ಕಥೆ-497
ಅನೀತಿಯ ಫಲ
ಒಂದು ಹಳ್ಳಿಯಲ್ಲಿ ಒಬ್ಬ ಅಜ್ಜಿಯಿದ್ದಳು. ಅವಳು ಮನೆ ಕೆಲಸ ಮಾಡಲು ಇಬ್ಬರು ಹೆಣ್ಣಾಳುಗಳನ್ನಿಟ್ಟುಕೊಂಡಿದ್ದಳು. ಬೆಳಗಿನ ಜಾವ ಅಜ್ಜಿ ಮನೆಯಲ್ಲಿ ಸಾಕಿಕೊಂಡಿದ್ದ ಹುಂಜ ಕೂಗುತ್ತಲೇ ಆ ಹೆಣ್ಣಾಳುಗಳನ್ನು ಎಬ್ಬಿಸಿ ಕೆಲಸಕ್ಕೆ ಹಚ್ಚುತ್ತಿದ್ದಳು. ನಸುಕಿನಲ್ಲಿಯೇ ಆಳುಗಳು ಕೆಲಸವನ್ನು ಶುರುಮಾಡಬೇಕಾಗಿತ್ತು.
ಆದರೆ ಅವರಿಗೆ ಅಷ್ಟು ಬೆಳಗಿನಲ್ಲೇ ಕೆಲಸ ಮಾಡುವ ಮನಸ್ಸಿರಲಿಲ್ಲ, ಇನ್ನೂ ಸ್ವಲ್ಪ ಹೊತ್ತು ಮಲಗಿರಲು ಆಸೆ.
ಒಂದು ದಿನ ಇಬ್ಬರೂ ಒಟ್ಟಾಗಿ ಸೇರಿ -
"ಈ ಮುದುಕಿ ಬೆಳಗಿನ ಜಾವ ಹುಂಜ ಕೂಗುತ್ತಲೇ ಎಬ್ಬಿಸಿ ಬಿಡುತ್ತಾಳೆ. ನಾವು ಆ ಹುಂಜವನ್ನೇ ಇಲ್ಲದಂತೆ ಮಾಡಿಬಿಟ್ಟರೆ ನಸುಕಿನಲ್ಲಿ ಏಳುವ ತೊಂದರೆಯೇ ತಪ್ಪಿ ಹೋಗುವುದು. ಆಗ ನಾವು ಹಾಯಾಗಿ ಸೂರ್ಯ ಮೂಡುವವರೆಗೂ ಮಲಗಿರಬಹುದು" ಎಂದು ಯೋಚಿಸಿಕೊಂಡರು.
ಆ ಯೋಚನೆಯೂ ಮನದಲ್ಲಿ ಮೂಡಿದೊಡನೆ ಆ ಆಳುಗಳು ಮಾರನೆಯ ದಿನವೇ ಆ ಹುಂಜವನ್ನು ಕೊಂದುಬಿಟ್ಟರು. ಆಗವರ ಮನಸ್ಸಿಗೆ ನೆಮ್ಮದಿಯಾಯಿತು.
ಆದರೆ ಅಜ್ಜಿಗೆ ವಿಪರೀತ ದುಃಖವಾಯಿತು, ಹೆಣ್ಣಾಳುಗಳಿಗೆ ಮನಸ್ಸಿನಲ್ಲಿ ಸಂತೋಷವಾಗಿದ್ದರೂ ತೋರಿಕೆಗೆ ಒಡತಿಯ ದುಃಖದಿಂದ ನೋವಾದವರಂತೆ ನಟಿಸಿದರು. ಅಂದು ರಾತ್ರಿ ಹಾಯಾಗಿ ನಿದ್ರೆ ಹೋದರು.
ಆದರೆ, ರಾತ್ರಿ ಆಳುಗಳಿಗೆ ಅಂದುಕೊಂಡಂತೆ ನೆಮ್ಮದಿ ಮಾತ್ರ ಸಿಗಲಿಲ್ಲ. ಅದರ ಬದಲು ಇನ್ನಷ್ಟು ತೊಂದರೆ ಹೆಚ್ಚಾಯಿತು.
ಏಕೆಂದರೆ ಆ ಅಜ್ಜಿ ಅವರನ್ನು ಮಧ್ಯರಾತ್ರಿಯಲ್ಲಿಯೇ ಎಬ್ಬಿಸಿ ಕೆಲಸಕ್ಕೆ ತೊಡಗಿಸಿದಳು.
ಈಗ ಹುಂಜವಿಲ್ಲ, ಆದ್ದರಿಂದ ಸಮಯಕ್ಕೆ ಸರಿಯಾಗಿ ಏಳಲಾಗದು. ಆ ಕಾರಣದಿಂದ ಮೊದಲೇ ಎದ್ದು ಬಿಟ್ಟರೆ ಒಳ್ಳೆಯದೆಂದು ಅಜ್ಜಿಯ ಯೋಚನೆ.
ಮನೆಯ ಒಡತಿಯೇ ಎದ್ದ ಮೇಲೆ ಆಳುಗಳು ಮಲಗಿರಲಾಗುವುದೇ? ಅವರು ಎದ್ದು ದುಡಿಯಬೇಕಾಗಿ ಬಂತು. ಇದರಿಂದಾಗಿ ಅವರು ಮೂರು ಗಂಟೆಗಳ ನಿದ್ರೆಗೂ ಮುಳುವು ಬಂತು.
ದುಷ್ಟ ಯೋಚನೆಗಳಿಂದ ದುಷ್ಫಲವೇ ಸಿಗುವುದು. ಆದ್ದರಿಂದ ದುಷ್ಟಯೋಚನೆ ಮಾಡಬಾರದು.
ಕೃಪೆ : ಕಿಶೋರ್.