ಕಥೆ-337
ಕುರುಡನ ಮಗ ಕುರುಡ
ಒಮ್ಮೆ ಪಾಂಡವರ ರಾಜ್ಯದಲ್ಲಿ ಉತ್ಸವ ಏರ್ಪಡಿಸಲಾಗಿತ್ತು. ಅದಕ್ಕೆ ಕೌರವರನ್ನು ಆಮಂತ್ರಿಸಲಾಗಿತ್ತು. ದುರ್ಯೋಧನನು ತನ್ನ ಎಲ್ಲ ಅಣ್ಣ ತಮ್ಮಂದಿರೊಂದಿಗೆ ಅಲ್ಲಿಗೆ ಆಗಮಿಸಿದ. ಅಲ್ಲಿದ್ದ ಭವ್ಯ ಮಂಟಪದಲ್ಲಿ ಅವರಿಗೆಲ್ಲ ಆಸನಗಳನ್ನು ಹಾಕಲಾಗಿತ್ತು. ಇನ್ನೊಂದೆಡೆ ಪಂಚ-ಪಾಂಡವರೆಲ್ಲ ಕುಳಿತಿದ್ದರು. ಅಲ್ಲಿ ದ್ರೌಪದಿಯೂ ಕುಳಿತಿದ್ದಳು. ಆ ಸಭಾಭವನವನ್ನು ಚಿತ್ರ ವಿಚಿತ್ರವಾಗಿ ಅಲಂಕರಿಸಲಾಗಿತ್ತು. ಅಲ್ಲಿಯ ನೆಲವೆಲ್ಲ ನೀರಿನಂತೆ ಕಾಣುತ್ತಿತ್ತು. ವೇದಿಕೆಯತ್ತ ನಡೆದಿದ್ದ ದುರ್ಯೋಧನನು ನೀರಿನಂತಿದ್ದ ನೆಲವನ್ನು ಕಂಡು ಅದು ನೀರೆಂದು ಭಾವಿಸಿದ. ದಾಟುವುದಕ್ಕೆಂದು ಒಂದಿಷ್ಟು ಕಾಲನ್ನು ಬಟ್ಟೆಯನ್ನು ಎತ್ತಿದ ತಕ್ಷಣ ಅಲ್ಲಿದ್ದ ದ್ರೌಪದಿ, ‘ಅಂಧಸ್ಯ ಪುತ್ರಃ ಅಂಧಃ’ ‘ಕುರುಡನ ಮಗ ಕುರುಡ’ ಎಂದಳು. ಕ್ಷಾತ್ರ ತೇಜದವನೂ, ಕುರುಕುಲದ ಅಧಿಪತಿಯೂ ಆದ ದುರ್ಯೋಧನನ ಹೃದಯಕ್ಕೆ ಅದು ಜೋರಾಗಿ ಇರಿಯಿತು. ದುರ್ಯೋಧನನು ಮಾತ್ರವಲ್ಲ ಆತನ ತಂದೆಯನ್ನೂ ದ್ರೌಪದಿಯು ನಿಂದಿಸಿದ್ದಳು. ಇದು ದುರ್ಯೋಧನನಿಂದ ಸಹಿಸಲಾಗಲಿಲ್ಲ.
ಮರುಕ್ಷಣವೇ ಸ್ವಾಭಿಮಾನಿ ಪುರುಷನಾದ ದುರ್ಯೋಧನನು ಅವಹೇಳನದ ಈ ಘಟನೆಯ ಸೇಡನ್ನು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದ. ಹೀಗೆ ದ್ರೌಪದಿಯ ಆ ಒಂದು ಬಿರುಸಿನ ನುಡಿಯೇ ಮಹಾಭಾರತಯುದ್ಧಕ್ಕೆ ಬೀಜವಾಗಿ ಪರಿಣಮಿಸಿತು.
ಮಾತೆ ಮುತ್ತು ಮಾತೆ ಮೃತ್ಯು.