ಕಥೆ-480
ರಾಮಪ್ಪನ ಆಕಳು ಮತ್ತು ಕಿತಾಪತಿ ಮಂಗ
ಒಂದು ಊರಲ್ಲಿ ರಾಮಪ್ಪ ಎಂಬ ರೈತ ವಾಸವಾಗಿದ್ದ. ಅವನ ಬಳಿ ಒಂದು ಆಕಳಿತ್ತು. ರಾಮಪ್ಪ ದಿನಾಲೂ ಆಕಳನ್ನು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದ. ಆಗ ಊಟದ ಬುತ್ತಿಯನ್ನೂ ಕೊಂಡೊಯ್ಯುತ್ತಿದ್ದ.
ರಾಮಪ್ಪ ಆಕಳನ್ನು ಬೇವಿನ ಮರಕ್ಕೆ ಕಟ್ಟಿ ತಾನು ಹೊಲದಲ್ಲಿ ಕೆಲಸ ಮಾಡಲು ಹೋಗುತ್ತಿದ್ದ. ಆ ಮರದ ಮೇಲೆ ಒಂದು ಮಂಗ ವಾಸವಾಗಿತ್ತು. ಒಮ್ಮೆ ಮರದ ಕೆಳಗೆ ರಾಮಪ್ಪ ಬುತ್ತಿ ಇಡುತ್ತಿದ್ದದ್ದನ್ನು ಮಂಗ ನೋಡಿತು. ಅವನು ಹೊಲಕ್ಕೆ ಹೋದ ಕೂಡಲೇ ಬುತ್ತಿ ಬಿಚ್ಚಿ ಅನ್ನ ತಿಂದು ಉಳಿದದ್ದನ್ನು ಆಕಳ ಮುಖಕ್ಕೆ ಹಚ್ಚಿ ಬೇರೆ ಮರದ ಕಡೆ ಹೋಯಿತು.
ರಾಮಪ್ಪ ಕೆಲಸ ಮುಗಿಸಿ ಊಟ ಮಾಡಲು ಮರದ ಕೆಳಗೆ ಬಂದಾಗ ಅನ್ನ ಚಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡ.
ಆಕಳ ಬಾಯಿ ಮುಖದ ಬಳಿ ಅನ್ನ ಮೆತ್ತಿಕೊಂಡಿದ್ದದ್ದನ್ನು ಕಂಡು, ಇದಕ್ಕೆ ಅಷ್ಟು ಮೇವು ಹಾಕಿದರೂ ನನ್ನ ಅನ್ನವನ್ನು ತಿಂದಿದೆ ಎಂದು, ಆಕಳಿಗೆ ಹೊಡೆದು ಮನೆಯತ್ತ ಎಳೆದುಕೊಂಡು ಹೋದ.
ಮರುದಿನ ರಾಮಪ್ಪ ಮತ್ತೆ ಹಿಂದಿನ ದಿನದಂತೆ ಬುತ್ತಿ ಇಟ್ಟು ಆಕಳನ್ನು ಮರಕ್ಕೆ ಕಟ್ಟಿ ಕೆಲಸಕ್ಕೆ ಹೋದ. ಇದೇ ಸಮಯಕ್ಕೆ ಕಾಯುತ್ತಿದ್ದ ಮಂಗ ಕೆಳಗಿಳಿದು ಅನ್ನವನ್ನು ತಿಂದು ಹಸುವಿನ ಮುಖಕ್ಕೆ ಹಚ್ಚಿ ಅದರ ಹಗ್ಗ ಬಿಚ್ಚಿ ಬಿಡುತ್ತೆ. ಆಕಳು ಬೆಳೆಯನ್ನೆಲ್ಲ ಹಾಳುಗೆಡವುತ್ತದೆ. ಎಂದಿನಂತೆ ಊಟದ ಸಮಯಕ್ಕೆ ಬಂದ ರೈತ ಇದನ್ನು ಕಂಡು ಕೆಂಡಾಮಂಡಲನಾಗುತ್ತಾನೆ. ಬಾಸುಂಡೆ ಬರುವವರೆಗೂ ಹೊಡೆದು ಮನೆಗೆ ಎಳೆದೊಯ್ಯುತ್ತಾನೆ.
ಈ ವಿಷಯವನ್ನು ಹೆಂಡತಿಗೆ ತಿಳಿಸಿ, ಆಕಳನ್ನು ನಾಳೆಯೇ ಮಾರಿಬಿಡೋಣ ಎನ್ನುತ್ತಾನೆ. ಆಗ ಹೆಂಡತಿ, "ನಾಳೆ ಒಂದು ದಿನ ತಡೆಯಿರಿ. ನಾನೊಂದು ಉಪಾಯ ಹೇಳುತ್ತೇನೆ, ಅದರಂತೆ ಮಾಡಿ' ಎಂದು ಗಂಡನಿಗೆ ಉಪಾಯ ತಿಳಿಸುತ್ತಾಳೆ.
ರಾಮಪ್ಪ ಹೆಂಡತಿ ಹೇಳಿದ ಹಾಗೆ ಹೊಲಕ್ಕೆ ಹೋಗುತ್ತಾನೆ. ಎಂದಿನಂತೆ ಹಸುವನ್ನು ಮರಕ್ಕೆ ಕಟ್ಟಿ ಬುತ್ತಿಯನ್ನು ಇಟ್ಟು ಹೋದಂತೆ ನಟಿಸುತ್ತಾನೆ. ನಿಧಾನಕ್ಕೆ ಒಂದು ಪೊದೆಯ ಮರೆಯಲ್ಲಿ ನಿಂತು ಕದ್ದು ನೋಡುತ್ತಿರುತ್ತಾನೆ. ಅಷ್ಟೊತ್ತಿಗೆ ಮಂಗ ಇಳಿದು ಬಂದು ಅನ್ನ ತಿಂದು ಹಸುವಿನ ಮುಖಕ್ಕೆ ಅನ್ನ ಉಜ್ಜಿ ಇನ್ನೇನು ಹಗ್ಗಬಿಚ್ಚಬೇಕು ಎನ್ನುವಷ್ಟರಲ್ಲಿ ರೈತ ಹಿಂದಿಂದ ಬಂದು ಮಂಗನನ್ನು ಹಿಗ್ಗಾಮುಗ್ಗ ಥಳಿಸುತ್ತಾನೆ. ಮಂಗ ಹೊಲಬಿಟ್ಟು ಓಡಿಹೋಗುತ್ತದೆ. ರೈತನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ವಿವೇಚನೆಯಿಲ್ಲದೇ ವಿನಾಕಾರಣ ಆಕಳನ್ನು ಹಾಗೂ ಹಸುವನ್ನು ಹೊಡೆದೆನಲ್ಲ ಎಂದು ಪಶ್ಚಾತಾಪಪಡುತ್ತಾನೆ.
ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು
ಕೃಪೆ: ಕಿಶೋರ್.