ಕಥೆ-249
ತರ್ಕದಲ್ಲಿ ಗೆದ್ದು, ವರ್ತನೆಯಲ್ಲಿ ಸೋತವರು..
ಚೀನಾದ ಒಂದು ಊರಿನಲ್ಲಿ ವಯಸ್ಸಾದ ವೈದ್ಯರಿದ್ದರಂತೆ. ತಲೆ ನೋವಾದರೂ, ಕಾಲು ನೋವಾದರೂ ಅಲ್ಲಿ ಔಷಧ ಕೊಡುವವರು ಅವರೊಬ್ಬರೇ. ಒಂದು ಮಧ್ಯರಾತ್ರಿ ಒಬ್ಬರು ಬಂದು ‘ನಾನು ಇಲ್ಲಿನ ಶ್ರೀಮಂತ. ನನ್ನ ಹೆಂಡತಿಗೆ ತೀವ್ರ ಕಾಯಿಲೆ. ನೀವು ಬಂದು ಚಿಕಿತ್ಸೆ ಕೊಡಬೇಕು’ಎಂದು ಕೇಳಿಕೊಂಡರು. ವೈದ್ಯರು‘ಮಧ್ಯರಾತ್ರಿಯಲ್ಲಿ ಯಾವ ಚಿಕಿತ್ಸೆಯನ್ನೂ ಕೊಡಲಾಗುವುದಿಲ್ಲ. ನಾಳೆ ಬೆಳಗ್ಗೆ ಬರುತ್ತೇನೆ’ಎಂದರು.
ಶ್ರೀಮಂತ ‘ನೀವು ಬರುವುದಿಲ್ಲವೆಂದು ಹೇಳಬೇಡಿ. ನೀವು ನನ್ನ ಹೆಂಡತಿಯನ್ನು ಬದುಕಿಸಿದರೆ ನಿಮಗೆ ಒಂದು ಲಕ್ಷ ನಾಣ್ಯಗಳನ್ನು ಕೊಡುತ್ತೇನೆ’ಎಂದರು. ಲಕ್ಷ ಎಂದರೆ ಯಾರ ಕಿವಿ ನೆಟ್ಟಗಾಗುವುದಿಲ್ಲ ಹೇಳಿ? ವೈದ್ಯರು ‘ನಿಮ್ಮ ಹೆಂಡತಿಯ ಪ್ರಾಣ ಉಳಿಸಿದರೆ ಒಂದು ಲಕ್ಷ ನಾಣ್ಯಗಳನ್ನು ಕೊಡುತ್ತಿದ್ದೀರಿ ಎನ್ನುತ್ತಿದ್ದೀರಿ! ಅವರ ಪ್ರಾಣವನ್ನುಳಿಸಲು ಸಾಧ್ಯವಾಗದಿದ್ದರೆ ಆಗೇನು ಮಾಡುತ್ತೀರಿ?’ಎಂದು ಪ್ರಶ್ನಿಸಿದರು.
ಶ್ರೀಮಂತ ‘ನೀವು ಆಕೆಯನ್ನು ಬದುಕಿಸಿದರೂ, ಸಾಯಿಸಿದರೂ ಒಂದು ಲಕ್ಷ ಕೊಟ್ಟೇ ಕೊಡುತ್ತೇನೆ. ಈಗ ನಾನು ಆಕೆಗೆ ಚಿಕಿತ್ಸೆ ಕೊಡಿಸುವುದು ಮುಖ್ಯ. ಇದು ನನ್ನ ಕರ್ತವ್ಯದ ಪ್ರಶ್ನೆ. ಆಕೆಯ ಸಾವು-ಬದುಕಿನ ಪ್ರಶ್ನೆಯಲ್ಲ’ಎಂದರು. ವೈದ್ಯರು ಮಧ್ಯರಾತ್ರಿಯಲ್ಲಿ ಶ್ರೀಮಂತರ ಮನೆಗೆ ಹೋದರು. ಆಕೆ ಚಿಕಿತ್ಸೆಗೆ ಸ್ಪಂದಿಸಲಾರದ ಸ್ಥಿತಿ ತಲುಪಿದ್ದರು. ಆದರೂ ವೈದ್ಯರು ತಮ್ಮ ಕೈಲಾದ ಚಿಕಿತ್ಸೆ ನೀಡಿ ಹಿಂತಿರುಗಿದರು. ಚಿಕಿತ್ಸೆ ಫಲಕಾರಿಯಾಗಲಿಲ್ಲ. ಬೆಳಗಿನ ಜಾವ ಆಕೆ ಕೊನೆಯುಸಿರೆಳೆದರು ಎನ್ನುವ ವಿಷಯ ವೈದ್ಯರಿಗೆ ಮರುದಿನ ಗೊತ್ತಾಯಿತು. 15 ದಿನಗಳ ನಂತರ ಅವರು ಶ್ರೀಮಂತರಿಗೆ, ವಾಗ್ದಾನದ ಪ್ರಕಾರ ಒಂದು ಲಕ್ಷ ಶುಲ್ಕ ಕಳುಹಿಸಿ ಕೊಡಲು ತಿಳಿಸಿದರು. ಆದರೆ ಶ್ರೀಮಂತರು, ‘ನಾನು ನಿಮಗೆ ಹಣವನ್ನೇನೂ ಕೊಡಬೇಕಾಗಿಲ್ಲ’ಎಂದುಬಿಟ್ಟರು!
ವೈದ್ಯರು ನ್ಯಾಯಾಲಯದ ಮೆಟ್ಟಿಲೇರಿದರು. ಅಲ್ಲಿ ‘ಶ್ರೀಮಂತರು ತಮ್ಮ ಪತ್ನಿ ಬದುಕಲಿ ಅಥವಾ ಸಾಯಲಿ ಒಂದು ಲಕ್ಷ ನಾಣ್ಯಗಳನ್ನು ಕೊಡುತ್ತೇನೆಂದು ವಾಗ್ದಾನ ನೀಡಿದ್ದರು. ಈಗ ಕೊಡುತ್ತಿಲ್ಲ’ಎಂದು ದೂರಿತ್ತರು. ನ್ಯಾಯಾಧೀಶರು ಇಬ್ಬರನ್ನೂ ಕರೆಸಿದರು. ಅವರ ಮುಂದೆಯೇ ಶ್ರೀಮಂತರು ವೈದ್ಯರನ್ನು ‘ನನ್ನ ಹೆಂಡತಿಗೆ ಚಿಕಿತ್ಸೆ ಕೊಡಲು ವೈದ್ಯರನ್ನು ಕರೆಸಿದ್ದು ನಿಜ. ನನ್ನ ಹೆಂಡತಿಯನ್ನು ಬದುಕಿಸಿದರೂ, ಸಾಯಿಸಿದರೂ ಒಂದು ಲಕ್ಷ ನಾಣ್ಯಗಳನ್ನು ಕೊಡುತ್ತೇನೆಂದು ಹೇಳಿದುದೂ ನಿಜ. ಈಗ ನನ್ನ ಪ್ರಶ್ನೆಗೆ ವೈದ್ಯರು ಉತ್ತರಿಸಲಿ. ನೀವು ನನ್ನ ಹೆಂಡತಿಯನ್ನು ಬದುಕಿಸಿದ್ದೀರಾ?’ಎಂದು ಕೇಳಿದರು. ವೈದ್ಯರು ಇಲ್ಲವೆಂದು ತಲೆ ಅಲ್ಲಾಡಿಸಿದರು. ಶ್ರೀಮಂತರು ‘ನೀವು ನನ್ನ ಹೆಂಡತಿಯನ್ನು ಸಾಯಿಸಿದ್ದೀರಾ?’ ಎಂದು ಕೇಳಿದಾಗ, ವೈದ್ಯರು ಅದಕ್ಕೂ ‘ಇಲ್ಲ’ಎಂದರು.
ತಕ್ಷಣ ಶ್ರೀಮಂತ ನ್ಯಾಯಾಧೀಶರನ್ನು ಕುರಿತು ‘ವೈದ್ಯರು ನನ್ನ ಹೆಂಡತಿಯನ್ನು ಬದುಕಿಸಿದರೂ, ಸಾಯಿಸಿದರೂ ಒಂದು ಲಕ್ಷ ನಾಣ್ಯಗಳನ್ನು ಕೊಡುತ್ತೇನೆಂದು ಹೇಳಿದ್ದು ನಿಜ. ಈಗ ವೈದ್ಯರು ತಮ್ಮ ಮುಂದೆಯೇ ಅವರು ನನ್ನ ಹೆಂಡತಿಯನ್ನು ಬದುಕಿಸಲೂ ಇಲ್ಲ, ಸಾಯಿಸಲೂ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ. ಆದ್ದರಿಂದ ನಾನು ಅವರಿಗೆ ಒಂದು ಲಕ್ಷ ಕೊಡಬೇಕಿಲ್ಲ’ಎಂದು ವಾದಿಸಿದರು. ನ್ಯಾಯಾಧೀಶರು ವೈದ್ಯರ ಮನವಿಯನ್ನು ತಳ್ಳಿ ಹಾಕಿದರಲ್ಲದೆ, ಶ್ರೀಮಂತರು ಒಂದು ಲಕ್ಷ ನಾಣ್ಯ ಕೊಡಬೇಕಾಗಿಲ್ಲ ಎಂದು ತೀರ್ಮಾನವಿತ್ತರು.
ಈ ಕತೆಯಲ್ಲಿನ ವೈದ್ಯ ಮತ್ತು ಶ್ರೀಮಂತ ಇಬ್ಬರೂ ಕೇವಲ ದುಡ್ಡೇ ದೊಡ್ಡಪ್ಪ ಎಂದು ಕೊಂಡವರು. ಇಬ್ಬರೂ ತಮ್ಮ ಕರ್ತವ್ಯದ ಅಥವಾ ಮಾತಿನ ಬಗ್ಗೆ ಗಮನ ಕೊಡದವರು. ತರ್ಕದಲ್ಲಿ ಇಬ್ಬರೂ ಸರಿಯಿರಬಹುದು! ಆದರೆ ವರ್ತನೆಯಲ್ಲಿ ಅವರವರು ತಮ್ಮ ಪಾತ್ರವನ್ನು ಜವಾಬ್ದಾರಿಯುತವಾಗಿ ವರ್ತಿಸಬೇಕಾಗಿತ್ತು ಮತ್ತು ನಿಭಾಯಿಸಬೇಕಾಗಿತ್ತು.. ಶ್ರೀಮಂತನಿಗೆ ಹಣದ ಜಂಬ ಸರಿಯಲ್ಲ.. ವೈದ್ಯರಿಗೆ ಹಣದ ಮೋಹ ಸರಿಯಲ್ಲ..
ಕೃಪೆ :ಷಡಕ್ಷರಿ.