕುತೂಹಲದಿಂದ – ‘ಇಲ್ಲೇನು ಕೆಲಸ ಮಾಡುತ್ತಿದ್ದೀರಿ?’ ಎಂದು ಮೊದಲನೆಯ ಬಡಗಿಯನ್ನು ಕೇಳಿದ.
‘ನಿನಗೆ ಕಣ್ಣು ಕಾಣಿಸುತ್ತಿಲ್ಲವೇ? ನಾವು ಕಟ್ಟಡ ಕಟ್ಟುತ್ತಿದ್ದೇವೆ. ಇವರು ಕೊಡುವ ಜುಜುಬಿ ಹಣಕ್ಕೆ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಕತ್ತೆಯಂತೆ ದುಡಿಯಬೇಕು. ಇದು ಒಂದು ಕೆಲಸವೇ ಥುತ್!’ ಎಂದ ಅಸಹನೆಯಿಂದ.
ದಾರಿಹೋಕ ಅದೇ ಪ್ರಶ್ನೆಯನ್ನು ಎರಡನೆಯ ಬಡಗಿಗೆ ಕೇಳಿದಾಗ, ಬಡಗಿ ‘ನಾನು ನನ್ನ ಕುಟುಂಬಕ್ಕಾಗಿ ದುಡಿಯುತ್ತಿದ್ದೇನೆ. ಇವರು ನನಗೆ ಸಂಬಳ ಕೊಡುತ್ತಾರೆ. ಆ ಹಣದಲ್ಲಿ ನಾನು ಮಡದಿ-ಮಕ್ಕಳನ್ನು ನೋಡಿಕೊಳ್ಳುತ್ತೇನೆ’ ಎಂದ.
ಮೂರನೆಯ ಬಡಗಿಗೆ ‘ನೀವೇನು ಮಾಡುತ್ತಿದ್ದೀರಿ?’ ಎಂದು ದಾರಿಹೋಕ ಕೇಳಿದ.
‘ಓಹ್, ನಾನು ಚರ್ಚ್ ಕಟ್ಟುವ ಈ ತಂಡದಲ್ಲಿ ಮರದ ಕೆಲಸ ಮಾಡುತ್ತೇನೆ. ನಿಮಗೆ ಗೊತ್ತಾ? ಇದು ಈ ಪ್ರಾಂತ್ಯದ ದೊಡ್ಡ ಚರ್ಚ್ ಅಂತೆ. ನಾನೂ ಇದರ ನಿರ್ಮಾಣದಲ್ಲಿ ಕೆಲಸ ಮಾಡುತ್ತಿರುವುದರಿಂದ ನನಗೆ ಬಹಳ ಖುಷಿಯಾಗುತ್ತಿದೆ’ ಎಂದ ಬಹಳ ಉತ್ಸಾಹದಿಂದ.
ಆ ಮೂವರು ಬಡಗಿಗಳೂ ಒಂದೇ ಕಟ್ಟಡ ನಿರ್ಮಾಣದಲ್ಲಿ ಪಾಲ್ಗೊಂಡವರು. ಎಲ್ಲರೂ ಒಂದೇ ರೀತಿಯ ಕೆಲಸ ಮಾಡುತ್ತಿದ್ದಾರೆ. ಮೊದಲ ಬಡಗಿಗೆ ತಾನು ಮಾಡುತ್ತಿರುವ ಕೆಲಸದ ಬಗ್ಗೆ ಅಸಹನೆಯಿದೆ. ಆತ ಎಲ್ಲದರ ಬಗ್ಗೆಯೂ ದೂರುತ್ತಾ ಇರುತ್ತಾನೆ. ಆತನಿಗೆ ನೆಮ್ಮದಿಯೇ ಇಲ್ಲ.
ಎರಡನೆಯ ಬಡಗಿ ಹಣಕ್ಕಾಗಿ ದುಡಿಯುವವನು. ಕೆಲಸದಲ್ಲಿ ಅಂಥ ಆಸಕ್ತಿಯಿಲ್ಲದಿದ್ದರೂ ಕೂಲಿಗಾಗಿ ಕೆಲಸ ಮಾಡುತ್ತಾನಷ್ಟೆ.
ಮೂರನೆಯ ಬಡಗಿ ಇದ್ದಾನಲ್ಲ ಆತ ಕನಸುಗಾರ. ಒಂದು ದೊಡ್ಡ ಚರ್ಚ್ ನಿರ್ಮಾಣದಲ್ಲಿ ತನ್ನದೂ ಪಾತ್ರವಿದೆ ಎಂದು ಖುಷಿ ಪಡುತ್ತಾ, ತನ್ನ ಕೆಲಸದಲ್ಲಿ ತೃಪ್ತಿ ಕಾಣುವವನು.
ನಾವೆಲ್ಲರೂ ಆ ಮೂರನೆಯ ಬಡಗಿಯಂತೆ ಯೋಚಿಸಲು ಶುರು ಮಾಡಿದರೆ ‘ಅಯ್ಯೋ ಕೆಲಸಕ್ಕೆ ಹೋಗಬೇಕಲ್ಲ’ ಎಂಬ ಬಿಸಿ ನಮ್ಮನ್ನು ಕಾಡುವುದಿಲ್ಲ.
ನಾವು ಮಾಡುತ್ತಿರುವ ಉದ್ಯೋಗ ಕೇವಲ ಜೇಬನ್ನು ತುಂಬಿದರೆ ಸಾಲದು, ಅದು ನಮ್ಮ ಹೃದಯವನ್ನೂ ತುಂಬಬೇಕು. ಬರೀ ಹಣಕ್ಕಾಗಿ ಕೆಲಸ ಮಾಡಬಾರದು. ನಮ್ಮ ಕೆಲಸ ಕೇವಲ ಕಾಸು ಮಾಡುವ ಉದ್ದೇಶದ್ದಾಗಿರಬಾರದು.
‘ಅಯ್ಯೋ ಗುರೂಜಿ, ಅದೆಲ್ಲಾ ಹೇಳಲಷ್ಟೇ ಚಂದ. ಬದುಕಲು ಹಣ ಮಾಡಲೇಬೇಕು’ ಎನ್ನುತ್ತೀರಾ? ಸರಿ ಹಾಗಾದರೆ Find something fulfilling which also fills your pocket full.ಇದು ಒಳ್ಳೆಯ ಐಡಿಯಾ ಅಲ್ಲವೇ?
ಸರಿ ಇದ್ಯಾವುದೂ ಸಾಧ್ಯವಾಗದಿದ್ದರೆ, ಯಾವ ಕೆಲಸ ಮಾಡುತ್ತಿದ್ದೀರೋ ಅದನ್ನೇ ಪ್ರೀತಿಸಿ.
ರಾತ್ರಿ ಕಳೆದು ಬೆಳಗಾಗುವುದರೊಳಗೆ ಬದುಕು ಬದಲಾಗಿ ಬಿಡುವುದಿಲ್ಲ. ನಿರಂತರವಾದ ಸಣ್ಣ ಸಣ್ಣ ಬದಲಾವಣೆಗಳ ಒಂದು ದೊಡ್ಡ ಮೊತ್ತವೇ ‘ಯಶಸ್ವಿ ಜೀವನ’. ಕೊನೆಯದಾಗಿ ಒಂದು ಮಾತು Small things that you do consistently make a big difference’...
ಕೃಪೆ :ವಿಶ್ವವಾಣಿ.