ಕಥೆ-402
ದೇಶಾಭಿಮಾನ ದೊಡ್ಡದು....
ಈ ಪ್ರಪಂಚದಲ್ಲಿ ಜನರೆಲ್ಲರಿಗೂ ಬದುಕಿನ ಸೂಕ್ತ ದಾರಿಯನ್ನು ತೋರಲೆಂದೇ ಧರ್ಮಗಳ ಸ್ಥಾಪನೆಯಾಯಿತು. ವಿವಿಧ ಧರ್ಮಗಳ ದಾರಿಯಲ್ಲಿ ಭಿನ್ನತೆಯಿದ್ದಿರಬಹುದಾದ ಅಂತಿಮ ಗುರಿಯೊಂದೇ ಆಗಿದೆ. ಈ ಜಗತ್ತಿನ ವಿವಿಧ ಮುಖ ಸಂಕಷ್ಟಗಳನ್ನು ನಿವಾರಿಸಿ ಉತ್ತಮ ಸುಖದ ಕಡೆಗೆ ತಲಪಿಸುವ ಸಾಧನವೇ ಧರ್ಮವಾಗಿದೆ. ಇದನ್ನರಿಯದೆ ಕೆಲವರು ಧರ್ಮದ ಹೆಸರಲ್ಲಿ ಜಗಳಾಡುವವರಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಧಾರ್ಮಿಕ ಸಾಮರಸ್ಯ, ಭಾವೈಕ್ಯದ ಆದರ್ಶವನ್ನು ಮೆರೆದ ಸುಭಾಶ್ಚಂದ್ರ ಬೋಸ್ ಅವರ ಅನುಯಾಯಿಗಳ ಆಚರಣೆ ವ್ಯವಹಾರಗಳು ಅನುಕರಣೀಯವಾಗಿದ್ದುದನ್ನು ಗಮನಿಸಬೇಕಾಗಿದೆ. ಬ್ರಿಟಿಷರ ಆಡಳಿತದಿಂದ ಬಿಡುಗಡೆಯನ್ನು ಪಡೆಯುವುದಕ್ಕಾಗಿ ವೀರನೇತಾರ ಸುಭಾಶ್ಚಂದ್ರ ಬೋಸ್ ಅವರು ಸ್ತಾಪಿಸಿದ ಅಝಾದ್ ಹಿಂದ್ ಫೌಜ್‌ಗೆ ಸೇರುವಂತೆ ಭಾರತದಲ್ಲಿರುವ ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಕ್ಖ ಮೊದಲಾದ ಎಲ್ಲ ಸಂಪ್ರದಾಯದವರಿಗೂ ಕರೆ ನೀಡಿದ್ದರು. ಯಾರ ಹೃದಯದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸ್ಫೂರ್ತಿಯಿದೆಯೋ ಅವರೆಲ್ಲರೂ ನಮ್ಮ ಸೇನೆಯನ್ನು ಸೇರಿಕೊಳ್ಳಿ ಎಂದಿದ್ದರು. ಹಾಗೆ ಸೇರಿಕೊಂಡವರಲ್ಲಿ ಕ್ಯಾಪ್ಟನ್ ಶಾನವಾಜ್ ಖಾನ್ ಕೂಡಾ ಒಬ್ಬರು. ಒಮ್ಮೆ ಅವರ ಚಟುವಟಿಕೆಗಳಿಂದ ಅಸಮಾಧಾನಗೊಂಡ ಆಂಗ್ಲ ಸರಕಾರ ಅವರ ಮೇಲೆ ಒಂದು ಸುಳ್ಳು ಮೊಕದ್ದಮೆ ಹೂಡಿತು. ಈ ಸಂದರ್ಭದಲ್ಲಿ ಈ ಮೊಕದ್ದಮೆಯಲ್ಲಿ ಕ್ಯಾ.ಶಾನವಾಜ್ ಖಾನರ ಪರವಾಗಿ ವಾದಿಸಲು ಸುಪ್ರಸಿದ್ಧ ವಕೀಲ ಭೂಲಾಭಾಯಿ ದೇಸಾಯಿ ಮುಂದಾದರು. ಆಗ ಮುಸ್ಲಿಂ ಲೀಗ್‌ನ ಸ್ಥಾಪಕ ಮಹಮ್ಮದಲಿ ಜಿನ್ನಾ ಅವರು ನೀವು ಆಜಾದ್ ಹಿಂದ್ ಸೇನೆಯ ಸಂಬಂಧ ಕಡಿದುಕೊಂಡರೆ ನಿಮ್ಮ ಪರವಾಗಿ ನಾನು ವಾದಿಸಿ, ಗೆಲ್ಲಬಲ್ಲೆ ಎಂದು ಹೇಳಿ ಕಳಿಸಿದಾಗ, ನಾವೆಲ್ಲ ಭಾರತೀಯರು ಹೆಗಲಿಗೆ ಹೆಗಲು ಕೊಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವಾಗ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಶಾನವಾಜ್ ಖಾನ್ ಉತ್ತರಿಸಿದರು. ಆಗ ಆಝಾದ್ ಹಿಂದ್ ಫೌಜ್‌ನ ಎಲ್ಲ ಸದಸ್ಯರೂ ವಿಶೇಷವಾಗಿ ಸಂತೋಷಗೊಂಡು ಅವರ ದೇಶ ಪ್ರೇಮವ ಕಂಡು ಅವರೇ ಅಭಿಮಾನ ವ್ಯಕ್ತಪಡಿಸಿದರು. ಅವರ ದೇಶಾಭಿಮಾನದ ಮಾತು ನಮಗೂ ಆದರ್ಶ. ಜಾತಿ ಮತ ಧರ್ಮಗಳ ಸಂಕುಚಿತ ಸ್ವಾರ್ಥ ಪ್ರವೃತ್ತಿಯಿಂದ ಹೊರಬಂದು, ದೇಶಕ್ಕಾಗಿ ಸಮರ್ಪಣ ಭಾವದಿಂದ ಶ್ರಮಿಸುವ, ಹೋರಾಡುವ ಹಾಗೂ ಭ್ರಾತೃತ್ವ ಭಾವನೆಯೊಂದಿಗೆ ಸಾಮೂಹಿಕ ಮತ್ತು ವೈಯಕ್ತಿಕ ನೆಲೆಯಲ್ಲಿ ಮುನ್ನಡೆಯುವ ದೃಢ ಸಂಕಲ್ಪವನ್ನು ನಿಜವಾದ ಧರ್ಮ ಪೋಷಿಸುತ್ತದೆ ಎಂದು ಬೋಸ್, ಶಾನವಾಜ್ ಮೊದಲಾದ ಗಣ್ಯ ನೇತಾರರು ತೋರಿಸಕೊಟ್ಟರು. ಇಂದಿನ ಭಾರತೀಯ ನಾಗರಿಕರಾದ ನಾವೆಲ್ಲರೂ ಇಂತಹ ಆದರ್ಶ ಪಥದಲ್ಲಿ ನಡೆಯಬೇಕಾಗಿದೆ. - ಕೃಪೆ:ಡಾ.ಡಿ.ವೀರೇಂದ್ರ ಹೆಗ್ಗಡೆ.