ಕಥೆ-248
ಹೊಗಳಿಕೆ/ತೆಗಳಿಕೆ..
ಅವನೊಬ್ಬ ಚೀನಾ ದೇಶದಲ್ಲಿದ್ದ ಪಂಡಿತ,ತತ್ವಜ್ಞಾನಿ,ಮಹಾನ್ ತರ್ಕಶಾಸ್ತ್ರಜ್ಞ ,ಅತೀ ಹೆಚ್ಚು ಗ್ರಂಥಗಳನ್ನು ಓದಿ ತಿಳುವಳಿಕೆಯುಳ್ಳವನಾಗಿದ್ದನು.
ಆದರೆ ಆತ ಅತ್ಯಂತ ಬಡತನದಲ್ಲಿಯೇ ಹೆಂಡತಿ ಮಕ್ಕಳೊಡನೆ ಜೀವನ ಸಾಗಿಸುತ್ತಿದ್ದನು ಹೀಗಿದ್ದಾಗ ಒಂದು ದಿನ ರಾಜಸಭೆಯಲ್ಲಿ ಒಬ್ಬರು ಈ ಪಂಡಿತನ ಪಾಂಡಿತ್ಯದ ಬಗ್ಗೆ ರಾಜನಿಗೆ ತಿಳಿಸಿದರು
"ಆತನೊಬ್ಬ ಮಹಾನ್ ಪಂಡಿತನಿದ್ದಾನೆ ,ನಿಂತ ನಿಲುವಿನಲ್ಲಿಯೇ ಯಾವುದೇ ವಿಚಾರದ ಬಗ್ಗೆ ಎಲ್ಲರಿಗಿಂತ ಹೊಸ ರೀತಿಯ ಕೊನೆಯ ಮಟ್ಟದ ನಿರ್ಧರಿತ ಮಾತುಗಳನ್ನು ಹೇಳುವಷ್ಟು ಪ್ರಬುದ್ಧನಿದ್ದಾನೆ "
ಹಾಗಾಗಿ ನಿಮಗೂ ಕೂಡ ಪಂಡಿತರೆಂದರೆ ಹೆಚ್ಚು ಪ್ರೀತಿ ಇರುವುದರಿಂದ ಆತನ ಬಡತನಕ್ಕೆ ನೀವು ಏನಾದರೂ ವ್ಯವಸ್ಥೆ ಮಾಡಬೇಕೆಂದು ಶಿಫಾರಸು ಮಾಡಿದರು.
ಆಗ ಆ ದೊರೆ ಸಭಿಕರು ಹೇಳಿದ ಮಾತನ್ನು ಕೇಳಿ ಕೂಡಲೇ ತನ್ನ ಮಂತ್ರಿ ಹಾಗೂ ಕೋಶಾಧಿಕಾರಿಗೆ "ಈ ಕೂಡಲೇ ಆ ಪಂಡಿತನಿಗೆ ಸಹಾಯವಾಗುವಂತೆ ಸ್ವಲ್ಪ ಹಣ,ಊಟಕ್ಕೆ ಧವಸ ,ಧಾನ್ಯ,ಧರಿಸಲು ಬಟ್ಟೆ ಎಲ್ಲವನ್ನೂ ಸಾರೋಟಿನಲ್ಲಿ ತುಂಬಿಸಿಕೊಂಡು ಹೋಗಿ ಕೊಟ್ಟು ಬನ್ನಿ " ಎಂದನು.
ರಾಜಭಟರು ಅವೆಲ್ಲ ವಸ್ತುಗಳನ್ನೂ ಸಾರೋಟಿನಲ್ಲಿ ತುಂಬಿಕೊಂಡು ಪಂಡಿತನ ಮನೆಯ ಮುಂದೆ ಇಳಿಸಲು ಹೋದಾಗ 'ಇವೆಲ್ಲ ಏನು, ಏಕೆ ನನಗೆ ಇವೆಲ್ಲವನ್ನೂ ಕೊಡಲು ತಂದದ್ದು ? ಎಂದು ರಾಜಭಟರನ್ನು ಪ್ರಶ್ನಿಸಿದನು.
ಆಗ ರಾಜಭಟರು "ರಾಜ್ಯದ ನಾಲ್ಕಾರು ಜನ ನಿಮ್ಮ ಬಗ್ಗೆ ಒಳ್ಳೆಯ ಪಂಡಿತರೆಂದು ಕೆಲವು ಮಾತುಗಳನ್ನು ರಾಜರಿಗೆ ಹೇಳಿದ್ದರಿಂದ ಅವರು ಪ್ರಭಾವಿತರಾಗಿ ಇವೆಲ್ಲವನ್ನೂ ನಿಮಗೆ ಕಳುಹಿಸಿದ್ದಾರೆ " ಎಂದು ನಡೆದ ವಿಚಾರ ತಿಳಿಸಿದರು.
ಆಗ ಪಂಡಿತನು 'ಈ ವಸ್ತುಗಳನ್ನು ನಾ ಸ್ವೀಕರಿಸಲಾರೆ ಹಾಗೂ ಈ ವಸ್ತುಗಳನ್ನು ನಾನು ಸ್ವೀಕರಿಸದಿರುವುದಕ್ಕೂ ಕೂಡ ಸೂಕ್ತ ಕಾರಣವಿದೆಯೆಂದು ಸಾದ್ಯವಾದರೆ ಆ ಕಾರಣದ ಕುರಿತು ಯೋಚಿಸಬೇಕೆಂದು ನಿಮ್ಮ ರಾಜನಿಗೆ ತಿಳಿಸಿ' ಎಂದು ಹೇಳಿ ರಾಜಭಟರನ್ನು ವಾಪಸು ಕಳುಹಿಸಿದನು.
ಆಗ ಆ ಪಂಡಿತನ ಹೆಂಡತಿಯು 'ಇದೇ ಏನು ನಿಮ್ಮ ಪಾಂಡಿತ್ಯ , ಮೊದಲೇ ನಾವು ಬಡತನದಲ್ಲಿದ್ದೇವೆ ಇಂತಹಾ ಸಮಯದಲ್ಲಿ ಬಂದ ಈ ಬಳುವಳಿಗಳನ್ನು ಸ್ವೀಕರಿಸುವುದು ಬಿಟ್ಟು ವಾಪಸು ಕಳುಹಿಸಿದಿರಲ್ಲ' ಎಂದಳು.
ಆಗ ಆ ಪಂಡಿತನು "ಆ ರಾಜನು ನನ್ನ ವಿಚಾರವಾಗಲೀ ಪಾಂಡಿತ್ಯವನ್ನಾಗಲೀ ನೇರವಾಗಿ ಕಣ್ಣಾರೆ ವಿಮರ್ಶಿಸಿ ತಿಳಿದಿಲ್ಲ , ನನ್ನ ವಿಚಾರವನ್ನು ಮೂರನೆಯವರ ಮಾತಿನಿಂದ ತಿಳಿದಿದ್ದಾನೆ ಹಾಗಾಗಿ ನನಗೆ ಆ ಬಳುವಳಿಗಳು ಬೇಡ ಎನಿಸಿತು ,ಇಂದು ಮೂರನೆಯವರ ಮಾತು ಕೇಳಿ ಬಹುಮಾನ ಕಳುಹಿಸಿದ್ದಾನೆ ಹಾಗೆಯೇ ನಾಳೆ ದಿನ ಮೂರನೆಯವರ ಮಾತು ಕೇಳಿ ತಲೆ ತೆಗೆಯಲೂ ಕಳುಹಿಸುತ್ತಾನೆ ,ಈಗ ಈ ಬಳುವಳಿ ಒಪ್ಪಿದೆನೆಂದರೆ ನಾಳೆ ಅವನಿಂದ ಬರುವ ತೆಗಳಿಕೆಯನ್ನೂ ಒಪ್ಪಲೇಬೇಕಾಗುತ್ತದೆ .ಇಂತಹ ರಾಜನ ರಾಜ್ಯದಲ್ಲಿರುವುದೇ ನಮಗೆ ಕ್ಷೇಮವಲ್ಲ ನೆನಪಿಟ್ಟುಕೋ....
"ಮೂರನೆಯವರ ಬಾಯಿಂದ ಬರುವ ಹೊಗಳಿಕೆಯನ್ನು ನಂಬುವುದು ಹಾಗೂ ಮೂರನೆಯವರ ಬಾಯಿಂದ ಬರುವ ತೆಗಳಿಕೆಯನ್ನು ನಂಬುವುದು ಎರಡೂ ಸಹ ಸಮಾನವಾದ ತಪ್ಪುಗಳು ಎನ್ನುತ್ತದೆ ತರ್ಕಶಾಸ್ತ್ರ" ಅರ್ಥವಾಯಿತೇ ಎಂದನು..
ಈಗ ಹೇಳಿ ಮೂರನೆಯವರ ಬಾಯಿಂದ ಬರುವ ಹೊಗಳಿಕೆ ನಂಬುತ್ತೀರಾ ಅಥವಾ ತೆಗಳಿಕೆ ನಂಬುತ್ತೀರಾ ?
ಯೋಚನೆ ನಿಮಗೇ ಬಿಟ್ಟದ್ದು.
ಕೃಪೆ:ಆಚಾರ್.