ಕಥೆ-455
ಇನ್ನೊಬ್ಬರನ್ನು ದೋಚಬೇಕಾಗಿಲ್ಲ.
ಅವನೊಬ್ಬ ಕಳ್ಳ. ಸಿಕ್ಕವರನ್ನು ದೋಚುವುದೇ ಅವನ ಕಸುಬಾಗಿತ್ತು. ಒಂದೆರಡು ಬಾರಿ ಜೈಲಿಗೂ ಹೋಗಿ ಬಂದಿದ್ದ. ಶ್ರೀಮಂತರು ಯಾರೆಂದು ಹುಷಾರಾಗಿ ಗಮನಿಸುವುದು, ಅವರ ಚಲನವಲನದ ಮೇಲೆ ನಿಗಾ ಇಡುವುದು, ಕಡೆಗೊಂದು ದಿನ ಪಕ್ಕಾ ಪ್ಲಾನ್ ಮಾಡಿಕೊಂಡು ಹೋಗಿ ಅವರನ್ನು ದೋಚುವುದೇ ಅವನ ಕಾಯಕವಾಗಿತ್ತು. ತಾನು ಹಿಡಿದಿರುವ ಹಾದಿ ಅನ್ಯಾಯದ್ದು ಎಂದು ಒಪ್ಪಲು ಅವನು ಸಿದ್ಧನಿರಲಿಲ್ಲ.
ಇಂಥ ನೀಚನ ಕಣ್ಣಿಗೆ ಆ ವೃದ್ಧ ದಂಪತಿ ಬಿದ್ದಿದ್ದು ತಿಂಗಳ ಹಿಂದೆ. ಅವರಿಬ್ಬರೂ ಸರ್ಕಾರಿ ನೌಕರಿಯಲ್ಲಿದ್ದವರು. ಅವರ ಮಕ್ಕಳು ವಿದೇಶದಲ್ಲಿದ್ದಾರೆ. ಗಂಡ-ಹೆಂಡತಿ ಬೆಳಗ್ಗೆಯೇ ವಾಕ್ ಹೋಗುತ್ತಾರೆ. ಮನೆಯಿಂದ ಪಾರ್ಕ್‌ಗೆ ಕಾರ್‌ನಲ್ಲಿ ಹೋಗಿ, ಅಲ್ಲಿಂದ ಮತ್ತೆ ಕಾರ್‌ನಲ್ಲಿ ವಾಪಸ್ ಬರುತ್ತಾರೆ. ಮರಳಿ ಬಂದು ಮನೆಯೊಳಕ್ಕೆ ಹೋದ ತಕ್ಷಣ, ಹಿಂದಿನಿಂದ ಮಿಂಚಿನಂತೆ ಒಳನುಗ್ಗಬೇಕು. ಚಾಕು ತೋರಿಸಿ ಹೆದರಿಸಬೇಕು. ಕೂಗಲು ಬಾಯ್ತೆರೆದರೆ ಎರಡೇಟು ಹಾಕಿದರೂ ಆಯಿತು. ನಂತರ ಆ ಮನೇಲಿರುವ ಎಲ್ಲವನ್ನೂ ಲೂಟಿ ಮಾಡಿ ಹೋಗಿ ಬಿಡಬೇಕು. ಒಂದಿಡೀ ವರ್ಷ ಕೂತು ತಿನ್ನಲು ಆಗುವಷ್ಟು ಮೊತ್ತದ ಒಡವೆ, ಹಣ ಸಿಕ್ಕೇ ಸಿಗುತ್ತದೆ ಎಂದು ಆತ ಲೆಕ್ಕ ಹಾಕಿದ್ದ
ಅಂದುಕೊಂಡ ದಿನ ಬಂದೇ ಬಂತು, ಈ ಕಳ್ಳ ಬೇಗನೇ ಬಂದು ಕಾಂಪೌಂಡಿನ ಹಿಂದೆ ಅಡಗಿ ಕೂತ. ಆ ದಂಪತಿ ಬಾಗಿಲು ತೆರೆದ ತಕ್ಷಣ ಅವರ ಹಿಂದೆಯೇ ಚಿರತೆ ವೇಗದಲ್ಲಿ ಹೇಗೆ ನುಗ್ಗಬೇಕು, ಅವರನ್ನು ಹೇಗೆ ಹೆದರಿಸಬೇಕು, ತಿರುಗಿ ಮಾತಾಡಿದರೆ ಹೇಗೆ ಹೊಡೆಯಬೇಕು ಎಂದೆಲ್ಲಾ ಲೆಕ್ಕ ಹಾಕುತ್ತಿದ್ದ. ಆಗಲೇ ವಾಕಿಂಗ್ ಮುಗಿಸಿಕೊಂಡು ಆ ದಂಪತಿ ಬಂದರು. ಮನೆಯ ಮುಂದೆ ಕಾರ್ ನಿಂತ ಮರುಕ್ಷಣವೇ ಅನಾಹುತವಾಗಿ ಹೋಯಿತು. ಡ್ರೈವರ್ ಸೀಟಿನಲ್ಲಿದ್ದ ಅಜ್ಜ ಎದೆ ಹಿಡಿದುಕೊಂಡು ಕುಸಿದು ಬಿದ್ದ. ಆತನಿಗೆ ಹೃದಯಾಘಾತವಾಗಿತ್ತು.
ಈ ಅನಿರೀಕ್ಷಿತ ಘಟನೆಯಿಂದ ವೃದ್ಧೆ ಕಂಗಾಲಾದಳು. ಹೆಲ್ಪ್, ಹೆಲ್ಪ್, ಕಾಪಾಡಿ, ಕಾಪಾಡೀ ಎಂದು ಚೀರಿಕೊಂಡಳು. ಆಗ ತಾನೆ ಬೆಳಕಾಗುತ್ತಿತ್ತು. ಹೆಚ್ಚಿನವರು ಎದ್ದಿರಲಿಲ್ಲ.
ಜೊತೆಗೆ ವಯಸ್ಸಾಗಿದ್ದ ಕಾರಣದಿಂದ ಆಕೆಯ ಧ್ವನಿ ಹೆಚ್ಚಿನವರಿಗೆ ಕೇಳಿಸಲೂ ಇಲ್ಲ. ಕಾಂಪೌಂಡಿನ ಮರೆಯಲ್ಲಿ ಅಡಗಿದ್ದ ಕಳ್ಳನಿಗೆ ಆಕೆಯ ಕೂಗು ಕೇಳಿಸಿತು. ಬೇರೊಂದು ದಿಕ್ಕಿಗೆ ನಿಂತು ಆಕೆ ಹೆಲ್ಪ್ ಹೆಲ್ಪ್ ಅನ್ನುತ್ತಿದ್ದಾಗಲೇ ಈತ ನುಗ್ಗಿ ಬಂದ. ಆ ಅಜ್ಜನನ್ನು ಡ್ರೈವರ್ ಸೀಟಿನಿಂದ ಕೆಳಗಿಳಿಸಿ, ಅವನಿಗೆ ಬಾಯಿಂದ ಉಸಿರು ಕೊಟ್ಟ. ಎದೆಯ ಭಾಗವನ್ನು ಮೆಲ್ಲಮೆಲ್ಲನೆ ಅದುಮಿದ. ವೃದ್ಧೆಯ ಮೊಬೈಲ್ ಪಡೆದು ಹತ್ತಿರದ ಆಸ್ಪತ್ರೆಗೆ ತಕ್ಷಣವೇ ಸುದ್ದಿ ತಿಳಿಸಿದ.
ಐದೇ ನಿಮಿಷದಲ್ಲಿ ಆಂಬುಲೆನ್ಸ್ ಬಂತು. ಅದರ ಸದ್ದು ಕೇಳಿದ್ದೇ ನೆರೆಹೊರೆಯವರ ಕಿವಿಗಳು ನೆಟ್ಟಗಾದವು. ಎಲ್ಲರೂ ಬಂದರು. ಅಜ್ಜ, ಆಗಲೂ ಅರೆಪ್ರಜ್ಞಾವಸ್ಥೆಯಲ್ಲಿದ್ದ. ಆತನನ್ನು ಪರೀಕ್ಷಿಸಿದ ವೈದ್ಯರು, ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದರಿಂದ ಜೀವಕ್ಕೆ ತೊಂದರೆಯಿಲ್ಲ ಅಂದರು. ನೆರೆಹೊರೆಯವರೆಲ್ಲ ಕುತೂಹಲದಿಂದ ನೋಡುತ್ತಿದ್ದಾಗ, ಆ ವೃದ್ಧೆ ಕಳ್ಳನ ಕಡೆ ಕೈ ಮಾಡಿ ತೋರಿಸುತ್ತಾ ಹೇಳಿದಳು: ಈತ ನಮ್ಮ ಪಾಲಿಗೆ ದೇವರಂತೆ ಬಂದ. ಪ್ರಾಥಮಿಕ ಚಿಕಿತ್ಸೆ ನೀಡಿದ್ದು ಈತನೇ. ಡಾಕ್ಟರಿಗೆ ವಿಷಯ ತಿಳಿಸಿದ್ದು ಈತನೇ. ದೇವರೇ ಮನುಷ್ಯನ ರೂಪದಲ್ಲಿ ಬಂದಂತಾಗಿದೆ’ ಎಂದೆಲ್ಲಾ ಗುಣಗಾನ ಮಾಡಿದಳು. ನಂತರ ಈ ಕಳ್ಳನ ಕಡೆ ತಿರುಗಿ, ಮನೆಯ ಮಗನಂತೆ ಬಂದು ಯಜಮಾನರ ಪ್ರಾಣ ಉಳಿಸಿದೆಯಪ್ಪ,
ಅದಕ್ಕೆ ಪ್ರತಿಯಾಗಿ ಏನಾದರೂ ಬಹುಮಾನ ಕೊಡ್ತೇನೆ. ಮನೆಯೊಳಗೆ ಬಾ. ಅಲ್ಲಿರುವ ವಸ್ತುವಿನ ಪೈಕಿ ನಿಂಗೆ ಯಾವುದು ಇಷ್ಟವೋ ಅದನ್ನು ತಗೊಂಡು ಹೋಗು. ಇವತ್ತಿನಿಂದ ನೀನು ನಮ್ಮ ಬಂಧು. ಆಗಾಗ್ಗೆ ಮನೆಗೆ ಬರ್ತಾ ಇರಬೇಕು ನೀನು’ ಅಂದಳು.
ಆ ವೃದ್ಧೆಯ ಮಾತುಗಳಲ್ಲಿದ್ದ ಅಂತಃಕರಣ ಕಂಡು ಕಳ್ಳನಿಗೆ ಕಣ್ತುಂಬಿ ಬಂತು.
ಆಕೆ ಆತನನ್ನು ತನ್ನ ದತ್ತುಪುತ್ರನನ್ನಾಗಿ ಸ್ವೀಕರಿಸಿ ತನ್ನೆಲ್ಲ ಆಸ್ತಿಯನ್ನು ಅವನಿಗೇ ಬರೆದಳು. ನಾವು ಇನ್ನೊಬ್ಬರನ್ನು ದೋಚಬೇಕಾಗಿಲ್ಲ. ಒಳ್ಳೆಯ ಕೆಲಸ ಮಾಡುತ್ತಿದ್ದರೆ, ತೋಚದಿದ್ದರೂ ಒದ್ದು ಒಲಿದು ಬರುತ್ತದೆ. ಕೃಪೆ :ನೆಟ್