ಕಥೆ-538
ಪ್ರೀತಿಯಿಂದ ಕೊಟ್ಟಾಗ ಗುಲಗಂಜಿಯಷ್ಟೂ ತೂಕವಿಲ್ಲ
https://basapurs.blogspot.com
ಎಪ್ಪತ್ತೆರಡರ ವಯಸ್ಸಿನ ಮುದುಕಿ ಸಿದ್ದಮ್ಮ ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಲು ರೆವಿನ್ಯೂ ಆಫಿಸಿಗೆ ಬಂದಿದ್ದಳು.
ಆಕೆ ಸಂಬಂಧಪಟ್ಟ ಅಧಿಕಾರಿಯ ಮೇಜಿನ ಮೇಲೆ ಅರ್ಜಿಯನ್ನಿಟ್ಟು ,ಎಲೆ-ಅಡಿಕೆ ಚೀಲದಿಂದ ಹತ್ತು ಇಪ್ಪತ್ತರ ನೋಟುಗಳನ್ನು ತೆಗೆದು ಎಣಿಸಿ ಕೊಡುವಷ್ಟರಲ್ಲಿ ಹೊರಗೆ ಇಟ್ಟು ಬಂದಿದ್ದ ಗೋಣಿಚೀಲದಿಂದ ಹೊಮ್ಮುತ್ತಿದ್ದ ಹಲಸಿನ ಹಣ್ಣಿನ ಘಮಲು ಇಡೀ ಕಛೇರಿಯನ್ನು ಆವರಿಸಿತು.
ಆತ ಮತ್ತೊಮ್ಮೆ ನೋಟುಗಳನ್ನು ಎಣಿಸಿ, ಮೊತ್ತ ಸರಿ ಇರುವುದನ್ನು ಖಾತ್ರಿ ಪಡಿಸಿಕೊಂಡ ನಂತರ ತಮಾಷೆಯ ದನಿಯಲ್ಲಿ , "ಏನಜ್ಜಿ, ನಿನ್ನ ಹಲಸಿನ ಹಣ್ಣಿನ ಘಮಲು ಆಫೀಸಿನೊಳಗೆಲ್ಲಾ ಹರಡಿಬಿಡ್ತು''
"ಆ ಹಣ್ಣು ನಮ್ಮ ಮರದ್ದೇ ಸಾರ್"
ಎಂದು ಮುಗುಳ್ನಕ್ಕಳು.
"ಮಾರಲು ತಂದಿದ್ದೀಯಾ ಅಜ್ಜಿ "
"ಇಲ್ಲ ಸ್ವಾಮಿ, ಹೈಸ್ಕೂಲಿನ ಪೀಟಿ ಮೇಷ್ಟ್ರಿಗೆ ಕೊಡಬೇಕಿತ್ತು, ಎಲ್ಲರಿಗಿಂತ ಎತ್ತರಕ್ಕೆ ಜಿಗಿದರೆ ನಿನಗೆ ಒಂದ್ ಜೊತೆ ಬೂಟ್ಸ್ ಕೊಡಿಸ್ತಿನಿ ಕಣ್ಲಾ ಎಂದು ನನ್ನ ಮೊಮ್ಮಗನನ್ನ ಹುರಿದುಂಬಿಸಿದ್ರಂತೆ, ನನ್ನ ಹೈದ ಜಿಗಿದೇಬಿಟ್ನಂತೆ! ಜಿಲ್ಲಾ ಮಟ್ಟಕ್ಕೆ ಸಿಲೆಕ್ಟೂ ಆದ್ನಂತೆ! ಮೇಷ್ಟ್ರೂ ಕೂಡಾ ಮಾತಿಗೆ ತಪ್ಪದೇ ನನ್ನ ಮೊಮ್ಮಗನಿಗೆ ಬೂಟ್ಸ್ ತಂದು ಕೊಟ್ಟವ್ರೆ, ಅವರ ಉಪಕಾರಾನಾ ಕಾಸಿನಲ್ಲಿ ವಜಾ ಮಾಡಾಕಾಯ್ತದಾ ಸ್ವಾಮಿ, ಅದಕ್ಕೇ ಇದನ್ನ ಕೊಟ್ಟು ಕೈ ಮುಗಿದು ಬರಲು ಹೊರಟಿದಿನಿ " ಎಂದು ತನ್ನ ಮೊಮ್ಮಗನಿಗಿಂತಲೂ ತೂಕವಿದ್ದ ಭಾರಿ ಗಾತ್ರದ ಹಲಸಿನ ಹಣ್ಣಿದ್ದ ಗೋಣಿ ಚೀಲವನ್ನು ಹೊತ್ತು ಹೊರಡಲು ಅನುವಾದಳು.
"ಅಯ್ಯೋ ಅಜ್ಜಿ ಇಷ್ಟು ತೂಕದ ಹಣ್ಣನ್ನು ಕೊಡಲು ಹೊರಟಿದೀಯಲ್ಲ, ಮೇಷ್ಟ್ರು ಅದ್ಹೇಗೆ ಇದನ್ನ ಹೊತ್ಕೊಂಡ್ ಹೋಗ್ತಾರೆ, ,ಪಾಪ ಅವ್ರಿಗೆ ಮುಜುಗರ ಆಗಲ್ವಾ, ಹಿಂಸೆ ಆಗಲ್ವಾ "
"ನಾನು ಅಯ್ಯೋ ಅಂದ್ಕಂಡು ಎಣಿಸಿ ಕೊಟ್ಟ ಐನೂರ್ ರೂಪಾಯ್ನ ನೀವು ಎತ್ತಿ ಜೇಬಿಗಿಟ್ಕಂಡ್ರಲ್ಲ,ಅದ್ರ ತೂಕಕ್ಕೆ ಹೋಲಿಸಿದ್ರೆ ನಾನು ಮೇಷ್ಟ್ರಿಗೆ ಪ್ರೀತಿಯಿಂದ ಕೊಡ್ತಿರೋ ಈ ಹಲಸಿನ ಹಣ್ಣು ಒಂದು ಗುಲಗಂಜಿಯಷ್ಟೂ ತೂಕವಿಲ್ಲ"
ಎಂದು ಬಿರಬಿರನೆ ಹೆಜ್ಜೆ ಹಾಕಿದಳು.
ಹಲಸಿನ ಘಮಲು ಅಜ್ಜಿಯನ್ನು ಹಿಂಬಾಲಿಸಿತು, ಬೆಪ್ಪಾಗಿ ನಿಂತಿದ್ದ ಅಧಿಕಾರಿಯ ಪಾಲಿಗೆ ಕಾಗದದ ನೋಟುಗಳು ಮಾತ್ರ ಉಳಿದವು.
ಕೃಪೆ: ಗವಿಸ್ವಾಮಿ.