Monday, September 2, 2024

 ಕಥೆ-506

ಹುಡುಗನಿಂದ ವಿಶ್ವಾಸ ಮತ್ತು ನಿಯತ್ತಿನ ಪಾಠ

   ರೈಲು ಇನ್ನೂ ಸ್ಟೇಷನ್ ನಲ್ಲಿಯೇ ನಿಂತಿತ್ತು. ಹೀಗಾಗಿ ನಾಲ್ಕೈದು ಜನ ಸಣ್ಣ ಪುಟ್ಟ ಸಾಮಾನು ಮಾರುವವರು ಅದರೊಳಗೆ ನುಗ್ಗಿ, ಪ್ರಯಾಣಿಕರ ಎದುರಿಗೆ ಹೋಗಿ 

" ತಗೋಳ್ಳಿ ಸಾರ್.. ತಗೊಳ್ಳಿ ಮೇಡಂ.. ತಗೊಳ್ಳಿ ಅಣ್ಣಾ.."ಎಂದು ಕೂಗುತ್ತಿದ್ದರು. ಅಲ್ಲಿ ಕುಳಿತ ಪ್ರಯಾಣಿಕರ ಪೈಕಿ ಮಾಧವಿ ಎನ್ನುವ ನಡುವಯಸ್ಸಿನ ಮಹಿಳೆಗೆ ನೀರಡಿಕೆಯಾಗಿತ್ತು. ಅಷ್ಟರಲ್ಲಿ ಸುಮಾರು ಎಂಟು - ಹತ್ತು ವರ್ಷದ ಹುಡುಗ ನೀರಿನ ಬಾಟಲ್ ಮಾರುತ್ತಿರುವುದು ಅವರ ಕಣ್ಣಿಗೆ ಬಿದ್ದಾಗ, ಆತನನ್ನು ಕೂಗಿ "ಎಷ್ಟಪ್ಪಾ ಒಂದು ಬಾಟಲ್ ಗೆ?" ಎಂದು ಪ್ರಶ್ನಿಸಿದಾಗ ಆತ "ಇಪ್ಪತ್ತು ರೂಪಾಯಿ ಅಮ್ಮಾ" ಎನ್ನುತ್ತಾನೆ. ಮಾಧವಿ ಯವರು ಆತನ ಕೈಯಿಂದ ಒಂದು ಬಾಟಲ್ ಎತ್ತಿಕೊಳ್ಳುತ್ತಾರೆ. ನೀರು ತುಂಬಾ ತಣ್ಣಗಿರುತ್ತದೆ. ಹಾಗೇ ಅವರ ದೃಷ್ಟಿ ಆ ಬಾಟಲ್ ಮೇಲೆ ಅಂಟಿಸಿದ ಲೆಬಲ್ ನತ್ತ ಹೋದಾಗ ಅವರು" ಅರ್ರೇ... ಇದು ನಕಲಿ ಬಾಟಲ್ ಅಲ್ವಾ? ಬಿಸ್ಲೇರಿ ಬದಲು ಬಿಸ್ಲೋರಿ "ಎಂದಿರುವುದನ್ನು ಓದಿ ಆ ಹುಡುಗನ ಕಡೆಗೆ ತಿರುಗಿ" ಇದೇನೋ ಡುಪ್ಲಿಕೇಟ್ ಮಾರ್ತಿದ್ದಿಯಾ.. ತಾಳು ನಿನ್ನ ಮೇಲೆ ಕಂಪ್ಲೇಂಟ್ ಕೊಡ್ತೆನೆ " ಎಂದಾಗ ಆ ಹುಡುಗ -" ಅಮ್ಮಾ.. ಇಲ್ಲಿ ಎಲ್ಲಾ ಅದನ್ನೇ ಮಾರೋದು.. ನಿಮಗೆ ಅಸಲಿ ಬಾಟಲ್ ಬೇಕು ಅಂದ್ರೆ.. ಅಗೋ ಅಲ್ಲಿ ಎದುರಿಗೆ ಕಾಣತ್ತಲ್ಲ ಆ ಸ್ಟಾಲ್ ನಲ್ಲಿ ಸಿಗುತ್ತೆ "ಎಂದು ಹೇಳುತ್ತಾನೆ. ಆಗ ಮಾಧವಿ ಯವರು "ಇದು ಬೇಡಾ " ಎನ್ನುತ್ತ ಆತನಿಗೆ ವಾಪಸ್ ಮಾಡುತ್ತಾರೆ. ಅದನ್ನು ಅವರಿಂದ ಪಡೆದ ಹುಡುಗ ಮುಂದೆ ಹೋಗುತ್ತಾನೆ.

ಆದರೆ ಆ ಒಂದು ಸಮಯದಲ್ಲಿ ಮಾಧವಿ ಯವರಿಗೆ ನೀರಡಿಕೆ ಇನ್ನೂ ಹೆಚ್ಚಾದಂತಾದಾಗ ಪುನಃ ಅವರು ಆ ಹುಡುಗನನ್ನು ಕೂಗಿ "ನೋಡೋ.. ನಾನು ನಿನಗೆ ಹತ್ತು ರೂಪಾಯಿ ಹೆಚ್ಚಿಗೆ ಕೊಡ್ತೇನೆ ಆ ಸ್ಟಾಲ್ ಗೆ ಹೋಗಿ ನನಗೊಂದು ಅಸಲಿ ಬಿಸ್ಲೇರಿ ಬಾಟಲ್ ತಂದು ಕೊಡು" ಎಂದು ಹೇಳುತ್ತಾರೆ. ಆಗ ಆ ಹುಡುಗ" ಆಯ್ತು.. ಆದರೆ ಬೇಗ ಹಣ ಕೊಡಿ... ಇನ್ನೇನು ರೈಲು ಹೊರಡುತ್ತೆ " ಎನ್ನುತ್ತಾನೆ. ಮಾಧವಿ ಯವರು ಆತನಿಗೆ ಹಣ ಕೊಡಲು ತಮ್ಮ ಹ್ಯಾಂಡ್ ಬ್ಯಾಗ್ ನಲ್ಲಿ ಇದ್ದ ಪರ್ಸ್ ತೆಗೆಯಲು ಮುಂದಾದಾಗಲೇ ಅವರಿಗೆ ತಾವು ಈ ರೈಲು ಹತ್ತುವ ಮುಂಚೆ ತಮ್ಮಲ್ಲಿ ಇದ್ದ ಎಲ್ಲ ಚಿಲ್ಲರೆ ಹಣವನ್ನು ಕೂಲಿ ಯವನಿಗೆ ಕೊಟ್ಟಿದ್ದು ನೆನಪಿಸಿಕೊಂಡು ಮತ್ತೆ ಆ ಪರ್ಸನ ಬೇರೆ ವಿಭಾಗದಲ್ಲಿ ಕೈ ಹಾಕಿ ನೋಡಿದಾಗ ಅಲ್ಲಿ ಐನೂರು ರೂಪಾಯಿಯ ಹತ್ತಾರು ನೋಟು ಕಣ್ಣಿಗೆ ಬೀಳುತ್ತವೆ. ಅದರ ಪೈಕಿ ಒಂದು ಐನೂರು ರೂಪಾಯಿ ನೋಟನ್ನು ತೆಗೆದು ಆ ಹುಡುಗನಿಗೆ ಕೊಡುತ್ತ - ಇದರಲ್ಲಿ ಮೂವತ್ತು ರೂಪಾಯಿ ಹಿಡಿದುಕೊಂಡು ಉಳಿಕೆ ಹಣ ಕೊಟ್ಟು ನೀರಿನ ಬಾಟಲ್ ತಗೊಂಡು ಬಾ..."ಎಂದಾಗ ಆತ ಹುಡುಗ ನಗುತ್ತ" ನನಗೆ ಇನ್ನೂ ಬೋಣಿಗಿನೇ ಆಗಿಲ್ಲಾ ಎಲ್ಲಿ ಬರತಮ್ಮಾ ಅಷ್ಟು ದುಡ್ಡು.. ನನ್ನ ಬಳಿ ನೂರು ರುಪಾಯಿ ಗೆ ಕೂಡಾ ಚಿಲ್ಲರೆ ಇಲ್ಲಾ... ಬೇಗ ಕೊಟ್ರೆ ಹೋಗಿ ನಿಮ್ಮ ನೀರಿನ ಬಾಟಲ್ ಹಾಗೂ ಉಳಿಕೆ ಹಣ ತಂದು ಕೊಡ್ತೇನೆ " ಎನ್ನುತ್ತಾನೆ.ಆಗ ಮಾಧವಿಯವರು ಮನದಲ್ಲೇ" ಈ ಐನೂರು ರೂಪಾಯಿ ನೋಟು ಕೊಟ್ರೆ ಈತ ಓಡಿ ಹೋದ್ರೆ ಏನು ಮಾಡೋದು " ಎಂದು ಕೊಳ್ಳುತ್ತಾರೆ. ಆದರೆ ನೀರಡಿಕೆ ತುಂಬಾ ಆಗುತ್ತಿದ್ದರಿಂದ ಅವರಿಗೆ ಏನೂ ತೋಚದಂತಾಗಿ ಕೊನೆಗೆ ಐನೂರು ರೂಪಾಯಿ ನೋಟನ್ನು ಆ ಹುಡುಗನ ಕೈಗೆ ಕೊಡುತ್ತಾರೆ.ಇದನ್ನು ಗಮನಿಸುತ್ತಿದ್ದ ಕುಳಿತ ಅಕ್ಕಪಕ್ಕದ ಪ್ರಯಾಣಿಕರು ಮಾದವಿಯವರನ್ನು ಯಾವ ರೀತಿ ನೋಡುತ್ತಾರೆಂದರೆ- ಇದೇನು ಈಕೆಗೆ ಪ್ರಪಂಚದ ಜ್ಞಾನ ಕಡಿಮೆ ಏನೋ " ಎನ್ನುವಂತಿರುತ್ತದೆ ಅವರ ದೃಷ್ಟಿ. ಕಿಟಕಿ ಮೂಲಕ ಮಾಧವಿ ಆ ಹುಡುಗ ಆ ಸ್ಟಾಲ್ ಕಡೆಗೆ ಓಡುವುದನ್ನು 

ನೋಡತೊಡಗುತ್ತಾರೆ.  

ರೈಲು ನಿಧಾನವಾಗಿ ಹೊರಡಲು ಆರಂಭಿಸಿದಾಗ ಅವರ ಎದುರಿಗೆ ಕುಳಿತಿದ್ದ ಗ್ರಹಸ್ಥರೊಬ್ಬರು -" ಏನ್ ..ಮೇಡಂ... ನಿಮ್ಮಿಂದ ಐನೂರು ರೂಪಾಯಿ ಇಸ್ಕೊಂಡು ಹೋದ್ನಲ್ಲಾ ಆ ಹುಡುಗ ವಾಪಸ್ ಬರ್ತಾನೆ ಅಂತ ಅನ್ಸುತ್ತಾ? ಆತನಿಗೆ ಇಂದಿನ ಖರ್ಚು.. ಲಾಭ ಎಲ್ಲಾ ಸಿಕ್ಕಂತಾಗಿದೆ " ಎಂದು ಅನ್ನುತ್ತಾರೆ.ಮಾಧವಿ ಆ ಮಾತು ಕೇಳಿಸಿಕೊಂಡವರು ಮತ್ತೆ ಮತ್ತೆ ಕಿಟಕಿ ಯಿಂದ ಬಗ್ಗಿ ಬಗ್ಗಿ ನೋಡಿ ಎಷ್ಟೇ ಜೋರಾಗಿ ಕೂಗಿದರೂ ಗಾಜಿನ ಕಿಟಕಿಯ ಬಾಗಿಲು ಭದ್ರವಾಗಿ ಮುಚ್ಚಿದ್ದರಿಂದ ಅವರ ಧ್ವನಿ ರೈಲಿನೊಳಗೇ ಉಳಿದು ಬಿಡುತ್ತದೆ. ರೈಲು ಈಗ ಮೊದಲಿಗಿಂತ ಸ್ವಲ್ಪ ಸ್ಪೀಡ್ ಆಗಿ ಹೊರಡಲಾರಂಭಿಸಿದಾಗ ಮಾಧವಿ ಮನದಲ್ಲಿ ಒಂದು ಕಡೆ ಹಣ ಕಳೆದುಕೊಂಡ ಚಿಂತೆ ಹಾಗೂ ಮತ್ತೊಂದು ಕಡೆ ಬಾಯಾರಿಕೆ ಚಿಂತೆಯಿಂದ ಬೇಸರ ಮಾಡಿಕೊಂಡವರು ತಮ್ಮಷ್ಟಕ್ಕೆ ತಾವೇ "ಛೇ.. ಇನ್ನು ಮುಂದೆ ಪ್ರಯಾಣಕ್ಕೆ ಹೊರಡುವ ಮುನ್ನ ಮನೆಯಿಂದ ಮೊದಲು ನೀರಿನ ಬಾಟಲ್ ತೆಗೆದುಕೊಂಡು ಹೋಗುತ್ತೇನೆ" ಎಂದು ಅಂದು ಕೊಳ್ಳುತ್ತಾರೆ. 

ಇತ್ತ ಬಾಯಾರಿಕೆ ಹೆಚ್ಚಾಗುತ್ತಲೇ ಇರುತ್ತದೆ. ಅರ್ಧ ಗಂಟೆ ಕಳೆದ ಬಳಿಕ ಅದೇ ಹುಡುಗ ಏದುಸಿರು ಬಿಡುತ್ತ ಅವರು ಕುಳಿತಿದ್ದ ಬರ್ತ್ ಕಡೆಗೆ ಬರುವುದನ್ನು ನೋಡುತ್ತಾರೆ. ಆತನ ಒಂದು ಕೈಯಲ್ಲಿ ಹತ್ತಾರು ಬಾಟಲ್ ಗಳಿರುವ ಬಕೇಟ್ ಇದ್ದರೆ ಮತ್ತೊಂದು ಕೈಯಲ್ಲಿ ನೀರಿನ ಬಾಟಲ್ ಇರುತ್ತದೆ.ಆತ ಇವರಿದ್ದ ಜಾಗದ ಬಳಿ ಬರುತ್ತಿದ್ದಂತೆ ಮಾಧವಿ ಸ್ವಲ್ಪ ಏರು ಧ್ವನಿಯಲ್ಲಿ "ಎಲ್ಲೋ.. ಹೋಗಿದ್ದೀ.. ಅಷ್ಟೊತ್ತಿಂದ ನೀರಡಿಕೆ ಅಂತ ಒದ್ದಾಡ್ತಾ ಇದ್ದೀನಿ ಕೊಡು ನೀರಿನ ಬಾಟಲ್" ಎಂದು ಆತನ ಕೈಯಿಂದ ಆ ಬಾಟಲ್ ಪಡೆದವರೇ ಗಟಗಟ ಎಂದು ಕಾಲು ಭಾಗ ನೀರನ್ನು ಕುಡಿಯುತ್ತಾರೆ. ನೀರು ಕುಡಿದ ಬಳಿಕ ಆ ಹುಡುಗ ತನ್ನ ಜೇಬಿನಿಂದ ಅವರಿಗೆ ಕೊಡಬೇಕಿದ್ದ ನಾನೂರ ಎಂಬತ್ತು ರೂಪಾಯಿ ವಾಪಸ್ ಮಾಡುತ್ತಾನೆ. ಅದನ್ನು ಪಡೆದ ಮಾಧವಿಯವರು ಪುನಃ ಅದನ್ನು ಎಣಿಸಿಕೊಂಡು ಅದರಲ್ಲಿಂದ ಹತ್ತು ರೂಪಾಯಿ ತೆಗೆದು ಆ ಹುಡುಗನಿಗೆ ಕೊಡಲು ಮುಂದಾದಾಗ ಆತ "ಇರಲಿ ಬಿಡಿ ಅಮ್ಮಾ.. ನಾನು ಆ ಸ್ಟಾಲ್ ನವನ ಹತ್ರ ಕಮೀಶನ್ ಪಡೆಯುತ್ತೇನೆ "ಎಂದು ಹೇಳಿದಾಗ ಮಾಧವಿ ಯವರ ಮನಸ್ಸು ಪಿಚ್ಚೆನ್ನದೇ ಇರಲ್ಲ ಆಗ ಮತ್ತೆ ಅವರು ಮನದಲ್ಲಿ " ಛೇ.. ನನ್ನ ಬಾಯಾರಿಕೆ ಭರದಲ್ಲಿ ಅವನನ್ನು ಅನುಮಾನಿಸಿ ಬೈದೆ.. ಆತ ಕರೆಕ್ಟಾಗಿ ಉಳಿಕೆ ಹಣನೂ ತಂದುಕೊಟ್ಟ... ನನ್ನ ಬುದ್ಧಿಗಿಷ್ಟು" ಎಂದು ಅಂದು ಕೊಳ್ಳುತ್ತಿದ್ದಾಗ ಅವರ ದೃಷ್ಟಿ 

ಆ ಹುಡುಗನ ಬಲ ಮೊಣಕಾಲಿನ ಕಡೆ ಹೋಗುತ್ತದೆ. ಅಲ್ಲಿ ಆತನ ಪ್ಯಾಂಟ್ ಹರಿದು ತರಚಿದ ಗಾಯದಿಂದ ರಕ್ತ ವಸರುತ್ತಿರುತ್ತದೆ. ಆಗ ಆತನಿಗೆ - ಇದೇನೋ

ಎಲ್ಲಿ ಬಿದ್ದು ಬಂದೆ.."ಎಂದು ಕಾಳಜಿ ಪೂರ್ವಕ ವಾಗಿ ಕೇಳಿದಾಗ ಆತ" ಹೌದಮ್ಮಾ ಅದೇನಾಯ್ತು ಅಂದ್ರೆ ಈ ರೈಲು ನಿಧಾನವಾಗಿ ಹೊರಡತಾ ಇತ್ತು... ಅದನ್ನು ಹಿಡಿಯಲು ಓಡಿ ಬರುವಾಗ ಬಿದ್ದೆ.. ಆದರೂ ಸಾವರಿಸಿಕೊಂಡು ರೈಲಿನ ಒಳಗೆ ಬಂದು ನೀವು ಕುಳಿತ ಸೀಟು ಹುಡುಕಾಡಿದೆ... ನಾನು ನಿಮ್ಮ ಕೋಚ್ ನಂಬರ್ ಆಗಲಿ ನಿಮ್ಮ ಸೀಟ್ ನಂಬರ್ ಆಗಲಿ ನೋಡಿರಲಿಲ್ಲ "ಎಂದು ಹೇಳಿದಾಗ ಮಾಧವಿ ಯವರಿಗೆ ಕರಳು ಚುರುಕ್ ಎಂದಿತು. ಮನದಲ್ಲಿ" ಆತ ಹೇಳ್ತಿರೋದು ನಿಜಾ.. ಆತನಿಗೇನು ಗೊತ್ತಿತ್ತು ತಾವು ಕುಳಿತಿದ್ದ ಕೋಚ್ ಯಾವುದು ಸೀಟ್ ನಂಬರ್ ಯಾವುದು ಅಂತ " ಮುಂದುವರೆದ ಅವರು ಆ ಹುಡುಗನಿಗೆ" ಅಲ್ವೋ

ಏನಾದ್ರೂ ಹೆಚ್ಚು ಕಡಿಮೆ ಆಗಿ ರೈಲಿಗೆ ಸಿಕ್ಕಾಕ್ಕೊಂಡಿದ್ರೆ ನಿನ್ನ ಗತಿ ಏನಾಗ್ತಿತ್ತು? ಎಂದು ಕೇಳಿದಾಗ ಆ ಹುಡುಗ " ಏನಿಲ್ಲಮ್ಮಾ... ಇದು ನನ್ನ ನಿತ್ಯದ ಕೆಲಸ " ಎನ್ನುತ್ತ ಬಕೇಟ್ ಅಡಿಗೆ ಕೈ ಹಾಕಿ ಅಲ್ಲಿದ್ದ ನೀರನ್ನು ಮುಷ್ಟಿಯಲ್ಲಿ ಹಿಡಿದು ರಕ್ತ ವಸರುತ್ತಿದ್ದ ಜಾಗದಲ್ಲಿ ಹಾಕಿ ಕೊಳ್ಳಲು ಆರಂಭಿಸಿದಾಗ ಮಾಧವಿ "ಅರ್ರೇ.. ಇದೇನು ಮಾಡ್ತಿದ್ದೀ ಯಾರಾದ್ರೂ ಆ ಗಲೀಜು ನೀರನ್ನು ಗಾಯದ ಮೇಲೆ ಹಾಕ್ಕೊತಾರಾ? ನಾಳೆ ಒಂದು ಹೋಗಿ ಇನ್ನೊಂದು ಆದ್ರೆ ಏನ್ಮಾಡ್ತೀ... ತಾಳು" ಎನ್ನುತ್ತ ತಮ್ಮ ಬ್ಯಾಗ್ ನೊಳಗೆ ಹುಡುಕಾಡಿ ಒಂದು ಬ್ಯಾಂಡೇಯ್ಡ ತೆಗೆದು ಆತನ ಗಾಯವಾದ ಜಾಗಕ್ಕೆ ಅವರೇ ಅಂಟಿಸುತ್ತಾರೆ. ಮುಂದಿನ ಸ್ಟೇಷನ್ ಬರಲು ಇನ್ನೂ ಒಂದು ನೂರು ಕಿ.ಮೀ 

ದೂರ ಇದೆ ಎಂದಾಗ ಪುನಃ ಮಾಧವಿ ಆ ಹುಡುಗನಿಗೆ" ನೀ ಹೇಗೋ ಇಳ್ಕೋತಿಯಾ" ಎಂದು ಪ್ರಶ್ನಿಸಿದಾಗ ಆತ " ಅಮ್ಮಾ... ಇನ್ನೇನು ಹತ್ತು ಹದಿನೈದು ನಿಮಿಷದಲ್ಲಿ ಈ ಟ್ರೇನು ಪುಟ್ಟ ಸ್ಟೇಷನ್ ನಲ್ಲಿ ಕ್ರಾಸಿಂಗ್ ಗಾಗಿ ಎರಡು ನಿಮಿಷ ನಿಲ್ಲಿಸುತ್ತಾನೆ.. ಆಗ ಅಲ್ಲಿಗೆ ಬರುವ ರೈಲು ಮೂಲಕ ಮತ್ತೆ ನಾನು ವಾಪಸ್ ಹೋಗ್ತೆನೆ.. ಆದರೂ ಇಂದು ಮನೆ ತಲುಪುವ ಹೊತ್ತಿಗೆ ರಾತ್ರಿ ಹನ್ನೆರಡು ಆಗುತ್ತೆ ಅಮ್ಮನ ಕೈಯಿಂದ ಬೈಸಿಕೊಳ್ಳುತ್ತೇನೆ" ಎನ್ನುತ್ತಾನೆ. ಮುಂದುವರೆದ ಮಾಧವಿ "ದಿನಾಲೂ ಎಷ್ಟು ಗಂಟೆಗೆ ನೀ ಮನೆಗೆ ಹೋಗ್ತೀ" ಎಂದಾಗ ಆತ "ದಿನಾಲೂ ಸಾಧಾರಣವಾಗಿ ಸಂಜೆ ಏಳು ಗಂಟೆಗೆ..." ಎನ್ನುತ್ತಾನೆ. ಮತ್ತೆ ಮಾಧವಿ ಆತನಿಗೆ -" ಅಲ್ವೋ.. ನಾನು ಕೊಟ್ಟ ಹಣ ಸಮೇತ ನೀ ಓಡಿ ಹೋಗಬಹುದಾಗಿತ್ತಲ್ಲ ಮತ್ಯಾಕೆ ಹಾಗೆ ಮಾಡ್ಲಿಲ್ಲ" ಎಂದು ಪ್ರಶ್ನಿಸಿದಾಗ 

 ಆ ಹುಡುಗ" ನಮ್ಮ ಅಮ್ಮ ಹೇಳಿದ್ದಾಳೆ -" ಗ್ರಾಹಕರೇ ನಮ್ಮ ಪಾಲಿನ ದೇವರು... ಅವರೊಂದಿಗೆ ಯಾವತ್ತೂ ಅವಿಶ್ವಾಸದಿಂದ ನಡೆದು ಕೊಳ್ಳದೇ ಗೌರವದಿಂದ ಕಾಣ ಬೇಕು ಅಂದ್ರೆನೇ ನಮಗೆ ಎರಡು ತುತ್ತು ತಿನ್ನೊಕೆ ಅನ್ನಾ ಸಿಗೋದು ಅಂತ " ಹೇಳುತ್ತಾನೆ. ಅಷ್ಟು ಹೇಳಿ ಮತ್ತೆ ಆತ ನೀರು, ನೀರು .... ಅಂತ ಕೂಗುತ್ತ ಹೊರಟಾಗ ಮಾಧವಿ ಯವರ ಮನದಲ್ಲಿ -" ಪಾಪ ಗೇಣು ಹೊಟ್ಟೆಗಾಗಿ ರಾತ್ರಿ ಹಗಲು ಎನ್ನದೆ ಚಿಕ್ಕ ಚಿಕ್ಕ ಮಕ್ಕಳು ಎಷ್ಟು ಶ್ರಮವಹಿಸುತ್ತಾರಲ್ಲ

ಆದರೆ ನಾವು ನಮಗೆ ಎಲ್ಲಾ ಅನುಕೂಲ ಇದ್ದರೂ ಅವರನ್ನು ಬೇರೆ ದೃಷ್ಟಿಯಿಂದ ನೋಡುತ್ತೇವಲ್ಲ.. ಅಂತೂ ಈ ಹುಡುಗನಿಂದ ಒಂದು ನಿಯತ್ತಿನ ಪಾಠ ಕಲಿತಂತಾಯಿತು " ಎಂದು ಅಂದುಕೊಳ್ಳುವಷ್ಟರಲ್ಲಿ ಅವರ ಕಣ್ಣುಗಳು ತೇವಾಗಿದ್ದವು.

                                     

ಲೇಖಕರು: ಅರವಿಂದ ಜೋಷಿ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು