ಕಥೆ-456
ಕಾರ್ಯ-ಕಾರಣ ಸಿದ್ಧಾಂತ
ಭಾರತೀಯ ಸಂಪ್ರದಾಯದಲ್ಲಿ ಕಾರ್ಯ-ಕಾರಣ ಸಿದ್ಧಾಂತ ಎಂಬುದೊಂದಿದೆ. ಅದರ ಪ್ರಕಾರ, ಯಾವುದೇ ಕಾರ್ಯವಾಗಿದ್ದರೆ ಅದಕ್ಕೊಂದು ಕಾರಣವಿರಲೇಬೇಕು. ನೀವು ದಿನಾಲು ಬೆಳಿಗ್ಗೆ ಎದ್ದು ಮನೆಯ ಬಾಗಿಲು ತೆರೆಯುವುದಕ್ಕಿಂತ ಮೊದಲು ಮನೆಯ ಅಂಗಳದಲ್ಲಿ ವರ್ತಮಾನ ಪತ್ರಿಕೆ ಬಿದ್ದಿದ್ದರೆ, ಅದನ್ನು ಯಾರೋ ಹಾಕಿರಲೇಬೇಕು. ಪೇಪರ್ ಹಾಕುವವರು ನಮಗೆ ಕಂಡಿಲ್ಲ.
ಪೇಪರ್ ಇರುವುದರಿಂದ ಯಾರೋ ಹಾಕಿರುವುದು ಅವಶ್ಯಕ. ಇದೇ ಕಾರ್ಯ-ಕಾರಣ ಸಿದ್ಧಾಂತ. ಇದು ತೀರ ಸರಳೀಕೃತ ವಿಶ್ಲೇಷಣೆ. ಆದರೆ, ಕೆಲವೊಂದು ಬಾರಿ ಕಾರಣ-ವನ್ನು ತಪ್ಪಾಗಿ ಭಾವಿಸಿ ಕೆಲಸ ನಡೆದಿರುವುದೂ ಉಂಟು. ಇಂಗ್ಲೆಂಡಿನ ಸ್ಕಾಟ್ಲೆಂಡ್ನ ಉತ್ತರಭಾಗದಲ್ಲಿ ಹೆಬ್ರೈಡ್ ಎಂಬ ಸಾಲು ಸಾಲು ದ್ವೀಪಗಳಿವೆ. ಕೆಲವು ದಶಕಗಳ ಹಿಂದೆ ಅಲ್ಲಿಯ ನಿವಾಸಿಗಳಿಗೆ ಒಂದು ದೊಡ್ಡ ಸಮಸ್ಯೆ-ಯಾಗಿತ್ತು. ಅದು ಈಗಲೂ ಇದೆಯೆಂದು ಕೆಲವರು ಹೇಳುತ್ತಾರೆ. ಅಲ್ಲಿಯ ಜನರ ತಲೆಯಲ್ಲಿ ಹೇನುಗಳು ವಿಪರೀತವಾಗಿ ಇರುತ್ತಿದ್ದವು. ಏನೇನು ಪ್ರಯತ್ನ ಮಾಡಿದರೂ ಅವುಗಳ ಕಾಟದಿಂದ ಮುಕ್ತಿ ದೊರೆಯುತ್ತಿರಲಿಲ್ಲ.
ಆದರೆ, ಯಾವುದೋ ಕಾರಣಕ್ಕೆ ತಲೆಯಲ್ಲಿಯ ಹೇನುಗಳು ಮಾಯ-ವಾದೊಡನೆ ಆ ವ್ಯಕ್ತಿಗೆ ವಿಪರೀತ ಜ್ವರ ಬಂದು ಆರೋಗ್ಯ ಹದಗೆಡುತ್ತಿತ್ತು. ಅದಕ್ಕೆ ಅವರು ಆಗ ತಲೆಯಲ್ಲಿ ಹೇನುಗಳನ್ನು ತಂದು ಹಾಕಿಕೊಳ್ಳುತ್ತಿದ್ದರು. ಎರಡು ಮೂರು ದಿನಗಳ ಪ್ರಯತ್ನದ ನಂತರ ಅವು ವ್ಯಕ್ತಿಯ ತಲೆಯಲ್ಲಿ ನೆಲೆಯೂರುತ್ತಿದ್ದವು. ಅವು ನೆಲೆ ನಿಂತೊಡನೆ ಜ್ವರ ಕಡಿಮೆಯಾಗಿ ಆರೋಗ್ಯ ಸುಧಾರಿಸುತ್ತಿತ್ತು. ಇದು ಹೇಗೆ ಸಾಧ್ಯ ಎಂಬುದು ವೈದ್ಯರಿಗೂ ಬಹಳ ಕಾಲ ತಿಳಿಯಲಿಲ್ಲ. ಆದರೆ, ಇದರ ಮರ್ಮವನ್ನು ಒಬ್ಬ ಕೀಟಶಾಸ್ತ್ರಜ್ಞ ಕಂಡು ಹಿಡಿದ. ಜನ ತಿಳಿದುಕೊಂಡಂತೆ ಹೇನು ತಲೆಯಲ್ಲಿ ಇಲ್ಲದಿದ್ದಾಗ ಜ್ವರ ಬರುತ್ತಿರಲಿಲ್ಲವೆಂದಲ್ಲ. ಜ್ವರ ಬಂದಾಗ ಹೇನುಗಳು ಉದುರಿಹೋಗುತ್ತಿದ್ದವು. ತಲೆಯಲ್ಲಿ ಬೆಚ್ಚಗೆ ಸೇರಿಕೊಂಡಿದ್ದ ಹೇನುಗಳು ವ್ಯಕ್ತಿಗೆ ಜ್ವರ ಬಂದಾಗ ತಲೆ ಬಿಸಿಯಾಗಿ ಅಲ್ಲಿ ಇರಲಾರದೆ ಹೊರಟುಹೋಗುತ್ತಿದ್ದವು. ಜ್ವರ ಕಡಿಮೆಯಾದೊಡನೆ ಮತ್ತೆ ಸೇರಿಕೊಳ್ಳುತ್ತಿದ್ದವು.
ಇಂಥದೇ ತಪ್ಪು ಕಲ್ಪನೆಗಳು ನಮ್ಮ ಬದುಕಿನಲ್ಲಿ ಸೇರಿಹೋಗಿವೆ. ಉದಾಹರಣೆಗೆ ದಿನನಿತ್ಯ ಜಾಹೀರಾತನ್ನು ನೋಡುತ್ತೇವೆ. ದಟ್ಟವಾದ, ಉದ್ದವಾದ ಕೂದಲಿಗೆ ಈ xyz ಶಾಂಪೂ ಕಾರಣ. ಈ ಜಾಹೀರಾತಿನಲ್ಲಿ ಅತ್ಯಂತ ದಟ್ಟವಾದ, ಉದ್ದ ಕೂದಲು ಇದ್ದ ಹುಡುಗಿಯ ಅಥವಾ ಮಹಿಳೆಯ ಚಿತ್ರವಿರುತ್ತದೆ. ಜಾಹೀರಾತು ನೋಡಿದವರು ತಮ್ಮ ಕೂದಲೂ ಅದರಂತೆಯೇ ಆದಿತೆಂದುಕೊಂಡು ಹಣಕೊಟ್ಟು ಕೊಂಡು ಕೂದಲಿನೊಂದಿಗೆ ಹಣವನ್ನು ಕಳೆದುಕೊಳ್ಳುತ್ತೇವೆ. ಶಾಂಪೂ ಕಂಪನಿಯವರು ದಟ್ಟವಾದ, ಉದ್ದ ಕೂದಲು ಇದ್ದ ಹುಡುಗಿಯನ್ನು ಹುಡುಕಿ, ಆಕೆಯ ಚಿತ್ರವನ್ನು ಶಾಂಪೂ ಬಾಟಲಿಯೊಂದಿಗೆ ಮುದ್ರಿಸುತ್ತಾರೆ.
ಶಾಂಪೂವಿನಿಂದ ಅವರ ಕೂದಲು ಸಮೃದ್ಧವಾಗಲಿಲ್ಲ, ಬದಲಾಗಿ ಅವರ ಕೂದಲಿನಿಂದ ಶಾಂಪೂ ತಯಾರಿಸಿದ ಕಂಪನಿ ಸಮೃದ್ಧವಾಯಿತು. ಇನ್ನೊಂದು ಅಂಥದೇ ಸಂಶೋಧನೆ! ಯಾರ ಮನೆಯಲ್ಲಿ ಪುಸ್ತಕಗಳು ಸಾಕಷ್ಟು ಪ್ರಮಾಣದಲ್ಲಿವೆಯೋ ಆ ಮನೆಯ ಮಕ್ಕಳು ಶಿಕ್ಷಣದಲ್ಲಿ ಪ್ರಗತಿ ಪಡೆಯುತ್ತಾರೆ. ಪುಸ್ತಕಗಳ ರಾಶಿ ಮಕ್ಕಳನ್ನು ಬುದ್ಧಿವಂತರಾಗಿ ಮಾಡಲಿಲ್ಲ. ಅಷ್ಟು ಪುಸ್ತಕಗಳನ್ನು ಮನೆಯಲ್ಲಿ ಇಟ್ಟುಕೊಂಡ ಪಾಲಕರಿಗೆ ಶಿಕ್ಷಣದ ಮಹತ್ವ ತಿಳಿದಿದೆ. ಅವರು ಮಕ್ಕಳ ಜೊತೆಗೇ ಕುಳಿತುಕೊಂಡು ಓದುವಂತೆ ಮಾಡುತ್ತಾರೆ. ಆದ್ದರಿಂದ ಯಾವುದಾದರೂ ಇದೇ ರೀತಿ ಕಾರ್ಯ ಕಾರಣ ಸಂಬಂಧದಂತೆ ತೋರಿದರೆ ಸ್ವಲ್ಪ ಆಳವಾಗಿ ವಿಚಾರಮಾಡಿ ಪರೀಕ್ಷಿಸೋಣ. ಅವು ಬೇರೆಯಾಗಿಯೇ ಇರುವ ಸಾಧ್ಯತೆ ಇದೆ. ಹೇನು ಹಾಗೂ ಜ್ವರಗಳಂತೆ. ಕೃಪೆ : ನೆಟ್