Thursday, August 8, 2024

 ಕಥೆ-481

ನಾಗರ ಪಂಚಮಿ ಬಂತು, ಅಣ್ಣ ಬರುತ್ತಾನೆ ಕರೆಯಾಕ, ಕರಿ ಸೀರೆ ಉಡಿಸಾಕ..

ಹಿಂದೂ ಸಾಂಪ್ರದಾಯದ ಪ್ರಕಾರ ಎಲ್ಲ ಹಬ್ಬಗಳಿಗೆ ಮುನ್ನುಡಿಯಂತೆ ಬರುವ ಹಬ್ಬ ಎಂದರೆ ಅದು ನಾಗರ ಪಂಚಮಿ.

ಇದು ವಿಶೇಷವಾಗಿ ಹೆಣ್ಣು ಮಕ್ಕಳು ಸಂಭ್ರಮಿಸುವ ಹಬ್ಬವಾಗಿದೆ. 

 ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿ ಇನ್ನು ಹಲವು ವಿಶೇಷತೆಗಳಿಂದ ಕೂಡಿರುತ್ತದೆ. 'ಪಂಚಮಿ ಬಂತು, ಅಣ್ಣ ಬರುತ್ತಾನೆ ಕರೆಯಾಕ, ಕರಿ ಸೀರೆ ಉಡಿಸಾಕ' & ಪಂಚಮಿ ಹಬ್ಬ ಉಳಿದಾವ ದಿನ ನಾಕ..ಎನ್ನುವ ಜಾನಪದ ಹಾಡುಗಳು ಹಬ್ಬದ ವಿಶೇಷತೆ ಸಾರುತ್ತದೆ. ತವರಿಗೆ ಹೆಣ್ಣುಮಕ್ಕಳನ್ನು ಆಹ್ವಾನಿಸಿ, ಉಡುಗೊರೆ ನೀಡಿ ಗೌರವಿಸಲಾಗುತ್ತದೆ.

ನಮ್ಮ ಪೂರ್ವಜರ ಕಾಲದಿಂದಲೂ ನಾಗಪೂಜೆ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. 

ಪಂಚಮಿ ವಿಶೇಷವಾಗಿ ಕಡ್ಲೆ, ಗೋಧಿ, ಶೇಂಗಾ, ರವೆ, ಹೀಗೆ ನಾನಾ ತರಹದ ಉಂಡಿಗಳು, ಕಡುಬುಗಳನ್ನು ತಯಾರಿಸಿ ನೈವೇದ್ಯ ಮಾಡಿ ತಿಂದು ಸಂಭ್ರಮಿಸುವ ಹಬ್ಬ.

ಮಕ್ಕಳು ಸಂಭ್ರಮಿಸುವುದರ ಜೊತೆಗೆ ಒಣಕೊಬ್ಬರಿ ಬಟ್ಟಲುಗಳಲ್ಲಿ ದಾರ ಕಟ್ಟಿಕೊಂಡು ಬುಗರಿಯಂತೆ ತಿರುಗಿಸಿ ಆಟವಾಡುವ ಚಿತ್ರಣ ನಯನ ಮನೋಹರ. ಆಟ ಆಡುತ್ತಾ ಒಣಕೊಬ್ಬರಿ ತಿಂದು ಸಂತೋಷ ಪಡುವರು.

ಮಕ್ಕಳು ಮನೆ/ಗಿಡಕ್ಕೆ ಕಟ್ಟಿದ ಜೋಕಾಲಿ ಆಡಿದರೆ, ಹೊಸದಾಗಿ ಮದುವೆಯಾದ ಹೆಣ್ಣು ಮಕ್ಕಳು ಸಂಭ್ರಮದಿಂದ ತವರು ಮನೆಗೆ ಆಗಮಿಸಿ ಸಂಭ್ರಮದಿಂದ ಹಬ್ಬ ಆಚರಿಸುವರು. 

ಗ್ರಾಮೀಣ ಪ್ರದೇಶದ ಮನೆ-ಮನೆಗಳಲ್ಲಿ ಬೆಳಗ್ಗೆಯಿಂದ ಮಹಿಳೆಯರು ಮಕ್ಕಳೊಂದಿಗೆ ಹೊಸ ಬಟ್ಟೆ ತೊಟ್ಟು, ದೇವಸ್ಥಾನ,ನಾಗರಮೂರ್ತಿ, ಹುತ್ತಗಳಿರುವ ಪ್ರದೇಶಗಳಿಗೆ ತೆರಳಿ ಹಾಲೆರೆದು ವಿಶೇಷ ಪೂಜೆ ಸಲ್ಲಿಸುವ ಸಾಂಪ್ರದಾಯವಿದೆ.

ಮುಖ್ಯ ವಿಚಾರವೆಂದರೆ, ಯಾವುದೇ ಕಾರಣಕ್ಕೂ ಹಾವಿಗೆ ಅಪ್ಪಿ-ತಪ್ಪಿಯೂ ಹಾಲು ಉಣಿಸಬಾರದು. ನಾಗರ ಹಬ್ಬದ ದಿನದಂದು ಮಾತ್ರವೇ ಅಲ್ಲ, ಯಾವುದೇ ದಿನವೂ ಹಾವಿಗೆ ಹಾಲು ಹಾಕಬಾರದು. ಏಕೆಂದರೆ ಹಾವು ಹಾಲು ಕುಡಿಯುವುದಿಲ್ಲ. ಹುಳು ಹುಪ್ಪಡಿ ಕಪ್ಪೆ ಇಲಿಗಳು ಅದರ ಆಹಾರ..

ಹಾವಿನ ಭಯ ಹೋಗಲಾಡಿಸಲು ಈ ನಾಗರ ಪಂಚಮಿಯನ್ನು ಆಚರಿಸುವುದಕ್ಕೆ ಕಾರಣ. ಮಳೆಗಾಲದಲ್ಲಿ ಹೆಚ್ಚಾಗಿ ಕಂಡುಬರುವ ಹಾವುಗಳಿಂದ ರಕ್ಷಣೆ ಪಡೆಯುವ ಉದ್ದೇಶ ಎದ್ದು ಕಾಣುತ್ತದೆ. ಮಳೆಗಾಲದಲ್ಲಿ ಹಾವಿನ ಹುತ್ತಗಳಲ್ಲಿ ನೀರು ಜಾಸ್ತಿ ಇರುವುದರಿಂದ ಹಾವುಗಳು ತಮ್ಮ ಬಿಲಗಳನ್ನು ಬಿಟ್ಟು ಸುರಕ್ಷಿತ ಸ್ಥಳವನ್ನು ಹುಡುಕಿಕೊಂಡು ಸಹಜವಾಗಿ ಹೊರ ಬರುತ್ತವೆ. ಕೃಷಿ ಕಾಯಕದಲ್ಲಿ ತೊಡಗಿರುವ ಕಾರ್ಮಿಕರಿಗೆ ಹಾವುಗಳ ಭಯ ಹೋಗಲಾಡಿಸಲು ಈ ಹಬ್ಬ ಆಚರಿಸಲಾಗುತ್ತಿದೆ.. ಯಾವುದೇ ರೀತಿಯ ಅಪಾಯ ನೀಡದಿರು ಎಂದು ಬೇಡುವ ಉದ್ದೇಶವೂ ಇರುವುದು ಸುಳ್ಳಲ್ಲ. 


ವಿಶ್ವಾದ್ಯಂತ ಅಂದಾಜು 54 ಲಕ್ಷ ಜನರು ಹಾವುಗಳು ಕಚ್ಚುವ ಪ್ರಕರಣಕ್ಕೆ ಒಳಗಾಗುತ್ತಾರೆ. ಅದರಲ್ಲಿ 18 ರಿಂದ 27 ಲಕ್ಷ ಜನ ವಿಷಕಾರಿ ಹಾವುಗಳು ಕಚ್ಚುವ ಪ್ರಕರಣಕ್ಕೆ ಒಳಗಾಗುತ್ತಾರೆ. ಹಾವಿನ ಕಡಿತದಿಂದ ಪ್ರತಿ ವರ್ಷ ಸುಮಾರು 81,410 ರಿಂದ 1,37,880 ಜನರು ಸಾಯುತ್ತಾರೆ ಮತ್ತು ಮೂರು ಪಟ್ಟು ಜನ ಹೆಚ್ಚು ಅಂಗಚ್ಛೇದನೆಗಳು ಮತ್ತು ಇತರ ಶಾಶ್ವತ ಅಂಗವೈಕಲ್ಯಗಳನ್ನು ಹೊಂದುತ್ತಾರೆ..

ಹಾವುಗಳು ಸಹ ಪರಿಸರದ ಒಂದು ಅವಿಭಾಜ್ಯ ಅಂಗ. ಆಹಾರ ಸರಪಳಿಯಲ್ಲಿ ಅವುಗಳ ಪಾತ್ರ ದೊಡ್ಡದು. ಎಲ್ಲಾ ಹಾವುಗಳು ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅವುಗಳ ಸಂತತಿ ನಿರ್ನಾಮವಾದರೆ ಪರಿಸರದಲ್ಲಿ, ಆಹಾರ ಸರಪಳಿಯಲ್ಲಿ ಏರುಪೇರು ಶುರುವಾಗುತ್ತದೆ.

ಹಾವುಗಳನ್ನು ಕಂಡಾಗ ನಮಗೆಷ್ಟು ಭಯವಿರುತ್ತದೋ ಅಷ್ಟೇ ಭಯ ಹಾವುಗಳಿಗೆ ಇರುತ್ತದೆ. ಅವುಗಳ ಜೊತೆ ಹುಡುಗಾಟ ಮಾಡದೆ ತರಬೇತಿ ಪಡೆದ ವೃತ್ತಿಪರ ಅಥವಾ ವನ್ಯಜೀವಿ ತಜ್ಞರಿಂದ ಸಹಾಯ ಪಡೆಯುವುದು ಉತ್ತಮ. 

ಎಲ್ಲಾ ಹಾವುಗಳು ವಿಷಕಾರಿ ಅಲ್ಲ. ಭಾರತದಲ್ಲಿ ವಿವಿಧ ರೀತಿಯ ನಾಗರಹಾವುಗಳು, ಸಾಮಾನ್ಯ ಕ್ರೈಟ್, ರಸೆಲ್ಸ್ ವೈಪರ್ ಸ್ಕೇಲ್ಡ್ ವೈಪರ್ ಗಳು ವಿಷಕಾರಿ ಹಾವುಗಳಾಗಿವೆ. 

ಹಾವಿಗೆ ಮೂಲತಃ ನಾಲ್ಕು ಕಾಲುಗಳು ಇದ್ದವು. ಅದರ ಉದ್ದನೆಯ ದೇಹಕ್ಕೆ ಈ ನಾಲ್ಕು ಕಾಲುಗಳಿಂದ ಓಡಲು ಸಾಧ್ಯವಾಗದೆ, ಅದು ತನ್ನ ದೇಹವನ್ನು ತೆವಳುವ ಮೂಲಕ ಓಡಲು ಪ್ರಾರಂಭಿಸಿತು. ಹೀಗಾಗಿ ಲೆಮಾರ್ಕ್ ಸಿದ್ಧಾಂತದಂತೆ ಬಳಸಿದ ಅಂಗಗಳು ಬಲಿಷ್ಠವಾಗುತ್ತದೆ ಬಳಸದ ಅಂಗಗಳು ನಶಿಸಿ ಹೋಗುತ್ತವೆ.. ಕಾಲುಗಳನ್ನು ಬಳಸದ ಕಾರಣ ಕಾಲುಗಳು ನಶಿಸಿಹೋಗಿವೆ ಎಂಬುದು ಜೀವಿಕಾಸದ ಸಿದ್ಧಾಂತ.

ಕೆಲವರು ಹೇಳುತ್ತಾರೆ ಹಾವು ನಮ್ಮ ಧ್ವನಿಯನ್ನು ಗುರುತಿಸುತ್ತದೆ ಎಂದು ಆದರೆ ವಾಸ್ತವಾಗಿ ಹಾವಿಗೆ ಕಿವಿ ಇರುವುದಿಲ್ಲ.. 

ಹಾವಿನ ದ್ವೇಷ ಕೇವಲ ಕ್ಷಣ ಮಾತ್ರ.

ಹಾವಿಗೆ ಹೊಡೆದರೆ ಓಡಿ ಹೋಗುತ್ತದೆ ಅಥವಾ ಸತ್ತು ಹೋಗಬಹುದು. ಅದು ದ್ವೇಷ ಸಾಧನೆ ಮಾಡುವುದೇ ಇಲ್ಲ. ಒಂದು ವೇಳೆ ಅದರ ಬೇಟೆ ಅದನ್ನು ಹಿಡಿಯಲು ಕಾಯುತ್ತದೆ. ಮನೆಯ ಒಳಗೆ ಬರುವುದೂ ಕೂಡ ಬೇಟೆಯನ್ನು ಹುಡುಕಿಕೊಂಡೆ. ಅವಿತುಕೊಳ್ಳುವುದು ಭಯದಿಂದಲೋ ಅಥವಾ ಅದರ ಬೇಟೆಯನ್ನು ನಿರೀಕ್ಷೆ ಮಾಡುವುದರಿಂದಲೋ ಆಗಿರುತ್ತದೆ. ಆದರೆ ಅದಕ್ಕೆ ದ್ವೇಷ ಇರುವುದು ಕೇವಲ ಕೆಲವು ಕ್ಷಣ ಮಾತ್ರ.

ಏನೇ ಆಗಲಿ ಹಬ್ಬ ಹರಿದಿನಗಳಿರುವುದು ದ್ವೇಷ ಮರೆತು, ಬಂಧು ಬಾಂಧವರ ಜೊತೆ ಸಂತಸ ಸಂಭ್ರಮದೊಂದಿಗೆ ಬಾಂಧವ್ಯ ಬೆಸೆಯಲು..

💐💐💐💐💐

By: Shankargouda Basapur 

AM GHS HIREMYAGERI

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು