ಕಥೆ-251
ರಾಷ್ಟ್ರೀಯ ಗಣಿತ ದಿನ
(ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಸವಿನೆನಪಿನಲ್ಲಿ)
20 ನೇ ಶತಮಾನದ ಶ್ರೇಷ್ಠ ಗಣಿತಜ್ಞರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ರಾಮಾನುಜನ್ ಅವರು ಸಂಖ್ಯಾ ಸಿದ್ಧಾಂತ ಮತ್ತು ಗಣಿತದ ವಿಶ್ಲೇಷಣೆಗೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದಾರೆ. ರಾಮಾನುಜನ್ ಅವರ ಜೀವನ ಮತ್ತು ಈ ಎಲ್ಲಾ ಸಾಧನೆಗಳನ್ನು ಮೆಲುಕು ಹಾಕುವ ಸುದಿನ.
ಶ್ರೀನಿವಾಸ್ ರಾಮಾನುಜನ್ ಅವರು ಡಿಸೆಂಬರ್ 22, 1887 ರಂದು ತಮಿಳುನಾಡಿನ ಈರೋಡ್‌ನಲ್ಲಿ ತಮಿಳು ಬ್ರಾಹ್ಮಣ ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿದರು.
ಚಿಕ್ಕ ವಯಸ್ಸಿನಲ್ಲೇ ಗಣಿತದ ಬಗ್ಗೆ ಒಲವು ಬೆಳೆಸಿಕೊಂಡಿದ್ದರು. 12ನೇ ವಯಸ್ಸಿನಲ್ಲಿ ತ್ರಿಕೋನಮಿತಿಯನ್ನು ಕರಗತ ಮಾಡಿಕೊಂಡ ನಂತರ, ಅವರು ಕುಂಭಕೋಣಂನ ಸರ್ಕಾರಿ ಕಲಾ ಕಾಲೇಜಿನಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಹರಾಗಿದ್ದರು.
ಭಾರತದಲ್ಲಿ ಪ್ರತಿ ವರ್ಷ ಡಿಸೆಂಬರ್ 22 ರಂದು ‘ರಾಷ್ಟ್ರೀಯ ಗಣಿತ ದಿನ’ ಆಚರಣೆ ಮಾಡಲಾಗುತ್ತದೆ. ಈ ದಿನವನ್ನು ಖ್ಯಾತ ಗಣಿತಶಾಸ್ತ್ರಜ್ಞ ಶ್ರೀನಿವಾಸ್ ರಾಮಾನುಜನ್ ಅವರ ಸವಿನೆನಪಿಗಾಗಿ ಆಚರಣೆ ಮಾಡಲಾಗುತ್ತದೆ. ಡಿಸೆಂಬರ್ 22 ಅನ್ನು ರಾಷ್ಟ್ರೀಯ ಗಣಿತ ದಿನ’ವಾಗಿ ಆಚರಿಸಲು 2012ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಕರೆಕೊಟ್ಟರು. ಅಂದಿನಿಂದ ಇಂದಿನವರೆಗೂ ಈ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
* 1912 ರಲ್ಲಿ ಮದ್ರಾಸ್ ಪೋರ್ಟ್ ಟ್ರಸ್ಟ್‌ನಲ್ಲಿ ಗುಮಾಸ್ತರಾಗಿ ಕೆಲಸ ಮಾಡಲು ಪ್ರಾರಂಭಿಸಿದ ನಂತರ ಗಣಿತಶಾಸ್ತ್ರದಲ್ಲಿ ಅವರ ಜ್ಞಾನ ಬೆಳಕಿಗೆ ಬಂದಿತು.
* 1913 ರಲ್ಲಿ ಬ್ರಿಟಿಷ್ ಗಣಿತಶಾಸ್ತ್ರಜ್ಞ ಜಿ.ಹೆಚ್ ಹಾರ್ಡಿಗೆ ಸಂಬಂಧಿಕರ ಸಲಹೆ ಮೇರೆಗೆ ಶ್ರೀನಿವಾಸ ರಾಮಾನುಜನ್ ಪತ್ರ ಬರೆಯುತ್ತಾರೆ. ಗಣಿತ ವಿಷಯದಲ್ಲಿ ಇವರಿಗೆ ಇರುವ ಪ್ರತಿಭೆಯನ್ನು ಅರಿತ ಹಾರ್ಡಿ, ಅವರನ್ನು ಲಂಡನ್‌ಗೆ ಆಹ್ವಾನ ಮಾಡುತ್ತಾರೆ. ನಂತರ ಕೇಂಬ್ರಿಡ್ಜ್‌ನ ಟ್ರಿನಿಟಿ ಕಾಲೇಜಿಗೆ ಸೇರಿಕೊಂಡ ರಾಮಾನುಜನ್ ಬದುಕೇ ಬದಲಾಗುತ್ತದೆ.
ರಾಮಾನುಜನ್ ಅವರು 1916 ರಲ್ಲಿ ಟ್ರಿನಿಟಿ ಕಾಲೇಜಿನಿಂದ B.Sc ಪದವಿಯನ್ನು ಪಡೆದರು.
* 1917 ರಲ್ಲಿ ರಾಮಾನುಜನ್ ಅವರು ಲಂಡನ್ ಮ್ಯಾಥಮೆಟಿಕಲ್ ಸೊಸೈಟಿಗೆ ಚುನಾಯಿತರಾದರು. ಸಂಖ್ಯೆಗಳ ಸಿದ್ಧಾಂತದ ಮೇಲಿನ ಸಂಶೋಧನೆಗಾಗಿ ಪ್ರತಿಷ್ಠಿತ ರಾಯಲ್ ಸೊಸೈಟಿಗೆ ಇವರು ಆಯ್ಕೆಯಾದರು.
* 1918 ರಲ್ಲಿ ರಾಯಲ್ ಸೊಸೈಟಿಯ ಫೆಲೋ ಗೌರವವನ್ನೂ ಅವರು ಪಡೆದುಕೊಳ್ಳುತ್ತಾರೆ. ಜತೆಗೆ ಈ ಗೌರವ ಪಡೆದುಕೊಂಡ ಅತಿ ಕಿರಿಯ ವ್ಯಕ್ತಿ ಮತ್ತು ಭಾರತದ ಮೊದಲ ವ್ಯಕ್ತಿ ಎಂಬ ಹಿರಿಮೆಗೂ ಗಣಿತಶಾಸ್ತ್ರಜ್ಞ ರಾಮಾನುಜನ್ ಪಾತ್ರರಾಗುತ್ತಾರೆ.
ನಂತರ 1919ರಲ್ಲಿ ರಾಮಾನುಜನ್ ತಾಯ್ನಾಡು ಭಾರತಕ್ಕೆ ಮರಳುತ್ತಾರೆ. ಲಂಡನ್‌ನ ಹವಾಮಾನ ಮತ್ತು ಆಹಾರ ಪದ್ಧತಿ ರಾಮಾನುಜನ್ ರವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತು. ಆರೋಗ್ಯ ದಿನೇ ದಿನೇ ಹದಗೆಟ್ಟು ಕೇವಲ 32 ವರ್ಷವಿದ್ದಾಗಲೇ 1920 ರ ಏಪ್ರಿಲ್ 26 ರಂದು ಕೊನೆಯುಸಿರೆಳೆದರು.
* ರಾಮಾನುಜನ್ ರವರ ಗಣಿತಕ್ಕೆ ಸಂಬಂಧಿಸಿದ ಪೇಪರ್‌ಗಳನ್ನು 1911 ರಲ್ಲಿ ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿಯ ಜರ್ನಲ್‌ನಲ್ಲಿ ಪ್ರಕಟಿಸಲಾಗುತ್ತದೆ.
ಅವರು ಸುಮಾರು 3900 ಫಲಿತಾಂಶಗಳನ್ನು ಪ್ರಮುಖವಾಗಿ ಗುರುತುಗಳು ಮತ್ತು ಸಮೀಕರಣಗಳನ್ನು ಯಾರ ಸಹಾಯವು ಇಲ್ಲದೆ ಸ್ವತಂತ್ರವಾಗಿ ಸಂಗ್ರಹಿಸಿದ್ದರು.
ಅವುಗಳಲ್ಲಿ ರಾಮಾನುಜನ್ ಪ್ರೈಮ್, ರಾಮಾನುಜನ್ ಥೀಟಾ ಫಂಕ್ಷನ್, ವಿಭಜನಾ ಸೂತ್ರಗಳು ಮತ್ತು ಮಾಕ್ ಥೀಟಾ ಫಂಕ್ಷನ್‌ಗಳು ಸೇರಿವೆ.
ರಾಮಾನುಜನ್ ಕುರಿತಾದ ʼದಿ ಮ್ಯಾನ್ ಹೂ ನ್ಯೂ ಇನ್ಫಿನಿಟಿ’ ಚಿತ್ರವು 2015 ರಲ್ಲಿ ಬಿಡುಗಡೆಯಾಯಿತು,
ಚಿತ್ರವು ರಾಮಾನುಜನ್ ಅವರ ಬಾಲ್ಯ, ಬ್ರಿಟನ್‌ನಲ್ಲಿ ಅವರ ವೃತ್ತಿಜೀವನ ಮತ್ತು ಗಣಿತದ ಮೇಲಿನ ಅವರ ಜ್ಞಾನವನ್ನು ಚಿತ್ರರೂಪದಲ್ಲಿ ಕಟ್ಟಿಕೊಟ್ಟಿದೆ..
ಶ್ರೀನಿವಾಸ ರಾಮಾನುಜನ್ ಬದುಕಿದ್ದು ಕೇವಲ 32 ವರ್ಷ ಸಾಧನೆ ಮಾತ್ರ ಮನುಕುಲ ಇರುವವರೆಗೂ ಶಾಶ್ವತವಾಗಿರುತ್ತದೆ..
ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ನಮಗೂ ಸಹ ಸಾಧನೆಗೆ ಸ್ಫೂರ್ತಿ ಆಗಿದೆ..
ನಮ್ಮ ದೇಶ ಕಂಡ ಶ್ರೇಷ್ಠ ಗಣಿತಶಾಸ್ತ್ರಜ್ಞ ಶ್ರೀನಿವಾಸ್ ರಾಮಾನುಜನ್..
ನಮ್ಮ ದೇಶ ನಮ್ಮ ಹೆಮ್ಮೆ ..
👍💐💐💐💐💐