ಕಥೆ-512
ಅಜ್ಜ–ಅಜ್ಜಿಯರ ದಿನ
ಹೊಸತನದ ಓಟದಲ್ಲಿ, ನಾವು ನಮ್ಮತನವನ್ನು ಮರೆತು, ಸಂವೇದನೆ ಕಳೆದುಕೊಂಡು ಯಾಂತ್ರಿಕ ಆಗುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಸಂಸ್ಕ್ರತಿಯ ಬೇರುಗಳು ಸಡಿಲಗೊಂಡಂತೆ ಬಾಸವಾಗುತ್ತಿದೆ.. ಏಕೆಂದರೆ ಇವತ್ತಿನ ವಿಭಕ್ತ ಕುಟುಂಬಗಳು ಅಜ್ಜ ಅಜ್ಜಿಯರ ಒಡನಾಟಗಳನ್ನೆ ಕಳೆದುಕೊಂಡಿವೆ..
ಅಜ್ಜ ಅಜ್ಜಿ ಹೇಳುತ್ತಿದ್ದ ರಾಮಾಯಣ ಮಹಾಭಾರತ ಮತ್ತು ಇತರೆ ಕತೆಗಳು ನಮಗೆ ಗಾಢವಾದ ಪರಿಣಾಮ ಬೀರುತ್ತಿದ್ದವು. ನಂತರದ ದಿನಗಳಲ್ಲಿ ಎಷ್ಟೋ ಪುಸ್ತಕಗಳನ್ನು ಓದಿದರೂ, ಅವು ಅಜ್ಜ ಅಜ್ಜಿ ಹೇಳುತ್ತಿದ್ದ ಕಥೆಗಳಷ್ಟು ಪರಿಣಾಮ ಬೀರಿಲ್ಲ, ಬೀರಲು ಸಾಧ್ಯವೂ ಇಲ್ಲ.
ಮನೆಯಲ್ಲಿ ಹಿರಿಯರಿದ್ದರೆ ಆ ಮನೆಯ ಸೊಬಗೇ ಚಂದ. ನಮ್ಮ ಸಂಸ್ಕೃತಿಯಲ್ಲಿ ಈ ಹಿರಿಯರ ಸ್ಥಾನವನ್ನು ತುಂಬುವರು ಅಜ್ಜ–ಅಜ್ಜಿ. ಸಂಸಾರದ ದೋಣಿಯನ್ನು ದಡ ಮುಟ್ಟಿಸಿ, ಕುಟುಂಬದ ಜೊತೆ ಕಾಲ ಕಳೆಯುತ್ತಾ ಸರಿಯಾದ ಮಾರ್ಗದರ್ಶನ ಮಾಡುವ ಅಜ್ಜ ಅಜ್ಜಿಯರು ಪ್ರತಿಯೊಂದು ಮನೆಯ ನಿಜವಾದ ಆಸ್ತಿ. ಆದರೆ, ಇಂದಿನ ಆಧುನಿಕ ಜೀವನ ಶೈಲಿಯಿಂದ ಕುಟುಂಬಗಳು ಹಳೆಯ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿವೆ.ಇಲ್ಲದ ದೇವರಿಗೆ ಪ್ರತ್ಯೇಕ ಕೋಣೆಯನ್ನು ನಿರ್ಮಿಸುತ್ತೇವೆ. ಪ್ರತ್ಯಕ್ಷ ದೇವರಾದ ನಮ್ಮ ಜನ್ಮದಾತರಾದ, ಅಜ್ಜ–ಅಜ್ಜಿಯರು ಮನೆಗೆ ಭಾರ ಎಂದು ಅವರನ್ನು ಅವಮಾನಕಾರಿಯಾಗಿ ನಡೆಸಿಕೊಳ್ಳುತ್ತಿರುವುದು, ವೃದ್ದಾಶ್ರಮಗಳಿಗೆ ದಾಖಲಿಸುತ್ತಿರುವುದು, ಇಂದಿನ ಬದಲಾದ ಸಾಮಾಜಿಕ ಪರಿಸ್ಥಿತಿಯ ದುಸ್ಥಿತಿ. ನೆನಪಿರಲಿ ನಾವು ಮಾಡಿದಂತೆ, ನಾಳೆ ಮಕ್ಕಳು ಸಹ ಅದನ್ನೇ ಅನುರಿಸುತ್ತಾರೆ..
ಅಜ್ಜ–ಅಜ್ಜಿ ಎಂದರೆ ಮಕ್ಕಳಿಗೆ ಬಲು ಪ್ರೀತಿ. ಅನೇಕ ಮಕ್ಕಳು ತಮ್ಮ ತಂದೆ ತಾಯಿಗಿಂತ ತಮ್ಮ ಅಜ್ಜ–ಅಜ್ಜಿಯರನ್ನೇ ಹೆಚ್ಚು ಹಚ್ಚಿಕೊಂಡಿರುತ್ತವೆ. ಇಂತಹ ಅಜ್ಜ–ಅಜ್ಜಿಯರನ್ನು ಪ್ರತಿದಿನ ನೆನೆಯುವುದು ನಮ್ಮ ಕರ್ತವ್ಯವಾದರೂ ಜಗತ್ತು ಅವರಿಗಾಗಿಯೇ ಒಂದು ದಿನವನ್ನು ಮೀಸಲಿಟ್ಟಿದೆ. ಅದೇ ಇಂದು (ಸೆ.8) ವಿಶ್ವ ಅಜ್ಜ–ಅಜ್ಜಿಯರ ದಿನ (GrandparentsDay).
ಅತೀವವಾಗಿ ಪ್ರೀತಿಸುತ್ತಿದ್ದ ಅಮೆರಿಕ 9 ವರ್ಷದ ಬಾಲಕ ರಸೆಲ್ ಚಾಪರ್ ಅಜ್ಜ–ಅಜ್ಜಿಯರನ್ನು ಸ್ಮರಣೀಯವಾಗಿಸಲು ಏನಾದರೂ ಮಾಡಬೇಕು ಎಂದು, ಅವರಿಗಾಗಿ ಒಂದು ದಿನವನ್ನು ಆಚರಿಸುವಂತೆ 1969 ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷರಾಗಿದ್ದ ರಿಚರ್ಡ್ ನಿಕ್ಸನ್ ಅವರಿಗೆ ಪತ್ರ ಬರೆದ. ಅಮೆರಿಕ ಸರ್ಕಾರ ಅನುಮೋದನೆ ನೀಡಿತು. ಮುಂದೆ 1978 ರಲ್ಲಿ National Grandparents Day ಆಚರಿಸಲು ಅವಕಾಶ ನೀಡಿದರು. ಹೀಗೆ ಮೊದಲ ಬಾರಿಗೆ ಅಂದರೆ ಸೆ 10, 1978 ರಂದು ಮೊದಲ ಬಾರಿಗೆ ಅಜ್ಜ–ಅಜ್ಜಿಯರ ದಿನವನ್ನು ಆಚರಿಸಲಾಯಿತು. ಹೀಗೆ ಸೆಪ್ಟೆಂಬರ್ ಎರಡನೇ ಭಾನುವಾರವನ್ನು ಜಗತ್ತಿನಾದ್ಯಂತ ಅಜ್ಜ–ಅಜ್ಜಿಯರ ದಿನವನ್ನಾಗಿ ಆಚರಿಸಲಾಗುತ್ತಿದೆ.
ಜೀವನದಲ್ಲಿ ಸಂಬಂಧಗಳು ಮುಖ್ಯ. ಉತ್ತಮ ಸಂಬಂಧಗಳು ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಲು ಕಾರಣವಾಗುತ್ತವೆ. ಅದರಲ್ಲೂ ಅಜ್ಜ–ಅಜ್ಜಿಯರ ಅವಶ್ಯಕತೆ ಪ್ರತಿ ಮನೆಗೆ ಬೇಕು. ಅವರು ಒಂದು ರೀತಿ ಸಂಸಾರ ದೋಣಿಯ ನಾವಿಕರು. ಮನೆಯ ಕಿರಿಯ ಸದಸ್ಯರಿಗೆ ದಾರಿ ತಪ್ಪದಂತೆ ತಮ್ಮ ಜೀವನದ ಅನುಭವದ ಮೂಲಕ ಪಾಠ ಹೇಳುತ್ತಾರೆ. ಮುದ್ದು ಮಕ್ಕಳಿಗೆ ಉತ್ತಮ ಸಂಗಾತಿಗಳಾಗುತ್ತಾರೆ. ದಾರಿದೀಪವಾಗಿ ಅವರು ಕೆಲಸ ಮಾಡುತ್ತಾರೆ."ಅಜ್ಜ ಮೊಮ್ಮಗನಿಗೆ ಮೊದಲ ಮಿತ್ರನಾದರೆ ಮೊಮ್ಮಗ ಅಜ್ಜನಿಗೆ ಕೊನೆ ಮಿತ್ರನಾಗಿರುತ್ತಾನೆ"..
"ಅಜ್ಜನ ಹೆಗಲ ಮೇಲೆ ಕುಳಿತು, ಇಲ್ಲದ ದೇವರನ್ನು ಹುಡುಕುತ್ತೇವೆ, ನಮಗೆ ಗೊತ್ತೇ ಆಗಲ್ಲ ನಾವು ಕುಳಿತಿರೋದು ದೇವರ ಮೇಲೆ ಎಂದು"
ಕಳೆದುಕೊಂಡ ದುಡ್ಡನ್ನು ಮತ್ತೆ ಸಂಪಾದಿಸಬಹುದು, ಕಳೆದುಕೊಂಡ ಅಜ್ಜ ಅಜ್ಜಿಯರನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ.. ಇದ್ದಾಗ ಚೆನ್ನಾಗಿ ನೋಡಿಕೊಂಡರೆ ಜನ್ಮ ಸಾರ್ಥಕ.
"ಹಿರಿಯರಿಲ್ಲದ ಮನೆ ದೇವರಿಲ್ಲದ ಗುಡಿ"...
By:Shankargouda Basapur
GHS HIREMYAGERI