ಕಥೆ-410
ಉಲ್ಲಾಸ ನಮ್ಮೊಳಗಿದೆ
ಆತ ಪರ್ಶಿಯಾದ ಮಹಾರಾಜ. ಹೆಸರು ಫ್ರೆಡ್ರಿಕ್. ಅದೊಂದು ಸಂಜೆ ರಾಜಧಾನಿಯಿಂದ ಆಚೆ ಬಂದು ವೇಷ ಮರೆಸಿಕೊಂಡು ಸಂಚರಿಸುತ್ತಿದ್ದ. ಚಿಕ್ಕ ಓಣಿಯಲ್ಲಿ ನಡೆದು ಹೋಗುವಾಗ ಒಬ್ಬ ಹಿರಿಯ ಡಿಕ್ಕಿ ಹೊಡೆದ. ಸಂಜೆಗತ್ತಲು. ಕಿರುದಾರಿ. ಕೇಳಬೇಕಾ? ಡಿಕ್ಕಿ ಆಗಿ ಹೊಯಿತು. ಫ್ರೆಡ್ರಿಕ್, ‘ಯಾರು ನೀನು?’ ಅಂತ ಹಿರಿಯನನ್ನು ಕೇಳಿದ. ಹಿರಿಯನಿಗೆ ಸಿಟ್ಟು ಬಂದು ‘ನಾನೊಬ್ಬ ಚಕ್ರವರ್ತಿ’ ಅಂದ. ರಾಜ ಚಕಿತಗೊಂಡ. ‘ನೀನು ಚಕ್ರವರ್ತಿನಾ? ಅದಾವ ಸಾಮ್ರಾಜ್ಯವೊ ನಿನ್ನದು?!’ ಅಂತ ವ್ಯಂಗ್ಯವಾಗಿ ಕೇಳಿದ. ‘ನನ್ನದೇ ಅದು ಸಾಮ್ರಾಜ್ಯ’ ಅಂತ ಹೇಳಿ ಹಿರಿಯ ಹೊರಟು ಹೋದ. ನಾವು ಏನೆಲ್ಲವನ್ನು ಗೆಲ್ಲಬಹುದು. ಆಳಬಹುದು. ಆದರೆ ನಮ್ಮನ್ನು ನಾವು ಆಳಿಕೊಳ್ಳದ ಹೊರತು ಉಳಿದಿದ್ದೆಲ್ಲ ವ್ಯರ್ಥ. ಅಲೆಗ್ಸಾಂಡರ್ ಎಲ್ಲವನ್ನೂ ಗೆದ್ದು ಹೊರಟ. ಅದರಲ್ಲಿ ಸಿಗದ ಖುಷಿ ಕೊನೆಗೆ ಆತ ತನ್ನನ್ನು ಗೆದ್ದುಕೊಳ್ಳುವುದರಲ್ಲಿ ಸಿಕ್ಕಿತು. ಯಾರನ್ನೋ ಸೋಲಿಸುತ್ತೇನೆ, ನೋವು ಮಾಡುತ್ತೇನೆ ಅಂತ ಹೊರಟರೆ ಖಂಡಿತ ಅಲ್ಲಿ ಏನೂ ಸಿಗಲಾರದು. ಬದಲಿಗೆ ಅದು ನಮ್ಮನ್ನು ದಾರಿದ್ರ್ಯಕ್ಕೆ ತಳ್ಳುತ್ತದೆ. ಚಕ್ರವರ್ತಿಗಳಂತೆ ಕಂಡವರು ಚಕ್ರವರ್ತಿಗಳಲ್ಲ! ಮನಸ್ಸನ್ನು ಗೆದ್ದಕೊಂಡವನೇ ಚಕ್ರವರ್ತಿ. ಒಂದು ಚಕ್ರಾಧಿಪತ್ಯದ ನಿಜ ಸುಖ ಆತನಿಗೆ ಮಾತ್ರ ಸಿಗುತ್ತದೆ.
ಹೊರಗಿನ ಹಂಬಲಗಳು ‘ಬೇಕು ಬೇಕು’ ಅನಿಸುತ್ತವೆ. ಇಷ್ಟಕ್ಕೆ ಅಷ್ಟು, ಅಷ್ಟಕ್ಕೆ ಮತ್ತಷ್ಟು. ಒಳಗಿನ ಹಂಬಲಗಳನ್ನು ಗೆದ್ದವನಿಗೆ ಹಸಿವು ಕೂಡ ಸುಖವೆನಿಸುತ್ತದೆ. ವಚನಕಾರರು ‘ಮನಸಿನಂತೆ ಮಹಾದೇವ’ ಅಂದಿದ್ದು ಇದೇ ಅರ್ಥದಲ್ಲಿ. ನಮ್ಮ ಮನಸ್ಸಿನ ಜಗತ್ತನ್ನು ಗೆಲ್ಲದ ಹೊರತು ಎಂದಿಗೂ ಉಲ್ಲಾಸ ಸಿಗದು!
ಕೃಪೆ:ಸದಾಶಿವ ಸೊರಟೂರು.