Thursday, June 27, 2024

Bridge Course

 ಕಥೆ-439

ಇಳಿಜಾರು ಓಟ

ಆರೆಂಟು ವರ್ಷಗಳ ಕೆಳಗೆ ಗುರು ಊಟಿಗೆ ಯಾವುದೋ ಕೆಲಸದ ಮೇಲೆ ಹೋಗಿದ್ದ. ಸಂಜೆ ತಿರುಗಾಡಿ ಬರಲು ಹೊರಟ. ಸ್ವಲ್ಪ ಮುಂದೆ ಹೋದಾಗ ಸುಂದರವಾದ ಬೆಟ್ಟದ ಸಾಲುಗಳು.

ಅವನ ಹಾಗೆಯೇ ಸಾಕಷ್ಟು ಜನ ಅಲ್ಲಿಗೆ ಬಂದಿದ್ದರು. ವಾತಾವರಣ ಬಹಳ ಹಿತಕರವಾಗಿತ್ತು. ತಾನು ಬೆಟ್ಟದ ಕೆಳಗೆ ಒಂದು ಕಲ್ಲಿನ ಮೇಲೆ ಕುಳಿತು ನಿಸರ್ಗವನ್ನು ನೋಡಿ ಸಂತೋಷಪಡುತ್ತಿದ್ದ. ಅಲ್ಲಿ ಕೆಲ ಮಕ್ಕಳು ನಿಧಾನವಾಗಿ ಬೆಟ್ಟವನ್ನು ಸ್ವಲ್ಪ ದೂರ ಏರಿ ನಂತರ ಇಳಿದು ಸಂತೋಷಪಡುತ್ತಿದ್ದರು. ಆಗ ಅಲ್ಲಿಗೆ ಒಂದು ಪರಿವಾರ ಬಂತು.

ಅವರು ಮಾತನಾಡುವ ರೀತಿ ಗಮನಿಸಿದರೆ ಆ ಪರಿವಾರದಲ್ಲಿ ತಂದೆ, ತಾಯಿ, ಅಳಿಯ, ಮಗಳು ಮತ್ತು ಇಬ್ಬರು ಗಂಡುಮಕ್ಕಳು ಇದ್ದ ಹಾಗೆ ತೋರಿತು. ಅವರಿಗೂ ತುಂಬ ಉತ್ಸಾಹ ಬಂದಿತ್ತು. 

ಸ್ವಲ್ಪ ಹೊತ್ತು ಮಾತನಾಡುತ್ತಿದ್ದ ಅವರು ನಿಧಾನವಾಗಿ ಬೆಟ್ಟ ಏರತೊಡಗಿದರು. ಮೊದಮೊದಲು ಸಾವಕಾಶವಾಗಿ ಅಲ್ಲಲ್ಲಿದ್ದ ಅಡ್ಡದಾರಿಗಳನ್ನು ಬಳಸಿಕೊಂಡು ಮುಂದೆ ಸಾಗಿದರು. ಬಹುಶಃ ಮೇಲಿನ ವಾತಾವರಣ, ತಂಪಾದ ಗಾಳಿ ಮತ್ತಷ್ಟು ಆನಂದ ತಂದಿರಬೇಕು. ಮೇಲಿನಿಂದ ಕೆಳಗೆ ನೋಡುತ್ತಿದ್ದರು, ನಗುತ್ತಿದ್ದರು.

ಅವರ ಕೂದಲು, ಬಟ್ಟೆಗಳು ಗಾಳಿಗೆ ಹಾರಾಡುತ್ತಿದ್ದವು. ಅವರು ಮತ್ತಷ್ಟು ಮೇಲಕ್ಕೆ ಏರತೊಡದರು. ನನಗೇಕೋ ಅದು ಆತುರದ ನಿರ್ಧಾರ, ಅಪಾಯಕಾರಿಯಾದದ್ದು ಎನ್ನಿಸತೊಡಗಿತು. ಅವರು ಏರಿದ್ದು ಬಹಳ ಎತ್ತರ. ಕೆಳಗಿನಿಂದ ಚಿಕ್ಕಚಿಕ್ಕ ಗೊಂಬೆಗಳಂತೆ ಕಾಣುತ್ತಿದ್ದರು. ಅವರೇನು ಮಾತನಾಡಿಕೊಂಡರೋ ತಿಳಿಯದು. 

ಅವರೆಲ್ಲ ಕೆಳಗೆ ಬೇಗಬೇಗನೇ ಇಳಿಯತೊಡಗಿದರು. ಯಾವಾಗಲೂ ಏರುವುದು ಕಷ್ಟ, ಇಳಿಯುವುದು ಸುಲಭ. ಆದರೆ, ತುಂಬ ಅಪಾಯಕಾರಿ. ಜೀವನದಲ್ಲೂ ಹಾಗೆಯೇ ಅಲ್ಲವೇ. ಬರುಬರುತ್ತ ಅವರು ಇಳಿಯುವ ವೇಗ ಹೆಚ್ಚಾಯಿತು. ಕೆಳಗೆ ಧಾವಿಸುವಾಗ ದೇಹದ ಭಾರ ಕೆಳಗೆ ತಳ್ಳುವುದರಿಂದ ನಿಲ್ಲುವುದು ಬಲುಕಷ್ಟ. 

ಅವರು ಓಡತೊಡಗಿದರು. ಹುಡುಗರೇನೋ ಸಂತೋಷಪಡುತ್ತಿರಬೇಕು. ಆದರೆ ತಂದೆ ತಾಯಿಯರಿಗೆ ವಿಪರೀತ ಆತಂಕವಾಗಿರಬೇಕು. ತಾಯಿ ಸೀರೆ ಉಟ್ಟಿದ್ದರಿಂದ ಇನ್ನಷ್ಟು ಕಷ್ಟವಾಯಿತು. ಕ್ಷಣಾರ್ಧದಲ್ಲಿ ಅವರು ಕೂಗತೊಡಗಿದರು. 

ಉಳಿದವರು ಅವರನ್ನು ನೋಡಿದರೂ ತಮ್ಮ ವೇಗವನ್ನು ನಿಲ್ಲಿಸಲಾಗುತ್ತಿಲ್ಲ. ಅಪ್ಪ ಕೂಗತೊಡಗಿದರು. ಮರುಕ್ಷಣ ತಾಯಿ ಕಾಲಿಗೆ ಸೀರೆ ತೊಡರಿ, ಕಲ್ಲು ಎಡವಿ ಬಿದ್ದು ಉರುಳಲಾರಂಭಿಸಿದರು.

ಇದ್ದುದರಲ್ಲಿ ಅಳಿಯ ಸ್ವಲ್ಪ ನಿಧಾನವಾಗಿ ಇಳಿಯುತ್ತಿದ್ದವನು, ಸರಸರನೇ ಅತ್ತೆ ಬಿದ್ದೆಡೆಗೆ ಸಾಗಿ ಅವರನ್ನು ನಿಲ್ಲಿಸಿ, ಕೂಡ್ರಿಸಿದ. ಅಷ್ಟರಲ್ಲಿ ಮಗಳು ಕೂಡ ಬಿದ್ದು ಜಾರತೊಡಗಿದಳು. 

ಕೆಲ ದೂರ ಕೆಳಗೆ ಬಂದ ಮೇಲೆ ಜಾರುವುದು ನಿಂತು ಎದ್ದು ನಿಂತಳು. ನಂತರ ಗಂಡು ಮಕ್ಕಳಿಬ್ಬರೂ ಮೇಲೆ ಹೋಗಿ ಅಮ್ಮನನ್ನು ಕರೆತಂದರು. ಯಾವ ದೊಡ್ಡ ಅನಾಹುತವಾಗದಿದ್ದರೂ ತಾಯಿ, ಮಗಳಿಗೆ ತರಚು ಗಾಯಗಳಾಗಿದ್ದವು. ಇಷ್ಟಕ್ಕೇ ಮುಗಿಯಿತಲ್ಲ ಎಂದು ಸಂತೋಷಪಟ್ಟರು.

ನಾವೂ ಹಾಗೆಯೇ ಓಡುತ್ತಿದ್ದೇವೆ ಇಳಿಮುಖವಾಗಿ. ನಮ್ಮ ಆಸೆಗಳ, ಅಪೇಕ್ಷೆಗಳ, ಮಹತ್ವಾಕಾಂಕ್ಷೆಗಳ ಬೆನ್ನು ಹತ್ತಿ. ನಮ್ಮ ಕಾಲುಗಳಿಗೆ ವೇಗವನ್ನು ತಡೆದುಕೊಳ್ಳುವುದು ಕಷ್ಟವಾಗುತ್ತಿದೆ. ನಮ್ಮ ವೇಗ ನಿಧಾನವಾದಷ್ಟೂ ತಡೆದು ನಿಲ್ಲುವ ಅವಕಾಶ ಹೆಚ್ಚು. ಕೆಲವೊಮ್ಮೆ ಈ ಓಟಕ್ಕೆ ಕೊನೆಯೇ ಇಲ್ಲವೇ ಎನ್ನಿಸುತ್ತದೆ. ಬದುಕಿರುವವರೆಗೂ ಓಟ ತಪ್ಪಿದ್ದಲ್ಲ. ಓಟ ಮುಗಿಸುವುದು ಉದ್ದೇಶವಲ್ಲ. 

ಯಾವ ಬುದ್ಧಿವಂತಿಕೆಯಿಂದ, ತಾಳ್ಮೆಯಿಂದ, ನಿಗ್ರಹದಿಂದ ಎಷ್ಟು ಚೆನ್ನಾಗಿ ನಿಧಾನವಾಗಿ ಈ ಓಟ ಮುಂದುವರೆಸುತ್ತೇವೆ ಎಂಬುದು ಮುಖ್ಯ. ಅದು ನಮ್ಮ ಜೀವನದ ಯಶಸ್ಸನ್ನು ತೀರ್ಮಾನಿಸುತ್ತದೆ.

💐💐💐💐💐

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು