ಕಥೆ
ಅಭ್ಯಾಸ ಬಲದ ಮೇಲೆ ನಂಬಿಕೆಯಿಡಿ.👍
ದಿನ ಕಥೆ" ಶೀರ್ಷಿಕೆ ಅಡಿಯಲ್ಲಿನ ಕಥೆಗಳು ಇವತ್ತು 500 ದಿನಗಳನ್ನು ಪೂರೈಸಿವೆ, ಇದಕ್ಕೆ ಸಹಕಾರ ನೀಡಿದ ಮೂಲ ಲೇಖಕರಿಗೂ, ನನ್ನ ಶಿಷ್ಯ ಬಳಗಕ್ಕೂ ವೃತ್ತಿಬಾಂಧವರ ಜೊತೆಗೆ ಓದುಗರೆಲ್ಲರಿಗೂ ಕಥೆಗಳ ಅಂತರ್ಜಾಲಕ್ಕೂ ತುಂಬು ಹೃದಯದ ಧನ್ಯವಾದಗಳು..
🙏🙏🙏🙏💐💐💐💐
“Today a reader, tomorrow a leader.”
ಇವತ್ತಿನ ಡಿಜಿಟಲ್ ಯುಗದಲ್ಲಿ ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆ ಇದೆ. ಮಕ್ಕಳು ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳಬೇಕಿದೆ.
ವಸ್ತುಗಳು ಪರಮಾಣುಗಳಿಂದ ಮಾಡಲ್ಪಟ್ಟಿದ್ದರೆ ಜಗತ್ತು ಕಥೆಗಳಿಂದ ಮಾಡಲ್ಪಟ್ಟಿದೆ.
Life is a story
ದಿನ ಕಥೆ ಕಳಿಸುವ ಉದ್ದೇಶವೇ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದಾಗಿದೆ..
ಅಷ್ಟೇ ಅಲ್ಲದೆ ಇವತ್ತಿನ ದಿನಮಾನಗಳಲ್ಲಿ ಪಠ್ಯಪುಸ್ತಕದ ಒತ್ತಡದ ಕಾರಣ ಮಾನವೀಯ ಮೌಲ್ಯಗಳನ್ನು ನೈತಿಕ ಕಥೆಗಳನ್ನು ಕೇಳುವುದಾಗಲಿ ಓದುವುದಾಗಲಿ ಮಕ್ಕಳಿಂದ ಸಾಧ್ಯವಾಗುತ್ತಿಲ್ಲ..
ಮಾನವೀಯ ಮೌಲ್ಯಗಳು ಮಾನವ ಧರ್ಮದ ತಳಹದಿ. ಅದರ ಜೊತೆಗೆ ಮಕ್ಕಳಲ್ಲಿ ಕಲ್ಪನೆ, ಕಾನ್ಫಿಡೆನ್ಸ್ ಕ್ಯೂರಿಯಾಸಿಟಿ, ವ್ಯವಹಾರಿಕ ಜ್ಞಾನ, ನಿಜ ಜೀವನಗಳ ಪಾಠ, ಧೈರ್ಯ ನೀತಿ ಕಥೆಗಳಿಂದ ಸಿಗುತ್ತವೆ.
ಕೇವಲ ಓದುವುದು ಮುಖ್ಯವಲ್ಲ, ಓದಿನಿಂದ ನಾನು ಎಷ್ಟು ಸಂಸ್ಕಾರ ಕಲಿತೆ, ಅದರಿಂದ ಸಮಾಜಕ್ಕೆ ನಾನೇನು ಕೊಟ್ಟೆ ಅನ್ನೋದು ಮುಖ್ಯವಾಗುತ್ತದೆ..
ಇದು "ದಿನ ಕಥೆ" ಶೀರ್ಷಿಕೆಯ ಉದ್ದೇಶವಾಗಿದೆ...
"ಓದೋಣ ಮಕ್ಕಳನ್ನು ಓದಿಸೋಣ"
ಕೋನಾಪುರ ಎಂಬ ಊರಲ್ಲಿದ್ದ ಭವಿಷ್ಯ ಹೇಳುವವರೊಬ್ಬರು ಏನು ಹೇಳಿದರೂ ಅದು ನಿಜವಾಗುತ್ತದೆ ಎಂಬ ನಂಬಿಕೆ ಆ ಊರಿನ ಜನರಲ್ಲಿತ್ತು. ಹಾಗಾಗಿ ಆ ಊರು ಮಾತ್ರವಲ್ಲದೆ ಸುತ್ತಮುತ್ತಲಿನ ಹಾಗೂ ದೂರದ ಊರುಗಳಿಂದಲೂ ಜನರು ಅವರಲ್ಲಿಗೆ ಬಂದು ತಮ್ಮ ಭವಿಷ್ಯ ಕೇಳುತ್ತಿದ್ದರು. ಆ ಭವಿಷ್ಯ ಹೇಳುವರು ಕೂಡ ಯಾರು ಬಂದರೂ ಸ್ವಲ್ಪವೂ ಬೇಸರ ಪಡದೆ ಹಸನ್ಮುಖಿಯಾಗಿ ಅವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು.
ಒಮ್ಮೆ ಮಹೇಶ ಮತ್ತು ಸುರೇಶ ಎಂಬ ಇಬ್ಬರು ವಿದ್ಯಾರ್ಥಿಗಳು ಅವರ ಬಳಿಗೆ ಬಂದು 'ಗುರುಗಳೇ, ನಾವಿಬ್ಬರು ಗೆಳೆಯರು. ಒಂದೇ ಶಾಲೆಯಲ್ಲಿ ಓದುತ್ತಿದ್ದೇವೆ. ನಮಗೆ ನಿಮ್ಮ ಆಶೀರ್ವಾದ ಬೇಕು' ಎಂದು ಹೇಳಿ ತಲೆ ಬಾಗಿದರು. ಅವರಿಬ್ಬರನ್ನೂ ಒಂದು ಕ್ಷಣ ತದೇಕ ಚಿತ್ತದಿಂದ ನೋಡಿ ಮಹೇಶನಿಗೆ 'ನೀನು ಒಳ್ಳೆಯ ಅಂಕ ಗಳಿಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗುವೆ' ಎಂದು ಹಾಗೂ ಸುರೇಶನಿಗೆ 'ನೀನು ಪರೀಕ್ಷೆಯಲ್ಲಿ ಫೇಲಾಗುವೆ' ಎಂದರು.
ಇದರಿಂದ ಖುಷಿಗೊಂಡ ಮಹೇಶ ಓದುವುದನ್ನು ಬಿಟ್ಟ. ಭವಿಷ್ಯ ಹೇಳುವವರ ಮಾತನ್ನೇ ನಂಬಿ ಸಿನಿಮಾ, ಟೀವಿ, ಜಾತ್ರೆ, ಹಬ್ಬ ಅಂತ ಊರೂರು ಅಲೆದ. ಆರಾಮವಾಗಿ ಆಟವಾಡಿಕೊಂಡು ಪಾಠ ಮರೆತ. ಪುಸ್ತಕ ತೆರೆಯುವ ಗೋಜಿಗೇ ಹೋಗದೆ ಓದುವ ವಿಷಯದಲ್ಲಿ ಮಹಾ ಸೋಮಾರಿಯಾದ. ಆದರೆ ಸುರೇಶ ತಾನು ಫೇಲಾಗುತ್ತೇನೆ ಎಂದು ಹೇಳಿದ ಮಾತನ್ನು ನಂಬದೆ ಅವರ ಮಾತನ್ನು ಸುಳ್ಳು ಮಾಡಲು ನಿರ್ಧರಿಸಿದ. ತನ್ನ ಓದಿನ ಮೇಲೆ ನಂಬಿಕೆಯಿಟ್ಟು ಒಂದು ದಿನವೂ ಯಾವ ಊರಿಗೂ ಹೋಗದೆ, ಅಲ್ಲಿ ಇಲ್ಲಿ, ಹಬ್ಬ, ಜಾತ್ರೆ ಅಂತ ಎಲ್ಲೂ ಅಲೆಯಲಿಲ್ಲ. ಸತತವಾಗಿ ಏಕಾಗ್ರತೆಯಿಂದ ಚೆನ್ನಾಗಿ ಓದಿದ. ಓದಿದ್ದನ್ನು ಅಷ್ಟೇ ಆಸಕ್ತಿಯಿಂದ ಮನವರಿಕೆ ಮಾಡಿಕೊಂಡ.
ಒಂದೆರಡು ತಿಂಗಳಲ್ಲಿ ಪರೀಕ್ಷೆ ಬಂತು. ಮಹೇಶ ಮತ್ತು ಸುರೇಶ ಪರೀಕ್ಷೆಯಲ್ಲಿ ಬರೆದರು. ಕೆಲವೇ ದಿನಗಳಲ್ಲಿ ಫಲಿತಾಂಶವೂ ಬಂತು. ಆದರೆ ಭವಿಷ್ಯ ಹೇಳುವವರು ಪ್ರಥಮ ದರ್ಜೆಯಲ್ಲಿ ಪಾಸಾಗುವುದಾಗಿ ಹೇಳಿದ್ದ ಮಹೇಶ ಅತ್ಯಂತ ಕಡಿಮೆ ಅಂಕ ಪಡೆದು ಫೇಲಾಗಿದ್ದ. ಹಾಗೆಯೇ ಫೇಲಾಗುವುದಾಗಿ ಹೇಳಿದ್ದ ಸುರೇಶ ಅತ್ಯಂತ ಹೆಚ್ಚು ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದ. ಇದರಿಂದ ಕುಪಿತಗೊಂಡ ಮಹೇಶ ಸರಸರನೆ ಆಶ್ರಮಕ್ಕೆ ಹೋಗಿ 'ನೀವು ಪಾಸಾಗುವೆ ಎಂದು ಆಶೀರ್ವಾದ ಮಾಡಿದ್ರಿ ನಾನು ಫೇಲಾಗಿದ್ದೇನೆ ನೀವು ಫೇಲಾಗುವುದಾಗಿ ಹೇಳಿದ್ದ ಸುರೇಶ ಪಾಸಾಗಿದ್ದಾನೆ. ನಮ್ಮಿಬ್ಬರ ವಿಷಯದಲ್ಲಿ ನೀವು ಹೇಳಿದ ಮಾತು ಸುಳ್ಳಾಯಿತು. ಏಕೆ ಹೀಗಾಯಿತು? ನಿಮ್ಮ ಮಾತನ್ನು ನಂಬಿ ನಾನು ಕೆಟ್ಟೆ' ಎಂದು ಬೇಸರ ವ್ಯಕ್ತಪಡಿಸಿದ.
ಆಗ ಅವರು ಸಾವಧಾನದಿಂದ 'ನೀನು ನನ್ನ ಮಾತನ್ನು ಮಾತ್ರ ನಂಬಿ ಓದುವುದರತ್ತ ನಿನ್ನ ಪ್ರಯತ್ನ ಮಾಡಲೇ ಇಲ್ಲ. ಶಕ್ತಿಯಿದ್ದೂ ನೀನು ಶಕ್ತಿಹೀನನಾದೆ. ಪ್ರಯತ್ನವಿಲ್ಲದೆ ಎಂದೂ ಫಲ ದೊರೆಯದು. ಸುರೇಶ ನನ್ನ ಮಾತನ್ನು ಲೆಕ್ಕಿಸದೆ ತನ್ನ ಪ್ರಯತ್ನದ ಮೇಲೆ ನಂಬಿಕೆಯಿಟ್ಟು ಸತತವಾಗಿ ಕಷ್ಟಪಟ್ಟು ಓದಿದ. ಹಾಗಾಗಿ ಅವನು ನಿನ್ನಷ್ಟು ಬುದ್ಧಿವಂತನಲ್ಲದಿದ್ದರೂ ಪ್ರಯತ್ನಪಟ್ಟು ಅಧ್ಯಯನ ಮಾಡಿದ್ದರಿಂದ ಅವನಿಗೆ ಉತ್ತಮ ಫಲಿತಾಂಶ ಬಂತು. ಕಷ್ಟಪಟ್ಟರೆ ಫಲ ಸಿಕ್ಕೇ ಸಿಗುತ್ತದೆಂಬ ಮಾತನ್ನು ಆತ ನಿಜ ಮಾಡಿದ್ದಾನೆ' ಎಂದರು.
ಆಗ ಮಹೇಶನಿಗೆ ತಾನು ಎಡವಿದ್ದೆಲ್ಲಿ ಎಂದು ಅರಿವಾಯಿತು. ಯಾರ ಆಶೀರ್ವಾದ ಎಷ್ಟೇ ದೊಡ್ಡದಿದ್ದರೂ ಕನಿಷ್ಠ ಚಿಕ್ಕದಾಗಿಯಾದರೂ ನಮ್ಮ ಪ್ರಯತ್ನವಿಲ್ಲದಿದ್ದರೆ ಅದರಿಂದ ಏನೂ ಪ್ರಯೋಜನವಾಗದು. ನಾವು ಅಂದುಕೊಂಡ ದೈವವೇ ನಮ್ಮ ಪರವಾಗಿದ್ದರೂ ಪ್ರಯತ್ನವಿಲ್ಲದೆ ಫಲ ಸಿಗದು. ನಾನು ಅನ್ಯಾಯವಾಗಿ ಒಂದು ವರ್ಷ ಹಾಳು ಮಾಡಿಕೊಂಡೆ ಎಂದು ಆತ ಪಶ್ಚಾತ್ತಾಪ ಪಟ್ಟು ಮುಂದೆ ಹೀಗಾಗದಂತೆ ಎಚ್ಚರ ವಹಿಸಿದ.
ಭವಿಷ್ಯ ಹೇಳುವವರನ್ನು ನಾವು ಬೇಗನೆ ನಂಬುತ್ತೇವೆ. ಬೆಳಿಗ್ಗೆ ಟಿವಿಯಲ್ಲಿ ಬರುವ ವಾಸ್ತು ಭವಿಷ್ಯಗಳನ್ನು ಹೇಳಿಕೆ ಕೇಳಿಕೆಗಳನ್ನಂತೂ ಪೂರಾ ನಂಬುತ್ತೇವೆ, ಯಾರಲ್ಲಿ ಮನೋಸ್ಥೈರ್ಯ ಕಡಿಮೆ ಇರುತ್ತದೆ ಅವರು ಇಂಥವುಗಳಿಗೆ ಒಳಗಾಗುತ್ತಾರೆ. ಇಂಥವುಗಳನ್ನ ನಂಬಿ ನಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತೇವೆ.
ಯಾರ ಭವಿಷ್ಯ ಯಾರ ಕೈಯಲ್ಲಿ ಇಲ್ಲ. ಚಂದ್ರಬಲ ಇಂದ್ರಬಲ ನಕ್ಷತ್ರ ಬಲಗಳನ್ನು ನಂಬುವುದರ ಬದಲು ನಮ್ಮ ಬುದ್ಧಿ ಬಲ ಮತ್ತು ತೋಳು ಬಲಗಳನ್ನು ನಂಬೋಣ.ನಮ್ಮ ಪ್ರಯತ್ನದ ಮೇಲೆ, ಅಭ್ಯಾಸ ಬಲದ ಮೇಲೆ ನಂಬಿಕೆಯಿಡಬೇಕು. ಆಗ ನಮ್ಮ ಭವಿಷ್ಯ ನಮ್ಮ ಕೈಯಲ್ಲಿ ಇರುತ್ತದೆ....👍
💐💐💐💐💐💐