Friday, June 28, 2024

 ಕಥೆ-440

ಪ್ರತಿಯೊಂದು ಘಟನೆ ಕಲಿಸುವ ಪಾಠ

ಗುಂಡಣ್ಣನ ತಂದೆಗೆ ತಲೆತಲಾಂತ­ರ­ದಿಂದ ಬಂದ ಜಮೀನಿತ್ತು. ಯಾವುದೋ ಕಾರಣಕ್ಕೆ ಒಮ್ಮೆ ಆತ ಜಮೀನುದಾರನಿಂದ ಒಂದಷ್ಟು ಸಾಲ ತೆಗೆದುಕೊಂಡಿದ್ದ. ಆ ಕ್ರೂರ, ಜಮೀನಿ­ನಿಂದ ಅದಕ್ಕೆ ಬಡ್ಡಿ, ಚಕ್ರಬಡ್ಡಿ ಸೇರಿಸಿ ಹೊಲವನ್ನೇ ಬರೆಸಿ­ಕೊಂಡುಬಿಟ್ಟಿದ್ದ. ಈಗ ಗುಂಡಣ್ಣ ತಮ್ಮ ಹೊಲದಲ್ಲೇ ಕೂಲಿ ಮಾಡುವ ಪರಿಸ್ಥಿತಿ ಬಂದಿತ್ತು.

ಒಂದು ದಿನ ಹೊಲದಲ್ಲಿ ನೇಗಿಲು ಹೂಡಿದ್ದಾಗ ಠಣ್ ಎಂಬ ಸದ್ದು ಬಂತು. ಆತ ನೇಗಿಲು ಸರಿಸಿ ಗುದ್ದಲಿಯಿಂದ ಅಗೆದು ನೋಡಿದರೆ ಒಂದು ತಾಮ್ರದ ಬಿಂದಿಗೆ ಕಂಡಿತು. ಅದರ ತುಂಬ ಬಂಗಾ­ರದ ನಾಣ್ಯಗಳು! ಇವನ ಕೆಲಸ­ವನ್ನು ನೋಡಿ ಗುಂಡಕ್ಕ ಓಡಿ ಬಂದಳು, ಆಕೆಗೂ ಸಂಭ್ರಮವಾಯಿತು. ಗುಂಡಣ್ಣ­ನಿಗೆ ಹೆದರಿಕೆ ಯಾಕೆಂದರೆ ಗುಂಡಕ್ಕನ ಬಾಯಿಯಲ್ಲಿ ಯಾವ ಮಾತೂ ನಿಲ್ಲುವುದಿಲ್ಲ.


ಆಕೆಗೆ ಗದರಿ ಹೇಳಿದ, ‘ಗುಂಡಕ್ಕ ಯಾರ ಮುಂದೂ ಬಾಯಿಬಿ­ಡಬೇಡ. ಇದನ್ನು ನಾನು ಬೇರೆ ಕಡೆಗೆ ಬಚ್ಚಿಡುತ್ತೇನೆ’. ಆಕೆ ಕೋಪದಿಂದ, ‘ನಾನಾಕೆ ಬೇರೆಯವರ ಮುಂದೆ ಹೇಳಲಿ? ಬುದ್ಧಿ ಇಲ್ಲವೇ?’ ಎಂದಳು. ಆಕೆ ಯಾರ ಮುಂದೂ ಹೇಳಲೇ­ಬಾರದು ಎಂದುಕೊಂಡಿದ್ದಳು. ಆದರೆ ಮುಂದೆ ಪುಟ್ಟಕ್ಕ ಬರಬೇಕೇ? ಅವಳ ಮುಂದೆ ಹೇಗೆ ಮುಚ್ಚಿಡುವುದು ಸಾಧ್ಯ? ಹೇಳಿಯೇ ಬಿಟ್ಟಳು. ಪುಟ್ಟಕ್ಕ, ಸುಬ್ಬಕ್ಕನಿಗೆ, ಸುಬ್ಬಕ್ಕ ಪದ್ಮಕ್ಕನಿಗೆ ಹೇಳಿ ಅಂದೇ ರಾತ್ರಿ ಆ ವಿಷಯ ಜಮೀನು­ದಾರನ ಹೆಂಡತಿಗೆ ತಿಳಿಯಿತು. ಮರುದಿನ ಜಮೀನುದಾರ ಗುಂಡಣ್ಣನ ಮನೆಗೆ ಬಂದ. ಆದರೆ ಅವನಿರಲಿಲ್ಲ. ಹೆಂಡತಿಯನ್ನು ಜಬರಿಸಿ ಕೇಳಿ­ದಾಗ ಆಕೆ ಆದದ್ದನ್ನೆಲ್ಲ ವರದಿ ಒಪ್ಪಿಸಿದಳು.

ಜಮೀನುದಾರ ಹೇಳಿದ– ‘ನಾನು ಊರಿಗೆ ಹೋಗಿ ಸೋಮವಾರ ಬರು­ತ್ತೇನೆ. ಹೊಲದಲ್ಲಿ ದೊರೆತ ವಸ್ತು­ಗಳನ್ನೆಲ್ಲ ಅಂದೇ ನನಗೆ ಒಪ್ಪಿಸಲು ಹೇಳು’. ಗುಂಡಕ್ಕ ತಲೆ ಅಲ್ಲಾಡಿಸಿದಳು. ಗುಂಡಣ್ಣ ಬಂದಾಗ ಆಕೆ ಅಳುತ್ತ ಆದದ್ದನ್ನೆಲ್ಲ ತಿಳಿಸಿದಳು. ಆಕೆಯನ್ನು ಬಯ್ದು ಫಲವಿಲ್ಲ. ಆಕೆಯ ಸ್ವಭಾವವೇ ಅದು ಎಂದು ಚಿಂತಿಸಿ ಉಪಾಯ ಮಾಡಿದ. ಅಂದು ಸಂಜೆ ಮಾರು­ಕಟ್ಟೆಯಿಂದ ಕೆಲವೊಂದು ದೊಡ್ಡ ಮೀನುಗಳನ್ನು ಮತ್ತು ಜಿಲೇಬಿ, ಮೈಸೂರುಪಾಕು, ಬುಂದಿಲಾಡುಗಳು ಕೊಂಡುಕೊಂಡು ಹತ್ತಿರವಿದ್ದ ಕಾಡಿಗೆ ಹೋದ. ಒಂದು ಮರ ಹತ್ತಿ ಕೊಂಬೆಯ ತುದಿಗಳಿಗೆ ಮೀನುಗಳನ್ನು ಕಟ್ಟಿದ.


ಹತ್ತಿರದ ಪೊದೆಗಳ ಮೇಲೆ ಮರದ ಕೆಳಗೆ ಸಿಹಿ ತಿಂಡಿಗಳನ್ನು ಹರಡಿ ಬಂದ. ಮರುದಿನ ಹೆಂಡತಿಯನ್ನು ಹತ್ತಿರದ ಪಟ್ಟಣಕ್ಕೆ ಕರೆದೊಯ್ದು, ಬರುವಾಗ ಸಂಜೆ­-ಯಾಗಿತ್ತು. ಹೆಂಡತಿ ಉದ್ದೇಶಿಸಿ ‘ಅಯ್ಯೋ ಭಾರಿ ಬಿರುಗಾಳಿ ಬಂದಂತಿದೆ. ಮತ್ತೆ ಬರಬಹುದೋ ಏನೋ, ಅದಕ್ಕೆ ಹತ್ತಿರದ ಕಾಡಿನ ದಾರಿಯಲ್ಲೇ ಹೋಗೋಣ’ ಎಂದು ಸಾಗಿ ಒಂದು ಮರದ ಕೆಳಗೆ ನಿಲ್ಲಿಸಿದ ‘ಛೇ, ಛೇ, ಬಿರುಗಾಳಿ ಭಾರಿ­ಯಾಗಿದ್ದಿರಬೇಕು ಅಲ್ಲಿ ನೋಡು.


ನದಿಯ ಮೀನುಗಳಲ್ಲ ಹಾರಿ ಬಂದು ಮರ ಏರಿವೆ’ ಎಂದು ತಾನು ಕಟ್ಟಿದ್ದ ಮೀನುಗಳನ್ನು ತೋರಿಸಿದ. ಆಕೆಗೆ ಆಶ್ಚರ್ಯದಿಂದ ನಂಬಲೇ ಆಗಲಿಲ್ಲ. ಅಷ್ಟರಲ್ಲಿ ಆಕೆಯ ಕಣ್ಣಿಗೆ ಅಲ್ಲಿ ಬಿದ್ದಿದ್ದ ಸಿಹಿತಿಂಡಿಗಳು ಕಂಡವು, ಆಗ ಗುಂಡಣ್ಣ ‘ಹಾಗಾದರೆ ಬಿರುಗಾಳಿಯ ರಭಸಕ್ಕೆ ಸಿಹಿತಿಂಡಿಗಳೂ ಹಾರಿ ಬಂದಿರಬೇಕು’ ಎಂದ. ಆಕೆ ಅದನ್ನು ನಂಬಿದಳು. ಬರುವಾಗ ದಾರಿಯಲ್ಲಿ ಜಮೀನು­ದಾರನ ಮನೆ ಬಂದಿತು. ಮನೆಯ ಹಿಂದಿನಿಂದ ಕತ್ತೆ ಒದರುವ ಸದ್ದು ಕೇಳಿತು. ಗುಂಡಣ್ಣ ಹೇಳಿದ, ‘ಯಾರಿಗೂ ಹೇಳಬೇಡ. ಈ ಜಮೀನುದಾರ ಹಿಂದೆ ದೆವ್ವದಿಂದ ಸಾಲ ತೆಗೆದುಕೊಂಡು ಮರಳಿ ಕೊಟ್ಟಿಲ್ಲ. ಅದಕ್ಕೇ ಅದು ಅವನನ್ನು ಒದೆಯುತ್ತಿದೆ. ಈ ಧ್ವನಿ ಅವನದೇ ಅರಚುವಿಕೆ’.

ಮರುದಿನ ಜಮೀನುದಾರ ಬಂದು ನೆಲದಲ್ಲಿ ದೊರಕಿದ ಬಂಗಾರದ ಬಗ್ಗೆ ಕೇಳಿದಾಗ ‘ಇಲ್ಲ ಸ್ವಾಮಿ, ನನಗೆ ಏನೂ ದೊರಕಿಲ್ಲ’ ಎಂದ ಗುಂಡಣ್ಣ. ಜಮೀನು­ದಾರ ಗುಂಡಕ್ಕನನ್ನು ಕರೆಯಲು ಹೇಳಿದಾಗ ಗುಂಡಣ್ಣ ಹೇಳಿದ, ‘ಸ್ವಾಮಿ, ಆಕೆಯ ಆರೋಗ್ಯ ಸರಿ ಇಲ್ಲ. ಅವಳ ಮಾತು ನಂಬಬೇಡಿ. ನಿನ್ನೆ ಏನಾಯಿತು ಕೇಳಿ’ , ಜಮೀನುದಾರ ಹುಬ್ಬೇರಿಸಿದಾಗ ಗುಂಡಕ್ಕ ಹೇಳಿದಳು. ‘ನಿನ್ನೆಯ ಬಿರುಗಾಳಿಗೆ ಮೀನುಗಳೆಲ್ಲ ಮರ ಏರಿ ಕುಳಿತಿವೆ’ ಎಂದಳು.

ಜಮೀನುದಾರ ಗುಂಡಣ್ಣನ ಮುಖ ನೋಡಿದ. ಗುಂಡಕ್ಕ ಮುಂದುವ­ರೆಸಿದಳು, ‘ಅಷ್ಟೇ ಅಲ್ಲ, ಬಿರುಗಾಳಿಗೆ ಅಂಗಡಿ­ಯಲ್ಲಿಯ ಸಿಹಿ ವಸ್ತುಗಳೆಲ್ಲ ಹಾರಿ ಕಾಡಿಗೆ ಬಂದಿವೆ’, ‘ಇದು ಯಾವಾಗ ಆದದ್ದು?’ ಕೇಳಿದ ಜಮೀನುದಾರ.

‘ಅದೇ ನೀವು ದೆವ್ವಕ್ಕೆ ಸಾಲ ಮರಳಿ ಕೊಡದಿ­ದ್ದಾಗ ಅದು ನಿಮ್ಮನ್ನು ಒದೆಯುತ್ತಿತ್ತಲ್ಲ? ನೀವು ಕತ್ತೆಯ ಹಾಗೆ ಅರಚುತ್ತಿದ್ದಿರಲ್ಲ ಆಗಲೇ ಇದು ಆದದ್ದು’. ಜಮೀನುದಾರ ಕುದಿಯುತ್ತಿದ್ದ, ‘ಛೇ ಈ ಮೂರ್ಖ ಹೆಂಗಸಿನ ಮಾತನ್ನು ನಂಬಿ ಬಂದೆನಲ್ಲ. ನನಗಿಂತ ಮೂರ್ಖ ಯಾರಿದ್ದಾರು?’ ಹೀಗೆ ಹೇಳಿ ಹೊರಟು ಹೋದ. ಗುಂಡಣ್ಣ ಮುಸಿ ಮುಸಿ ನಕ್ಕ. ಯಾವುದರ ಬಗ್ಗೆಯೂ ಗೊಣಗಾಟ ಬೇಡ. ಪ್ರತಿಯೊಂದು ಘಟನೆ ಯಾವುದೋ ಪಾಠವನ್ನು ಕಲಿಸುತ್ತದೆ. ನಾವು ಅದರಿಂದ ಪಾಠ ಕಲಿತು ಯಶಸ್ವಿಯಾದರೆ ಸರಿ. ಇಲ್ಲವಾದರೆ ಸೋಲೂ ಮತ್ತೊಂದು ಪಾಠ ಕಲಿಸುತ್ತದೆ. ಕೃಪೆ :ಮುಖ ಪುಸ್ತಕ.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು