ಕಥೆ-482
ಅನುಭವದ ಮಾತು
60ವರ್ಷಗಳಿಂದ ಭಿಕ್ಷೆ ಬೇಡುತ್ತ ಹಾಳು ದೇಗುಲದಲ್ಲಿಯೇ ವಾಸವಾಗಿದ್ದ ಒಬ್ಬ ವಯೋವೃದ್ಧ ಜೀವನದುದ್ದಕ್ಕೂ ಯಾವ ಆಸೆಗಳಿಲ್ಲದೇ ಕೇವಲ ಭಿಕ್ಷಾಟನೆ ಮಾಡಿ ಭಿಕ್ಷೆಯಿಂದ ಬಂದುದರಲ್ಲಿಯೇ ಉಂಡು ಜೀವನದ ಪರಮ ಶಾಂತಿ ಕಂಡಿದ್ದ. ವಯಸ್ಸಾದ ಅವನಿಗೆ ಇನ್ನು ಭಿಕ್ಷಾಟನೆ ಸಾಕು. ನನಗಿಂತ ಬಡವರಿಗೆ ಈ ಭಿಕ್ಷಾ ಪಾತ್ರೆ ಕೊಡುವದೆಂದು ನಿರ್ಧರಿಸಿದ. ಅದೇ ಮಾರ್ಗವಾಗಿ ಒಬ್ಬ ರಾಜ ಹಾಯ್ದು ಹೋಗುತ್ತಿರುವಾಗ ದೇಗುಲ ಕಂಡು ಅಲ್ಲಿ ಬಂದು ರಾಜ ದೇವರಲ್ಲಿ ಬೇಡಿಕೊಂಡ. ದೇವರೇ ನಾನು ಯುದ್ಧಕ್ಕೆ ಹೊರಟಿದ್ದೇನೆ. ಯುದ್ಧದಲ್ಲಿ ರಾಜ್ಯ ತನಗೆ ದೊರೆತು ಜಯಶಾಲಿಯಾಗುವಂತೆ ಹರಸು ಎಂದು ಬೇಡಿಕೊಂಡ. ಇದನ್ನು ಕಂಡ ವದ್ಧ ಭಿಕ್ಷುಕ ಇವನೇ ನಿಜವಾದ ಬಡವನೆಂದು ಭಾವಿಸಿದ. ಅರಮನೆ, ರಾಜ್ಯ, ರಾಜ ವೈಭೋಗವಿದ್ದರೂ ಇವನು ಅಸುಖಿ. ಈತನಿಗೆ ಇನ್ನೂ ಬೇರೆ ರಾಜ್ಯ ಗೆಲ್ಲಬೇಕೆನ್ನುವ ದಾಹವಿದೆ ಎನ್ನುವದನ್ನು ಅರಿತ ವೃದ್ಧ, ರಾಜನಿಗೆ ಭಿಕ್ಷಾ ಪಾತ್ರೆ ಕೊಡಲು ಹೋದಾಗ ನಾನು ರಾಜ. ನನಗೇನು ಕಡಿಮೆಯಾಗಿದೆ. ಸಾಕಷ್ಟು ಶ್ರೀಮಂತನಿದ್ದೇನೆ ಅಂದ. ಆಗ ವೃದ್ಧ ಜೀವನದಲ್ಲಿ ಕೇವಲ ಭಿಕ್ಷೆಯಿಂದಲೇ ಬದುಕಿದ ನನಗೆ ಯಾವ ಆಸೆಯೂ ಇಲ್ಲ. ನಾನು ಸಂತೃಪ್ತ ಶ್ರೀಮಂತ. ಆದರೆ ನೀನು ರಾಜನಾಗಿದ್ದರೂ ಇನ್ನೊಂದು ರಾಜ್ಯ ಗೆಲ್ಲಬೇಕೆನ್ನುವ ನಿನ್ನ ಆಸೆಗೆ ಮಿತಿ ಇಲ್ಲ. ನೀನು ನನಗಿಂತ ಬಡವ. ಅದಕ್ಕಾಗಿ ನಿನಗೆ ಈ ಭಿಕ್ಷಾ ಪಾತ್ರೆ ಕೊಡುತ್ತಿದ್ದೇನೆ ತೆಗೆದುಕೋ ಎಂದಾಗ ರಾಜ ಪರಿವರ್ತನೆಯಾಗಿದ್ದ.
ಕೃಪೆ : ಸಿದ್ದೇಶ್ವರ ಸ್ವಾಮಿಜೀ