ಕಥೆ-489
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು
ಭಾರತೀಯರಾದ ನಾವು ಪ್ರತಿವರ್ಷ ಸ್ವಾತಂತ್ರ್ಯ ಸಿಕ್ಕ ದಿನವನ್ನು ಹೆಮ್ಮೆಯಿಂದ ನೆನೆಯಬೇಕಿದೆ. ಅದರ ಮಹತ್ವ ತಿಳಿಯಬೇಕಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಪ್ರಾಣತೆತ್ತ, ಬಲಿದಾನವಾದ ಎಲ್ಲ ವೀರರನ್ನು ನೆನೆದು, ಅವರಿಗೆ ನಮನ ಸಲ್ಲಿಸಬೇಕಿದೆ. ನಮ್ಮ ದೇಶದ ಸ್ವಾತಂತ್ರ್ಯಕ್ಕೆ 1857 ರಿಂದ 1947 ರವರೆಗೆ ಹಲವು ದಶಕಗಳ ಕಾಲ ಹೋರಾಡಿದ ಎಲ್ಲರನ್ನೂ ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಲೇಬೇಕು.
ನಮಗೆ ಅಗತ್ಯವಾಗಿರುವ ಸ್ವಾತಂತ್ರ್ಯವೆಂದರೆ- ತನ್ನ ಇಷ್ಟದಂತೆ ಬದುಕುವ ಮತ್ತು ವೈಯಕ್ತಿಕ ಗುರಿಗಳನ್ನು ನಿರ್ವಿಘ್ನವಾಗಿ ಮುಟ್ಟುವ ಸ್ವಾತಂತ್ರ್ಯ. ತನ್ನ ಹವ್ಯಾಸವನ್ನೇ ವೃತ್ತಿಯಾಗಿಸುವ ಆರ್ಥಿಕ ಸ್ವಾತಂತ್ರ್ಯ. ಆಮಿಷಕ್ಕೆ ಒಳಗಾಗದೆ ಜವಾಬ್ದಾರಿಯಿಂದ ಮತ ಚಲಾಯಿಸುವ ಸ್ವಾತಂತ್ರ್ಯ. ಜನಪರವಾಗಿ ಕೆಲಸ ಮಾಡುವಂತೆ ಒತ್ತಾಯಿಸುವ ಸಂಘಟಿತ ಸ್ವಾತಂತ್ರ್ಯ. ಅನ್ಯಾಯ, ದೌರ್ಜನ್ಯದ ವಿರುದ್ಧ ಧ್ವನಿಯೆತ್ತುವ ಸ್ವಾತಂತ್ರ್ಯ. ವ್ಯವಸ್ಥೆಯಲ್ಲಿ ಪಳಗಿದ ಲೂಟಿಕೋರರು ಸ್ವಹಿತಾಸಕ್ತಿ- ಗಾಗಿ ಪರಿಸರವನ್ನು ಲೂಟಿ ಮಾಡಿ, ಜನಸಾಮಾನ್ಯರ ಬದುಕು ಮತ್ತು ಜೀವವೈವಿಧ್ಯವನ್ನು ನಿರ್ನಾಮಗೊಳಿಸದಂತೆ ಜನಜಾಗೃತಿ ಮೂಡಿಸುವ ಸ್ವಾತಂತ್ರ್ಯ, ಜಾತಿ, ಧರ್ಮ ಮತ್ತು ಲಿಂಗ ತಾರತಮ್ಯಗಳನ್ನು ಮೀರಿ ಬದುಕುವ ಸ್ವಾತಂತ್ರ್ಯ. ಪ್ರಾಪಂಚಿಕ ವೈಭೋಗಗಳಿಗೆ ಸಡ್ಡು ಹೊಡೆದು ಸರಳವಾಗಿ ಬದುಕುವ ಸ್ವಾತಂತ್ರ್ಯ...
ಇಂದಿನ ಎಳೆಯರಾದ ನಾವು ಮುಂದೆ ದೊಡ್ಡವರಾದ ನಂತರ ಒಂದೊಂದು ಕ್ಷೇತ್ರದಲ್ಲಿ ಯಾರು ಏನು ಬೇಕಾದರೂ ಸಾಧಿಸುವ ಅವಕಾಶ ನಮಗಿದೆ. ಹಿಂದೆ ದೇಶಕ್ಕೆ ಸ್ವಾತಂತ್ರ ತಂದುಕೊಡಲು ಅನೇಕ ಜನ ತಮ್ಮ ಜೀವನವನ್ನು ದೇಶದ ಜನರ ಸಂತೋಷಕ್ಕಾಗಿ ಮೀಸಲಿಟ್ಟರು. ಹಾಗೆಯೇ ಇಂದು ನಮ್ಮ ಸಮಾಜದಲ್ಲಿರುವ ಹಲವಾರು ಸಮಸ್ಯೆಗಳನ್ನು ಹೋಗಲಾಡಿಸಲು ನಾವು ಜ್ಞಾನವನ್ನು ಹೆಚ್ಚಿಸಿಕೊಂಡು ಇಂತಹ ಒಳ್ಳೆ ಕೆಲಸಗಳನ್ನು ಮಾಡಬೇಕಿದೆ.
👍