Wednesday, August 28, 2024

 ಕಥೆ-501

ಎತ್ತರಕ್ಕೇರಿದವರ ಅಂತಃಕರಣ

(ಹೃದಯವಂತಿಕೆ ಮುಂದೆ ನಡೆಯೋಲ್ಲ ಮಡಿವಂತಿಕೆ)

ಒಂದು ದಿನ ದ.ರಾ ಬೇಂದ್ರೆ ಹಾಗೂ ಸುರೇಶ ಕುಲಕರ್ಣಿಯವರು ಕುದುರೆಗಾಡಿ ಮಾಡಿಕೊಂಡು ದತ್ತಾತ್ರೇಯ ಗುಡಿಗೆ ಹೋದರು.


ದೇವರಿಗೆ ನಮಸ್ಕಾರ ಮಾಡಿ ಹೊರಗೆ ಬಂದಾಗ ಕುದುರೆಗಾಡಿ ಇರಲಿಲ್ಲ. `ಮತ್ತೊಂದು ಗಾಡಿ ತೆಗೆದುಕೊಂಡು ಬರಲಾ' ಎಂದು ಕೇಳಿದಾಗ, ಬೇಡ ನಡೆದೇ ಮುಂದೆ ಹೋಗೋಣ. ಅಲ್ಲಿಯೇ ಟಾಂಗಾ (ಕುದುರೆಗಾಡಿ) ಸಿಗುತ್ತದೆ' ಎಂದರು ಬೇಂದ್ರೆ. ಇಬ್ಬರೂ ನಡೆದು ಕೆ ಸಿ ಸಿ ಬ್ಯಾಂಕಿನ ಹತ್ತಿರ ಬಂದರು. ಅಲ್ಲೊಬ್ಬ ರಸ್ತೆಯ ಬದಿಯಲ್ಲಿ ಚಪ್ಪಲಿ ಹೊಲಿಯುತ್ತ ಕುಳಿತಿದ್ದ. ಇವರ ಚಪ್ಪಲಿಯ ಉಂಗುಷ್ಠ ಹರಿದದ್ದನ್ನು ನೋಡಿ, ಅಜ್ಜಾವ್ರ, ಉಂಗುಷ್ಠ ಹಚ್ಚಿಕೊಡತೇನಿ ಕೊಡ್ರಿ' ಎಂದ.

`ಆತು ಹಚ್ಚಿಕೊಡು' ಎಂದು ಅವನ ಕಡೆಗೆ ಹೋದರು. ತಮ್ಮ ಚಪ್ಪಲಿ ತೆಗೆದುಕೊಡುವಾಗ ಆ ರಿಪೇರಿ ಮಾಡುವವ ಹೇಳಿದ, `ಬಿಸಲಾಗ ಕಾಲು ಸುಡತಾವ, ಇದರ ಮೇಲೆ ಕಾಲು ಇಡ್ರಿ' ಎಂದು ಮತ್ತೊಂದು ಚಪ್ಪಲಿಯನ್ನು ಅವರ ಕಾಲಿನ ಹತ್ತಿರ ಇಟ್ಟ. ಅವನ ಪ್ರೀತಿ ಕಂಡು ಬೇಂದ್ರೆಯವರಿಗೆ ಅಂತಃಕರಣ ತುಂಬಿ ಬಂತು.


`ಅಲ್ಲೋ ನನ್ನ ಕಾಲು ಸುಡೋದರ ಬಗ್ಗೆ ನಿನಗೆ ಕಾಳಜಿ ಅದ. ಆದರೆ ಸುಡೋ ಬಿಸಿಲೊಳಗ ನೀನು ಕೂತಿ. ನಿನ್ನ ಮೈ ಸುಡೋದರ ಬಗ್ಗೆ ಎಚ್ಚರ ಇಲ್ಲಾ' ಎಂದು ತಮ್ಮ ಕೊಡೆಯನ್ನು ಬಿಚ್ಚಿ ಅವನ ತಲೆಯ ಮೇಲೆ ಹಿಡಿದು ನಿಂತರು. ಆತ ಇವರ ಚಪ್ಪಲಿ ರಿಪೇರಿ ಮಾಡುತ್ತಿದ್ದ. ಅದು ಮುಗಿದ ಮೇಲೆ, `ಪಾಲೀಶ್ ಮಾಡಲೇನ್ರಿ?' ಎಂದು ಕೇಳಿದ. ಇವರು `ಹೂಂ' ಎಂದು ಮಾತಿಗಿಳಿದು ಅವನ ಮನೆತನದ ಇತಿಹಾಸವನ್ನೆಲ್ಲ ತಿಳಿದರು.


ಎಷ್ಟು ಮಕ್ಕಳು ನಿನಗ?


ಎರಡು


ದಿನಕ್ಕ ಎಷ್ಟು ಹಣ ದುಡಿತೀ?


ಹತ್ತು ರೂಪಾಯಿ, ಒಮ್ಮಮ್ಮೆ ಹೆಚ್ಚು ಕಡಿಮೆ ಆಗತೈತಿ .

ಶೆರೆ ಕುಡಿತೀ ಏನು?


ಇಲ್ಲ, ಯಾವಾಗರೇ ಒಮ್ಮಮ್ಮೆ .


ಮನ್ಯಾಗ ಛತ್ರಿ (ಕೊಡೆ) ಅದ ಏನು?


ಇದೇರಿ


ಇಷ್ಟು ಮಾತು ಆಗುವುದರೊಳಗೆ ಚಪ್ಪಲಿ ರಿಪೇರಿ ಕೆಲಸ ಮುಗಿದಿತ್ತು. ` ಎಷ್ಟು ಆತು?' ಬೇಂದ್ರೆ ಕೇಳಿದರು.


ಆತ ಕ್ಷಣ ವಿಚಾರ ಮಾಡಿ, `ಒಂದೂವರೆ ರೂಪಾಯಿ ಆತ್ರಿ' ಎಂದ. ಇವರು ಹತ್ತು ರೂಪಾಯಿ ತೆಗೆದು ಕೊಟ್ಟರು. ಆತ `ನನ್ನ ಕಡೆಗೆ ಚಿಲ್ರೆ ಇಲ್ಲರಿ' ಎಂದಾಗ ಬೇಂದ್ರೆ, `ನೀನು ದಿನಕ್ಕೆ ಹತ್ತು ರೂಪಾಯಿ ದುಡೀತಿ. ಇದು ಇವತ್ತಿನ ಗಳಿಕೆ. ಮೊದಲು ಮನೆಗೆ ಹೋಗಿ ಕೊಡೆ ತೊಗೊಂಡು ಬಾ. ನೆರಳು ಮಾಡಿಕೊಂಡು ದುಡಿ. ನಿನ್ನ ಹಿಂದ ಹೆಂಡತಿ ಮಕ್ಕಳು ಅವಲಂಬಿಸಿದ್ದಾರೆ ಎಂಬುದನ್ನು ಮರೀಬ್ಯಾಡ. ಅವರಿಗೆ ಹಣ್ಣು ಹಂಪಲು ಒಯ್ಯಿ, ಕುಡೀಬ್ಯಾಡಾ' ಎಂದರು. ಅವರ ಅಂತಃಕರಣದ ಮಾತಿಗೆ, ನೀಡಿದ ಹಣಕ್ಕೆ ಅವನ ಕಣ್ಣು ಒದ್ದೆಯಾದವು.


ಆತ ಕೇಳಿದ, `ಅಜ್ಜಾವ್ರ, ನಿಮ್ಮ ಮನೆ ಎಲ್ಲಿ ಐತಿ?'. `ಸಾಧನಕೇರಿಯೊಳಗ' ಎಂದರು ಬೇಂದ್ರೆ.. `ಬೇಂದ್ರೆಯವರ ಮನೀ ಹತ್ತಿರ ಏನ್ರಿ?' ಎಂದು ಕೇಳಿದ.


ಇವರು `ಹೂಂ' ಎನ್ನುತ್ತ ಟಾಂಗಾ ನಿಲ್ದಾಣದ ಕಡೆಗೆ ನಡೆದರು. ಅನಂತರ ಆ ಚಪ್ಪಲಿ ರಿಪೇರಿ ಮಾಡುವವ ಆಗಾಗ ಬೇಂದ್ರೆಯವರ ಮನೆಗೆ ಬಂದು ಹೋಗುತ್ತಿದ್ದನಂತೆ. ಅವನು ಕುಡಿಯುವುದನ್ನು ಬಿಟ್ಟಿದ್ದ. 

ನಿಜವಾಗಿಯೂ ಎತ್ತರಕ್ಕೇರಿದವರು ಯಾವ ಹಂತಕ್ಕಾದರೂ ಇಳಿದು ಹೃದಯವಂತಿಕೆಯನ್ನು ತೋರಬಲ್ಲರು. ಹೃದಯವಂತಿಕೆ ಮುಂದೆ ಯಾವ ಮಡಿವಂತಿಕೆ ಇಲ್ಲ...


ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು