Friday, March 15, 2024

 ಕಥೆ-336

ಹೇಳುವುದನ್ನು ಇಂದೇ ಹೇಳಿ! ಇಂದು ಹೇಳುವುದನ್ನು ಈಗಲೇ ಹೇಳಿ!

ನಾಳೆ ಬಪ್ಪುದು ನಮಗಿಂದೇ ಬರಲಿ ಎಂಬ ವಚನದ ಸಾಲುಗಳನ್ನು ಕೊಂಚ ಬದಲಾಯಿಸಿ ಮೇಲಿನ ವಾಕ್ಯಗಳನ್ನು ಬರೆಯಲಾಗಿದೆ. ಹಾಗೇಕೆ ಎಂಬುದನ್ನು ತಿಳಿಸುವ ಮುಲ್ಲಾ ನಸ್ರುದ್ದೀನರ ಪುರಾತನ ಕತೆಯೊಂದು ಇಲ್ಲಿದೆ. ಹದಿಮೂರನೆಯ ಶತಮಾನದಲ್ಲಿ ಟರ್ಕಿ ದೇಶದಲ್ಲಿ ಬಾಳಿ ಬದುಕಿದ ಮುಲ್ಲಾ ನಸ್ರುದ್ದೀನರು ಅಪಾರವಾದ ಪಾಂಡಿತ್ಯ ಪಡೆದಿದ್ದವರು. ಆದರೆ ಅವರ ಹಾಸ್ಯಪ್ರಜ್ಞೆಯಿಂದಾಗಿ ಅವರು ಹೆಚ್ಚು ಪ್ರಸಿದ್ಧರಾಗಿದ್ದರು. ಗಹನವಾದ ತತ್ತ್ವ ಗಳನ್ನು ಅವರು ನವಿರಾದ ಹಾಸ್ಯ ಕತೆಗಳ ಮೂಲಕ ತಿಳಿಸಿ ಕೊಡುತ್ತಿದ್ದರು. ಎಲ್ಲರಿಗೂ ಆಗುವಂತೆ ಅವರಿಗೆ ವಯಸ್ಸಾಯಿತು.

ವೃದ್ಧಾಪ್ಯದ ಕಾಯಿಲೆಗಳು ಕಾಡತೊಡಗಿದವು. ಅವು ಎಂಥ ಚಿಕಿತ್ಸೆಗೂ ಜಗ್ಗಲಿಲ್ಲ. ವೈದ್ಯರು ಇನ್ನು ನಾವು ಮಾಡುವುದು ಏನೂ ಉಳಿದಿಲ್ಲ. ಹತ್ತಿರದ ನೆಂಟರಿಷ್ಟರಿಗೆಲ್ಲ ಅಂತಿಮ ದರ್ಶನ ಪಡೆಯಲು ಹೇಳಬಹುದು ಎಂದುಬಿಟ್ಟರು. ಇದನ್ನು ತಿಳಿದುಕೊಂಡ ಬಂಧು- ಬಳಗದವರು ಬಹಳಷ್ಟು ಜನ ಬರುತ್ತಿದ್ದರು. ಮುಲ್ಲಾರವರ ಯೋಗಕ್ಷೇಮ ವಿಚಾರಿಸಿಕೊಂಡು ಸಂದರ್ಭೋಚಿತ ಮಾತುಗಳನ್ನಾಡಿ ಹೋಗುತ್ತಿದ್ದರು. ಹಾಗೆ ಬಂದ ಒಂದು ಗುಂಪಿನಲ್ಲಿ ಮುಲ್ಲಾರ ಆಪ್ತಮಿತ್ರರಿದ್ದರು. ವ್ಯವಹಾರದ ಸ್ನೇಹಿತರಿದ್ದರು. ಕೆಲವರು ಮೇಲೆ ವಿಶ್ವಾಸ ತೋರುವ, ಆದರೆ ಒಳಗೊಳಗೇ ಮುಲ್ಲಾರನ್ನು ಅಷ್ಟೇನೂ ಇಷ್ಟಪಡದವರೂ ಇದ್ದರು. ಮುಲ್ಲಾರವರನ್ನು ನೋಡಿದ ಒಬ್ಬರು ‘ಛೇ! ಅನಾರೋಗ್ಯದಿಂದ ಕಣ್ಮುಚ್ಚಿ ಮಲಗಿರುವ ಮುಲ್ಲಾರನ್ನು ನೋಡಿದರೆ ಅವರ ನಗುಮುಖ, ಹಾಸ್ಯಪ್ರಜ್ಞೆಗಳು ನೆನಪಿಗೆ ಬರುತ್ತವೆ. ಅಯ್ಯೋ ಎನಿಸುತ್ತದೆ’ ಎಂದರು. ಅವರ ಮಾತುಗಳನ್ನು ಕೇಳಿಸಿಕೊಂಡ ಮುಲ್ಲಾರವರು ಕಣ್ತೆರೆದು ಅವರತ್ತ ನೋಡಿ ನಸುನಕ್ಕು ಮತ್ತೆ ಕಣ್ಮುಚ್ಚಿ ಮಲಗಿಕೊಂಡರು. ಮತ್ತೊಬ್ಬರು ‘ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಹಿಂದೆ-ಮುಂದೆ ನೋಡದ ಮುಲ್ಲಾರವರೇ ನಿಸ್ಸಹಾಯಕರಾಗಿ ಮಲಗಿರುವುದನ್ನು ಕಂಡರೆ ಕರುಳು ಹಿಂಡಿದಂತಾಗುತ್ತದೆ’ ಎಂದರು.

ಮುಲ್ಲಾರವರು ಮತ್ತೆ ಕಣ್ತೆರೆದು ಅವರತ್ತಲೂ ನೋಡಿ ನಕ್ಕರು. ಮತ್ತೆ ಕಣ್ಮುಚ್ಚಿಕೊಂಡು ಮಲಗಿದರು. ನಾಲ್ಕನೆಯವರು ‘ಮುಲ್ಲಾರವರು ನಮಗೆಲ್ಲ ಎಂಥ ಒಳ್ಳೆಯ ಗೆಳೆಯರಾಗಿದ್ದರು ಎಂಬುದನ್ನು ನೆನಪಿಸಿಕೊಂಡರೂ ಸಾಕು, ನನಗೆ ಅಳು ಉಕ್ಕಿ ಬರುತ್ತದೆ’ ಎಂದರು. ಅವರೆಲ್ಲರ ಮಾತುಗಳನ್ನು ಕೇಳಿದ ಮುಲ್ಲಾರವರು ಕಷ್ಟಪಟ್ಟು ಹಾಸಿಗೆಯಿಂದ ಎದ್ದು ಕುಳಿತರು. ಗಟ್ಟಿಯಾಗಿ ನಕ್ಕರು. ‘ನನ್ನದು ನಗು ಮುಖ. ನನಗೆ ಒಳ್ಳೆಯ ಹಾಸ್ಯಪ್ರಜ್ಞೆ ಇದೆ. ನಾನು ಕಷ್ಟದಲ್ಲಿರುವ ಸ್ನೇಹಿತರಿಗೆ ಸಹಾಯ ಮಾಡುತ್ತಿದ್ದೆ. ಬಹಳ ಓದಿಕೊಂಡಿದ್ದೆ. ಒಳ್ಳೆಯ ಗೆಳೆಯನಾಗಿದ್ದೆ ಎಂದೆಲ್ಲ ಹೇಳಲು ನೀವು ನನ್ನ ಬದುಕಿನ ಕೊನೆಯ ಗಳಿಗೆಯವರೆಗೂ ಕಾದಿದ್ದಿರಾ? ನಾನು ಆರೋಗ್ಯವಾಗಿದ್ದಾಗಲೇ, ಚಟುವಟಿಕೆಯಿಂದ ಬದುಕುತ್ತಿದ್ದಾಗಲೇ, ಈ ಒಳ್ಳೆಯ ಮಾತುಗಳನ್ನು ಹೇಳಿದ್ದರೆ ನನ್ನ ಬದುಕು ಇನ್ನೂ ಹಸನಾಗಿರುತ್ತಿತ್ತು. ಆ ಗುಣಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದೆ. ಆಕಸ್ಮಿಕವಾಗಿ ಆ ಗುಣಗಳು ಯಾವುವಾದರೂ ನನ್ನಲ್ಲಿ ಇರದಿದ್ದರೆ ನಾನು ಅಂಥ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ. ಈಗ ನಾನು ಸಾಯುತ್ತಾ ಬಿದ್ದಿದ್ದೇನೆ. ಕೊನೆಯ ಉಸಿರು ಎಳೆಯುತ್ತಿದ್ದೇನೆ. ಈಗ ಇಂಥ ಒಳ್ಳೆಯ ಮಾತುಗಳನ್ನು ಹೇಳುತ್ತಿದ್ದೀರಿ. ಇದರಿಂದ ಸಾಯುತ್ತಿರುವ ನನಗೂ ಪ್ರಯೋಜನವಿಲ್ಲ.

ಬದುಕಿರುವ ನಿಮಗೂ ಪ್ರಯೋಜನವಿಲ್ಲ’ ಎಂದು ಕಷ್ಟಪಟ್ಟು ಹೇಳಿದರು. ಇಷ್ಟೊಂದು ಮಾತನಾಡಿದುದರಿಂದ ಅವರಿಗೆ ಸಾಕಷ್ಟು ಶ್ರಮವಾಗಿರಬೇಕು. ಅವರು ಮತ್ತೆ ಮಲಗಿದರು. ಕಣ್ಮುಚ್ಚಿದರು. ಮತ್ತೆ ಕಣ್ತೆರೆಯಲೇ ಇಲ್ಲವಂತೆ. ಈಗ ಯೋಚಿಸಿ! ಮುಲ್ಲಾ ನಸ್ರುದ್ದೀನರ ಈ ಕತೆಯಲ್ಲಿ ಕೇವಲ ತಮಾಷೆಯಿದೆಯೇ ಅಥವಾ ನಮ್ಮನ್ನು ಯೋಚಿಸುವಂತೆ ಮಾಡುವ ವಿಚಾರ ವಿದೆಯೇ? ನಾವು ಮುಲ್ಲಾರ ಬಂಧು-ಬಳಗದವರಂತೆ ಅಲ್ಲ ಅಲ್ಲವೇ? ನಮ್ಮ ಬಂಧು-ಬಳದವರ ಬಗ್ಗೆ ಅಥವಾ ಗೆಳೆಯರ ಬಗ್ಗೆ ಒಳ್ಳೆಯ ಮಾತುಗಳನ್ನಾಡಲು ನಾವು, ಅವರು ಕೊನೆಯುಸಿರು ಬಿಡುವ ಗಳಿಗೆಯವರೆಗೆ ಕಾಯುವುದಿಲ್ಲ ಅಲ್ಲವೇ? ನಾಳೆ ಹೇಳಬೇಕಾದ ಒಳ್ಳೆಯ ಮಾತುಗಳನ್ನು ಇಂದೇ ಹೇಳುತ್ತೇವೆ! ಇಂದು ಹೇಳಬೇಕಾದುದನ್ನು ಈಗಲೇ ಹೇಳುತ್ತೇವೆ! ಅಹುದಾದರೆ ಅಹುದೆನ್ನಿ! ಇಲ್ಲವಾದರೆ ಇಲ್ಲವೆನ್ನಿ! ಅಂಥ ಮಾತುಗಳನ್ನು ಹೇಳಬೇಕಾದವರ ಪಟ್ಟಿಯನ್ನು ಇಂದೇ ಮಾಡಿಕೊಳ್ಳೋಣವೇ?

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು